ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಾಕಾರದ ಜ್ಞಾನಕೋಶ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅತ್ಯಾಧುನಿಕವಾದ ಗೋಲಾಕಾರದ ವಿಶಿಷ್ಟ ವಿನ್ಯಾಸದ  ಗಾಜಿನ ಕಟ್ಟಡದಲ್ಲಿರುವ ಲೈಬ್ರರಿ ಇದು. ಇಲ್ಲಿ ಸುಮಾರು ಒಂದು ಲಕ್ಷ ಗ್ರಂಥಗಳ ಸಂಗ್ರಹವಿದೆ. 

ತುಮಕೂರಿನ ಕುಣಿಗಲ್ ಗೇಟ್ ಮಾರ್ಗವಾಗಿ ಹೊರಟರೆ ಸಿಗುವ ಮರಳೂರು ದಿಣ್ಣೆಯ ಬಳಿ ಬಲಕ್ಕೆ ತಿರುಗಿದರೆ 70 ಎಕರೆಯ ವಿಸ್ತಾರ ಪ್ರದೇಶದ ಹುಲ್ಲುಗಾವಲಿನ ನಡುವೆ  ಆಕರ್ಷಕವಾದ, ಗೋಲಾಕಾರದ ಗಾಜಿನ ಕಟ್ಟಡವೊಂದು ನಿಮ್ಮ ಗಮನ ಸೆಳೆಯುತ್ತದೆ. 

2945 ಚದರ ಮೀಟರುಗಳಷ್ಟು ವ್ಯಾಪ್ತಿಯಲ್ಲಿ ತಲೆ ಎತ್ತಿ ನಿಂತಿರುವ ಈ ಗಾಜುಮಯ ಜ್ಞಾನಕೋಶದಲ್ಲಿ ಐದು ಮಹಡಿಗಳಿವೆ. ಮಹಡಿಗೆ ಹತ್ತಲು ವಿನೂತನ ರೀತಿಯ ಮೆಟ್ಟಿಲು ಸೌಲಭ್ಯವಲ್ಲದೆ ಲಿಫ್ಟ್‌ನ ಅನುಕೂಲವನ್ನೂ ಕಲ್ಪಿಸಲಾಗಿದೆ.

ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಈ ಗ್ರಂಥಾಲಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.ಮೊದಲ ಮಹಡಿಯಲ್ಲಿ ಸಾಫ್ಟ್‌ವೇರ್ ವಲಯಕ್ಕೆ ಸಂಬಂಧಿಸಿದ ಪುಸ್ತಕಗಳಿದ್ದರೆ, ಎರಡನೆಯ ಮಹಡಿಯಲ್ಲಿ ಎಲೆಕ್ಟ್ರಿಕಲ್ ಸೈನ್ಸ್‌ಗೆ ಸಂಬಂಧಿಸಿದ ಗ್ರಂಥಗಳನ್ನು ಜೋಡಿಸಲಾಗಿದೆ.

ಮೂರನೆಯ ಮಹಡಿಯಲ್ಲಿ ಪುಸ್ತಕಗಳ ಶೇಖರಣೆಗೆಂದೇ ಅತ್ಯಾಧುನಿಕ ರೀತಿಯ ವಿನ್ಯಾಸವನ್ನು ರೂಪಿಸಿದ್ದರೆ, ನಾಲ್ಕನೆಯ ಮಹಡಿಯಲ್ಲಿ ಎಂಬಿಎ ಹಾಗೂ ಎಂಸಿಎ ತರಹದ ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿಸಿದ ಪುಸ್ತಕಗಳಿವೆ.

ಐದನೆಯ ಮಹಡಿಯಲ್ಲಿ ಕೊಂಚ ದುಬಾರಿ ವೆಚ್ಚದಲ್ಲೇ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗಿದ್ದು, ಐ.ಇ.ಇ.ಇ., ಜೆ.ಗೇಟ್, ಡೆಲ್‌ನೆಟ್‌ಗಳ ಸದಸ್ಯತ್ವದ ಮೂಲಕ ಆನ್‌ಲೈನ್ ಸೌಲಭ್ಯವನ್ನು ಕಲ್ಪಿಸಲಾಗಿದೆ. 

ಅರವತ್ತು ಮಂದಿ ವಿದ್ಯಾರ್ಥಿಗಳು ಇಲ್ಲಿ ಏಕ ಕಾಲದಲ್ಲೇ ಇಂಟರ್‌ನೆಟ್ ಮೂಲಕ ಜಗತ್ತಿನ ಜ್ಞಾನಜಾಲವನ್ನೇ ಜಾಲಾಡಬಹುದಾಗಿದೆ.ಈ ಡಿಜಿಟಲ್ ಗ್ಲೋಬಲ್ ಗ್ರಂಥಾಲಯದಲ್ಲಿ ಸರಿಸುಮಾರು ಒಂದು ಲಕ್ಷ ಗ್ರಂಥಗಳ ಸಂಗ್ರಹವಿದೆ.

ಅದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ 216 ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಪತ್ರಿಕೆಗಳನ್ನೂ ನಿಯಮಿತವಾಗಿ ತರಿಸಿ ಶೇಖರಿಸಿಡಲಾಗುತ್ತಿದ್ದು, ಜ್ಞಾನದಾಹಿಗಳು ಅದರ ಉಪಯೋಗವನ್ನು ಸದಾಕಾಲ ಪಡೆಯಬಹುದಾಗಿದೆ.

ಒಟ್ಟು 500 ಮಂದಿ ಏಕಕಾಲದಲ್ಲೇ ಈ ಗ್ರಂಥಾಲಯದಲ್ಲಿ ಕೂತು ಅಧ್ಯಯನ ಕೈಗೊಳ್ಳಬಹುದಾಗಿದೆ. ಪುಸ್ತಕಗಳು, ಪತ್ರಿಕೆಗಳೇ ಅಲ್ಲದೆ ಸಾವಿರಾರು ಸಿಡಿ, ಡಿವಿಡಿಗಳು ಹಾಗೂ ಕ್ಯಾಸೆಟ್ಟುಗಳ ಸಂಗ್ರಹವೂ ಈ ಗ್ರಂಥಾಲಯದಲ್ಲಿರುವುದು ಒಂದು ವಿಶೇಷವೆಂದೇ ಹೇಳಬೇಕು.

ಇದಷ್ಟೇ ಆಗಿದ್ದಿದ್ದರೆ ಕೇವಲ ಇದೊಂದು ತಾಂತ್ರಿಕ ವಿದ್ಯಾಲಯವೊಂದರ ಗ್ರಂಥಾಲಯವಾಗಿ ಮಾತ್ರ ಉಳಿದುಬಿಡುತ್ತಿತ್ತು. 

ಆದರೆ ಇಂದು ನಮ್ಮ ಶಿಕ್ಷಣ ಪದ್ಧತಿಯಲ್ಲಿ  ನಗಣ್ಯವಾಗುತ್ತಿರುವ ಹಾಗೂ ಮೂಲೆಗುಂಪಾಗುತ್ತಿರುವಂತಹ ಮಾನವಿಕ ಹಾಗೂ ಸಮಾಜ ವಿಜ್ಞಾನಗಳಿಗೆ ಸಂಬಂಧಿಸಿದ ಅನೇಕ ಅಮೂಲ್ಯ ಗ್ರಂಥಗಳು ಕೂಡ ಈ ಲೈಬ್ರರಿಯಲ್ಲಿ ದೊರೆಯುತ್ತದೆನ್ನುವುದೇ ಇದರ ನಿಜವಾದ ಹೆಚ್ಚುಗಾರಿಕೆ ಎನ್ನಬಹುದು.

ಈ ಗೋಲಾಕಾರ ಗ್ರಂಥಾಲಯದ ವ್ಯಾಸವು 31 ಮೀಟರುಗಳಷ್ಟಿದ್ದು 23 ಮೀಟರುಗಳಷ್ಟು ಎತ್ತರವಾಗಿದೆ.

ತ್ರಿಭುಜಾಕಾರದ ಗಾಜುಗಳಿಂದ ಮನಮೋಹಕವಾಗಿ ಕಾಣುವ ಕಟ್ಟಡದಲ್ಲಿ ಅಗತ್ಯಕ್ಕೆ ತಕ್ಕಂತೆ ಸ್ವಯಂಚಾಲಿತ ಕಿಟಕಿಗಳಿದ್ದು ನೈಸರ್ಗಿಕವಾದ ಗಾಳಿ, ಬೆಳಕುಗಳು ಯಥೇಚ್ಛವಾಗಿ ಸಿಗುವಂತೆಯೂ ವ್ಯವಸ್ಥೆ ಮಾಡಲಾಗಿದೆ.

ಜೊತೆಗೆ ಹವಾನಿಯಂತ್ರಿತ ವ್ಯವಸ್ಥೆಯೂ ಉಂಟು. ಈ ವಿಶಿಷ್ಟ ಕಟ್ಟಡದ ಮೇಲ್ಭಾಗದಲ್ಲಿ 15 ತೆರೆಯಲ್ಪಡುವ ಕಿಟಕಿಗಳ ಮೂಲಕ ಅಶುದ್ಧ ಗಾಳಿ ಹೊರಹೋಗುವಂತೆಯೂ ಹಾಗೂ ಗೋಲದ ಸುತ್ತಲೂ ವಿವಿಧ ಭಾಗಗಳಲ್ಲಿ 49 ಸ್ವಯಂ ಚಾಲಿತ ಕಿಟಕಿಗಳ ಮೂಲಕ ಶುದ್ಧಗಾಳಿ ಒಳ ಬರುವಂತೆಯೂ ರೂಪಿಸಲಾಗಿದೆ.

ಅದಲ್ಲದೆ ಛಾವಣಿಯ ಭಾಗದಲ್ಲಿ (ಇದೂ ಗಾಜುಗಳಿಂದ ಆವೃತ್ತವಾಗಿದೆ) ಸುಂದರ ಕೈತೋಟವನ್ನು ನಿರ್ಮಿಸಲಾಗಿದ್ದು ಅದು ಶುದ್ಧಗಾಳಿಯ ಪೂರೈಕೆಗೆ ನೆರವಾಗುವುದಲ್ಲದೆ ಕಟ್ಟಡದ ಒಳಚೆಂದವನ್ನು ಹೆಚ್ಚಿಸಿದೆ.

ಲೈಬ್ರರಿಯ ಕಟ್ಟಡವನ್ನು ತಂಪಾಗಿಡಲು ಗೋಲಾಕಾರದ ತಳಭಾಗದ ಸುತ್ತಲೂ ನೀರಿನ ಕೊಳವನ್ನು ನಿರ್ಮಿಸಲಾಗಿದ್ದು, ಅದರಲ್ಲಿ ವೈವಿಧ್ಯಮಯವಾದ ಮೀನುಗಳನ್ನು ಬಿಡಲಾಗಿದೆ. ದಟ್ಟವಾದ ಹಸಿರು ಹೊದಿಕೆಯ ಮರಗಿಡಗಳೊಂದಿಗೆ ಹುಲ್ಲುಗಾವಲನ್ನು ಕಟ್ಟಡದ ಸುತ್ತಲೂ ಬೆಳಸಲಾಗಿದೆ.

ಪ್ರತಿದಿನ ಸುಮಾರು 750 ಮಂದಿ ವಿದ್ಯಾರ್ಥಿಗಳು ಈ ಗ್ರಂಥಾಲಯದ ಪ್ರಯೋಜನವನ್ನು ಪಡೆಯುತ್ತಿದ್ದು 20ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪರೀಕ್ಷೆಗಳ ಸಂದರ್ಭದಲ್ಲಿ ದಿನದ 24 ಗಂಟೆಯೂ ಗ್ರಂಥಾಲಯ ಸೌಲಭ್ಯವು ಮುಕ್ತವಾಗಿರುತ್ತದೆ.  ಇಡೀ ವಿಶ್ವದಲ್ಲಿ ಇಂತಹ 7 ಕಟ್ಟಡಗಳು ಮಾತ್ರ ಇವೆ ಎಂಬ ಅಂಶವೇ ಈ ಕಟ್ಟಡದ ಅನನ್ಯತೆಗೆ ಸಾಕ್ಷಿ.

ಶಿಕ್ಷಣ ಸಂಸ್ಥೆಯ ವಾರಸುದಾರರಾದ ಜಿ. ಪರಮೇಶ್ವರ್ ಅವರು ಆಸ್ಟ್ರೇಲಿಯಾದ್ಲ್ಲಲಿ ಮರದ ತುಂಡುಗಳಿಂದ ನಿರ್ಮಿಸಿದ್ದ ಇದೇ ಬಗೆಯ ಕಟ್ಟಡವನ್ನು ಕಂಡು ಅದರಿಂದ ಪ್ರೇರಿತರಾಗಿ ಈ ಡಿಜಿಟಲ್ ಗ್ಲೋಬಲ್ ಲೈಬ್ರರಿಯ ನಿರ್ಮಾಣಕ್ಕೆ ಕಾರಣರಾದರು.   ಕಟ್ಟಡದ ವಿನ್ಯಾಸವನ್ನು ರೂಪಿಸಿದವರು ಬೆಂಗಳೂರಿನ ವಾಸ್ತುಶಿಲ್ಪಿ ಶ್ರೀನಿಧಿ ಅನಂತರಾಮನ್.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT