ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ವಿಶ್ವಾಸದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌

ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಪೈಪೋಟಿ
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಮೊದಲ ಪಂದ್ಯದಲ್ಲಿ ಗೆದ್ದು ವಿಶ್ವಾಸದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ­ದವರು ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-–20 ಕ್ರಿಕೆಟ್‌ ಟೂರ್ನಿಯ ತಮ್ಮ ಎರಡನೇ ಪಂದ್ಯದಲ್ಲಿ ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದ್ದಾರೆ.

ಈ ಪಂದ್ಯ ಜಾರ್ಖಂಡ್‌ ರಾಜ್ಯ  ಕ್ರಿಕೆಟ್‌ ಸಂಸ್ಥೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೂಪರ್‌ ಕಿಂಗ್ಸ್‌ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರ ತವರೂರಿನಲ್ಲಿಯೇ ಈ ಪಂದ್ಯ ನಡೆಯುತ್ತಿರು­ವುದರಿಂದ ಗೆಲುವಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ.
ಈ ತಂಡದವರು ತಮ್ಮ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಟೈಟಾನ್ಸ್‌ ತಂಡವನ್ನು ಸೋಲಿಸಿದ್ದರು. ಸವಾಲಿನ ಮೊತ್ತದ ಎದುರು ಮೈಕ್‌ ಹಸ್ಸಿ ಹಾಗೂ ಸುರೇಶ್‌ ರೈನಾ ಅಮೋಘ ಪ್ರದರ್ಶನ ತೋರಿದ್ದರು.

ಎರಡು ಬಾರಿ ಐಪಿಎಲ್‌ ಚಾಂಪಿಯನ್‌ ಸೂಪರ್‌ ಕಿಂಗ್ಸ್‌ ಪ್ರತಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ­ವನ್ನೇ ನೀಡುತ್ತಿದೆ. ಅದನ್ನು ಈ ಟೂರ್ನಿಯಲ್ಲೂ ಮುಂದುವರಿಸಲು ಕಾತರವಾಗಿದೆ. ರೈನಾ, ಹಸ್ಸಿ, ರವೀಂದ್ರ ಜಡೇಜ, ಆರ್‌.ಅಶ್ವಿನಿ ಅವರಂಥ ಆಟಗಾರ­ರನ್ನು ಒಳಗೊಂಡಿರುವ ದೋನಿ ಬಳಗ ಸನ್‌ರೈಸರ್ಸ್‌ ಎದುರೂ ಗೆಲುವಿನ ನೆಚ್ಚಿನ ತಂಡ ಎನಿಸಿದೆ.

ಶಿಖರ್‌ ಧವನ್‌ ಸಾರಥ್ಯದ ಸನ್‌ರೈಸರ್ಸ್‌ ಅರ್ಹತಾ ಸುತ್ತಿನಲ್ಲಿ ಗೆದ್ದುಬಂದಿದೆ. ಅಷ್ಟು ಮಾತ್ರ­ವಲ್ಲದೇ, ಪ್ರಧಾನ ಹಂತದ ಮೊದಲ ಪಂದ್ಯದಲ್ಲಿ ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ ಎದುರು ಜಯ ಗಳಿಸಿದೆ. ಹೊಸ ತಂಡವಾದರೂ ಐಪಿಎಲ್‌ ಆರನೇ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿತ್ತು. ಶಿಖರ್‌, ಪಾರ್ಥಿವ್‌ ಪಟೇಲ್‌, ಡರೆನ್‌ ಸಮಿ ಅವರಂಥ ಆಟಗಾರರು ಇರುವ ಈ ತಂಡ ಸೂಪರ್‌ ಕಿಂಗ್ಸ್‌ಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿದೆ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT