ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಿಬಸವನಹಳ್ಳಿ ನಾಗರಿಕರ ಮೌನ ಪ್ರತಿಭಟನೆ

Last Updated 20 ಸೆಪ್ಟೆಂಬರ್ 2013, 10:11 IST
ಅಕ್ಷರ ಗಾತ್ರ

ಕುಶಾಲನಗರ: ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಗೊಂದಿಬಸವನಹಳ್ಳಿಯ ಸರ್ವೇ ನಂಬರ್ 1/1ರಲ್ಲಿ ಸುಮಾರು 400 ಕುಟುಂಬಗಳು ವಾಸಿಸುತ್ತಿದ್ದು, ಪಹಣಿಯಲ್ಲಿ ಆದ ಗೊಂದಲದಿಂದಾಗಿ ಇಂದು ಆ ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ವಿರೋಧಿಸಿ ಗುರುವಾರ ಹಳ್ಳಿಯ ನೂರಾರು ಜನರು ಮೌನ ಪ್ರತಿಭಟನೆ ನಡೆಸಿದರು.

ಒಂದು ವಾರದ ಹಿಂದೆ ಈ ಜಾಗದ ಸರ್ವೆ ಕಾರ್ಯ ಮಾಡಲು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳು  ಮುಂದಾಗಿದ್ದವು. ಆ ಸಂದರ್ಭದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಎರಡು ಇಲಾಖೆಗಳು ಪುನಃ ಸರ್ವೆ ಕಾರ್ಯ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಗೊಂದಿಬಸವನಹಳ್ಳಿ ನಾಗರಿಕರು ವಿರೋಧ ವ್ಯಕ್ತಪಡಿಸಿ ಮೌನ ಪ್ರತಿಭಟನೆ ನಡೆಸಿದರು.

ಗ್ರಾಮದ ಪ್ರಮುಖರಾದ ಜಯಶಂಕರ್ ಮಾತನಾಡಿ, 2000ನೇ ಸಾಲಿನಲ್ಲಿ ಜಿಲ್ಲಾ ಅರಣ್ಯಾಧಿಕಾರಿ ರವಿ ಅವಧಿಯಲ್ಲಿ, 318 ಎಕರೆ ಪ್ರದೇಶವು ಪೈಸಾರಿ ಜಾಗವೆಂದು ಗುರುತಿಸಲಾಗಿತ್ತು. ಅಲ್ಲದೇ 2004ಕ್ಕಿಂತ ಮುಂಚೆ ಇದು ಪೈಸಾರಿಯಾಗಿಯೇ ಇತ್ತು. ಆನಂತರ ಪಹಣಿಗಳು ಕಂಪ್ಯೂಟರೀಕರಣಗೊಂಡಾಗ ಅದು ಮೀಸಲು ಅರಣ್ಯವೆಂದು ಬದಲಾಗಿ ಗೊಂದಲ ನಿರ್ಮಾಣ­ವಾಗಲು ಕಾರಣವಾಗಿದೆ ಎಂದು ದೂರಿದರು.

ಪ್ರತಿಭಟನೆ ನೇತೃತ್ವದ ವಹಿಸಿದ್ದ ಮಂಡಲ ಪಂಚಾಯಿತಿ ಮಾಜಿ ಸದಸ್ಯ ಎಂ.ಎಂ. ಪ್ರಕಾಶ್ ಮಾತನಾಡಿ, ಐವತ್ತು ವರ್ಷಗಳಿಂದ ವಾಸಿಸುತ್ತಿರುವ ಇಲ್ಲಿನ ಜನರಿಗೆ ಕೇಂದ್ರ ಸರ್ಕಾರದ ರಾಜೀವ್ ಗಾಂಧಿ ವಿದ್ಯುದೀಕರಣ ಯೋಜನೆ ಮೂಲಕ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲದೆ ಸರ್ವೆ ನಂಬರ್ 1/1ರಲ್ಲಿ ಈಗಾಗಲೇ ಹತ್ತು ಜನರಿಗೆ ಪಟ್ಟಾ ನೀಡಲಾಗಿದೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೂ ಜಾಗವನ್ನು ತೆರವುಗೊಳಿಸಲು ತೆಗೆದುಕೊಂಡಿರುವ ಕ್ರಮ ಸರಿಯಲ್ಲ ಎಂದು ದೂರಿದರು.

ಪ್ರತಿಭಟನೆ ನಿರಂತರವಾಗಿ ಮುಂದುವರಿ­ಯಲಿದ್ದು, ನ್ಯಾಯ ಸಿಗುವವರೆಗೆ ಹಂತ ಹಂತವಾಗಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿಯೂ ಪ್ರತಿಭಟನೆ ನಡೆಸಲು ಸಿದ್ಧ. ಈಗಾಗಲೇ ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಿ ಕೆಪಿಸಿಸಿ ಅಧ್ಯಕ್ಷರ ಮೂಲಕ ಮನವಿ ಸಲ್ಲಿಸಲಾಗಿದೆ  ಎಂದು ಗ್ರಾಮದ ಮುಖಂಡ ಗೋವಿಂದಪ್ಪ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ವಿ. ಸತೀಶ್ ಮಾತನಾಡಿ, ಐವತ್ತು ವರ್ಷಗಳಿಂದ ಇಲ್ಲಿಯೇ ನೆಲೆಸಿರುವವರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಮೊಹಮ್ಮದ್ ಇಬ್ರಾಹಿಂ, ರಜಾಕ್, ಚಂದ್ರು, ಮಣಿಕಂಠನ್, ಪ್ರವೀಣ್, ಹರೀಶ್, ಸ್ಟೀಫನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT