ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಿ ವಸ್ತುಗಳು ನಾಪತ್ತೆ: ಕೋಲಾಹಲ

Last Updated 27 ಜೂನ್ 2012, 7:10 IST
ಅಕ್ಷರ ಗಾತ್ರ

ಮಡಿಕೇರಿ: ನಗರದಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಂದ ನಿರುಪಯುಕ್ತ ವಸ್ತುಗಳು ಕಣ್ಮರೆಯಾಗುತ್ತಿರುವ ಪ್ರಕರಣವು ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು.

ವಿಷಯ ಪ್ರಸ್ತಾಪಿಸಿದ ಅಬ್ದುಲ್ ರಜಾಕ್ ಅವರು ಪೈಪುಗಳನ್ನು ಅಳವಡಿಸುವ ಸಂದರ್ಭದಲ್ಲಿ ಹಳೆಯ ಪೈಪುಗಳನ್ನು, ಕಬ್ಬಿಣ ಹಾಗೂ ಸೈಜ್‌ಕಲ್ಲುಗಳನ್ನು ಹೊತ್ತೊಯ್ಯಲಾಗುತ್ತಿದೆ. ನಗರಸಭೆಯ ಗಮನಕ್ಕೂ ತಾರದೇ ಇವುಗಳನ್ನು ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಮುನೀರ್ ಅಹ್ಮದ್ ಅವರು, ನಗರಸಭೆಯ ಉಗ್ರಾಣದಲ್ಲಿ ಯಾವ ಯಾವ ವಸ್ತುಗಳನ್ನು ಶೇಖರಿಸಿಡಲಾಗಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಕೇಳಿ ಪಡೆದರು.

ಅರುಣ್‌ಕುಮಾರ್ ಮಾತನಾಡಿ, ಕಾಲೇಜು ರಸ್ತೆಯ 5 ಅಂಗಡಿಗಳನ್ನು ತೆರವುಗೊಳಿಸಿದ ಸಂದರ್ಭದಲ್ಲಿ ಬೆಳೆಬಾಳುವ ಮರಗಳ ತುಂಡುಗಳನ್ನು ನಗರಸಭೆಯ ಉಗ್ರಾಣಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಈಗ ಅವೆಲ್ಲಾ ಎಲ್ಲಿ ಹೋದವು? ಎಂದು ಪ್ರಶ್ನಿಸಿದರು.

ಪ್ರಕಾಶ್ ಮಾತನಾಡಿ, ಡೈರಿ ಫಾರಂ ಬಳಿ ಚರಂಡಿ ಕಾಮಗಾರಿ ನಡೆಸಿದಾಗ ಹಳೆಯ ಸೈಜ್‌ಕಲ್ಲುಗಳು ಕಾಣೆಯಾಗಿವೆ ಎಂದು ಆರೋಪಿಸಿದರು.

ರಮೇಶ್ ಮಾತನಾಡಿ, ಸಭೆಯಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಹಾಗೂ ತೀರ್ಮಾನಗಳ ಬಗ್ಗೆ ಆಯುಕ್ತರು ಕ್ರಮ ಕೈಗೊಳ್ಳಬೇಕು. ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನವಾಗಬೇಕಾದರೆ ಆಯುಕ್ತರು ಏನು ಕ್ರಮಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಶಶಿಕುಮಾರ್, ಗುಜರಿ ವಸ್ತುಗಳ ಕಳ್ಳತನದ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣವೇ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಹಲವು ಕಳ್ಳತನಗಳನ್ನು ತಡೆದಿದ್ದೇವೆ. ಕಾಮಗಾರಿ ಸ್ಥಳದಲ್ಲಿರುವ ಬಾಕಿ ಉಳಿಯುವ ನಿರುಪಯುಕ್ತ ವಸ್ತುಗಳನ್ನು ಗೋಡೌನ್ ಹಾಗೂ ನಮ್ಮ ನಿವಾಸದ ಬಳಿ ಶೇಖರಿಸಿಡಲಾಗಿದೆ ಎಂದರು.

ರಮೇಶ್ ಮಾತನಾಡಿ, ಮುಂದಿನ ಸಾಮಾನ್ಯ ಸಭೆಯಲ್ಲಿ ಕಾಣೆಯಾಗಿರುವ ನಿರುಪಯುಕ್ತ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಗುಜರಿ ವಸ್ತುಗಳನ್ನು ಹರಾಜು ಹಾಕುವುದರ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷ ಎಚ್.ಎಂ. ನಂದಕುಮಾರ್ ಮಾತನಾಡಿ, ಗುಜರಿ ವಸ್ತುಗಳ ಬಗ್ಗೆ ಸಂಬಂಧಿತರಿಂದ ಎಲ್ಲ ಮಾಹಿತಿ ಪಡೆದು, ಮುಂದಿನ ಸಭೆಯಲ್ಲಿ ವಿವರಣೆ ಒದಗಿಸಲಾಗುವುದು ಎಂದರು.

ಲೋಕಾಯುಕ್ತ ತನಿಖೆಗೆ ಒತ್ತಾಯ: ಕುಂಡಾ ಮೇಸ್ತ್ರಿ ಯೋಜನೆಯ 40 ಲಕ್ಷ ಮೊತ್ತದ ಪೈಪುಗಳು ಕಳವು ಆಗಿವೆ. ಇದರ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಅಬ್ದುಲ್ ರಜಾಕ್ ಒತ್ತಾಯಿಸಿದರು.

ಅಧ್ಯಕ್ಷ ನಂದಕುಮಾರ್ ಮಾತನಾಡಿ, ಪೈಪುಗಳು ಕಳ್ಳತನವಾಗಿವೆ ಎಂದು ಗುತ್ತಿಗೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾಮಗಾರಿಯ ವಸ್ತುಗಳನ್ನು ಕಾಪಾಡಿಕೊಳ್ಳಬೇಕಾಗಿರುವುದು ಗುತ್ತಿಗೆದಾರರ ಕೆಲಸ. ಕಳ್ಳತನವಾಗಿದ್ದರೆ ಅವರಿಗೆ ನಷ್ಟ ಹೊರತು ನಗರಸಭೆಗೆ ಅಲ್ಲ ಎಂದು ಹೇಳಿದರು.

ಸದಸ್ಯರು ನಿರ್ಣಯಿಸಿದರೆ ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನಿರ್ಣಯ ಕಳುಹಿಸಲಾಗುವುದು ಎಂದರು.

ತಿರಸ್ಕೃತರಿಗೆ ಟೆಂಡರ್ ಏಕೆ?  
ನಗರದ ಟೈಟಾನ್ ಪಾರ್ಕ್ ಬಳಿ ತಡೆಗೋಡೆ ನಿರ್ಮಿಸುವ ಕಾಮಗಾರಿಯನ್ನು ಯಾವ ಗುತ್ತಿಗೆದಾರರಿಗೆ ನೀಡಬಾರದೆಂದು ತೀರ್ಮಾನ ಕೈಗೊಳ್ಳಲಾಯಿತೋ ಈಗ ಅದೇ ಗುತ್ತಿಗೆದಾರರಿಗೆ ನೀಡಲಾಗಿದ್ದು ಏಕೆ? ಎಂದು ಮುನೀರ್ ಅಹ್ಮದ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಟೆಂಡರ್ ಕರೆದಾಗ ಈ ಗುತ್ತಿಗೆದಾರರ ಅರ್ಜಿ ಹಾಕಿದ್ದರು. ಎಲ್ಲ ನಿಯಮಾವಳಿಗಳನ್ನು ಅವರು ಪಾಲಿಸಿದ್ದರಿಂದ ಅವರಿಗೆ ಟೆಂಡರ್ ನೀಡಲಾಗಿದೆ. ಇದನ್ನು ತಡೆಹಿಡಿದಿದ್ದರೆ ಈ ಕಾಮಗಾರಿ 7 ತಿಂಗಳಷ್ಟು ವಿಳಂಬವಾಗುವ ಸಾಧ್ಯತೆ ಇತ್ತು ಎಂದು ಹೇಳಿದರು. ಈ ಮಾತನ್ನು ಒಪ್ಪದ ಅಬ್ದುಲ್ ರಜಾಕ್, ಮುನೀರ್ ಅಹ್ಮದ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. 
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಅವರು ಸದಸ್ಯರು ಬಯಸಿದರೆ ಈ ಟೆಂಡರನ್ನು ರದ್ದುಪಡಿಸಲಾಗುವುದು ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು. ವೈಜ್ಞಾನಿಕ-ಅವೈಜ್ಞಾನಿಕ ಚರ್ಚೆ: ನಗರದ ಕಾಲೇಜು ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಮುನೀರ್ ಅಹ್ಮದ್ ತಗಾದೆ ತೆಗೆದರು. ಇದಕ್ಕೆ ಕೆಂಡಾಮಂಡಲರಾದ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಯಾವುದೇ ಅವೈಜ್ಞಾನಿಕ, ಯಾವುದು ವೈಜ್ಞಾನಿಕ ಎನ್ನುವುದು ಹೇಳಿ. ಅತ್ಯುತ್ತಮ ಗುಣಮಟ್ಟದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಇದಲ್ಲದೇ ಮೂರನೇ ವ್ಯಕ್ತಿಗಳಿಂದ ಗುಣಮಟ್ಟ ಪರಿಶೀಲನೆಯನ್ನೂ ಮಾಡಿಸಲಾಗಿದೆ. ವೃಥಾ ಆರೋಪ ಮಾಡಬೇಡಿ ಎಂದರು. ಟೆಂಡರ್ ಕರೆದಿರುವಂತೆ 630 ಮೀಟರ್ ಉದ್ದ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಚರಂಡಿ ಕಾಮಗಾರಿ ನಡೆಯುತ್ತಿದ್ದು, ಈ ವಾರದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ.  ಎಸ್ಟಿಮೆಟ್ ಪ್ರಕಾರ ಕಾಮಗಾರಿ ನಡೆದಿಲ್ಲ ಎನ್ನುವುದಾದರೆ ತನಿಖೆ ಮಾಡಿಸೋಣ ಎಂದು ಹೇಳಿದರು. 

 ಸರ್ಕಾರಿ ಕ್ವಾರ್ಟರ್ಸ್‌ಗಳಲ್ಲಿ ಸ್ಲಂ!
ನಗರದ ಹೊಸ ಬಡಾವಣೆಯಲ್ಲಿ ಪಾಳುಬಿದ್ದಿರುವ ಸರ್ಕಾರಿ ವಸತಿಗೃಹಗಳಲ್ಲಿ ಯಾರ‌್ಯಾರೋ ಬಂದು ಸೇರಿಕೊಂಡಿದ್ದಾರೆ. ಆ ಪ್ರದೇಶವೀಗ ಗಲೀಜಾಗಿದ್ದು, ಸ್ಲಂ ನಿರ್ಮಾಣವಾಗಿದೆ ಎಂದು ಸದಸ್ಯ ಪಿ.ಡಿ. ಪೊನ್ನಪ್ಪ ಗಮನ ಸೆಳೆದರು.

ವಿವಿಧ ಇಲಾಖೆಗಳ ಹಲವು ವಸತಿಗೃಹಗಳು ಖಾಲಿ ಬಿದ್ದಿದ್ದು, ಇವುಗಳಲ್ಲಿ ಚಿಂದಿಕಾಯುವ ಜನರು ಸೇರಿಕೊಂಡಿದ್ದಾರೆ. ಇವರನ್ನು ಇಲ್ಲಿಂದ ಓಡಿಸಿದರೆ, ಮಳೆ ಹಾನಿಯಿಂದಾಗಿ ಮನೆ ಕಳೆದುಕೊಳ್ಳುವ ನಿರಾಶ್ರಿತರಿಗೆ ಇಲ್ಲಿ ಸ್ಥಳಾವಕಾಶ ಕಲ್ಪಿಸಬಹುದು ಎಂದು ಸಲಹೆ ನೀಡಿದರು. ಇಲಾಖೆಯವರು ವಸತಿಗೃಹಗಳನ್ನು ಮರಳಿ ಪಡೆಯಲು ನಿರಾಸಕ್ತಿ ತೋರಿದರೆ, ನಾವೇ ನಗರಸಭೆ ವತಿಯಿಂದ ಇವುಗಳನ್ನು ಪಡೆದುಕೊಂಡು ನಿರಾಶ್ರಿತರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಬಹುದು ಎಂದು ನುಡಿದರು. ಅಧ್ಯಕ್ಷ ಎಚ್.ಎಂ. ನಂದಕುಮಾರ್ ಮಾತನಾಡಿ, ಈ ವಿಷಯವನ್ನು ಇಲಾಖೆಗಳ ಗಮನಕ್ಕೆ ತರಲಾಗುವುದು ಎಂದರು.

ಅಕ್ರಮ ಪಾರ್ಕಿಂಗ್  ಶುಲ್ಕ ವಸೂಲಿ!
ನಗರಸಭೆ ಹೆಸರಿನಲ್ಲಿ ವಿವಿಧೆಡೆ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಗುತ್ತಿಗೆದಾರರು ಪಡೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯ ಬೇಬಿ ಮ್ಯಾಥ್ಯು ಆರೋಪಿಸಿದರು. ಗುತ್ತಿಗೆದಾರರಿಗೆ ಬಸ್‌ನಿಲ್ದಾಣದ ಸುತ್ತಮುತ್ತ, ರಾಜಾ ಸೀಟ್ ಬಳಿ ಮಾತ್ರ ಪಾರ್ಕಿಂಗ್ ಶುಲ್ಕ ಪಡೆಯಲು ಗುತ್ತಿಗೆ ನೀಡಲಾಗಿದೆ. ಆದರೆ, ಗುತ್ತಿಗೆದಾರರು ಮಾರುಕಟ್ಟೆ ರಸ್ತೆಯ ದರ್ಬಾರ್ ಹೋಟೆಲ್ ಎದುರು ನಿಂತಿರುವ ವಾಹನಗಳಿಂದಲೂ ಶುಲ್ಕವನ್ನು ಪಡೆಯುತ್ತಿದ್ದಾರೆ. ನಗರಸಭೆ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಟಿ.ಎಂ. ಅಯ್ಯಪ್ಪ ಮಾತನಾಡಿ, ಪಾರ್ಕಿಂಗ್ ಶುಲ್ಕದ ಬಗ್ಗೆ ವಿವರಣೆ ನೀಡುವ ಫಲಕಗಳನ್ನು ಅಳವಡಿಸಬೇಕು ಹಾಗೂ ಜನರಿಗೆ ಪ್ರಚಾರ ನೀಡಬೇಕು ಎಂದು ಒತ್ತಾಯಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ವ್ಯಾಪಾರಸ್ಥರಿಂದ ಅಕ್ರಮವಾಗಿ ಮಾರುಕಟ್ಟೆ ಸುಂಕವನ್ನು ಗುತ್ತಿಗೆದಾರರು ವಸೂಲಿ ಮಾಡುತ್ತಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ ಆರೋಪಿಸಿದರು. ನಗರಸಭೆಯು ಕೇವಲ ಮಾರುಕಟ್ಟೆಯಲ್ಲಿರುವ ವ್ಯಾಪಾರಸ್ಥರಿಂದ ಮಾತ್ರ ಸುಂಕ ಸಂಗ್ರಹಿಸಲು ಗುತ್ತಿಗೆ ನೀಡಿದೆ. ಆದರೆ, ಗುತ್ತಿಗೆದಾರರು ವಿವಿಧ ಕಡೆಗಳಲ್ಲೂ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದರು.

ಮಣ್ಣಲ್ಲಿ ರೂ 1.70 ಕೋಟಿ !
ಕೆಎಂಆರ್‌ಪಿ ಯೋಜನೆಯಡಿ 2009-10ರಲ್ಲಿ ರೂ 1.70 ಕೋಟಿ ಮೊತ್ತದ ಯೋಜನೆಯಡಿ ನಗರದಲ್ಲಿ ನೀರು ಪೂರೈಸಲು ಪೈಪುಗಳನ್ನು ಅಳವಡಿಸಲಾಗಿತ್ತು. ಆದರೆ, ಇದುವರೆಗೆ ಇದಕ್ಕೆ ನೀರಿನ ಸಂಪರ್ಕ ನೀಡಲಾಗಲಿಲ್ಲ. ಯೋಜನೆಗಾಗಿ ಮಾಡಿದ ರೂ 1.70 ಕೋಟಿ ಮಣ್ಣಲ್ಲಿ ಹೂತು ಹೋಗಿದೆ ಎಂದು ಚುಮ್ಮಿ ದೇವಯ್ಯ ಆರೋಪಿಸಿದರು. ಇವರಿಗೆ ಧ್ವನಿಗೂಡಿಸಿದ ಟಿ.ಎಂ. ಅಯ್ಯಪ್ಪ ಮಾತನಾಡಿ, ನಗರದಲ್ಲಿ ಪೈಪುಗಳನ್ನು ಅಳವಡಿಸುವುದಕ್ಕಾಗಿ ಕುಂಡಾ ಮೇಸ್ತ್ರಿ ಯೋಜನೆಯಲ್ಲೂ ಕೆಡಬ್ಲುಎಸ್‌ಎಸ್‌ಬಿ ಅಧಿಕಾರಿ
ಗಳು ಎಸ್ಟಿಮೆಟ್ ತಯಾರಿಸಿದ್ದಾರೆ. ಅಂದರೆ ಒಂದೇ ಕೆಲಸಕ್ಕೆ ಎರಡು ಕಡೆ ಬಿಲ್ ಮಾಡ
ಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎಚ್.ಎಂ.ನಂದಕುಮಾರ್, ಪೈಪು ಅಳವಡಿಕೆ ಕಾರ್ಯ ಪೂರ್ಣವಾಗಿಲ್ಲ. ಅಲ್ಲಲ್ಲಿ ಪೈಪುಗಳು ಒಡೆದುಹೋಗಿವೆ. ಈ ಹಂತದಲ್ಲಿ ನೀರು ಪೂರೈಸಲು ಸಂಪರ್ಕ ನೀಡಿದರೆ ನೀರು ಪೋಲಾಗಿ ಹೋಗುತ್ತದೆ. ಇಡೀ ನಗರಕ್ಕೆ ಸಂಪರ್ಕ ನೀಡುವಷ್ಟು ನೀರು ನಮ್ಮ ಸಂಗ್ರಹದಲ್ಲಿಲ್ಲ. ಆದ್ದರಿಂದ ಕುಂಡಾಮೇಸ್ತ್ರಿ ಯೋಜನೆ ಜಾರಿಯಾದ ನಂತರವೇ ಈ ಪೈಪುಗಳಿಗೆ ನೀರಿನ ಸಂಪರ್ಕ ನೀಡುವುದು ಒಳಿತು ಎಂದು ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT