ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಹಾದಿಗೆ ಮರಳಿದ ರೈಡರ್ಸ್

ಮಿಂಚಿದ ಕಾಲಿಸ್, ಗಂಭೀರ್, ಮಾರ್ಗನ್; ಸನ್‌ರೈಸರ್ಸ್‌ಗೆ ಸೋಲು
Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಜಾಕ್ ಕಾಲಿಸ್ ತೋರಿದ ಆಲ್‌ರೌಂಡ್ ಆಟ ಮತ್ತು ಗೌತಮ್ ಗಂಭೀರ್ ಹಾಗೂ ಎಯೊನ್ ಮಾರ್ಗನ್ ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳಿದೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗಂಭೀರ್ ಬಳಗ 48 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ರೈಡರ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 180 ಪೇರಿಸಿದಾಗಲೇ ಫಲಿತಾಂಶ ಹೆಚ್ಚುಕಡಿಮೆ ನಿರ್ಧಾರವಾಗಿತ್ತು. ಕುಮಾರ ಸಂಗಕ್ಕಾರ ನೇತೃತ್ವದ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು.

ಆಕರ್ಷಕ 41 ರನ್ ಗಳಿಸಿದ್ದಲ್ಲದೆ (27 ಎಸೆತ, 6 ಬೌಂ) ಬೌಲಿಂಗ್‌ನಲ್ಲೂ ಮಿಂಚಿದ (13ಕ್ಕೆ 3) ಕಾಲಿಸ್     ರೈಡರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗಂಭೀರ್ (53, 45 ಎಸೆತ, 6 ಬೌಂ, 1 ಸಿಕ್ಸರ್) ಮತ್ತು ಎಯೊನ್ ಮಾರ್ಗನ್ (47, 21 ಎಸೆತ, 5 ಬೌಂ, 3 ಸಿಕ್ಸರ್) ಅವರ ಆಟ ತಂಡದ ಉತ್ತಮ ಮೊತ್ತಕ್ಕೆ ಕಾರಣ.

ಸವಾಲಿನ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್‌ಗೆ ಪಾರ್ಥಿವ್ ಪಟೇಲ್ (27, 31 ಎಸೆತ) ಮತ್ತು ಕ್ಯಾಮರೂನ್ ವೈಟ್ (34, 31 ಎಸೆತ) ಮೊದಲ ವಿಕೆಟ್‌ಗೆ 57 ರನ್ ಸೇರಿಸಿದರು. ಆದರೆ ಇದಕ್ಕಾಗಿ 9 ಓವರ್‌ಗಳನ್ನು ತೆಗೆದುಕೊಂಡರು. ಮಾತ್ರವಲ್ಲ ಇವರಿಬ್ಬರು ಬೆನ್ನುಬೆನ್ನಿಗೆ ಔಟಾದರು. ಇದರಿಂದ ಇತರ ಬ್ಯಾಟ್ಸ್‌ಮನ್‌ಗಳು ಒತ್ತಡದ ಭಾರ ಹೊತ್ತುಕೊಂಡೇ ಕ್ರೀಸ್‌ಗೆ ಆಗಮಿಸಬೇಕಾಯಿತು. ಸಂಗಕ್ಕಾರ (2) ವಿಫಲರಾದದ್ದು ಕೂಡಾ ತಂಡಕ್ಕೆ ಹಿನ್ನಡೆ ಉಂಟುಮಾಡಿತು. ಸನ್‌ರೈಸರ್ಸ್ ಆಟಗಾರರು ಯಾವ ಹಂತದಲ್ಲೂ ಎದುರಾಳಿ ಬೌಲರ್‌ಗಳಿಗೆ ಬೆದರಿಕೆ ಹುಟ್ಟಿಸಲಿಲ್ಲ.

ಕಾಲಿಸ್‌ಗೆ ತಕ್ಕ ಸಾಥ್ ನೀಡಿದ ರಜತ್ ಭಾಟಿಯಾ ಎರಡು ವಿಕೆಟ್ ಪಡೆದರು. ಆದರೆ ರೈಡರ್ಸ್ ಪರ ಬೌಲಿಂಗ್‌ನಲ್ಲಿ ಗಮನ ಸೆಳೆದದ್ದು ಆಫ್‌ಸ್ಪಿನ್ನರ್ ಸಚಿತ್ರ ಸೇನನಾಯಕೆ. ಅವರು ನಾಲ್ಕು ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಒಂದು ವಿಕೆಟ್ ಪಡೆದರು. ಶ್ರೀಲಂಕಾದ ಈ ಬೌಲರ್ ಎದುರಾಳಿಗಳಿಗೆ ಯಾವುದೇ ಬೌಂಡರಿ ನೀಡದ್ದು ವಿಶೇಷ.

ಭರ್ಜರಿ ಬ್ಯಾಟಿಂಗ್: ಟಾಸ್ ಗೆದ್ದ ರೈಡರ್ಸ್ ಯೋಜನಾಬದ್ಧ ಬ್ಯಾಟಿಂಗ್ ಪ್ರದರ್ಶಿಸಿತು. ಗಂಭೀರ್ ಇನಿಂಗ್ಸ್‌ಗೆ ಸ್ಥಿರತೆ ನೀಡಿದರೆ, ಕಾಲಿಸ್ ಮತ್ತು ಮಾರ್ಗನ್ ಕೊನೆಯ ಓವರ್‌ಗಳಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು. ಮನ್ವಿಂದರ್ ಬಿಸ್ಲಾ (26, 24 ಎಸೆತ) ಮೊದಲ ವಿಕೆಟ್‌ಗೆ ಗಂಭೀರ್ ಅವರೊಂದಿಗೆ 7.4 ಓವರ್‌ಗಳಲ್ಲಿ 59 ರನ್ ಸೇರಿಸಿದರು. ಎಚ್ಚರಿಕೆಯಿಂದ ಆಡಿದ ಗಂಭೀರ್ ಅವಕಾಶ ಲಭಿಸಿದಾಗಲೆಲ್ಲಾ ಚೆಂಡನ್ನು ಬೌಂಡರಿಗೆ ಅಟ್ಟಿದರು. ಈ ಎಡಗೈ ಬ್ಯಾಟ್ಸ್‌ಮನ್ ಕಾಲಿಸ್ ಅವರೊಂದಿಗೆ ಎರಡನೇ ವಿಕೆಟ್‌ಗೆ 43 ರನ್‌ಗಳ ಜೊತೆಯಾಟ ನೀಡಿದರು.

ಕಾಲಿಸ್ ಮತ್ತು ಮಾರ್ಗನ್ ಮೂರನೇ ವಿಕೆಟ್‌ಗೆ ಐದು ಓವರ್‌ಗಳಲ್ಲಿ 67 ರನ್‌ಗಳನ್ನು ಕಲೆಹಾಕಿದರು. ರೈಡರ್ಸ್ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ತಡೆಯೊಡ್ಡಲು ಸಂಗಕ್ಕಾರ ಏಳು ಬೌಲರ್‌ಗಳನ್ನು ಪ್ರಯೋಗಿಸಿದರಾದರೂ, ಯಶ ಕಾಣಲಿಲ್ಲ. ತಿಸಾರ ಪೆರೇರಾ ಬೌಲ್ ಮಾಡಿದ 18ನೇ ಓವರ್‌ನಲ್ಲಿ 22 ರನ್‌ಗಳು ಬಂದವು. ಮಾರ್ಗನ್ ಈ ಓವರ್‌ನಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT