ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತಿನ ಚೀಟಿ ಇಲ್ಲದವರಿಗೆ ಮತದಾನದ ಚೀಟಿ

ಅಕ್ರಮ ತಡೆಗೆ ನಾಲ್ಕು ತಂಡ * ವಹಿವಾಟಿನ ಮೇಲೆ ಬ್ಯಾಂಕ್‌ಗಳಿಂದ ನಿಗಾ *`ಕಾಸಿಗಾಗಿ ಸುದ್ದಿ' ಮೇಲೂ ಕಣ್ಗಾವಲು
Last Updated 3 ಏಪ್ರಿಲ್ 2013, 19:21 IST
ಅಕ್ಷರ ಗಾತ್ರ

ಬೆಂಗಳೂರು: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಪ್ರಕ್ರಿಯೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪರಿಷ್ಕೃತ ಪಟ್ಟಿಯ ಪ್ರಕಾರ 66.87 ಲಕ್ಷ ಮತದಾರರು ತಮ್ಮ ಪರಮಾಧಿಕಾರ ಚಲಾಯಿಸುವ ಹಕ್ಕು ಪಡೆದಿದ್ದಾರೆ' ಎಂದು ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಸಿದ್ದಯ್ಯ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬುಧವಾರ ಅವರು ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ವಿವರ ನೀಡಿದರು.

`ಶೇ 98ರಷ್ಟು ಜನಕ್ಕೆ ಈಗಾಗಲೇ ಮತದಾರರ ಗುರುತಿನ ಚೀಟಿ ವಿತರಿಸಲಾಗಿದೆ. ಗುರುತಿನ ಚೀಟಿ ಹೊಂದಿದವರೂ ಸೇರಿದಂತೆ ಎಲ್ಲ ಮತದಾರರಿಗೆ ಮತದಾನದ ಚೀಟಿ ಕೊಡಲಾಗುತ್ತದೆ. ಅದರಲ್ಲಿ ಮತದಾನದ ಕೇಂದ್ರದ ವಿವರವೂ ಇರುತ್ತದೆ. ಗುರುತಿನ ಚೀಟಿ ಇಲ್ಲದವರು ಅದನ್ನೇ ಬಳಸಿ ಮತದಾನ ಮಾಡಬಹುದು' ಎಂದು ವಿವರಿಸಿದರು.

`ಬೆಂಗಳೂರು ಒನ್ ಕೇಂದ್ರಗಳಲ್ಲಿ ಗುರುತಿನ ಚೀಟಿ ನೀಡುವ ಸಂಬಂಧ ಪ್ರಯತ್ನಗಳು ನಡೆದಿದ್ದು, ಚುನಾವಣಾ ಆಯೋಗದ ಸೂಚನೆಗಾಗಿ ಕಾಯಲಾಗುತ್ತಿದೆ' ಎಂದು ಹೇಳಿದರು. `ನೀತಿ ಸಂಹಿತೆ ಪಾಲನೆಗೆ ಸಂಬಂಧಿಸಿದಂತೆ ಬೆಳಿಗ್ಗೆ ಎಲ್ಲ ಪಕ್ಷಗಳ ಮುಖಂಡರ ಸಭೆ ನಡೆಸಲಾಗಿದ್ದು, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ' ಎಂದು ತಿಳಿಸಿದರು.

`ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಡಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಅನುಮತಿ ಪಡೆಯದೆ ಬಳಸಿದ ಪ್ರಚಾರ ಸಾಮಗ್ರಿಗಳನ್ನು ತೆಗೆದು ಹಾಕಲಾಗುತ್ತಿದೆ. ನಗರದ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಈ ಸಲ ಪರ ರಾಜ್ಯಗಳಿಂದ ಪೊಲೀಸ್ ವೀಕ್ಷಕರೂ ಬರಲಿದ್ದಾರೆ' ಎಂದು ವಿವರಿಸಿದರು.

`ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಕಣ್ಣಿಡಲು ವೆಚ್ಚ ನಿಗಾ ಸಮಿತಿ (ಇಎಂಸಿ) ರಚಿಸಲಾಗಿದೆ. ಆದಾಯ ತೆರಿಗೆ, ಅಬಕಾರಿ, ಲೆಕ್ಕಪರಿಶೋಧನಾ ಅಧಿಕಾರಿಗಳು ಈ ಸಮಿತಿಯಲ್ಲಿ ಇದ್ದಾರೆ. ಮುದ್ರಣ ಇಲ್ಲವೆ ಇಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಜಾಹೀರಾತು ನೀಡುವ ಮುನ್ನ ಅಭ್ಯರ್ಥಿಗಳು ಮಾಧ್ಯಮ ಪ್ರಮಾಣ ಪತ್ರ ಮತ್ತು ನಿರ್ವಹಣಾ ಸಮಿತಿಯಿಂದ (ಎಂಸಿಎಂಸಿ) ಅನುಮತಿ ಪಡೆಯುವುದು ಕಡ್ಡಾಯವಾಗಿದೆ. `ಕಾಸಿಗಾಗಿ ಪ್ರಕಟವಾದ ಸುದ್ದಿ'ಗಳ ಮೇಲೂ ಈ ಸಮಿತಿ ನಿಗಾ ಇಡಲಿದೆ' ಎಂದು ಮಾಹಿತಿ ನೀಡಿದರು.

`ವಾರ್ತಾ ಇಲಾಖೆಯಿಂದ ಎಲ್ಲ ಮಾಧ್ಯಮಗಳ ಜಾಹೀರಾತು ದರವನ್ನು ಪಡೆಯಲಾಗಿದ್ದು, ಪ್ರಕಟವಾದ ಜಾಹೀರಾತಿಗೆ ಅಭ್ಯರ್ಥಿಗಳು ಪಾವತಿಸಿದ ಮೊತ್ತವನ್ನು ಎಂಸಿಎಂಸಿಯೇ ಲೆಕ್ಕ ಹಾಕಲಿದೆ. ಪ್ರತಿಯೊಬ್ಬ ಅಭ್ಯರ್ಥಿಯೂ ಬ್ಯಾಂಕ್ ಖಾತೆ ತೆರೆಯಬೇಕು. ್ಙ16 ಲಕ್ಷ ಮಾತ್ರ ವೆಚ್ಚ ಮಾಡಲು ಅವಕಾಶ ಇದೆ. ್ಙ20 ಸಾವಿರಕ್ಕಿಂತ ಅಧಿಕ ಮೊತ್ತವನ್ನು ಚೆಕ್ ಮೂಲಕವೇ ಪಾವತಿ ಮಾಡಬೇಕು. ಚುನಾವಣೆ ಮುಗಿಯುವವರೆಗೆ ಬ್ಯಾಂಕ್‌ಗಳಲ್ಲಿ ಲಕ್ಷಕ್ಕಿಂತ ಅಧಿಕ ಮೊತ್ತವನ್ನು `ಡ್ರಾ' ಮಾಡುವ ಎಲ್ಲ ವ್ಯವಹಾರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುವುದು' ಎಂದು ವಿವರಿಸಿದರು.

ಮತದಾನ ಹೆಚ್ಚಳಕ್ಕೆ `ಸ್ವೀಪ್'
  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 47ರಷ್ಟು ಮಾತ್ರ ಮತದಾನವಾಗಿತ್ತು. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಚುನಾವಣಾ ಆಯೋಗ ಮತದಾನದ ಪ್ರಮಾಣ ಹೆಚ್ಚಿಸಲು ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ.

ಮತದಾನದ ಪ್ರಮಾಣ ಹೆಚ್ಚುವಂತೆ ನೋಡಿಕೊಳ್ಳಲು ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಯೋಜನೆಯನ್ನು (ಎಸ್‌ವಿಇಇಪಿ-ಸ್ವೀಪ್) ಅನುಷ್ಠಾನಕ್ಕೆ ತರಲಾಗಿದೆ. ಹೆಚ್ಚುವರಿ ಚುನಾವಣಾಧಿಕಾರಿ ಡಾ.ಆರ್.ವಿಶಾಲ್ ಈ ಯೋಜನೆ ಮುಖ್ಯಸ್ಥರಾಗಿದ್ದಾರೆ.

ಕಳೆದ ಸಲದ ಮತದಾರರ ಪಟ್ಟಿಯಲ್ಲಿ ನಿಧನರಾದ ಇಲ್ಲವೆ ಊರು ಬಿಟ್ಟ 13 ಲಕ್ಷಕ್ಕೂ ಅಧಿಕ ಜನರ ಹೆಸರುಗಳಿದ್ದವು. ಆದ್ದರಿಂದಲೇ ಒಟ್ಟು ಸಂಖ್ಯೆಯ ಪ್ರಮಾಣದ ಮೇಲೆ ಶೇಕಡಾವಾರು ತೆಗೆದಾಗ ಕಡಿಮೆ ಬಂದಿತ್ತು. ಅಂತಹ ಎಲ್ಲ ಹೆಸರುಗಳನ್ನು ಈ ಸಲ ತೆಗೆದು ಹಾಕಲಾಗಿದೆ. ಆದ್ದರಿಂದಲೇ 2012ರ ಡಿಸೆಂಬರ್ 10ರಂದು ಮತದಾರರ ಸಂಖ್ಯೆ 57 ಲಕ್ಷಕ್ಕೆ ಕುಸಿದಿತ್ತು. ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 10 ಲಕ್ಷ ಹೊಸಬರ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಈ ಸಲ ಮತದಾನದ ಪ್ರಮಾಣ ಹೆಚ್ಚಲಿದೆ ಎಂದು ವಿಶಾಲ್ ಹೇಳಿದರು.

ಮತದಾನ ಮಾಡುವಂತೆ ಜಾಗೃತಿ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಸ್ತೆಗಳ ಫಲಕಕ್ಕೆ ಬರಲಿದೆ `ಮಾಸ್ಕ್'
  ಇಂತಹ ಶಾಸಕರು, ಬಿಬಿಎಂಪಿ ಸದಸ್ಯರ ಅನುದಾನದಲ್ಲಿ ನಿರ್ಮಿಸಲಾದ ರಸ್ತೆ ಎನ್ನುವ ಫಲಕಗಳು ನಮಗೆ ಪ್ರತಿ ಬಡಾವಣೆಯಲ್ಲೂ ಸಿಗುತ್ತವೆ. ಚುನಾವಣಾ ಆಯೋಗದ ಕಣ್ಣು ಅವುಗಳ ಮೇಲೂ ಬಿದ್ದಿದೆ. ರಸ್ತೆ ಫಲಕಗಳ ಮೇಲೆ ಮತದಾನದ ಜಾಗೃತಿ ಫಲಕಗಳ `ಮಾಸ್ಕ್' ಬರಲಿದೆ. ಚುನಾವಣಾ ಪ್ರಕ್ರಿಯೆ ಮುಗಿದ ಮೇಲೆ ಅವುಗಳನ್ನು ಮತ್ತೆ ತೆಗೆಯಲಾಗುತ್ತದೆ.

`ಮೊದಲು ಬಣ್ಣ ಬಳಿಯುವ ಯೋಚನೆ ಇತ್ತು. ಆದರೆ, ಯಾವ ಬಣ್ಣ ಬಳಿದರೆ, ಯಾವ ಪಕ್ಷದ ಬಣ್ಣ ಅದರಲ್ಲಿ ಅಡಗಿರುವುದೋ ಎನ್ನುವ ಯೋಚನೆ ಬಂತು. ಕೊನೆಗೆ ಮತದಾನಕ್ಕೆ ಪ್ರೋತ್ಸಾಹಿಸುವ ಮಾಸ್ಕ್ ಹಾಕಿಸುವ ಯೋಚನೆಗೆ ಒಪ್ಪಿಗೆ ಸಿಕ್ಕಿತು' ಎಂದು ಚುನಾವಣಾಧಿಕಾರಿಗಳು ಹೇಳಿದರು. `ನೀರಿನ ಟ್ಯಾಂಕರ್ ಮೇಲಿನ ಜನಪ್ರತಿನಿಧಿಗಳ ಚಿತ್ರ-ವಿವರವನ್ನೂ ತೆಗೆಸಲಾಗುವುದು' ಎಂದು ಮಾಹಿತಿ ನೀಡಿದರು.

ಇನ್ನೂ ನಾಲ್ಕು ದಿನ ಅವಕಾಶ
ಬೆಂಗಳೂರು
: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಇಲ್ಲವೆ ತೆಗೆದುಹಾಕಲು ಇನ್ನೂ ನಾಲ್ಕು ದಿನ ಅವಕಾಶ ಇದೆ. ಆಸಕ್ತ ಸಾರ್ವಜನಿಕರು ಏ. 7ರೊಳಗೆ ಫಾರ್ಮ್ ನಂ. 6ರಲ್ಲಿ ಅರ್ಜಿ ಭರ್ತಿಮಾಡಿ ತುಂಬಿಕೊಟ್ಟರೆ ಸಾಕು ಎಂದು ಸಿದ್ದಯ್ಯ ತಿಳಿಸಿದರು.

ಈಗಾಗಲೇ  3 ಲಕ್ಷದಷ್ಟು ಅರ್ಜಿಗಳು ಬಂದಿವೆ. ಬಾಕಿ ಉಳಿದಿರುವ ನಾಲ್ಕು ದಿನಗಳಲ್ಲಿ ಬರುವ ಅರ್ಜಿಗಳ ವಿಲೇವಾರಿಗೆ ನಮಗೆ ಹತ್ತು ದಿನವಾದರೂ ಕಾಲಾವಕಾಶ ಬೇಕಿದೆ. ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡದೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದರು. ಹೆಸರು ಸೇರ್ಪಡೆ ಮಾಡಿಕೊಳ್ಳಲು ಬಂದ ನಾಗರಿಕರನ್ನು ಹಿಂದಿರುಗಿ ಕಳುಹಿಸದಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT