ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಬೀಜ ಉತ್ಪಾದನೆಗೆ ಸಲಹೆ

Last Updated 10 ಸೆಪ್ಟೆಂಬರ್ 2011, 10:20 IST
ಅಕ್ಷರ ಗಾತ್ರ

ಧಾರವಾಡ: `ಬೀಜ ಉತ್ಪಾದನೆಗೆ ಸರ್ಕಾರ ರೈತರ ಮನೆ ಬಾಗಿಲಗೆ ಯೋಜನೆಗಳನ್ನು ಕೊಂಡೊಯ್ಯುತ್ತಿದೆ. ರೈತರ ಹೊಲದಲ್ಲಿಯೇ ಬೀಜ ಉತ್ಪಾದನೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ರೈತರು ಇವುಗಳ ಸದುಪಯೋಗ ಪಡೆಯಬೇಕು~ ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸಹಾಯಕ ಮಹಾನಿರ್ದೇಶಕ (ಬೀಜ) ಡಾ. ಜೆ.ಎಸ್.ಸಂಧು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳದ ಅಂಗವಾಗಿ ಆಯೋಜಿಸಿರುವ ಬೀಜ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಬೀಜ ಬಹಳ ಮಹತ್ವದ್ದು. ಆದ್ದರಿಂದ ಗುಣಮಟ್ಟದ ವಿವಿಧ ತಳಿಗಳ ಬೀಜಗಳ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದರು.

ಉತ್ತಮ ತಳಿಗಳ ಬೀಜ ಹಾಗೂ ವೈಜ್ಞಾನಿಕವಾದಂಥ ತಾಂತ್ರಿಕತೆ ಬಳಸುವುದರಿಂದ ಶೇ. 15 ರಿಂದ 20 ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದು ಎಂದರು. ಬೀಜಗಳು ಸರಿಯಾದ ಸಮಯಕ್ಕೆ ರೈತರಿಗೆ ತಲುಪಬೇಕು. ಸಕಾಲಕ್ಕೆ ರೈತರಿಗೆ ದೊರೆಯದಿದ್ದರೆ, ಬೀಜೋತ್ಪಾದನೆಗೆ ಖರ್ಚು ಮಾಡಿದ ಹಣ ಹಾಗೂ ಸಮಯ ವ್ಯರ್ಥವಾದಂತೆ ಎಂದು ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಉತ್ತಮ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೃಷಿ ವಿಶ್ವವಿದ್ಯಾಲಯಗಳು ರೈತರಿಂದ ದೂರವಿರಬಾರದು. ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವತ್ತ ಗಮನ ಹರಿಸಬೇಕು ಎಂದ ಅವರು, ಇಂಥ ಮೇಳಗಳಲ್ಲಿ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಯಬೇಕು ಎಂದರು.

ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಎನ್‌ಐಎಪಿ ನಿರ್ದೇಶಕ ಡಾ. ಬೆಂಗಾಲಿಬಾಬು ಮಾತನಾಡಿ, ಟ್ರ್ಯಾಕ್ಟರ್ ತಯಾರಿಕೆಯಲ್ಲಿ ಭಾರತವು ಜಗತ್ತಿನಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬರಗಾಲ ಸಂಭವಿಸಿದರೂ ಹಾಗೂ ಅತೀ ಮಳೆಯಾದರೂ ಸಹ ನಮ್ಮ ಮಣ್ಣಿನ ಫಲವತ್ತತೆ ಕಡಿಮೆಯಾಗುವುದಿಲ್ಲ. ಇದರಿಂದ ಆಹಾರ ಭದ್ರತೆಯ ಆತಂಕವಿಲ್ಲ.     ಕಳೆದ ವರ್ಷ 217 ದಶಲಕ್ಷ ಟನ್ ಬೀಜ       ಉತ್ಪಾದನೆ ಮಾಡಲಾಗಿದೆ ಎಂದು      ಹೇಳಿದರು.

ಕರ್ನಾಟಕ ಕೃಷಿ ಮಿಶನ್ ಅಧ್ಯಕ್ಷ ಎಸ್.ಎ.ಪಾಟೀಲ ಮಾತನಾಡಿ, ಕೃಷಿಯಲ್ಲಿ ಬೀಜ ಮುಖ್ಯ ಘಟಕ. ಒಕ್ಕಲುತನವಿಲ್ಲದೇ ದೇಶದ ಪ್ರಗತಿ ಸಾಧ್ಯವಿಲ್ಲ. ಉತ್ತಮ ಗುಣಮಟ್ಟದ ಬೀಜವನ್ನು ರೈತರೇ ತಯಾರು ಮಾಡಬೇಕು. ರಾಣೆಬೆನ್ನೂರ ಹಾಗೂ ಬ್ಯಾಡಗಿ ಪ್ರದೇಶದಲ್ಲಿ ರೈತರು ಹತ್ತಿ ಬೀಜ ಉತ್ಪಾದಿಸಿ ಕನಿಷ್ಠ ಒಂದು ಲಕ್ಷ ರೂ. ಹಾಗೂ ಮೆಣಸಿನಕಾಯಿ, ಬದನೆಕಾಯಿ ಬೀಜ ಉತ್ಪಾದಿಸಿ ಕನಿಷ್ಠ  2.5 ಲಕ್ಷ ರೂ. ಲಾಭ ಗಳಿಸಿದ್ದಾರೆ ಎಂದು  ಹೇಳಿದರು.

ಶಾಸಕಿ ಸೀಮಾ ಮಸೂತಿ ಅಧ್ಯಕ್ಷತೆ ವಹಿಸಿ, ಕೃಷಿಯಲ್ಲಿ ರೈತರು ಆಸಕ್ತಿ ಕಳೆದುಕೊಳ್ಳಬಾರದು. ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳುವತ್ತ ಗಮನ ಹರಿಸಬೇಕು. ಕೃಷಿ ವಿವಿ ವಿಜ್ಞಾನಿಗಳು ರೈತರ ಬಳಿ ಹೋಗಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಬೇಕು ಎಂದರು.

ಕೃಷಿ ಇಲಾಖೆ ಆಯುಕ್ತ ಡಾ. ಬಾಬುರಾವ್ ಮುಡಬಿ ಮಾತನಾಡಿದರು. ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದಕೃಷ್ಣ, ರಾಜ್ಯ ಬೀಜ ಪ್ರಮಾಣನ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಸ್ವಾಮಿ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶಾಸಕ ಜಿ.ಎಸ್.ನ್ಯಾಮಗೌಡ, ಡಾ. ಟಿ.ವಿ.ಮುನಿಯಪ್ಪ, ಅಶೋಕ ಎಂ.ಪಾಟೀಲ, ಅಶೋಕ ಎ.ಪಾಟೀಲ, ಬಸವರಾಜ ಕುಂದಗೋಳ, ಮುರಳೀಧರ ಬೆಳ್ಳೂರು ಉಪಸ್ಥಿತರಿದ್ದರು.

ಕುಲಪತಿ ಡಾ. ಆರ್.ಆರ್.ಹಂಚಿನಾಳ ಸ್ವಾಗತಿಸಿ, `ಹಿಂಗಾರು ಹಂಗಾಮಿಗೆ ಸುಧಾರಿತ, ಪರಿಶುದ್ಧವಾದ ಬೀಜಗಳನ್ನು ರೈತರಿಗೆ ತಲುಪಿಸುವುದು ಬೀಜ ಮೇಳದ ಮುಖ್ಯ ಉದ್ದೇಶವಾಗಿದೆ. ಬೀಜ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮೊದಲನೇ ಸ್ಥಾನ ನಮ್ಮ ಕೃಷಿ ವಿವಿಗೆ ಸಿಕ್ಕಿದೆ. ವಿವಿಧ ಬೆಳೆಗಳ ಹಾಗೂ ತಳಿಗಳ 1.50 ಲಕ್ಷ ಕ್ವಿಂಟಲ್ ಬೀಜ ಉತ್ಪಾದನೆ ಮಾಡಲಾಗಿದೆ~ ಎಂದರು.

ಇದೇ ಸಂದರ್ಭದಲ್ಲಿ ಬೀಜೋತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದ ರೈತರಾದ ಬಿ.ಎಂ.ದೇಸಾಯಿ, ವಿ.ಎ.ಬಸವರಾಜ, ಸಣ್ಣವೀರಪ್ಪ ಹೊಂಗಲ ಅವರನ್ನು ಸನ್ಮಾನಿಸಲಾಯಿತು. ರೈತರ ಸೇವೆಯಲ್ಲಿ ಬೀಜ ಘಟಕ ಹಾಗೂ ಸೋಯಾ, ಅವರೆ ಬೆಳೆಯ ಬೀಜೋತ್ಪಾದನೆ ಮತ್ತು ಕೊಯ್ಲೋತ್ತರ ತಾಂತ್ರಿಕತೆಗಳು ಎಂಬ ಪುಸ್ತಕಗಳ ಬಿಡುಗಡೆ ನಡೆಯಿತು. ಇದೇ ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಯಿತು. ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ. ಪಿ.ಎಂ.ಸಾಲಿಮಠ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT