ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಗೋಪುರ ಧ್ವಂಸ ಖಂಡಿಸಿ ಪಾದಯಾತ್ರೆ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೊಸಪೇಟೆ: `ಕಾನೂನು ಕೈಗೆತ್ತಿಕೊಳ್ಳುವುದು ನಮ್ಮ ಕೆಲಸವಲ್ಲ. ಕಾನೂನು ರಕ್ಷಿಸಬೇಕಾದವರು ಕೈಕಟ್ಟಿ ಕುಳಿತಾಗ ಜನಾಂದೋಲನವಾದರೆ ಸರ್ಕಾರಗಳೇ ನೇರ ಹೊಣೆ~ ಎಂದು ಆರ್‌ಎಸ್‌ಎಸ್ ಉತ್ತರ ಪ್ರಾಂತ ಉಸ್ತುವಾರಿ ಶಂಕರಾನಂದಜೀ ಮಂಗಳವಾರ ಹೇಳಿದರು.

ಹಂಪಿ ಉಳಿಸಿ ಆಂದೋಲನ ಸಮಿತಿ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳು   ವಿರೂಪಾಕ್ಷ ಗೋಪುರದಿಂದ ಧ್ವಂಸಗೊಂಡ ಗಾಳಿಗೋಪುರದವರೆಗೆ ಆಯೋಜಿಸಿದ್ದ ಪಾದಯಾತ್ರೆ ಕಾರ್ಯಕ್ರಮದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, `ವಿಘ್ನ ಸಂತೋಷಿಗಳು ಭಗ್ನಮಾಡಿದ ಸ್ಮಾರಕವನ್ನು ಪುನರ್ ನಿರ್ಮಾಣ ಮಾಡಬೇಕು. ದುಷ್ಕರ್ಮಿಗಳು ಪಾತಾಳದಲ್ಲಿ ಅಡಗಿ ಕುಳಿತಿದ್ದರೂ ಹುಡುಕಿ ತೆಗೆದು ಅವರನ್ನು ಗಲ್ಲಿಗೇರಿಸುವ ಮೂಲಕ ಮುಂದೆ ಯಾರೂ ಇಂತಹ ದುಷ್ಕೃತ್ಯಕ್ಕೆ ಕೈಹಾಕದಂತೆ ಕ್ರಮಕೈಗೊಳ್ಳಬೇಕು~ ಎಂದು ಸರ್ಕಾರವನ್ನು ಆಗ್ರಹಿಸಿದರು.

` ವಿವಿಧ ಇಲಾಖೆಗಳ ಮಧ್ಯೆ ಸಮನ್ವಯತೆ ಇಲ್ಲದಿರುವುದು ಇಂದಿನ ಘಟನಾವಳಿಗೆ ಹಾಗೂ ನಿರಂತರವಾಗಿ ಇಂತಹ ಕೃತ್ಯಗಳು ನಡೆಯಲು ಕಾರಣವಾಗಿದೆ~ ಎಂದು ಅವರು ಆರೋಪಿಸಿದರು.

ವಿರೂಪಾಕ್ಷ ದೇವಾಲಯ ಬಳಿ ಪಾದಯಾತ್ರೆಗೆ ಚಾಲನೆ ನೀಡಿದ ವಿದ್ಯಾರಣ್ಯ ಭಾರತೀಸ್ವಾಮಿಜಿ, `ಸರ್ಕಾರದೊಂದಿಗೆ ಕೈಜೋಡಿಸಿ ನಮ್ಮ ಧರ್ಮದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ~ ಎಂದರು.

ಕೃಷ್ಣದೇವರಾಯನ ವಂಶಸ್ಥರಾದ ರಾಣಿ ಚಂದ್ರಕಾಂತಾದೇವಿ ರಾಯಲು, ರಾಜ ಶ್ರೀಕೃಷ್ಣದೇವರಾಯ, ಹಂಪಿ ಉಳಿಸಿ ಆಂದೋಲನ ಸಮಿತಿ ಸಂಚಾಲಕ ಅನಿಲ್ ನಾಯ್ಡು ಸಮಾರಂಭದಲ್ಲಿ ಹಾಜರಿದ್ದರು. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಹಂಪಿ ಪ್ರಾಧಿಕಾರದ ಆಯುಕ್ತ ಡಾ. ಡಿ.ಆರ್.ಅಶೋಕ, ಡಿವೈಎಸ್‌ಪಿ ರಶ್ಮಿ ಪರಡ್ಡಿ, ಪುರಾತತ್ವ ಇಲಾಖೆಯ ನರಸಿಂಹನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT