ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಜೊತೆಗಿನ ಆ ದಿನಗಳು

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಆರೋಗ್ಯವೇ ಭಾಗ್ಯ~ ಎಂಬ ಹಳೆಯ ನಾಣ್ನುಡಿಯನ್ನು ಸಾಮಾನ್ಯವಾಗಿ ಚಿಕ್ಕಂದಿನಿಂದಲೂ ನಾವು ಕೇಳಿರುತ್ತೇವೆ. ಸ್ವತಃ ಅಸ್ವಸ್ಥರಾದಾಗಲೇ ನಮಗೆ ಆರೋಗ್ಯದ ಮಹತ್ವ ಅರಿವಾಗುವುದು. ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯದ ಅನುಭವ ಆಗಿಯೇ ಇರುತ್ತದೆ.

ಶೀತದಂತಹ ಸಾಮಾನ್ಯ ಸಮಸ್ಯೆ ಸಹ ತೀವ್ರ ಕಿರಿಕಿರಿ ಉಂಟು ಮಾಡುತ್ತದೆ. ಕೆಲವೊಮ್ಮೆ ಅನಾರೋಗ್ಯ ನಮ್ಮನ್ನು ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿಯೂ ತೊಂದರೆಗೆ ಈಡು ಮಾಡಬಹುದು.

ಶ್ರೀ ರಾಮಕೃಷ್ಣ ಪರಮಹಂಸರು ಗಂಟಲಿನ ಕ್ಯಾನ್ಸರ್‌ನಿಂದ ನರಳುತ್ತಿದ್ದರು. ಅದು ಎಷ್ಟು ತೀವ್ರವಾಗಿತ್ತೆಂದರೆ ಮಾತನಾಡಲು ಅಥವಾ ಏನನ್ನಾದರೂ ನುಂಗಲು ಸಹ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಇಷ್ಟಾದರೂ ಸಮಚಿತ್ತ ಕಳೆದುಕೊಳ್ಳದ ಅವರು, ನರೇಂದ್ರ ಸೇರಿದಂತೆ ಎಲ್ಲ ಶಿಷ್ಯಂದಿರಿಗೂ ಮಾರ್ಗದರ್ಶನವನ್ನು ಮುಂದುವರಿಸಿದ್ದರು.

ನರೇಂದ್ರ ಹಾಗೂ ಅವರ ಸಹೋದರ ಶಿಷ್ಯರು ಹಗಲಿರುಳೆನ್ನದೇ ರಾಮಕೃಷ್ಣರ ಆರೈಕೆ ಮಾಡುತ್ತಿದ್ದರು. ಹೀಗೆ ಗುರುವಿನ ಸೇವೆ ಮತ್ತು ತಮ್ಮ ಕಾನೂನು ಪರೀಕ್ಷೆಗಾಗಿ ಅಧ್ಯಯನ ಎರಡರ ನಡುವೆ ನರೇಂದ್ರ ಹೈರಾಣಾಗಿದ್ದರು.

ಇದು ಸಾಲದೆಂಬಂತೆ ಸಂಬಂಧಿಕರ ಜೊತೆಗಿನ ಕಾನೂನು ಸಮರದ ಕಾರಣಕ್ಕಾಗಿ ಅವರು ಕಲ್ಕತ್ತಾಗೂ ಹೋಗಬೇಕಾಗುತ್ತಿತ್ತು. ಆದರೂ ಕೋಸಿಪುರದಲ್ಲಿದ್ದ ತಮ್ಮ ಗುರುವಿನ ಬಳಿ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸುತ್ತಿದ್ದರು.

ಸಹೋದರ ಶಿಷ್ಯಂದಿರಿಗೆ ನರೇಂದ್ರ ನಿರಂತರ ಸ್ಫೂರ್ತಿಯ ಖನಿಯಾಗಿದ್ದರು. ಎಲ್ಲರನ್ನೂ ಒಟ್ಟುಗೂಡಿಸುತ್ತಿದ್ದ ಅವರು ಸಾಮೂಹಿಕ ಅಧ್ಯಯನ, ಭಕ್ತಿಗೀತೆ ಗಾಯನ ಮತ್ತು ಗುರುವಿನ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ಸಮಯದಲ್ಲೇಆಳವಾದ ಆಧ್ಮಾತ್ಮಿಕ ಅನುಭವಗಳನ್ನು ಪಡೆದ ನರೇಂದ್ರರಿಗೆ ಸಮಾಧಿ ಸ್ಥಿತಿ ತಲುಪುವ ತೀವ್ರ ಹಂಬಲ ಉಂಟಾಯಿತು.

ಗುರುಗಳ ಇತರ ಹಲವಾರು ಶಿಷ್ಯರು ಆಗಷ್ಟೇ ಕಲ್ಪತರುವಿನ ದಿನದಂದು ತೀಕ್ಷ್ಣವಾದ ಆಧ್ಮಾತ್ಮಿಕ ಜ್ಞಾನದ ಅನುಭವ ಪಡೆದುಕೊಂಡಿದ್ದರು. ಅಂತಹ ಅನುಭವಕ್ಕಾಗಿ ನರೇಂದ್ರ ಸಹ ಹಾತೊರೆಯುತ್ತಿದ್ದರು. ಆಗ ಗುರುಗಳನ್ನು ಭೇಟಿ ಮಾಡಿದ ನರೇಂದ್ರ `ಮೂರ‌್ನಾಲ್ಕು ದಿನಗಳ ಕಾಲ ನಿರಂತರವಾಗಿ ಸಮಾಧಿ ಸುಖದ ಸ್ಥಿತಿ ತಲುಪಬೇಕು, ಕೆಲವೊಮ್ಮೆ ಮಾತ್ರ ಅಲ್ಪ ಪ್ರಮಾಣದ ಆಹಾರ ಸೇವಿಸಲು ಇಂದ್ರಿಯ ಸಂವೇದನೆ ಹೊಂದಬೇಕು ಎಂಬ ಬಯಕೆ ನನಗಿದೆ~ ಎಂದು ಹೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ರಾಮಕೃಷ್ಣರು `ನೀನೊಬ್ಬ ಸಣ್ಣ ಮನಸ್ಸಿನ ವ್ಯಕ್ತಿಯಾಗಿದ್ದೀಯೆ. ಆ ಸ್ಥಿತಿಗಿಂತಲೂ ಮಿಗಿಲಾದ ಸ್ಥಿತಿ ಬೇರೆ ಇದೆ. ನಿನ್ನ ಕುಟುಂಬದ ಸಮಸ್ಯೆಗಳನ್ನು ಬಗೆಹರಿಸಿದ ಬಳಿಕ ನನ್ನ ಬಳಿ ಬಾ. ಸಮಾಧಿಗಿಂತ ಉನ್ನತ ಸ್ಥಿತಿಯನ್ನು ನೀನು ಪಡೆಯುತ್ತೀಯೆ~ ಎಂದು ಹೇಳಿದರು.

ನರೇಂದ್ರರ ಕಾರ್ಯಕ್ಷೇತ್ರ ಸ್ವಯಂ ಮೋಕ್ಷಕ್ಕಿಂತಲೂ ಮಿಗಿಲಾದುದಾಗಿದ್ದು, ಇಡೀ ಲೋಕದ ಅಭ್ಯುದಯಕ್ಕಾಗಿ ಕೆಲಸ ಮಾಡಲು ಅವರು ಸಿದ್ಧರಾಗಬೇಕು ಎಂಬುದು ರಾಮಕೃಷ್ಣರಿಗೆ ತಿಳಿದಿತ್ತು. ತಾವೊಬ್ಬ ಸಿದ್ಧಪುರುಷ ಮಾತ್ರವಲ್ಲ ಒಂದು ಶುದ್ಧ ಆತ್ಮ ಮತ್ತು ಇತರರ ಆತ್ಮೋದ್ಧಾರಕ ಎಂಬುದು ನರೇಂದ್ರರಿಗೆ ಅರ್ಥವಾಯಿತು. ತಾವಷ್ಟೇ ಭ್ರಮಾಲೋಕವನ್ನು ದಾಟುವುದಲ್ಲ, ಹಾಗೆ ಮಾಡಲು ಅನ್ಯರಿಗೂ ನೆರವಾಗಬೇಕು ಎಂದು ತಿಳಿಯಿತು.

ಗುರು ನರಳುವುದನ್ನು ನೋಡಲು ನರೇಂದ್ರರಿಗೆ ಆಗುತ್ತಿರಲಿಲ್ಲ. `ಕಾಯಿಲೆಯಿಂದ ಗುಣಮುಖರನ್ನಾಗಿ ಮಾಡುವಂತೆ ಮಾತೆಯ ಬಳಿ ಪ್ರಾರ್ಥಿಸಿಕೊಳ್ಳಿ~ ಎಂದು ಅವರು ಒಂದು ದಿನ ಗುರುಗಳನ್ನು ಬೇಡಿಕೊಂಡರು. `

ಹಾಗೆ ಹೇಳುವುದು ನಿನಗೆ ಸುಲಭ, ಆದರೆ ಅಂತಹ ಬೇಡಿಕೆಗಳನ್ನು ನಾನು ಎಂದಿಗೂ ಇಡುವುದಿಲ್ಲ~ ಎಂದು ಅವರು ಹೇಳಿದರು. ಆಗ ನರೇಂದ್ರ `ನೀವು ಹಾಗೆಲ್ಲಾ ಹೇಳಬಾರದು, ನಮ್ಮ ಸಲುವಾಗಿಯಾದರೂ ಕೇಳಿಕೊಳ್ಳಲೇಬೇಕು~ ಎಂದು ಒತ್ತಾಯಿಸಿದರು.

ರಾಮಕೃಷ್ಣರು `ಹಾಗೇ ಮಾಡುತ್ತೇನೆ~ ಎಂದು ಭರವಸೆ ಇತ್ತರು. ಹೊರ ಹೋದ ನರೇಂದ್ರ ಕೆಲ ಹೊತ್ತು ಕಳೆದ ಬಳಿಕ ವಾಪಸ್ ಬಂದು `ಏನು ಮಾಡಿದಿರಿ~ ಎಂದು ಗುರುವನ್ನು ಕೇಳಿದರು.

`ಗಂಟಲು ನೋವಿನಿಂದ ನನಗೇನೂ ತಿನ್ನಲಾಗುತ್ತಿಲ್ಲ. ಸ್ವಲ್ಪವಾದರೂ ನಾನು ತಿನ್ನುವಂತೆ ಏನಾದರೂ ಮಾಡು ಎಂದು ಮಾತೆಯನ್ನು ಕೇಳಿಕೊಂಡೆ. ಅದಕ್ಕೆ ಆಕೆ, ಯಾಕೆ ಇತರ ಹಲವಾರು ಬಾಯಿಗಳ ಮೂಲಕ ನೀನು ತಿನ್ನುತ್ತಿಲ್ಲವೇ ಎಂದು ಪ್ರಶ್ನಿಸಿದಳು. ನನಗೆ ಎಷ್ಟು ನಾಚಿಕೆಯಾಯಿತೆಂದರೆ ಒಂದು ಮಾತನ್ನೂ ಆಡಲಾಗಲಿಲ್ಲ~ ಎಂದರು. ಈ ಮಾತು ಕೇಳಿ ನರೇಂದ್ರ ಬೆಚ್ಚಿಬಿದ್ದರು.
 
ಅಸಾಧಾರಣ ಸಾಧಕರಾದ ಗುರುಗಳ ಜೊತೆ ಕೋಸಿಪುರದಲ್ಲಿ ತಾವು ಕಳೆದ ದಿನಗಳು ವಿಶೇಷ ಮತ್ತು ಅಪೂರ್ವವಾದವು ಎಂಬುದು ನರೇಂದ್ರರಿಗೆ ತಿಳಿದಿತ್ತು. ಅವರು ಕಠಿಣ ವ್ರತಾಚರಣೆ ಮತ್ತು ಆಧ್ಯಾತ್ಮಿಕ ಸಾಧನೆಗಳನ್ನು ಮಾಡಿದ್ದು, ವಿಕಸಿತರಾದದ್ದು, ಪ್ರಬುದ್ಧರಾದದ್ದು ಎಲ್ಲವೂ ಈ ಸಂದರ್ಭದಲ್ಲೇ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT