ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆಮೇವು ತಿಪ್ಪೆಗೆ

Last Updated 19 ಜೂನ್ 2012, 9:55 IST
ಅಕ್ಷರ ಗಾತ್ರ

ಹನುಮಸಾಗರ:  ಬರ ಪರಿಸ್ಥಿತಿಯಿಮದ ನಲುಗಿ ಹೋಗಿರುವ ರೈತರು ಮೇವಿನ ಹಾಹಾಕಾರದಿಂದ ತಮ್ಮ ದನಕರುಗಳನ್ನು ಗೋಶಾಲೆಗೆ ತಂದಿದ್ದಾರೆ. ಆದರೆ ಅನಾವಶ್ಯಕವಾಗಿ ಹುಲ್ಲು ಬಳಸುವುದರಿಂದ ಜಾನುವಾರುಗಳ ಬಾಯಿಗೆ ದಕ್ಕದೆ ಸಾಕಷ್ಟು ಪ್ರಮಾಣದ ಬತ್ತದಹುಲ್ಲು ತಿಪ್ಪೆ ಸೇರುತ್ತಿರುವುದು ಕಂಡುಬಂದಿದೆ.

ಕಳೆದ ಎರಡು ದಿನಗಳ ಹಿಂದೆ ಗೋಶಾಲೆಗೆ ಮೇವು ಬಾರದಿರುವುದಕ್ಕೆ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ ರೈತರು ಮೇವು ಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳದೇ ಬೇಕಾಬಿಟ್ಟಿಯಾಗಿ ಮೇವು ಬಳಸುತ್ತಿರುವುದರಿಂದ ಸಾಕಷ್ಟು ಪ್ರಮಾಣದ ಮೇವು ಹಾಳಾಗಿ ತಿಪ್ಪೆ ಬೆಳೆಯುತ್ತಿದೆ.

ಜಾನುವಾರುಗಳ ರಕ್ಷಣೆಗಾಗಿ ಬಂದಿರುವ ರೈತರು ಲಾರಿಗಳ ಮೂಲಕ ಗೋಶಾಲೆಗೆ ಮೇವು ಬಂದ ತಕ್ಷಣ ಜಾನುವಾರುಗಳಿಗೆ ಅವಶ್ಯಕತೆ ಇಲ್ಲದಿದ್ದರೂ ಹೋರಾಟ ಮಾಡಿಯಾದರೂ ಹೊರೆಗಟ್ಟಲೇ ಹುಲ್ಲು ತೆಗೆದುಕೊಂಡು ಹೋಗಿ ದನಗಳ ಮುಂದೆ ಹಾಕುತ್ತಾರೆ. ಮುಂದೆ ಇದು ಜಾನುವಾರುಗಳ ಕಾಲ್ತುಳಿತದಲ್ಲಿ ಬಿದ್ದು ಹಾಳಾಗಿ ಹೋಗುತ್ತದೆ.

ಅಲ್ಲದೆ ರಾತ್ರಿ ಸಮಯದಲ್ಲಿ ಜಾನುವಾರುಗಳ ಮುಂದೆ ಉಳಿದಿರುವ ಹುಲ್ಲನ್ನು ದನಗಳ ಗಂಜಲು ಹಾಗೂ ಸಗಣಿಯಲ್ಲಿ ಹಾಕಿ ಒಂದು ರೀತಿ ಹಾಸಿಗೆಯಂತೆ ಮಾಡಿ ಬೆಳಿಗ್ಗೆ ಕಸದೊಂದಿಗೆ ಸೇರಿಸಿ ತಿಪ್ಪೆಗೆ ಸಾಗಿಸುತ್ತಾರೆ. ಇದರ ಜೊತೆಗೆ ಗಿಡಗಳ ನೆರಳಿನಲ್ಲಿ ಕಟ್ಟಿರುವ ಜಾನುವಾರುಗಳಿಗೆ ಗೋದಲಿ ವ್ಯವಸ್ಥೆ ಇಲ್ಲದಿರುವುದರಿಂದ ಹಾಕಿದ ಹುಲ್ಲು ದನಗಳ ಕಾಲಲ್ಲಿ ಬಂದಿರುತ್ತದೆ.

ಈ ಎಲ್ಲ ಕಾರಣದಿಂದ ಜಾನುವಾರುಗಳ ಹೊಟ್ಟೆ ಸೇರಬೇಕಾಗಿರುವ ಮೇವು ತಿಪ್ಪೆಗೆ ಹೋಗುತ್ತಿರುವುದಕ್ಕೆ ಗೋಶಾಲೆಯಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು ರೈತರಿಗೆ ಪರಿಸ್ಥಿತಿ ಬಗ್ಗೆ ತಿಳಿ ಹೇಳಿದರೂ ಅದಕ್ಕೆ ಕೆಲ ರೈತರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
 
ಅಚ್ಚರಿಯಂದರೆ, ಕೆಲ ದಿನಗಳ ಹಿಂದೆ ಮೇವಿನ ಅಭಾವ ಇದ್ದಾಗ ಇದೇ ರೈತರು ಗೋಶಾಲೆ ತಿಪ್ಪೆಯಲ್ಲಿನ ಹುಲ್ಲನ್ನೇ ಹೆಕ್ಕಿ ದನಗಳಿಗೆ ಹಾಕುತ್ತಿದ್ದರು.

ಜಾನುವಾರುಗಳ ಸಂಖ್ಯೆಯ ಆಧಾರದ ಮೇಲೆ ಬತ್ತದ ಹುಲ್ಲು ತಂದರೂ ಈ ಕಾರಣದಿಂದ ಹುಲ್ಲು ಲೆಕ್ಕಕ್ಕೆ ಸಿಗದಂತೆ ಖರ್ಚಾಗುತ್ತದೆ, ಮೇಲಧಿಕಾರಿಗಳು ಗರಿಷ್ಠ ಪ್ರಮಾಣದಲ್ಲಿ ಹುಲ್ಲು ಖರ್ಚಾಗುತ್ತದೆ ಎಂದು ದಬಾಯಿಸುತ್ತಾರೆ ಎಂದು ಗೋಶಾಲೆಯ ಸಹಾಯಕರು ಅಳಲು ತೋಡಿಕೊಳ್ಳುತ್ತಾರೆ.

ಹನುಮನಾಳದ ಗೋಶಾಲೆಯಲ್ಲಿ ಶನಿವಾರ ಇಂತಹ ಪರಿಸ್ಥಿತಿ ಉಂಟಾದಾಗ ಪೊಲೀಸರು ಬಂದು ರೈತರನ್ನು ನಿಯಂತ್ರಿಸಿ ಹುಲ್ಲು ವಿತರಣೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT