ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನ ವಾದ್ಯ ನಾಟ್ಯ ‘ಸುನಾದ’

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಒಂದು ಕೊಠಡಿಯಲ್ಲಿ ತಂತಿವಾದ್ಯ ವೀಣೆ, ಇನ್ನೊಂದರಲ್ಲಿ ಅವನದ್ದ ವಾದ್ಯ ಮೃದಂಗ, ಮತ್ತೊಂದರಲ್ಲಿ ತಕಧಿಮಿತ ಕುಣಿಯುವ ಪುಟಾಣಿಗಳು, ಇದಕ್ಕೆ ಪೂರಕವಾದ ಕರ್ನಾಟಕ ಸಂಗೀತದ ‘ಸ್ವರಜತಿ’ಗಳ ಮಧುರ ಗಾನ.. ಇದು ಚಿಕ್ಕಲಸಂದ್ರದಲ್ಲಿರುವ ಸುನಾದ ಸಂಗೀತ ಶಾಲೆಯ ಝಲಕ್..!

‘ಸುನಾದ’ ಕರ್ನಾಟಕ ಶಾಸ್ತ್ರೀಯ ಗಾಯನ, ವಾದನ, ನೃತ್ಯ ಮೂರೂ ಪ್ರಕಾರಗಳನ್ನು ನೂರಾರು ಮಕ್ಕಳಿಗೆ ಕಲಿಸುತ್ತಾ ಬಂದಿದೆ. ನಗರದ ಚಿಕ್ಕಲಸಂದ್ರದ ಕೆನರಾ ಬ್ಯಾಂಕ್ ಕಾಲೊನಿಯಲ್ಲಿದೆ. ಕಳೆದ 16 ವರ್ಷಗಳ ಹಿಂದೆ (1997ರಲ್ಲಿ) ಈ ಸಂಗೀತ ಶಾಲೆ ಆರಂಭವಾಯಿತು. ವಿದುಷಿ ಲಕ್ಷ್ಮಿ ವಿ ಕೌಶಿಕ್ ಇಲ್ಲಿ ಕರ್ನಾಟಕ ಸಂಗೀತ, ವೀಣೆ ಕಲಿಸುತ್ತಾರೆ. ಆರು ವರ್ಷದಿಂದ 60 ವರ್ಷದವರೆಗಿನ ಶಿಷ್ಯಂದಿರು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ.

ಪ್ರತಿವರ್ಷ ಇಲ್ಲಿ ತ್ಯಾಗರಾಜರ, ಪುರಂದರ ದಾಸರ ಆರಾಧನೋತ್ಸವ ನಡೆಸಲಾಗುತ್ತದೆ. ಸಂಗೀತ ಶಾಲೆಯ ವಾರ್ಷಿಕೋತ್ಸವವನ್ನೂ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕನಕದಾಸ ಜಯಂತಿಯಂದು ಕನಕದಾಸರ ಕೃತಿಗಳನ್ನು ಹಾಡಲಾಗುತ್ತದೆ.
ವಿದುಷಿ ಲಕ್ಷ್ಮಿ ಕೌಶಿಕ್ ಆನ್‌ಲೈನ್‌ನಲ್ಲೂ ಸಂಗೀತ ಪಾಠ ಮಾಡುತ್ತಾರೆ. ಅಮೆರಿಕ, ಇಂಗ್ಲೆಂಡ್‌ಗಳಲ್ಲೂ ಇವರ ಶಿಷ್ಯಂದಿರು ಸಂಗೀತ ಕಲಿಯುತ್ತಾರೆ. ಇಲ್ಲಿ ಕಲಿತ ಮಕ್ಕಳು ಈಗಾಗಲೇ ಹಲವಾರು ಸಂಗೀತ ಕಛೇರಿಗಳಲ್ಲೂ ಭಾಗವಹಿಸಿದ್ದಾರೆ. ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಸಂಗೀತದ ವಿವಿಧ ಪರೀಕ್ಷೆಗಳಲ್ಲಿ ಈ ಶಾಲೆಯ ಮಕ್ಕಳು ಉತ್ತಮ ಅಂಕ ಗಳಿಸಿ ಪಾಸಾಗಿದ್ದಾರೆ.
ಎರಡೂ ಕಲಿಯುವ ಮಕ್ಕಳು

ಭರತನಾಟ್ಯಕ್ಕೆ ಸಂಗೀತ ಬೇಕೇ ಬೇಕು. ನೃತ್ಯ ಪರೀಕ್ಷೆಗೆ ಹಾಜರಾಗುವ ಮಕ್ಕಳು ಸಂಗೀತವನ್ನೂ ಕಲಿತಿರಬೇಕು. ಸಂಗೀತ ಭರತನಾಟ್ಯ ಎರಡೂ ಒಂದಕ್ಕೊಂದು ಪೂರಕ. ಹೀಗೆ ಎರಡೂ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ಕಲಿಯುವ ಅವಕಾಶ ಸುನಾದ ಕಲಾ ಶಾಲೆಯಲ್ಲಿದೆ.

‘ಮೊದಲಿಗೆ ಇಲ್ಲಿ ಬರೀ ಕರ್ನಾಟಕ ಶಾಸ್ತ್ರೀಯ ಸಂಗೀತ ಮಾತ್ರ ಹೇಳಿಕೊಡಲಾಗುತ್ತಿತ್ತು. ದಿನಕಳೆದಂತೆ ಮಕ್ಕಳ ಸಂಖ್ಯೆಯೂ ಹೆಚ್ಚಾಯಿತು. ಅಭಿರುಚಿ, ಆಸಕ್ತಿಯೂ ವಿಸ್ತರಿಸಿತು. ಮಕ್ಕಳ ಬೇಡಿಕೆಯ ಮೇರೆಗೆ ವೀಣೆ, ಕೀಬೋರ್ಡ್, ಮೃದಂಗ ತರಗತಿಗಳನ್ನೂ ಆರಂಭಿಸಿದ್ದೇವೆ’ ಎನ್ನುತ್ತಾರೆ ವಿದುಷಿ ಲಕ್ಷ್ಮಿ ಕೌಶಿಕ್.

‘ವೀಣೆಯನ್ನು ವಿದುಷಿ ಸರಸ್ವತಿ, ಭರತನಾಟ್ಯವನ್ನು ವಿದುಷಿ ಪ್ರತಿಭಾ ರಾಮಸ್ವಾಮಿ, ಕೀಬೋರ್ಡ್ ಅನ್ನು ವಿದ್ವಾನ್ ಅಶ್ವಿನ್ ಕುಮಾರ್, ಮೃದಂಗವನ್ನು ವಿದ್ವಾನ್ ಶ್ರೀವೆಂಕಟೇಶ್ ಅವರು ಕಲಿಸುತ್ತಿದ್ದಾರೆ. ಸುಮಾರು 120 ಮಕ್ಕಳು ಇಲ್ಲಿ ವಿವಿಧ ಕಲಾ ಪ್ರಕಾರಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ ಭಾವನಾ ಕೌಶಿಕ್, ಸ್ಫೂರ್ತಿ, ನಿಖಿಲ, ಧನ್ಯ, ಪ್ರಜ್ವಲ್, ಮಯೂರ್, ವಿಶಾಲ್, ಮನು, ಸ್ನೇಹಾ, ಸ್ವಾತಿ, ಮೇಘನಾ ಮುಂತಾದವರು ಕಛೇರಿ ಕೊಡುವಷ್ಟರ ಮಟ್ಟಿಗೆ ತಯಾರಾಗಿದ್ದಾರೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬರಲು ಸುನಾದ ಸಂಗೀತ ಶಾಲೆ ಪ್ರತಿ ವರ್ಷ ಸಂಗೀತ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತದೆ. ಇದು ಶಾಲಾ ಮಟ್ಟದಿಂದ ರಾಜ್ಯಮಟ್ಟದವರೆಗಿನ ಸ್ಪರ್ಧೆ ಆಗಿರುವುದರಿಂದ ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಾರೆ’ ಎಂದು ಹೇಳುತ್ತಾರೆ ಈ ಸಂಗೀತ ವಿದುಷಿ.

ಪ್ರಶಸ್ತಿ, ಪ್ರತಿಷ್ಠಿತ ವೇದಿಕೆ
ಲಕ್ಷ್ಮಿ ಕೌಶಿಕ್ ಓದಿದ್ದು ಎಂ.ಎ, ಸಂಸ್ಕೃತದಲ್ಲಿ ಎಂಫಿಲ್. ವಿದುಷಿ ಕನಕಾ ಸ್ವಾಮಿ, ವಿದ್ವಾನ್ ಟಿ.ವಿ. ಗೋಪಾಲಕೃಷ್ಣನ್ ಅವರ ಬಳಿ ಸಂಗೀತ ಕಲಿತರು. ಪುಟ್ಟರಾಜ ಗವಾಯಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಬಂದಿದೆ. ಆಕಾಶವಾಣಿ ಯುವವಾಣಿಯಲ್ಲಿ ಭಾಗವಹಿಸಿದ್ದಾರೆ. ಸಂಗೀತಕ್ಕಾಗಿ ನೀಡುವ ರಾಷ್ಟ್ರೀಯ ಸ್ಕಾಲರ್‌ಶಿಪ್ ಪಡೆದಿರುವ ಈ ವಿದುಷಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಬೆಸ್ಟ್ ಟ್ಯಾಲೆಂಟ್’ ಪ್ರಶಸ್ತಿಗೆ ಭಾಜನರಾದವರು.

ಚೆಂಬೈ ಸಂಗೀತೋತ್ಸವ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಡೆಸುವ ಕಾರ್ಯಕ್ರಮಗಳಲ್ಲದೆ ದಕ್ಷಿಣ ಭಾರತದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಇವರು ಸಂಗೀತ ಕಛೇರಿ ನೀಡಿ ರಂಜಿಸಿದ್ದಾರೆ.
ವಿಳಾಸ: ವಿದುಷಿ ಲಕ್ಷ್ಮಿ ವಿ ಕೌಶಿಕ್, ಸುನಾದ ಸಂಗೀತ ಕಲಾ ಶಾಲೆ, ನಂ. 12, ವಿಷ್ಣು ಎನ್‌ಕ್ಲೇವ್, ಬಿ 1, ಮೊದಲನೆ ಮುಖ್ಯರಸ್ತೆ, ಮೊದಲನೆ ಕ್ರಾಸ್, ಕೆನರಾ ಬ್ಯಾಂಕ್ ಕಾಲೊನಿ, ಚಿಕ್ಕಲಸಂದ್ರ, ಬೆಂಗಳೂರು 61. ಫೋನ್: 97414 17313/ 97421 67999.

 ‘ಓದಿನಷ್ಟೇ ಸಂಗೀತಕ್ಕೂ ಪ್ರಾಶಸ್ತ್ಯ’
ಬಾಲ್ಡ್‌ವಿನ್ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದು, ಶಾಸ್ತ್ರೀಯ ಸಂಗೀತವನ್ನು ಇಲ್ಲಿ ಕಲಿಯುತ್ತಿದ್ದೇನೆ. ಶಾಸ್ತ್ರೀಯ ಸಂಗೀತ, ಭರತನಾಟ್ಯ, ಗಮಕ ವಾಚನ ಮತ್ತು ವೀಣೆ ಅಭ್ಯಾಸ ಮಾಡುತ್ತಿದ್ದೇನೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದೇನೆ. ಸಹಸ್ರವೀಣೆ ಕಾರ್ಯಕ್ರಮದಲ್ಲಿ ವೀಣೆ ನುಡಿಸಿರುವುದು ನನಗೆ ಹೆಮ್ಮೆ. ನಾನು ಓದಿನಂತೆಯೇ ಸಂಗೀತಕ್ಕೂ ಅಷ್ಟೇ ಪ್ರಾಮುಖ್ಯ ಕೊಡುತ್ತಿದ್ದೇನೆ.
- – ಭಾವನಾ ವಿ. ಕೌಶಿಕ್

‘ಕಲಿಕೆ, ಪಾಠ ಎರಡೂ ಇಷ್ಟ’
ಸುನಾದ ಸಂಗೀತ ಕಲಾ ಶಾಲೆಯಲ್ಲಿ ಲಕ್ಷ್ಮಿ ಕೌಶಿಕ್ ಅವರ ಬಳಿ ಸಂಗೀತ ಕಲಿಯುತ್ತಿರುವ ನಾನು ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏಳನೇ ಸೆಮಿಸ್ಟರ್ ಓದುತ್ತಿದ್ದೇನೆ. ಶಾಸ್ತ್ರೀಯ ಸಂಗೀತದ ಜೂನಿಯರ್ ಪರೀಕ್ಷೆಯನ್ನು 2005ರಲ್ಲಿ ಮತ್ತು ಸೀನಿಯರ್ ಪರೀಕ್ಷೆಯನ್ನು 2008ರಲ್ಲಿ ಪಾಸು ಮಾಡಿರುವ ನನಗೆ ಸಂಗೀತದಲ್ಲಿ ಅತೀವ ಆಸಕ್ತಿ. ಸದ್ಯ ವಿದ್ವತ್ ಕಲಿಯುತ್ತಿದ್ದೇನೆ. ಸಂಗೀತದೊಂದಿಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿರುವ ಕಾರಣ ಕಳೆದ ವರ್ಷದಿಂದಲೇ ಸಂಗೀತದ ಆರಂಭಿಕ ಪಾಠವನ್ನು ಮಕ್ಕಳಿಗೆ ಕಲಿಸುತ್ತಿದ್ದೇನೆ.ರಾಮೋತ್ಸವ, ಗಣೇಶೋತ್ಸವ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿದ್ದೇನೆ. ಇಸ್ಕಾನ್ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಹಾಡಿದ ಅನುಭವವೂ ಇದೆ. ಹಲವಾರು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನೂ ಗಳಿಸಿದ್ದೇನೆ. ಸಂಗೀತದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಇದೆ.
– ಮಾನಸ ಬಿ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT