ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಮ್ಮಟಗಿರಿಯಲ್ಲಿ ಮಸ್ತಕಾಭಿಷೇಕ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು:  ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ ಬೆಟ್ಟದೂರು ಬಳಿ ಇರುವ ಗೊಮ್ಮಟಗಿರಿಯ ಬಾಹುಬಲಿಗೆ ಸಾವಿರಾರು ಭಕ್ತರ ಜಯ ಘೋಷದ  ನಡುವೆ ಭಾನುವಾರ 62ನೇ ಮಸ್ತಕಾಭಿಷೇಕ ವಿಜೃಂಭಣೆಯಿಂದ ನೆರವೇರಿತು.

ಚಾಮರಾಜನಗರ ಜಿಲ್ಲೆ ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ನೇತೃತ್ವ ಹಾಗೂ ಪಾಶುನಾಥ ಮತ್ತು ಎನ್.ಡಿ.ಲೋಕಪಾಲ್  ಪೌರೋಹಿತ್ಯದಲ್ಲಿ ಬೆಳಿಗ್ಗೆ 10 ಗಂಟೆಗೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಸರಿಯಾಗಿ ಮಧ್ಯಾಹ್ನ 12.45ಕ್ಕೆ 18 ಅಡಿ ಎತ್ತರದ ಗೊಮ್ಮಟೇಶ್ವರ ಮೂರ್ತಿಗೆ ಸ್ವಾಮೀಜಿ ಪೌರೋಹಿತ್ಯದಲ್ಲಿ ಗಂಗಾಜಲ, ಅರಿಶಿಣ, ಕುಂಕುಮ, ಚಂದನ,  ಎಳೆನೀರು, ಕಷಾಯ, ಅಷ್ಟಗಂಧ ಹಾಗೂ ಹಾಲಿನ ಅಭಿಷೇಕ ಕೈಗೊಳ್ಳಲಾಯಿತು.

ಬೆಟ್ಟದಗಿರಿಯಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತಾದಿಗಳು ಅಭಿಷೇಕ ಆರಂಭವಾಗುತ್ತಿದ್ದಂತೆ `ವಿರಾಟ್ ಬಾಹುಬಲಿಗೆ ಜಯವಾಗಲಿ, ಅಹಿಂಸಾ ಪರಧರ್ಮನಿಗೆ ಜಯವಾಗಲಿ~ ಎಂದು ಘೋಷಣೆ ಕೂಗುತ್ತ ಭಕ್ತಿ ಭಾವದಿಂದ ಬಾಹುಬಲಿಯ ದರ್ಶನ ಪಡೆದರು.

ಹಾಲು, ಕುಂಕುಮ, ಅರಿಶಿಣ, ಶ್ರೀಗಂಧ, ಚಂದನ ಅಭಿಷೇಕ ಮಾಡಿದಾಗ ಗೊಮ್ಮಟಮೂರ್ತಿಯನ್ನು ನೋಡಿದ ಭಕ್ತರು ಭಾವಪರವಶರಾದರು. ಬಳಿಕ  ಬತ್ತದ ಅರಳು, ಸಕ್ಕರೆ ಮತ್ತು ಪುಷ್ಪಗಳಿಂದ ಅಭಿಷೇಕ ನೆರವೇರಿಸಿದರು.  ಇದಕ್ಕೂ ಮುನ್ನ ಅಭಿಷೇಕ ಮಾಡುವ ಚತುಷ್ಕೋನ ಕಳಶ ಹಾಗೂ ಪೂರ್ಣಕುಂಭಗಳನ್ನು ಹರಾಜು ಮಾಡಲಾಯಿತು.

ಈ ಸಂದರ್ಭದಲ್ಲಿ ಕನಕಗಿರಿ ಕ್ಷೇತ್ರದ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, `ಕಳೆದ 62 ವರ್ಷಗಳಿಂದ ಮಸ್ತಕಾಭಿಷೇಕ  ನಡೆಯುತ್ತಿದೆ. ಮೈಸೂರು, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುತ್ತಾರೆ. ಗೊಮ್ಮಟಗಿರಿಯು ಧಾರ್ಮಿಕವಾಗಿ ಪುಣ್ಯಸ್ಥಳವಾಗಿದ್ದು, ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೂಲ ಸೌಕರ್ಯ ಒದಗಿಸಲು ಗಮನ ಹರಿಸಬೇಕು~ ಎಂದು ಹೇಳಿದರು. ಗೊಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸುರೇಶ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT