ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಚಿತ್ತ ಅತ್ತ-ಇತ್ತ...!

Last Updated 8 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಗೆಲುವೆನ್ನುವ ಬೆಣ್ಣೆ ಜಾರಿ ಯಾರ ರೊಟ್ಟಿಗೆ ಬೀಳುತ್ತದೋ...? ಕ್ರಿಕೆಟ್ ಪ್ರೇಮಿಗಳು ಆಸಕ್ತಿಯಿಂದ ಕಾಯ್ದಿದ್ದಾರೆ. ಗುರಿಯನ್ನು ಮುಟ್ಟಲು ದಿಟ್ಟ ಬ್ಯಾಟಿಂಗ್ ಅಗತ್ಯ. ಹಾಗೆ ಆಡಬೇಕೆನ್ನುವುದೇ ಭಾರತದ ಛಲ. ಗಡಿಯೊಳಗೇ ಆತಿಥೇಯರನ್ನು ತಡೆಯಬೇಕು. ಇಂಥದೊಂದು ಆಸೆ ಕೆರಿಬಿಯನ್ನರ ಮನದಲ್ಲಿಯೂ ಮೊಳಕೆಯೊಡೆದಿದೆ.

ಬುಧವಾರ ಕೆಲವೇ ತಾಸಿನ ಆಟದಲ್ಲಿಯೇ ರೋಚಕವಾದ ಈ ಪಂದ್ಯದ ಫಲಿತಾಂಶ ಸ್ಪಷ್ಟ. ಮೊದಲ ಮೂರು ದಿನಗಳ ಆಟ ಮುಗಿಯುವ ಹೊತ್ತಿಗೆ ಭಾರತದ ಚಿತ್ತ ಗೆಲುವಿನತ್ತ ತಿರುಗಿದ್ದಂತೂ ಸತ್ಯ. ಆದರೂ ಅಪಾಯಕಾರಿಯಾದ ಫಿರೋಜ್ ಷಾ ಕೋಟ್ಲಾ ಅಂಗಳದಲ್ಲಿ ನಾಟಕೀಯ ತಿರುವನ್ನು ಅಲ್ಲಗಳೆಯಲಾಗದು.

ನೆಚ್ಚಿನ ತಂಡವಾದ ಭಾರತವೇ ನೆಲಕಚ್ಚುವಂತೆ ಮಾಡಬಲ್ಲ ಬೌಲರ್‌ಗಳು ವಿಂಡೀಸ್ ತಂಡದಲ್ಲಿದ್ದಾರೆ. ಅದೇ ಆತಂಕ. ಆದರೂ ಗೆಲುವಿನ ಗುರಿ ದೂರವಿಲ್ಲ ಎನ್ನುವುದು ಆತಿಥೇಯರ ಸಮಾಧಾನ. ವಿಜಯೋತ್ಸವದ ಕ್ಷಣವನ್ನು ಕಾಣಲು ಇನ್ನು 124 ರನ್ ಅಗತ್ಯ.

ಇನ್ನೂ ಕ್ರೀಸ್‌ನಲ್ಲಿರುವ ಸಚಿನ್ ತೆಂಡೂಲ್ಕರ್ (33; 87 ಎಸೆತ, 2 ಬೌಂಡರಿ) ಹಾಗೂ ರಾಹುಲ್ ದ್ರಾವಿಡ್ (30; 91 ಎ., 3 ಬೌಂಡರಿ) ಆಟದ ಆಸರೆಯೊಂದಿಗೆ ಭಾರತವು ಪ್ರಥಮ ಟೆಸ್ಟ್‌ನ ಮೂರನೇ ದಿನವಾದ ಮಂಗಳವಾರದ ಆಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದೆ.

ಭಾರತಕ್ಕೆ ವಿಂಡೀಸ್ ನೀಡಿರುವ ಗೆಲುವಿನ ಗುರಿ ಒಟ್ಟು 276 ರನ್. ನಿರಾತಂಕವಾಗಿ ಆಡಿ ಜಯದತ್ತ ಸಾಗಲು ಕಾಲಾವಕಾಶವೂ ಸಾಕಷ್ಟು. ಎಂಟು ವಿಕೆಟ್ ಕೂಡ ಇನ್ನೂ ಬಾಕಿ.

ಆದರೆ ಈ ಅಂಗಳದಲ್ಲಿ ರನ್‌ಗಳನ್ನು ಹೆಕ್ಕಿ ತೆಗೆಯುವುದೇ ಕಷ್ಟ. ಇಂಥ ಆತಂಕದ ನಡುವೆಯೇ ಎರಡನೇ ಇನಿಂಗ್ಸ್ ಕಾರ್ಯಾಚರಣೆ ಆರಂಭಿಸಿದ ಆತಿಥೇಯರ ಖಾತೆಗೆ ಮೊದಲ ವಿಕೆಟ್‌ನಲ್ಲಿ 51 ರನ್‌ಗಳು ಹರಿದು ಬಂದಿದ್ದು ಸಮಾಧಾನ. ಸ್ಥಳೀಯ ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ (22; 32 ಎಸೆತ, 3 ಬೌಂಡರಿ) ಹಾಗೂ ವೀರೇಂದ್ರ ಸೆಹ್ವಾಗ್ (55; 55 ಎ., 5 ಬೌಂಡರಿ, 2 ಸಿಕ್ಸರ್) ಅವರದ್ದು ಮತ್ತೊಮ್ಮೆ ಆತುರದ ಆಟ. ಆದರೂ ಬೇಸರವಾಗಲಿಲ್ಲ. ವೇಗಿ ಡರೆನ್ ಸಾಮಿ ಎಸೆತದಲ್ಲಿ ವೀರೂ ಚೆಂಡಿನ ಗತಿ ಗುರುತಿಸುವಲ್ಲಿ ತಪ್ಪುಮಾಡಿ ಬೌಲ್ಡ್ ಆಗುವ ಹೊತ್ತಿಗೆ ಭಾರತದ ಒಟ್ಟು ಮೊತ್ತ ನೂರರ ಗಡಿಯ ಹತ್ತಿರ ಸಾಗಿತ್ತು. ಅದಕ್ಕೂ ಮುನ್ನ  ಹತ್ತನೇ ಓವರ್‌ನಲ್ಲಿ ಸ್ಯಾಮುಯಲ್ಸ್ ದಾಳಿಯಲ್ಲಿ ಎಕ್ಸ್‌ಟ್ರಾ ಕವರ್ ಮೇಲಿಂದ ಚೆಂಡನ್ನು ಸೆಹ್ವಾಗ್ ಸಿಕ್ಸರ್‌ಗೆ ಎತ್ತಿದ್ದು ಕ್ರಿಕೆಟ್ ಪ್ರೇಮಿಗಳ ಕಣ್ಣಿಗೆ ಸೊಗಸು. ಆದರೆ ಅದೇ ಓವರ್‌ನಲ್ಲಿ ಗಂಭೀರ್‌ಗೆ `ಎಲ್‌ಬಿಡಬ್ಲ್ಯು~ ದುರಾದೃಷ್ಟ ಕಾಡಿದ್ದು ಮಾತ್ರ ಬೇಸರ.

ಮತ್ತೊಮ್ಮೆ ಕ್ರೀಸ್‌ನಲ್ಲಿ ಗಟ್ಟಿಯಾಗಿರುವ ರಾಹುಲ್ ಹಾಗೂ ಟೆಸ್ಟ್ ಕ್ರಿಕೆಟ್ ಜೀವನದ 15000 ರನ್ ಪೂರೈಸಿದ ಸಚಿನ್ ಅವರದ್ದು ಮಾತ್ರ ಎಚ್ಚರಿಕೆಯ ಆಟ. ಇನಿಂಗ್ಸ್‌ನ ನಲ್ವತ್ತನೇ ಓವರ್‌ನಲ್ಲಿ ದೇವೇಂದ್ರ ಬಿಶೂ ಅವರ ಮೂರನೇ ಎಸೆತದಲ್ಲಿ ಒಂದು ರನ್ ಗಳಿಸಿದ `ಲಿಟಲ್ ಚಾಂಪಿಯನ್~ ಮಹತ್ವದ ಮೈಲಿಗಲ್ಲು ಮುಟ್ಟಿದ ಸಂಭ್ರಮದೊಂದಿಗೆ ಪ್ರೇಕ್ಷಕರ ಕಡೆಗೆ ಬ್ಯಾಟ್ ತೋರಿಸಿದರು. ನಂತರದ ಓವರ್‌ನಲ್ಲಿ ಸಚಿನ್ ಕರೆಗೆ ಓಗೊಟ್ಟು ಒಂದು ರನ್‌ಗಾಗಿ ಓಡಿಯೂ ಅಪಾಯದಿಂದ ತಪ್ಪಿಸಿಕೊಂಡ ದ್ರಾವಿಡ್ ಅವರದ್ದು ದೊಡ್ಡ ನಿಟ್ಟುಸಿರು! ಹೀಗೆ ಕಷ್ಟಗಳ ನಡುವೆಯೂ ಇನಿಂಗ್ಸ್ ಕಟ್ಟಿದ ಭಾರತದ ಈ ಇಬ್ಬರೂ ಅನುಭವಿ ಬ್ಯಾಟ್ಸ್‌ಮನ್‌ಗಳು ವಿಂಡೀಸ್ ಗೆಲುವಿನ ಕನಸಿಗೆ ತೊಡಕಾಗಿ ನಿಂತಿದ್ದಾರೆ.

ಆದ್ದರಿಂದ ಡರೆನ್ ಸಾಮಿ ಚಿಂತೆಯ ಸುಳಿಯಲ್ಲಿ ಸಿಲುಕುವಂಥ ಸ್ಥಿತಿ. ಅವರು ಭಾರತದ ಮುಂದೆ ನಾನೂರು ರನ್‌ಗಳ ಗುರಿ ಇಡುವ ವಿಶ್ವಾಸ ಹೊಂದಿದ್ದರು. ನೂರು-ನೂರೈವತ್ತು ರನ್‌ಗಳಲ್ಲಿ ವಿಂಡೀಸ್ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ತಡೆಯುವ ಉದ್ದೇಶವನ್ನು ದೋನಿ ಪಡೆಯೂ ಹೊಂದಿತ್ತು. ಆದರೆ ಈ ಎರಡೂ ಲೆಕ್ಕಾಚಾರಗಳೂ ಹುಸಿ. ಪ್ರವಾಸಿಗಳು 57.3 ಓವರುಗಳವರೆಗೆ ದ್ವಿತಿಯ ಇನಿಂಗ್ಸ್ ಹಿಗ್ಗಿಸಿ 180 ರನ್ ಕಲೆಹಾಕುವಲ್ಲಿ ಯಶಸ್ವಿ. ಅದರೊಂದಿಗೆ ಆತಿಥೇಯರ ಮುಂದೆ ಒಟ್ಟು 276 ರನ್‌ಗಳ ಗೆಲುವಿನ ಗುರಿ. ಇದೇ ಮೊತ್ತವನ್ನು ಗಳಿಸುವುದು ಕಷ್ಟವಾಗುವಂತೆ ಬೌಲಿಂಗ್ ದಾಳಿ ನಡೆಸುವ ವಿಶ್ವಾಸವಂತೂ ಕೆರಿಬಿಯನ್ನರ ಮನದಲ್ಲಿನ್ನೂ ಸ್ಥಿರ.

ವಿಂಡೀಸ್ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿಯೂ `ಮಹಿ~ ಬಳಗಕ್ಕೆ ಭಾರಿ ಕಷ್ಟಕಾಲ ಎದುರಾಗುವಂತೆ ಮಾಡಲಾಗದ್ದು ಸಾಮಿ ಬೇಸರಕ್ಕೆ ಕಾರಣ. ಸೋಮವಾರದ ಆಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 21 ರನ್ ಗಳಿಸಿದ್ದ ತಮ್ಮ ತಂಡವು ದೊಡ್ಡ ಮೊತ್ತದತ್ತ ದಾಪುಗಾಲು ಇಡುತ್ತದೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದ ಅವರಿಗೆ ಬೇಗ ನಿರಾಸೆ. ಚಂದ್ರಪಾಲ್ ಕ್ರೀಸ್‌ನಲ್ಲಿ ಇರುವವರೆಗೆ ಪ್ರವಾಸಿ ಪಡೆಗೆ ಬಲ.

ಯಾವೊಂದು ಜೊತೆಯಾಟವೂ ಐವತ್ತರ ಗಡಿ ದಾಟಲಿಲ್ಲ. ಎಂಟನೇ ವಿಕೆಟ್‌ನಲ್ಲಿ ಚಂದ್ರಪಾಲ್ (47; 58 ಎ., 7 ಬೌಂಡರಿ) ಹಾಗೂ ಡರೆನ್ ಸಾಮಿ (42; 37 ಎ., 5 ಬೌಂಡರಿ, 1 ಸಿಕ್ಸರ್) ಅವರು 40 ರನ್ ಕಲೆಹಾಕಿದ್ದೇ ದೊಡ್ಡ ಜೊತೆಯಾಟ. 

ಆರ್.ಅಶ್ವಿನ್ ಕೂಡ ತಮ್ಮ ಪ್ರಥಮ ಟೆಸ್ಟ್ ಅನ್ನು ಸ್ಮರಣೀಯವಾಗಿಸಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಕೆಡವಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲಿ (21.3-5-47-6) ವಿಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ದುಸ್ವಪ್ನವಾಗಿ ಕಾಡಿದರು.

ಸ್ಕೋರು ವಿವರ
ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 108.2 ಓವರುಗಳಲ್ಲಿ 304
ಭಾರತ: ಮೊದಲ ಇನಿಂಗ್ಸ್ 52.5 ಓವರುಗಳಲ್ಲಿ 209

ವೆಸ್ಟ್ ಇಂಡೀಸ್: ಎರಡನೇ ಇನಿಂಗ್ಸ್ 57.3 ಓವರುಗಳಲ್ಲಿ 180
(ಸೋಮವಾರದ ಆಟದಲ್ಲಿ: 14 ಓವರುಗಳಲ್ಲಿ
2 ವಿಕೆಟ್‌ಗಳ ನಷ್ಟಕ್ಕೆ 21)

ಕ್ರಿಕ್ ಎಡ್ವರ್ಡ್ಸ್ ಬಿ ಉಮೇಶ್ ಯಾದವ್  33
ಫಿಡೆಲ್ ಎಡ್ವರ್ಡ್ಸ್ ಸಿ ದೋನಿ ಬಿ ಇಶಾಂತ್ ಶರ್ಮ  01
ಡರೆನ್ ಬ್ರಾವೊ ಎಲ್‌ಬಿಡಬ್ಲ್ಯು ಬಿ ರವಿಚಂದ್ರನ್ ಅಶ್ವಿನ್  12
ಎಸ್.ಚಂದ್ರಪಾಲ್ ಎಲ್‌ಬಿಡಬ್ಲ್ಯು ಬಿ ರವಿಚಂದ್ರನ್ ಅಶ್ವಿನ್  47
ಮರ್ಲಾನ್ ಸ್ಯಾಮುಯಲ್ಸ್ ಬಿ ರವಿಚಂದ್ರನ್ ಅಶ್ವಿನ್  00
ಕಾರ್ಲ್‌ಟನ್ ಬಾ ಸಿ ದೋನಿ ಬಿ ಉಮೇಶ್ ಯಾದವ್  07
ಡರೆನ್ ಸಾಮಿ ಬಿ ರವಿಚಂದ್ರನ್ ಅಶ್ವಿನ್  42
ರವಿ ರಾಂಪಾಲ್ ಸಿ ಪ್ರಗ್ಯಾನ್ ಓಜಾ ಬಿ ರವಿಚಂದ್ರನ್ ಅಶ್ವಿನ್  18
ದೇವೆಂದ್ರ ಬಿಶೂ ಔಟಾಗದೆ  09
ಇತರೆ: (ಬೈ-1, ಲೆಗ್‌ಬೈ-8)  09
ವಿಕೆಟ್ ಪತನ: 1-0 (ಕೀರನ್ ಪೊವೆಲ್; 1.4), 2-17 (ಕ್ರೇಗ್ ಬ್ರಾಥ್‌ವೈಟ್; 13.1), 3-26 (ಫಿಡೆಲ್ ಎಡ್ವರ್ಡ್ಸ್; 16.1), 4-53 (ಕ್ರಿಕ್ ಎಡ್ವರ್ಡ್ಸ್; 26.6), 5-63 (ಡರೆನ್ ಬ್ರಾವೊ; 29.2), 6-63 (ಮರ್ಲಾನ್ ಸ್ಯಾಮುಯಲ್ಸ್; 29.6), 7-84 (ಕಾರ್ಲ್‌ಟನ್ ಬಾ; 38.1), 8-124 (ಶಿವನಾರಾಯಣ ಚಂದ್ರಪಾಲ್; 45.6), 9-157 (ಡರೆನ್ ಸಾಮಿ; 51.5), 10-180 (ರವಿ ರಾಂಪಾಲ್; 57.3).
ಬೌಲಿಂಗ್: ಪ್ರಗ್ಯಾನ್ ಓಜಾ 14-4-37-1, ರವಿಚಂದ್ರನ್ ಅಶ್ವಿನ್ 21.3-5-47-6, ಯುವರಾಜ್ ಸಿಂಗ್ 1-0-2-0, ಇಶಾಂತ್ ಶರ್ಮ 14-2-49-1, ಉಮೇಶ್ ಯಾದವ್ 7-0-36-2

ಭಾರತ: ಎರಡನೇ ಇನಿಂಗ್ಸ್ 44 ಓವರುಗಳಲ್ಲಿ
 2 ವಿಕೆಟ್‌ಗಳ ನಷ್ಟಕ್ಕೆ 152

ಗಂಭೀರ್ ಎಲ್‌ಬಿಡಬ್ಲ್ಯು ಬಿ ಮರ್ಲಾನ್ ಸ್ಯಾಮುಯಲ್ಸ್  22
ವೀರೇಂದ್ರ ಸೆಹ್ವಾಗ್ ಬಿ ಡರೆನ್ ಸಾಮಿ  55
ರಾಹುಲ್ ದ್ರಾವಿಡ್ ಬ್ಯಾಟಿಂಗ್  30
ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್  33
ಇತರೆ: (ಬೈ-1, ಲೆಗ್‌ಬೈ-10, ನೋಬಾಲ್-1)  12
ವಿಕೆಟ್ ಪತನ: 1-51 (ಗೌತಮ್ ಗಂಭೀರ್; 9.5), 2-95 (ವೀರೇಂದ್ರ ಸೆಹ್ವಾಗ್; 18.1)
ಬೌಲಿಂಗ್: ಫಿಡೆಲ್ ಎಡ್ವರ್ಡ್ಸ್ 9-2-32-0, ರವಿ ರಾಂಪಾಲ್ 8-0-19-0 (ನೋಬಾಲ್-1), ಡರೆನ್ ಸಾಮಿ 9-0-32-1, ಮರ್ಲಾನ್ ಸ್ಯಾಮುಯಲ್ಸ್ 7-0-28-1, ದೇವೇಂದ್ರ ಬಿಶೋ 11-1-30-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT