ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ 20,910: ಸಾಧನೆ 2304

ಉದ್ಯೋಗಖಾತ್ರಿ ಯೋಜನೆ: ವೈಯಕ್ತಿಕ ಫಲಾನುಭವಿ ಕಾಮಗಾರಿ
Last Updated 9 ಜನವರಿ 2014, 6:30 IST
ಅಕ್ಷರ ಗಾತ್ರ

ಕೋಲಾರ: ಸಮುದಾಯ ಆಧಾರಿತ ಕಾಮಗಾರಿ­ಗಳ ಜೊತೆಗೆ ವೈಯಕ್ತಿಕ ಕಾಮಗಾರಿಗಳನ್ನು ನಡೆಸಲು ಉದ್ಯೋಗಖಾತ್ರಿ ಯೋಜನೆಯ ಅಡಿ ರಾಜ್ಯ ಸರ್ಕಾರ ರೂಪಿಸಿರುವ ಕಾರ್ಯಕ್ರಮವು ಜಿಲ್ಲೆಯಲ್ಲಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ.

ರಾಜ್ಯ ಸರ್ಕಾರವು ಆಯವ್ಯಯದಲ್ಲಿ ಮಂಡಿ­ಸಿದ ಪ್ರಮುಖ ಕಾರ್ಯಕ್ರಮದಲ್ಲಿ ಒಂದಾದ ಈ ಯೋಜನೆ ಅಡಿ ಜಿಲ್ಲೆಯಲ್ಲಿ 20,910 ವೈಯಕ್ತಿಕ ಕಾಮಗಾರಿಗಳ ಗುರಿ ನಿಗದಿ ಮಾಡಲಾಗಿದೆ. ಆದರೆ 2014ರ ವರ್ಷವನ್ನು ಪ್ರವೇಶಿಸಿರುವ ಜಿಲ್ಲೆಯಲ್ಲಿ ಇದುವರೆಗೆ ಕೇವಲ 2304 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಒಟ್ಟಾರೆ ಗುರಿಯಲ್ಲಿ ಶೇ 11.01ರಷ್ಟು ಮಾತ್ರ ಸಾಧನೆಯಾಗಿದೆ.

ಕಳೆದ ಅಕ್ಟೋಬರ್ 22ರಂದು ನಗರದ ಮಿನಿ ಕ್ರೀಡಾಂ­ಗಣದಲ್ಲಿ ಈ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಮಾಡುವ ಸಲುವಾಗಿಯೇ ಜಿಲ್ಲಾಧಿಕಾರಿ ಡಿ.ಕೆ.ರವಿ ಉದ್ಯೋಗಖಾತ್ರಿ ಯೋಜ­ನೆಯ ಜಿಲ್ಲಾ ಮಟ್ಟದ  ವೈಯಕ್ತಿಕ ಫಲಾ­ನುಭವಿಗಳ ಮೇಳವನ್ನೂ ಆಯೋಜಿಸಿದ್ದರು. ಅದಾಗಿ, ಎರಡೂವರೆ ತಿಂಗಳು ಕಳೆದರೂ ವೈಯಕ್ತಿಕ ಕಾಮಗಾರಿಗಳ ಪ್ರಗತಿ ನಿರಾಶಾದಾ­ಯಕವಾಗಿಯೇ ಇದೆ.

ಪರಿಶಿಷ್ಟ ಜಾತಿಯ ಆಯ್ದ 8380 ಫಲಾ­ನುಭವಿಗಳ ಕಾಮಗಾರಿಗಳ ಪೈಕಿ ಕೇವಲ 873 ಮಾತ್ರ ಪೂರ್ಣಗೊಂಡಿವೆ. ಅದೇ ರೀತಿ, ಪರಿಶಿಷ್ಟ ವರ್ಗದವರ 2007 ಕಾಮಗಾರಿ ಪೈಕಿ 248, ಬಿಪಿಎಲ್ ಕುಟುಂಬದವರ 5,555 ಕಾಮಗಾರಿಗಳ ಪೈಕಿ ಕೇವಲ 439 ಕಾಮಗಾ­ರಿಗಳು ಮಾತ್ರ ಪೂರ್ಣಗೊಂಡಿವೆ. 4205 ಸಣ್ಣ ಮತ್ತು ಅತಿಸಣ್ಣ ರೈತರ ಕಾಮಗಾರಿಗಳ ಪೈಕಿ 668 ಕಾಮಗಾರಿಗಳು ಪೂರ್ಣಗೊಂಡಿವೆ. ಇಂದಿ­ರಾ ಆವಾಸ್ ಯೋಜನೆಯಡಿ 763 ಕಾಮಗಾ­ರಿಗಳಲ್ಲಿ 76 ಮಾತ್ರ ಪೂರ್ಣಗೊಂಡಿವೆ.

ಹಿಂದುಳಿದ ಜಿಲ್ಲಾ ಕೇಂದ್ರ: ವೈಯಕ್ತಿಕ ಫಲಾನುಭವಿ ಯೋಜನೆಯ ಅನುಷ್ಠಾನದಲ್ಲಿ ಇಡೀ ಜಿಲ್ಲೆಯ ಐದುತಾಲ್ಲೂಕುಗಳ ಪೈಕಿ ಕೋಲಾರ ತಾಲ್ಲೂಕು ಹೆಚ್ಚು ಹಿಂದುಳಿದು, ಕಳಪೆ ಸಾಧನೆಯಿಂದ ಗಮನ ಸೆಳೆಯುತ್ತಿದೆ. ನಂತರದ ಸ್ಥಾನದಲ್ಲಿ ಶ್ರೀನಿವಾಸಪುರ ತಾಲ್ಲೂಕಿದೆ. ಗಮನ ಸೆಳೆಯುವ ಸಾಧನೆ ಮಾಡಿರುವು ಮಾಲೂರು ತಾಲ್ಲೂಕು ಮಾತ್ರ.  ತಾಲ್ಲೂಕು ಪಂಚಾಯತಿ ಕಾರ್ಯನಿರ್ವ­ಹಣಾ­ಧಿ­ಕಾರಿಗಳ ವರ್ಗಾ­ವಣೆಯೂ ಈ ಯೋಜನೆಯ ಅನುಷ್ಠಾನದ ಮೇಲೆ ದುಷ್ಪರಿಣಾ­ಮವನ್ನು ಬೀರಿದೆ ಎನ್ನುತ್ತಾರೆ ಪಂಚಾಯತಿಯ ಕೆಲವು ಸಿಬ್ಬಂದಿ.

ಮುಂದುವರಿದ ವಿಷಾದ: ಗ್ರಾಮೀಣಾಭಿವೃದ್ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಣಕ್ಕೆ ಕೊರತೆ ಇಲ್ಲ. ಉದ್ಯೋಗ­ಖಾತ್ರಿ ಯೋಜೆ ಅಡಿ ಇಲಾಖೆಯು ನೀಡುವ ಕೋಟ್ಯಂತರ ರೂಪಾಯಿ ಅನುದಾನ­ವನ್ನು ಸರಿ­ಯಾದ ರೀತಿ ಬಳಸುವಲ್ಲಿ ಜವಾಬ್ದಾರಿ­ಯನ್ನು ಮರೆತ ಸನ್ನಿವೇಶ ನಿರ್ಮಾಣ­ವಾಗಿದೆ ಎಂದು ಡಿ.ಕೆ.ರವಿ ಮೇಳದಲ್ಲಿ ವಿಷಾದ ವ್ಯಕ್ತಪಡಿ­ಸಿದ್ದರು. ಈಗಲೂ ಆ ಸನ್ನಿವೇಶ ಹಾಗೆಯೇ ಇದೆ ಎಂಬುದು ಗಮನಿಸಬೇಕಾದ ಸಂಗತಿ.

ಜಿಲ್ಲೆಯಲ್ಲಿ ಯೋಜನೆಯು ಆರಂಭವಾದ 2009ರಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರ ಜೊತೆಗೆ ಕೆಲಸ ಮಾಡದವರಿಗೂ ಹಣ ದೊರಕಿದೆ ಎಂಬ ಹಲವು ಆರೋಪಗಳು ಕೇಳಿ ಬಂದಿದ್ದವು. ಅದನ್ನು ತಡೆಯಲು ಸಮು­ದಾಯ ಆಧಾರಿತ ಕಾಮಗಾರಿಗಳಿಗೆ ಆದ್ಯತೆ ನೀಡಲಾಯಿತಾದರೂ, ಅಲ್ಲಿಯೂ ಅಡ­ಚಣೆಗಳು ಉಂಟಾದ ಹಿನ್ನೆಲೆಯಲ್ಲಿ ಮತ್ತೆ ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡ­ಲಾಗಿದೆ. ಈ ಅವಕಾಶವನ್ನು ಜಾಬ್ ಕಾರ್ಡ್ ಉಳ್ಳವರೆಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಂದು ಜಿಲ್ಲಾಧಿಕಾರಿಗಳು ಹೇಳಿದ್ದರು.
ಆದರೆ ಜಾಬ್ ಕಾರ್ಡ್ ಉಳ್ಳ ಲಕ್ಷಾಂತರ ಮಂದಿ ಪೈಕಿ ಕೇವಲ 20 ಸಾವಿರ ಮಂದಿಗೆ ಮಾತ್ರ ವೈಯಕ್ತಿಕ ಕಾಮಗಾರಿಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಅದರಲ್ಲೂ ಪ್ರಗತಿ ಕಂಡುಬಂದಿಲ್ಲ.

ಪಿಡಿಓ ಸಭೆಯಲ್ಲಿ ಚರ್ಚೆ–ಡಿಸಿ
ಉದ್ಯೋಗಖಾತ್ರಿ ಯೋಜನೆಯ ವೈಯಕ್ತಿಕ ಫಲಾನುಭವಿಗಳ ಕಾಮಗಾರಿಯಲ್ಲಿ ಜಿಲ್ಲೆ ಹಿಂದುಳಿದಿರುವ ಕುರಿತು ಪ್ರತಿಕ್ರಿಯಿಸಲು ಜಿಲ್ಲಾಧಿಕಾರಿ ಡಿ.ಕೆ.ರವಿ ನಿರಾಕರಿಸಿದರು. ಆದರೆ, ಆ ಬಗ್ಗೆ ಜ.18ರಂದು ನಡೆಯಲಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಯೋಜನೆ ರೂಪರೇಷೆ..
ಪರಿಶಿಷ್ಟ ಸಮುದಾಯದವರು, ಬಿಪಿಎಲ್ ಕುಟುಂಬದವರೂ ಸೇರಿದಂತೆ ಗ್ರಾಮಸ್ಥರು ತಮ್ಮ ಹೊಲ, ತೋಟಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಈ ಕಾರ್ಯಕ್ರಮದ ಅಡಿ ಸರ್ಕಾರ ವರ್ಷಕ್ಕೆ 100 ದಿನ ಕೆಲಸ ಕೊಡುತ್ತದೆ. 1 ಕುಟುಂಬಕ್ಕೆ ಕನಿಷ್ಠ ರೂ. 25ರಿಂದ 30 ಸಾವಿರದವರೆಗೂ ಆದಾಯ ದೊರಕುತ್ತದೆ.

ಪರಿಶಿಷ್ಟ ಜಾತಿ, ಪಂಗಡದವರು, ಬಡತನ ರೇಖೆ ಕೆಳಮಟ್ಟದಲ್ಲಿರುವವರು, ಭೂ ಸುಧಾರಣಾ ಫಲಾನುಭವಿಗಳು, ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳು, ಸಣ್ಣ, ಅತಿ ಸಣ್ಣ ರೈತರು, ಪರಿಶಿಷ್ಟ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳು ಯೋಜನೆ ಅಡಿಯಲ್ಲಿ ವೈಯಕ್ತಿಕ ಫಲಾನುಭವಿಗಳಾಗಿ ಕಾಮಗಾರಿ ನಡೆಸಬಹುದು.

ವೈಯಕ್ತಿಕ ಫಲಾನುಭವಿಗಳ ಜಮೀನುಗಳಲ್ಲಿ ನೀರಾವರಿ ಸೌಲಭ್ಯ, ಕೃಷಿ ಹೊಂಡ, ತೋಟಗಾರಿಕೆ, ಅರಣ್ಯೀಕರಣ, ಬದು ನಿರ್ಮಾಣ. ಭೂ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬಹುದು. ಮನೆಯ ಆವರಣದಲ್ಲಿ, ಸುತ್ತಮುತ್ತ ಗಿಡ ನೆಡುವ ಕಾಮಗಾರಿಗೂ ಅವಕಾಶವಿದೆ. ಮನೆಯ ಸುತ್ತ ಕೊಳಚೆ ನೀರು ಇದ್ದಲ್ಲಿ ಅದನ್ನು ಬಳಸಿ ಗಿಡಗಳನ್ನು ನೆಡಲೂ ಖಾತ್ರಿ ಯೋಜನೆಯ ಅನುದಾನವನ್ನು ಬಳಸಬಹುದಾಗಿದೆ !

5ನೇ ಸ್ಥಾನಕ್ಕೆ ಬಂದರೂ....
ವೈಯಕ್ತಿಕ ಫಲಾನುಭವಿಗಳ ಮೇಳದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜ­ನೆಯ ಅನುಷ್ಠಾನದಲ್ಲಿ ಜಿಲ್ಲೆಯು ರಾಜ್ಯದಲ್ಲಿ 25ನೇ ಸ್ಥಾನದಲ್ಲಿತ್ತು.

ಕಳೆದ ನವೆಂಬರ್ ತಿಂಗಳಲ್ಲಿ ಸಾಧಿಸಿದ ಪ್ರಗತಿ ಹಿನೆ್ನೆಲೆಯಲ್ಲಿ ಜಿಲ್ಲೆಯು ಐದನೇ ಸ್ಥಾನಕ್ಕೆ ಏರಿದೆ ಎನ್ನುತ್ತದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿರುವ ಮಾಹಿತಿ. 25ರಿಂದ 5ನೇ ಸ್ಥಾನಕ್ಕೆ ಏರಿದರೂ, ವೈಯಕ್ತಿಕ ಫಲಾನುಭವಿಗಳ ಕಾಮಗಾರಿಯ ವಿಚಾರದಲ್ಲಿ ಮಾತ್ರ ಜಿಲ್ಲೆ ಏಕಿಷ್ಟು ಕಳಪೆ ಸಾಧನೆ ತೋರುತ್ತಿದೆ ಎಂಬುದು ಸದ್ಯದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT