ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿಯನ್ನು ಬೆನ್ನಟ್ಟುವುದು ಸುಲಭ...!

Last Updated 5 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗುರಿಯನ್ನು ಬೆನ್ನಟ್ಟುವುದು ಸುಲಭ; ಆದ್ದರಿಂದಲೇ ‘ಟಾಸ್’ ಗೆದ್ದರೆ ಮೊದಲು ಕ್ಷೇತ್ರರಕ್ಷಣೆ ಮಾಡುವುದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಆಲೋಚನೆ.
ಐರ್ಲೆಂಡ್ ವಿರುದ್ಧ ಭಾನುವಾರ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ‘ಬಿ’ ಗುಂಪಿನ ಪಂದ್ಯಕ್ಕಾಗಿ ಶನಿವಾರ ತಾಲೀಮು ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಈ ಯೋಚನೆಯನ್ನು ಹರಿಬಿಟ್ಟರು.

ಈ ಅಂಗಳದಲ್ಲಿ ನಡೆದ ವಿಶ್ವಕಪ್‌ನ ಎರಡು ಪಂದ್ಯಗಳಲ್ಲಿ ಗುರಿಯನ್ನು ಬೆನ್ನಟ್ಟಿದ ತಂಡಕ್ಕೆ ಯಾವುದೇ ರೀತಿಯಲ್ಲಿ ಕಷ್ಟವಾಗಿಲ್ಲ. ಇಂಗ್ಲೆಂಡ್ ತಂಡವು ಗುರಿಯನ್ನು ಬೆನ್ನಟ್ಟಿ ಭಾರತ ವಿರುದ್ಧದ ಪಂದ್ಯವನ್ನು ‘ಟೈ’ ಮಾಡಿಕೊಂಡಿತು. ಇಂಗ್ಲೆಂಡ್ ಎದುರು ಐರ್ಲೆಂಡ್ ಮೂರು ವಿಕೆಟ್‌ಗಳ ವಿಜಯ ಸಾಧಿಸಿತು. ಪ್ರಭಾವಿ ಬೌಲರ್‌ಗಳನ್ನು ಹೊಂದಿದ್ದರೂ ಇಂಗ್ಲೆಂಡ್‌ನವರು ಐರ್ಲೆಂಡ್‌ಗೆ ಕಡಿವಾಣ ಹಾಕಲು ಆಗಲಿಲ್ಲ.

ಇಂಥ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ‘ಮಹಿ’ ಲೀಗ್ ಹಂತದ ತಮ್ಮ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದರೆ ಎದುರಾಳಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಶನಿವಾರವೇ ಸುಳಿವು ನೀಡಿದ್ದಾರೆ. ‘ಕತ್ತಲೆ ಆವರಿಸಿ ಫ್ಲಡ್‌ಲೈಟ್ ಬೆಳಗಿದಾಗ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಎನಿಸುತ್ತದೆ. ಪಿಚ್ ಗುಣವೇ ಹಾಗಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುತ್ತದೆ ಎನ್ನುವುದು ಕಳೆದ ಎರಡು ಪಂದ್ಯಗಳಿಂದ ಸ್ಪಷ್ಟವಾಗಿದೆ.

ವೇಗಿಗಳಿಗೂ ಅಷ್ಟೇನು ಸಹಕಾರ ದೊರೆಯುವುದಿಲ್ಲ. ಗತಿಯೂ ನಿಧಾನವಾಗುತ್ತದೆ. ಅದೇ ಮಧ್ಯಾಹ್ನದ ಹೊತ್ತಿಗೆ ಸ್ಪಿನ್ನರ್‌ಗಳಿಗೆ ಅಂಗಳವು ಸ್ಪಂದಿಸುತ್ತದೆ’ ಎಂದು ಹೇಳಿದರು. ಚಿನ್ನಸ್ವಾಮಿ ಅಂಗಳವು ಬೌಲರ್‌ಗಳ ಮಟ್ಟಿಗೆ ಪ್ರಯೋಜನಕಾರಿ ಆಗಿಲ್ಲ. ಮುನ್ನೂರಕ್ಕೂ ಹೆಚ್ಚು ರನ್ ಗಳಿಸುವುದು ಯಾವುದೇ ತಂಡಕ್ಕೆ ಕಷ್ಟವೆನಿಸಿಲ್ಲ. ಇದರಿಂದಾಗಿ ಬೌಲರ್‌ಗಳು ಚಡಪಡಿಸುವಂತಾಗಿದೆ ಎನ್ನುವ ಅಂಶದ ಕಡೆಗೆ ಬೆರಳು ತೋರಿಸಿದ ದೋನಿ ‘ಶನಿವಾರದ ಪಂದ್ಯದಲ್ಲಿಯೂ ಹಾಗೆಯೇ ಆಗುತ್ತದೆಂದು ಖಂಡಿತ ನಿರೀಕ್ಷೆ ಮಾಡಬಹುದು. ಚೆಂಡು ಇಲ್ಲಿ ತಿರುವು ಪಡೆಯುತ್ತದೆಂದು ವಿಶ್ವಾಸದಿಂದ ಹೇಳಲು ಆಗುತ್ತಿಲ್ಲ.

ಎರಡು ಪಂದ್ಯಗಳಲ್ಲಿ 1400ರ ಸಮೀಪಕ್ಕೆ ರನ್‌ಗಳು ಹರಿದು ಬಂದಿವೆ. ಆದ್ದರಿಂದ ಐರ್ಲೆಂಡ್ ವಿರುದ್ಧದ ನಮ್ಮ ಪಂದ್ಯದಲ್ಲಿಯೂ ಭಾರಿ ರನ್ ಮೊತ್ತವನ್ನು ಕಾಣಬಹುದೆಂದು ಆಶಿಸಲಾಗಿದೆ’ ಎಂದರು. ‘ಕಳೆದ ಪಂದ್ಯದಲ್ಲಿ ನಾವಿನ್ನೂ ಇಪ್ಪತ್ತು ಮೂವತ್ತು ರನ್ ಹೆಚ್ಚು ಗಳಿಸಬೇಕಿತ್ತು. ಆದ್ದರಿಂದಲೇ ಆ ನಿಟ್ಟಿನಲ್ಲಿ ಯೋಚನೆ ಮಾಡಲಾಗುತ್ತಿದೆ. ಯೂಸುಫ್ ಪಠಾಣ್ ಹಾಗೂ ಯುವರಾಜ್ ಸಿಂಗ್ ನಡುವೆ ಒಂದು ಕೋಟಾ ಬೌಲಿಂಗ್ ಹಂಚಬೇಕು. ಆಗ ಇನ್ನೊಬ್ಬ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡುವುದು ಸಾಧ್ಯವಾಗುತ್ತದೆ. ಇಲ್ಲಿ ಬ್ಯಾಟಿಂಗ್‌ಗೆ ಪ್ರಶಸ್ತವಾದ ವಾತಾವರಣ ಇದೆ.

ಆದ್ದರಿಂದ ಆ ಕಡೆಗೆ ಗಮನ ನೀಡಲೇಬೇಕು’ ಎಂದ ದೋನಿ ‘ತಂಡದಲ್ಲಿ ಎಲ್ಲರೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದ್ದರಿಂದ ಪ್ರಬಲ ಸ್ಪರ್ಧೆಯಿದೆ. ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿ ಕೂಡ ವೇಗಿಗಳ ಎದುರು ನಿರ್ಭಯವಾಗಿ ಬ್ಯಾಟ್ ಬೀಸಬಲ್ಲರು. ನಾಲ್ಕನೇ ಸ್ಥಾನದಲ್ಲಿ ಆಡಲು ಪೈಪೋಟಿಯ ವಾತಾವರಣ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಯುವಿ ಇಲ್ಲವೆ ಯೂಸುಫ್ ಅವರನ್ನು ಕ್ರಮಾಂಕದಲ್ಲಿ ಮೇಲೆ ಏರಿಸುವುದು ಅಗತ್ಯ ಎನಿಸುತ್ತದೆ’ ಎಂದು ನುಡಿದರು. ಬೌಲಿಂಗ್ ಸಂಯೋಜನೆ ಏನಾಗಿರುತ್ತದೆಂದು ಕೇಳಿದ್ದಕ್ಕೆ ‘ಸ್ಪಿನ್ ಇಲ್ಲವೆ ವೇಗ ಯಾವುದು ಉತ್ತಮ ಫಲ ನೀಡುತ್ತದೆಂದು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಮಾತ್ರ ಹೇಳಿ ನುಣುಚಿಕೊಂಡರು. ‘ಐರ್ಲೆಂಡ್ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ’ ಎಂದು ಹೇಳುವುದನ್ನೂ ದೋನಿ ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT