ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮಿನಲ್ಲಿ ರಾಸಾಯನಿಕ ಪತ್ತೆ

Last Updated 19 ಅಕ್ಟೋಬರ್ 2012, 5:35 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದ ಕರಡಿಗುಡ್ಡ ರಸ್ತೆಯ 85ನೇ ವಿತರಣಾ ಕಾಲುವೆ ಹತ್ತಿರ ಇರುವ ಗೋದಾಮಿನಲ್ಲಿ ಕಳಪೆ ಜೋಳಕ್ಕೆ ರಾಸಾಯನಿಕ ಮಿಶ್ರಣ ಮಾಡಿ ಉತ್ತಮ ಗುಣಮಟ್ಟದ ಜೋಳ ಎನ್ನುವಂತೆ ಬಿಂಬಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸಂಗತಿ ಗುರುವಾರ ಅಧಿಕಾರಿಗಳ ಸಮ್ಮುಖದಲ್ಲಿ ಬಯಲಾಗಿದೆ.

ಕಳೆದ ಭಾನುವಾರ ಸದರಿ ಗೋದಾಮಿನಲ್ಲಿ ಈ ಅಕ್ರಮ ದಂಧೆ ನಡೆಯುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಗೋದಾಮನ್ನು ಜಪ್ತಿ ಮಾಡಿದ್ದರು. ಮಂಗಳವಾರ ಗೋದಾಮು ಬಾಗಿಲು ತೆರೆಯಲು ಹೋದ ಸಂದರ್ಭದಲ್ಲಿ ಗೋದಾಮು ಬಾಡಿಗೆ ಪಡೆದ ಮಾಲೀಕ ಪರಾರಿಯಾಗಿದ್ದನು.

ಗುರುವಾರ ಸದರಿ  ಗೋದಾಮಿನಲ್ಲಿ ಜೋಳವನ್ನು ತಾನು ಸಂಗ್ರಹಿಸಿಟ್ಟಿದ್ದಾಗಿ ದೂದ್‌ಪೀರಾ ಎನ್ನುವ ವ್ಯಕ್ತಿ ಆಗಮಿಸಿ ತಹಸೀಲ್ದಾರ್ ಗಂಗಪ್ಪ ಕಲ್ಲೂರು ಸಮ್ಮುಖದಲ್ಲಿ ಗೋದಾಮಿನ ಬಾಗಿಲು ತೆರೆದನು. ಈ ಸಂದರ್ಭದಲ್ಲಿ  ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ರಾಸಾಯನಿಕ  ಮಿಶ್ರಿತ ಅಪಾರ ಪ್ರಮಾಣದ ಜೋಳದ ರಾಶಿ ಕಂಡು ಬಂದಿತು ಹಾಗೂ ಸುಮಾರು 15ಕೆಜಿ ಸೋಡಿಯಂ ಮೆಟಾ ಬೈಸಲ್ಫೇಟ್ ಎನ್ನುವ ರಾಸಾಯನಿಕ ಕೂಡ ಪತ್ತೆಯಾಯಿತು.

ಗೋದಾಮಿನಲ್ಲಿದ್ದ ಜೋಳ ಹಾಗೂ ರಾಸಾಯನಿಕವನ್ನು ಗುಲ್ಬರ್ಗದ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ತರಿಸಿಕೊಳ್ಳುವುದಾಗಿ ತಹಸೀಲ್ದಾರ್ ಗಂಗಪ್ಪ ಕಲ್ಲೂರು ಹೇಳಿದರು. ಅಕ್ರಮ ಸಾಬೀತಾದರೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಅವರು  ತಿಳಿಸಿದರು.

ಹೊಸಪೇಟೆ ನಂಟು?: ಗೋದಾಮಿನ ಒಳಗೆ ಹೋದ ಸಂದರ್ಭದಲ್ಲಿ ಆರೋಪಿ ದೂದ್‌ಪೀರಾ,   ಜೋಳಕ್ಕೆ ರಾಸಾಯನಿಕ ಮಿಶ್ರಣ ಮಾಡುತ್ತಿರುವುದನ್ನು ತಹಸೀಲ್ದಾರ್ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾನೆ.

ಆರಂಭದಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ  ವ್ಯಕ್ತಿಯೊಬ್ಬ ಆಗಮಿಸಿ ಜೋಳಕ್ಕೆ ರಾಸಾಯನಿಕ ಮಿಶ್ರಣ ಮಾಡುತ್ತಿದ್ದುದಾಗಿ ಹೇಳಿದ್ದು ಅಧಿಕಾರಿಗಳ ಗೊಂದಲಕ್ಕೆ ಕಾರಣವಾಯಿತು. ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಚೀಲಗಳ ಪರಿಶೀಲನೆ ಚುರುಕುಗೊಳಿಸಿದಾಗ ರಾಸಾಯನಿಕ ಇರುವ ಚೀಲ ಕೂಡ ಪತ್ತೆಯಾಗಿದೆ. ಆರೋಪಿಯ ಹೇಳಿಕೆಯ ಪ್ರಕಾರ, ಕಳಪೆ ಜೋಳಕ್ಕೆ ರಾಸಾಯನಿಕ ಮಿಶ್ರಣ ಮಾಡಿ ಅಕ್ರಮವಾಗಿ ಮಾರಾಟ ಮಾಡುವ ಜಾಲದ ನಂಟು ಹೊಸಪೇಟೆವರೆಗೆ ಇರುವ ಬಗ್ಗೆ ಅಧಿಕಾರಿಗಳು ಹಾಗೂ ರೈತ ಸಂಘದ ಕಾರ್ಯಕರ್ತರಲ್ಲಿ ಶಂಕೆಗೆ ಕಾರಣವಾಯಿತು.

ಶಂಕೆ: ನಾಗರಾಜ ಪುಲದಿನ್ನಿ ಎಂಬುವರ ಸದರಿ ಗೋದಾಮನ್ನು ಬಾಡಿಗೆ ಪಡೆದಿದ್ದು, ಗೋದಾಮಿನಲ್ಲಿರುವ ಜೋಳ ಅವರಿಗೆ ಸೇರಿದ್ದು ಎಂದು ಹೇಳಲಾಗಿತ್ತು. ನಾಗರಾಜ ಪುಲದಿನ್ನಿ ಅವರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಮಂಗಳವಾರ ಸೂಚನೆ ನೀಡಿದ್ದರು. ಆದರೆ ಗುರುವಾರ ದೂದ್‌ಪೀರಾ ಎನ್ನುವ ವ್ಯಕ್ತಿ ಗೋದಾಮಿನಲ್ಲಿರುವ ಜೋಳ ತನೆಗೆ ಸೇರಿದ್ದು, ತಾನೇ ಜೋಳಕ್ಕೆ ರಾಸಾಯನಿಕ ಮಿಶ್ರಣ ಮಾಡುತ್ತಿದ್ದುದಾಗಿ ಹೇಳಿರುವ ಬಗ್ಗೆ ರೈತ ಸಂಘದ ಕಾರ್ಯಕರ್ತರ ಸಂಶಯಕ್ಕೆ ಕಾರಣವಾಯಿತು. ಈ ಅಕ್ರಮ ದಂಧೆಯ ಮುಖ್ಯ ಆರೋಪಿ ಪ್ರಕರಣದಿಂದ ದೂರ ಉಳಿಯಲು ಪ್ರಯತ್ನ ನಡೆಸಿರುವ ಬಗ್ಗೆ ರೈತರು ಅನುಮಾನ ವ್ಯಕ್ತಪಡಿಸಿದರು.

ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಪರಮೇಶ್ವರ, ಕಂದಾಯ ಇಲಾಖೆ ಅಧಿಕಾರಿಗಳಾದ ಆಸೀಫ್ ಹುಸೇನ್, ಪ್ರಭಾಕರ ನಾಯಕ, ಪ್ರಬಾರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗಣೇಶ್, ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ವಿಶ್ವನಾಥರೆಡ್ಡಿ ಜೀನೂರು, ಜಗದೀಶಯ್ಯ ಸ್ವಾಮಿ ಮಲ್ಲಿನಮಡುಗು, ಹಂಪಣ್ಣ ಜಾನೇಕಲ್, ವೆಂಕಟರಾವ್ ಜೀನೂರು ಕ್ಯಾಂಪ್, ದೊಡ್ಡಬಸನಗೌಡ ಬಲ್ಲಟಗಿ, ವಿ.ಭೀಮೇಶ್ವರರಾವ್, ಯಂಕಪ್ಪ ಕಾರಬಾರಿ, ಲಿಂಗಾರೆಡ್ಡಿ ಬೇವಿನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT