ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನೊಂದಿಗೆ ತೆರೆ ಎಳೆಯುವ ಗುರಿ

ಕ್ರಿಕೆಟ್: ಇಂದು ಅಂತಿಮ ಏಕದಿನ; ಘನತೆ ಕಾಪಾಡಿಕೊಳ್ಳಲು ಇಂಗ್ಲೆಂಡ್ ತಂಡದ ಹೋರಾಟ
Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಧರ್ಮಶಾಲಾ: ಸರಣಿ ಗೆಲುವಿನ ಮುನ್ನಡೆ ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಭಾನುವಾರ ಇಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದೆ.

ಉಭಯ ತಂಡಗಳ ನಡುವಿನ ಹೋರಾಟಕ್ಕೆ ಭಾರತದ ಅತ್ಯಂತ ಸುಂದರ ಕ್ರಿಕೆಟ್ ತಾಣ ಎನಿಸಿಕೊಂಡಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) ಕ್ರೀಡಾಂಗಣ ವೇದಿಕೆಯಾಗಲಿದೆ. ಹಿಮಚ್ಛಾದಿತ ದೌಲಧಾರ್ ಪರ್ವತ ಶ್ರೇಣಿಯ ಕಡೆಯಿಂದ ಬೀಸುವ ತಂಗಾಳಿ ಯಾವ ತಂಡಕ್ಕೆ ಗೆಲುವಿನ ಸಂತಸ ನೀಡುತ್ತದೆ ಎಂಬುದನ್ನು ನೋಡಬೇಕು.
 

 
 

ಅಂತಿಮ ಪಂದ್ಯ ಗೆದ್ದು ಸರಣಿಯನ್ನು 4-1 ರಲ್ಲಿ ತನ್ನದಾಗಿಸಿಕೊಳ್ಳುವುದು ಮಹೇಂದ್ರ ಸಿಂಗ್ ದೋನಿ ಬಳಗದ ಗುರಿ. ಈ ಅಂತರದಲ್ಲಿ ಗೆದ್ದರೂ ಟೆಸ್ಟ್ ಸರಣಿಯಲ್ಲಿ ಎದುರಾದ ಸೋಲಿನ ಕಹಿಯನ್ನು ದೂರ ಮಾಡಲು ಸಾಧ್ಯವಿಲ್ಲ. ಆದರೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುನ್ನ ಅಲ್ಪ ಆತ್ಮವಿಶ್ವಾಸ ಗಳಿಸಿಕೊಳ್ಳಬಹುದು.
 

ಪಂದ್ಯ ತಡವಾಗಿ ಆರಂಭ
ಸರಣಿ ಗೆಲುವಿನ ಮುನ್ನಡೆ ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಭಾನುವಾರ ಇಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದೆ.

ಸರಣಿ ವಿಜೇತರನ್ನು ನಿರ್ಣಯಿಸುವ ನಿಟ್ಟಿನಲ್ಲಿ ಅಂತಿಮ ಪಂದ್ಯಕ್ಕೆ ಯಾವುದೇ ಮಹತ್ವವಿಲ್ಲ. ಈ ಕಾರಣ ಭಾರತ ತಂಡದಲ್ಲಿ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಕಳೆದ ನಾಲ್ಕು ಪಂದ್ಯಗಳಲ್ಲಿ `ಬೆಂಚ್' ಕಾಯಿಸುವ ಜೊತೆಗೆ ಆಟಗಾರರಿಗೆ ಪಾನೀಯ ತಂದುಕೊಡುವ ಕೆಲಸ ಮಾಡಿದ್ದ ಚೇತೇಶ್ವರ ಪೂಜಾರ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವರೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಸೌರಾಷ್ಟ್ರದ `ರನ್ ಮೆಷಿನ್'ಗೆ ಅವಕಾಶ ದೊರೆಯದಿದ್ದರೆ ತಂಡದ ಆಡಳಿತ ಟೀಕೆಗೆ ಗುರಿಯಾಗುವುದು ಖಚಿತ. ಏಕೆಂದರೆ ಈ ಬ್ಯಾಟ್ಸ್‌ಮನ್‌ಗೆ ರಣಜಿ ಫೈನಲ್‌ನಲ್ಲೂ ಆಡಲು ಬಿಸಿಸಿಐ ಅವಕಾಶ ನೀಡಿರಲಿಲ್ಲ. ಆದರೆ ಪೂಜಾರಗೆ ಸ್ಥಾನ ಮಾಡಿಕೊಡಲು ಯಾರನ್ನು ಕೈಬಿಡುವುದು ಎಂಬುದು ದೋನಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸತತ ವೈಫಲ್ಯ ಅನುಭವಿಸುತ್ತಿರುವ ಗೌತಮ್ ಗಂಭೀರ್‌ಗೆ ಇನ್ನೊಂದು ಅವಕಾಶ ಲಭಿಸುವುದೇ ಅಥವಾ ಅವರು ಪೂಜಾರಾಗೆ ಹಾದಿ ಬಿಟ್ಟುಕೊಡುವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ರೋಹಿತ್ ಶರ್ಮ ಇಲ್ಲೂ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ತಂಡದ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ನಿರೀಕ್ಷಿಸಬಹುದು. ಇಶಾಂತ್ ಶರ್ಮ ಮತ್ತು ಆರ್. ಅಶ್ವಿನ್ ಬದಲು ಅಶೋಕ್ ದಿಂಡಾ ಹಾಗೂ ಅಮಿತ್ ಮಿಶ್ರಾ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆದರೂ ಅಚ್ಚರಿಯಿಲ್ಲ. ನಾಯಕ ದೋನಿ, ಸುರೇಶ್ ರೈನಾ ಮತ್ತು ರವೀಂದ್ರ ಜಡೇಜ ತಮ್ಮ ಉತ್ತಮ ಪ್ರದರ್ಶನವನ್ನು ಇಲ್ಲೂ ಮುಂದುವರಿಸಲು ಸಜ್ಜಾಗಿದ್ದಾರೆ. ಹೆಬ್ಬೆರಳಿನ ಗಾಯಕ್ಕೆ ಒಳಗಾಗಿದ್ದ ದೋನಿ ಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಘನತೆ ಕಾಪಾಡಲು ಹೋರಾಟ: ಅಲಸ್ಟೇರ್ ಕುಕ್ ಬಳಗಕ್ಕೆ ಸರಣಿಯಲ್ಲಿ ಸಾಧಿಸಲು ಇನ್ನೂ ಏನೂ ಉಳಿದಿಲ್ಲ. 28 ವರ್ಷಗಳ ಬಿಡುವಿನ ಬಳಿಕ ಭಾರತದ ನೆಲದಲ್ಲಿ ಏಕದಿನ ಸರಣಿ ಗೆಲ್ಲಬೇಕೆಂಬ ಕನಸು ಮೊಹಾಲಿಯಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲೇ ಅಸ್ತಮಿಸಿತ್ತು.

ಟೆಸ್ಟ್ ಸರಣಿ ಜಯಿಸಿ, ಟ್ವೆಂಟಿ-20 ಸರಣಿಯಲ್ಲಿ ಸಮಬಲ ಸಾಧಿಸಿದ್ದ ಇಂಗ್ಲೆಂಡ್ ಆತ್ಮವಿಶ್ವಾಸದೊಂದಿಗೆಯೇ ಏಕದಿನ ಕದನಕ್ಕೆ ಸಜ್ಜಾಗಿತ್ತು. ಮಾತ್ರವಲ್ಲ ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಶುಭಾರಂಭ ಮಾಡಿತ್ತು. ಆ ಬಳಿಕ ತಂಡಕ್ಕೆ ಸತತ ಮೂರು ಸೋಲುಗಳು ಎದುರಾಗಿವೆ. ಅಂತಿಮ ಪಂದ್ಯದಲ್ಲಿ ಗೆದ್ದು ಸೋಲಿನ ಅಂತರ ತಗ್ಗಿಸುವುದು ಮಾತ್ರ ಕುಕ್ ಬಳಗದ ಮುಂದಿರುವ ಏಕೈಕ ಮಾರ್ಗ.

ತಣ್ಣಗಿನ ವಾತಾವರಣದಲ್ಲಿ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ. ಏಕೆಂದರೆ ನವದೆಹಲಿಯಲ್ಲಿ ಎರಡು ಅಭ್ಯಾಸ ಪಂದ್ಯಗಳು ಮತ್ತು ಮೊಹಾಲಿಯಲ್ಲಿ ನಾಲ್ಕನೇ ಏಕದಿನ ಪಂದ್ಯ ಕೊರೆಯುವ ಚಳಿಯಲ್ಲಿ ನಡೆದಿತ್ತು. ಈ ಮೂರೂ ಪಂದ್ಯಗಳಲ್ಲಿ ಇಂಗ್ಲೆಂಡ್ ಮುಗ್ಗರಿಸಿತ್ತು. ತಂಪಾದ ವಾತಾವರಣ ಮಾತ್ರ ಸಾಲದು, ಉತ್ತಮ ಪ್ರದರ್ಶನ ನೀಡಿದರಷ್ಟೇ ಗೆಲುವು ಸಾಧ್ಯ ಎಂಬುದನ್ನು ಇಂಗ್ಲೆಂಡ್ ಮನಗಂಡಿದೆ.

ಪ್ರವಾಸಿ ತಂಡ ಸರಣಿಯಲ್ಲಿ ಸೋಲು ಅನುಭವಿಸಲು ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣ. ಮೊಹಾಲಿಯಲ್ಲಿ ಕುಕ್, ಕೆವಿನ್ ಪೀಟರ್ಸನ್ ಮತ್ತು ಜೋ ರೂಟ್ ಅರ್ಧಶತಕ ಗಳಿಸಿದ್ದರು. ಆದರೆ ಇತರರಿಂದ ಬೆಂಬಲ ಲಭಿಸಿರಲಿಲ್ಲ. ಇದರಿಂದ ತಂಡ ಸವಾಲಿನ ಮೊತ್ತ ಪೇರಿಸಲು ವಿಫಲವಾಗಿತ್ತು. ಸ್ಟೀವನ್ ಫಿನ್ ಮತ್ತು ಜೇಮ್ಸ ಟ್ರೆಡ್‌ವೆಲ್ ಹೊರತುಪಡಿಸಿ ಉಳಿದ ಬೌಲರ್‌ಗಳೂ ವಿಫಲರಾಗಿದ್ದಾರೆ.

ಎಚ್‌ಪಿಸಿಎ ಕ್ರೀಡಾಂಗಣದ ಪಿಚ್ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಹೇಳುವುದು ಕಷ್ಟ. `ಟಾಸ್ ಮಹತ್ವದ ಪಾತ್ರ ವಹಿಸಲಿದೆ' ಎಂದು ಸುರೇಶ್ ರೈನಾ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯಿದೆ. ದೌಲಧಾರ್ ಪರ್ವತದ ಕಡೆಯಿಂದ ಬೀಸುವ ತಂಗಾಳಿಯೂ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದೆ.

ತಂಡಗಳು ಇಂತಿವೆ
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರೋಹಿತ್ ಶರ್ಮ, ರವೀಂದ್ರ ಜಡೇಜ, ಆರ್. ಅಶ್ವಿನ್, ಇಶಾಂತ್ ಶರ್ಮ, ಅಜಿಂಕ್ಯ ರಹಾನೆ, ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಶಮಿ ಅಹ್ಮದ್, ಅಮಿತ್ ಮಿಶ್ರಾ

ಇಂಗ್ಲೆಂಡ್: ಅಲಸ್ಟೇರ್ ಕುಕ್ (ನಾಯಕ), ಜೋ ರೂಟ್, ಇಯಾನ್ ಬೆಲ್, ಟಿಮ್ ಬ್ರೆಸ್ನನ್, ಡ್ಯಾನಿ ಬ್ರಿಗ್ಸ್, ಜಾಸ್ ಬಟ್ಲರ್, ಜೇಡ್ ಡೆರ್ನ್‌ಬಾಕ್, ಸ್ಟೀವನ್ ಫಿನ್, ಕ್ರೆಗ್ ಕೀಸ್‌ವೆಟರ್, ಸ್ಟುವರ್ಟ್ ಮೀಕರ್, ಎಯೊನ್ ಮಾರ್ಗನ್, ಸಮಿತ್ ಪಟೇಲ್, ಕೆವಿನ್ ಪೀಟರ್ಸನ್, ಜೇಮ್ಸ ಟ್ರೆಡ್‌ವೆಲ್, ಕ್ರಿಸ್ ವೋಕ್ಸ್

ಅಂಪೈರ್: ಸುಧೀರ್ ಅಸ್ನಾನಿ ಮತ್ತು ಸ್ಟೀವ್ ಡೇವಿಸ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಸಿ. ಶಂಸುದ್ದೀನ್
ಮ್ಯಾಚ್ ರೆಫರಿ: ಆ್ಯಂಡಿ ಪೈಕ್ರಾಫ್ಟ್ (ಜಿಂಬಾಬ್ವೆ) ಪಂದ್ಯದ ಆರಂಭ: ಬೆಳಿಗ್ಗೆ 9.30 ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT