ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಬಳಕೆ ನೀರಿನ ದರ ಹೆಚ್ಚಳ ಇಲ್ಲ

Last Updated 22 ಅಕ್ಟೋಬರ್ 2011, 10:15 IST
ಅಕ್ಷರ ಗಾತ್ರ

ಬಳ್ಳಾರಿ: ಗೃಹೋಪಯೋಗಿ ಬಳಕೆಯ ನೀರಿನ ದರವನ್ನು ಹೆಚ್ಚಿಸದೆ, ವಾಣಿಜ್ಯ ಬಳಕೆದಾರರಿಗೆ ಮತ್ತು ವಸತಿಯೇತರ ಕಟ್ಟಡಗಳಿಗೆ ಅನ್ವಯ ಆಗುವಂತೆ ನೀರಿನ ದರ ಹೆಚ್ಚಿಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ  ಈ ಕುರಿತ ನಿರ್ಣಯ ಕೈಗೊಳ್ಳಲಾಯಿತು.

ನಗರದಲ್ಲಿ ಸದ್ಯ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಗೃಹಬಳಕೆ ನೀರಿನ ದರ ಹೆಚ್ಚಿಸಿದರೆ, ಸಾರ್ವಜನಿಕರಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಸದಸ್ಯರಾದ ಮರಿದೇವಯ್ಯ ಹಾಗೂ ಇಬ್ರಾಹಿಂ ಬಾಬು ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗೃಹಬಳಕೆದಾರರಿಗೆ  ದರ ಹೆಚ್ಚಳದಿಂದ ವಿನಾಯಿತಿ ನೀಡಲಾಯಿತು.

ಮುಂದಿನ ದಿನಗಳಲ್ಲಿ ನಿರಂತರ 24 ಗಂಟೆ ನೀರು ಪೂರೈಕೆ ಯೋಜನೆ ಜಾರಿ ಮಾಡಿದ ನಂತರವಷ್ಟೇ ಗೃಹಬಳಕೆ ದರವನ್ನು ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಯಿತು.

ಇದೇ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್. ರುದ್ರಗೌಡ ಒಡೆತನದ ಕಟ್ಟಡಕ್ಕೆ ಸಂಪರ್ಕಿಸಿದ ಕೊಳಾಯಿಗೆ ಕಳೆದ 10 ವರ್ಷಗಳ ಅವಧಿಯ ನೀರಿನ ಶುಲ್ಕವನ್ನು ಮನ್ನಾ ಮಾಡಲು ಸಭೆಯ ಅನುಮೋದನೆ ಕೋರಿದಾಗ, ಪರ- ವಿರೋಧ ಚರ್ಚೆ ನಡೆಯಿತು.

ಈ ದರವನ್ನು ಮನ್ನಾ ಮಾಡದಂತೆ ಸದಸ್ಯ ಸಿದ್ಧನಗೌಡ ಕೋರಿದರೆ, ಮನ್ನಾ ಮಾಡುವಂತೆ ಸದಸ್ಯ ಇಬ್ರಾಹಿಂಬಾಬು ಆಗ್ರಹಿಸಿದರು. ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಷಯವನ್ನು ಸದ್ಯಕ್ಕೆ ಕೈಬಿಡುವಂತೆ ನಿರ್ಣಯ ಕೈ ಗೊಳ್ಳಲಾಯಿತು.

ತೀವ್ರ ಚರ್ಚೆ: ರಾಜ್ಯ ಸರ್ಕಾರ ರೂ 100 ಕೋಟಿ ಅನುದಾನ ಬಿಡುಗಡೆ ಮಾಡಿ 9 ತಿಂಗಳು ಕಳೆದರೂ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳ ಲಾಗಿಲ್ಲ. ನಗರದ 26 ರಸ್ತೆಗಳ ಅಭಿವೃದ್ಧಿಗೆ ಬದಲು, ಅದೇ ಅನುದಾನದಲ್ಲಿ 76 ರಸ್ತೆಗಳ ಅಭಿವೃದ್ಧಿ ಮಾಡಲು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಸೂಚನೆಯ ಮೇರೆಗೆ ಮರು ಕ್ರಿಯಾಯೋಜನೆ ರೂಪಿಸಿ ಮತ್ತಷ್ಟು ರಸ್ತೆಗಳನ್ನು ಸೇರಿಸಲಾಗಿದೆ.
 
ಈ ಅನುದಾನದಲ್ಲಿ 76 ರಸ್ತೆಗಳನ್ನು ಅಭಿವೃದ್ಧಿಪಡಿಸು ವುದು ಅಸಾಧ್ಯ. ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಧಿಕಾರದ ಅವಧಿ ಪೂರ್ಣಗೊಳ್ಳಲಿದ್ದು, ಕಾಮಗಾರಿ ಆರಂಭಿಸುವುದು ಯಾವಾಗ? ಎಂದು ಇಬ್ರಾಹಿಂ ಬಾಬು ಹಾಗೂ ಬಸವರಾಜ್ ಪ್ರಶ್ನಿಸಿದರು.

ಈ ಸಂಬಂಧ ತೀವ್ರ ಚರ್ಚೆಯೂ ನಡೆದು, 26 ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಅನುಮತಿ ಕೋರಿ ಸರ್ಕಾರದ ಗಮನ ಸೆಳೆಯುವಂತೆಯೂ ಶಾಸಕರಿಗೆ ಮನವಿ ಮಾಡಲಾಯಿತು.

ಈ ಚರ್ಚೆಯ ನಡುವೆಯೇ ಸದಸ್ಯ ಕುಮಾರ ಸ್ವಾಮಿ ಮಾತಿಗಿಳಿದು, `ಅನಗತ್ಯ ಕಾಲಹರಣ ಮಾಡುವುದು ಬೇಡ. ಶಾಸಕ ಸೋಮಶೇಖರರೆಡ್ಡಿ ಅವರು ಈ ಬಗ್ಗೆ ವಿಧಾಸನಭೆಯ ಕಲಾಪದ ವೇಳೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತಾರೆ. ಅಗತ್ಯವಾಗಿ ಗಂಟೆಗಟ್ಟಲೇ ಚರ್ಚಿಸುವುದು ಬೇಡ ಎಂದರು.

ಇದರಿಂದ ಕುಪಿತರಾದ ಇಬ್ರಾಹಿಂಬಾಬು, ಇದು ಪಾಲಿಕೆಯಲ್ಲಿ ಚರ್ಚೆಯಾಗುವ ವಿಷಯ. ಇದು ಶಾಸಕರು ವಿಧಾನಸಭೆಯಲ್ಲಿ ಚರ್ಚಿಸುವುದಲ್ಲ. ಸಭೆ ಕರೆದಿರುವುದೇ ವಿಷಯಗಳ ಚರ್ಚೆಗೆ ಎಂದರು. ಸದಸ್ಯ ಬಸವರಾಜ್ ಮತ್ತಿತರರು ಬಾಬು ವಾದಕ್ಕೆ ದನಿಗೂಡಿಸಿದ ನಂತರ, ಶಾಸಕ ಸೋಮಶೇಖರ ರೆಡ್ಡಿ ಸಹ ಸಮ್ಮತಿ ಸೂಚಿಸಿ, ಕುಮಾರಸ್ವಾಮಿ ಅವರಿಗೆ ಸುಮ್ಮನಿರುವಂತೆ ಆದೇಶಿಸಿದರು.

ನಗರದಲ್ಲಿ ಕೇವಲ ಶಾಸಕರು, ಸಚಿವರು ಮತ್ತು ಸಂಸದರ ಮನೆಗಳೆದುರಿನ ರಸ್ತೆಗಳು ಮಾತ್ರ ಅಭಿವೃದ್ಧಿ ಹೊಂದಿವೆ. ಜನಸಾಮಾನ್ಯರ ಮನೆ ಎದುರಿನ ರಸ್ತೆಗಳು ಸರಿಯಿಲ್ಲ. ಆದರೂ ಕ್ರಮ ಕೈಗೊಂಡಿಲ್ಲ.

ಜಿಲ್ಲಾಧಿಕಾರಿಯವರ ನಿರ್ಧಾರದಿಂದ ವಿಳಂಬವಾಗುತ್ತಿದೆ. ಪೌರಾಯುಕ್ತರು, ಜಿಲ್ಲಾಧಿ ಕಾರಿಯವರು ಕೆಲ ವರ್ಷ ಇದ್ದು ಹೋಗುತ್ತಾರೆ. ಜನತೆಗೆ ಉತ್ತರ ನೀಡುವವರು ಸದಸ್ಯರು ಎಂದು ಇಬ್ರಾಹಿಂಬಾಬು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

`ಜಿಲ್ಲಾಧಿಕಾರಿ ಪ್ರತಿ ಕೆಲಸಕ್ಕೂ ಅಡ್ಡಿ ಉಂಟು ಮಾಡುತ್ತಿದ್ದಾನೆ. ಆತನಿಗೆ ತಿಳಿಸಬೇಕು~ ಎಂದು ಶಾಸಕ ಸೋಮಶೇಖರ ರೆಡ್ಡಿ ಕೂಡ ಖಾರವಾಗಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ: ಪಾಲಿಕೆಯ ಕಡತಗಳು ಮೂರು ನಾಲ್ಕು ತಿಂಗಳು ಕಳೆದರೂ ಜಿಲ್ಲಾಧಿಕಾರಿ ಕಚೇರಿಯಿಂದ ಹಿಂದಿರುಗುತ್ತಿಲ್ಲ. ಒಟ್ಟು ಎಷ್ಟು ಕಡಿತಗಳು ಅಲ್ಲಿ ಸಿಲುಕಿಕೊಂಡಿವೆ ಎಂಬುದನ್ನು ವಿವರಿಸಿ, ಏಕೆ ಹೀಗಾಗುತ್ತಿದೆ? ಎಂಬುದನ್ನೂ ತಿಳಿಸಿ ಎಂದೂ ಕೋರಲಾಯಿತು.


ಪಾಲಿಕೆ ಕಡೆಯಿಂದ ಯಾವುದೇ ತಪ್ಪುಗಳು ಆಗಿಲ್ಲ. ಕೆಲವೊಂದು ವಿವರಣೆಗಾಗಿ ಕಡತಗಳು ಮರಳಿವೆ. ಅಂತಹ ತೊಂದರೆ ಇಲ್ಲ ಎಂದು ಪೌರಾಯುಕ್ತ ಡಿ.ಎಲ್. ನಾರಾಯಣ ವಿವರಿಸಿದರು. ಮೇಯರ್ ಪಾರ್ವತಿ ಇಂದುಶೇಖರ್ ಉಪಸ್ಥಿತರಿದ್ದರು.

ಮನವಿ: ರಾಜ್ಯೋತ್ಸವ ಸಮೀಪಿಸುತ್ತಿದ್ದು, ನಗರದಲ್ಲಿರುವ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸಬೇಕು. ಎಲ್ಲ ಅಂಗಡಿ, ಹೋಟೆಲ್, ವಾಣಿಜ್ಯ ಮಳಿಗೆಯೆದುರಿನ ಕನ್ನಡೇತರ ಫಲಕ ಗಳನ್ನು ತೆರವುಗೊಳಿಸಲು ಪಾಲಿಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಚಾನಾಳ್ ಶೇಖರ್ ಮತ್ತಿತರರು ಇದೇ ಸಂದರ್ಭದಲ್ಲಿ ಮೇಯರ್ ಪಾರ್ವತಿ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT