ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಸಲಲ್ಲಿ ಬದುಕಲು ಸಿದ್ಧ...

Last Updated 21 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಜನ ನನ್ನ ಮರೆತರೂ ಪರವಾಗಿಲ್ಲ.  ಒಳ್ಳೆಯ ಸಿನಿಮಾ ಮಾಡುವುದೇ ನನ್ನ ಗುರಿ'.
ನಾಯಕ ನಟ ಚೇತನ್ ಅವರ ಮಾತಿನಲ್ಲಿ ಅಸ್ಪಷ್ಟತೆಯ ಸುಳಿವೂ ಇರಲಿಲ್ಲ.

2010ರಲ್ಲಿ ಅವರ ಅಭಿನಯದ `ಸೂರ್ಯಕಾಂತಿ' ಚಿತ್ರ ಬಿಡುಗಡೆಯಾಗಿತ್ತು. ಅದಾಗಿ ಮೂರು ವರ್ಷಗಳ ಬಳಿಕ ಇಂದು (ಫೆ. 22) ಅವರು ನಾಯಕರಾಗಿರುವ `ಮೈನಾ' ತೆರೆ ಕಾಣುತ್ತಿದೆ. ಕಲಾವಿದನೊಬ್ಬ ಎರಡು ವರ್ಷಗಳ ಕಾಲ ತೆರೆಯಿಂದ ದೂರ ಉಳಿಯುವುದು ಕಷ್ಟವಲ್ಲವೇ ಎಂದು ಪ್ರಶ್ನಿಸಿದಾಗ ಅವರು ಒಳ್ಳೆಯ ಸಿನಿಮಾದಲ್ಲಷ್ಟೇ ನಟಿಸುವ ತಮ್ಮ ಹಂಬಲ ಹೊರಹಾಕಿದರು.

ಮೈಸೂರು ಮೂಲದ ಚೇತನ್ ಅಮೆರಿಕದಲ್ಲಿ ಹುಟ್ಟಿ ಬೆಳೆದವರು. ಅಪ್ಪ ಅಮ್ಮ ಇಬ್ಬರೂ ವೃತ್ತಿಯಿಂದ ವೈದ್ಯರು. ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಚೇತನ್ ಆರೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದರು. `ಆ ದಿನಗಳು', `ಬಿರುಗಾಳಿ', `ಸೂರ್ಯಕಾಂತಿ' ಅವರ ಅಭಿನಯದ ಚಿತ್ರಗಳು. ತಾವೇ ಚಿತ್ರಕತೆ, ಸಂಭಾಷಣೆ ಬರೆಯುವುದರಲ್ಲೂ ಅವರು ತೊಡಗಿಕೊಂಡಿದ್ದಾರೆ.

ಇದೀಗ ಮತ್ತೆ ನಟನೆಯ ಹಳಿಗೆ ಹೊರಳಿರುವ ಚೇತನ್‌ಗೆ ಸಂಖ್ಯೆಗಾಗಿ ಅಥವಾ ಹಣಕ್ಕಾಗಿ ಎಂಥದೋ ಒಂದು ಸಿನಿಮಾ ಮಾಡುವ ಮನಸ್ಸಿಲ್ಲ. ಸಾಮಾಜಿಕ ಜವಾಬ್ದಾರಿ ಇರುವಂಥ ಸಿನಿಮಾಗಳಲ್ಲಿ ಮಾತ್ರ ನಟಿಸಬೇಕು ಎನ್ನುವ ತಮ್ಮ ನಿರ್ಣಯವನ್ನು ಅವರು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬಂದಿದ್ದಾರಂತೆ.

ಹಣದ ಅವಶ್ಯಕತೆ ಇದ್ದಿದ್ದರೆ ನಿಮ್ಮ ಅಭಿಪ್ರಾಯ ಬೇರೆಯಾಗಲು ಸಾಧ್ಯವಿತ್ತೇ? ಎನ್ನುವ ಪ್ರಶ್ನೆಯನ್ನು ಚೇತನ್ ತಳ್ಳಿಹಾಕುತ್ತಾರೆ.

`ಅಮೆರಿಕದಲ್ಲಿ ವಯಸ್ಸಿಗೆ ಬಂದ ತಕ್ಷಣ ಮಕ್ಕಳು ತಾವೇ ದುಡಿದು ಬದುಕುತ್ತಾರೆ. ನಾನೂ ಕೂಡ ಅಪ್ಪ-ಅಮ್ಮನನ್ನು ಅವಲಂಬಿಸದೇ ವಿದ್ಯಾರ್ಥಿ ವೇತನಗಳು ಮತ್ತು ನನ್ನ ಸಿನಿಮಾ ಸಂಭಾವನೆಯನ್ನು ಅವಲಂಬಿಸಿ ಬದುಕುತ್ತಿರುವೆ. ನನ್ನದು ಸರಳ ಜೀವನ. ಹೆಚ್ಚು ದುಡ್ಡಿನ ಅಗತ್ಯ ನನಗಿಲ್ಲ. ಸೈಕಲ್ ಸವಾರಿ ನನಗೆ ತುಂಬಾ ಇಷ್ಟ. ಆದರೆ ಇಲ್ಲಿ ನಾಯಕನಟ ಹೀಗೇ ಇರಬೇಕು ಎಂದು ಬಯಸುವುದರಿಂದ ನಾನು ಕಾರು ಖರೀದಿಸಿದ್ದೇನೆ ಅಷ್ಟೇ. ಆತ್ಮತೃಪ್ತಿ ಇದ್ದರೆ ಗುಡಿಸಲಲ್ಲಿ ಬದುಕಲು ನಾನು ಸಿದ್ಧ' ಎನ್ನುತ್ತಾರೆ.

`ಸಿನಿಮಾಗೆ ಬರುವ ಮುಂಚೆ ನನ್ನ ಜೀವನ ಶೈಲಿ ಹೇಗಿತ್ತೋ ಈಗಲೂ ಹಾಗೇ ಇದೆ. ಒಬ್ಬ ಮನುಷ್ಯ ಸುಖವಾಗಿ ಬದುಕಲು ಹೆಚ್ಚು ಹಣದ ಅವಶ್ಯಕತೆ ಇರುವುದಿಲ್ಲ. ನನಗೆ ಒಂದು ಸಿನಿಮಾಗೆ ಸಿಗುತ್ತಿರುವ ಸಂಭಾವನೆ ನಾಲ್ಕೈದು ವರ್ಷ ಅನ್ನ ನೀಡುತ್ತದೆ. ನಾನು ಆಡಂಬರದ ಜೀವನ ಸಾಗಿಸಿದ್ದರೆ ಅದು ಸಾಲುತ್ತಿರಲಿಲ್ಲವೇನೋ?' ಎಂದು ಚೇತನ್ ತಮ್ಮ ಮಾತನ್ನು ವಿಸ್ತರಿಸುತ್ತಾರೆ.

ನೂರಾರು ಕತೆ ಕೇಳಿದ್ದರೂ ಒಂದು ವರ್ಷದ ಹಿಂದೆ ನಿರ್ದೇಶಕ ನಾಗಶೇಖರ್ ಹೇಳಿದ ಕತೆ ಅವರ ಮನಸ್ಸಿಗೆ ಹಿಡಿಸಿತಂತೆ. `ಮೈನಾ'ದ ನಾಯಕನ ಪಾತ್ರ ಚೇತನ್ ಅವರ ವ್ಯಕ್ತಿತ್ವಕ್ಕೆ ತುಂಬಾ ಹೋಲುತ್ತದೆಯಂತೆ. `ಚಿತ್ರದಲ್ಲಿ ಒಂದು ಹೋರಾಟವೂ ಇದೆ. ಸಂದೇಶವೂ ಇದೆ. ಇದು ಸತ್ಯಕತೆ ಆಧರಿಸಿದ್ದರಿಂದ ನನಗೆ ತುಂಬಾ ಇಷ್ಟವಾಯಿತು. ಸಾಮಾನ್ಯ ಪ್ರೇಮಕತೆಗಳಿಗಿಂತ ನನಗೆ ಸಾಮಾಜಕ್ಕೆ ಹತ್ತಿರವಾದ ಕತೆಗಳಿಷ್ಟ' ಎನ್ನುತ್ತಾರೆ.

ಬಿಡುವಿದ್ದಾಗ ಲೇಖನಗಳನ್ನು ಬರೆಯುವ, ಸ್ಯಾಕ್ಸೋಫೋನ್ ನುಡಿಸುವ ಚೇತನ್‌ಗೆ ನಿರ್ದೇಶನದತ್ತಲೂ ಮನಸ್ಸಿದೆ. ನಿರ್ದೇಶನವನ್ನು ಅಕಾಡೆಮಿಕ್ಕಾಗಿ ಕಲಿಯುವುದಕ್ಕಿಂಥ ಜನರೊಂದಿಗೆ ಬೆರೆತು ಹಾಗೂ ಸಿನಿಮಾಗಳನ್ನು ನೋಡುತ್ತಾ, ಗಮನಿಸುತ್ತಾ ಕಲಿಯುವುದು ಹೆಚ್ಚು ಸೂಕ್ತ ಎಂದು ಅವರಿಗನ್ನಿಸಿದೆ.

ಅಂದಹಾಗೆ, `ಯಾವುದೇ ಸಿನಿಮಾ ಆದರೂ ಅದು ನಾಯಕ ಪ್ರಧಾನವಾಗದೇ ಕತೆ ಪ್ರಧಾನವಾಗಿರಬೇಕು' ಎಂಬ ಆಸೆ ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT