ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್-ಸ್ಟುವರ್ಟ್ ಬಿನ್ನಿ ಶತಕದ ಸಿಂಚನ

ರಣಜಿ ಟ್ರೋಫಿ: ಕ್ಯಾಚ್ ಬಿಟ್ಟು ಕೈಸುಟ್ಟುಕೊಂಡ ಮಹಾರಾಷ್ಟ, ಕರ್ನಾಟಕ ಗೌರವಾರ್ಹ ಮೊತ್ತ
Last Updated 29 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಪುಣೆ: ಪೆಟ್ಟು ತಿಂದ ಸಿಂಹದ ಮರಿಗೆ ಮತ್ತೊಂದು ಪೆಟ್ಟು ಕೊಟ್ಟು ನೋಡಿ. ಅದು ಗರ್ಜಿಸುವುದನ್ನು ನಿಲ್ಲಿಸುತ್ತದೆಯೇ? ಎಷ್ಟೇ ಪೆಟ್ಟು ಬಿದ್ದರೂ ಅದರ ಗರ್ಜನೆ ಮತ್ತಷ್ಟು ಹೆಚ್ಚಾಗುತ್ತದೆ. ಅದೇ ರೀತಿಯ ಬ್ಯಾಟಿಂಗ್ ಕರ್ನಾಟಕದ ಸಿ.ಎಂ. ಗೌತಮ್ ಹಾಗೂ ಸ್ಟುವರ್ಟ್ ಬಿನ್ನಿ ಅವರದ್ದು!

`ಚೆಂಡು ಇರುವುದೇ ದಂಡಿಸಲು' ಎನ್ನುವಂತೆ ಗೌತಮ್ ಬ್ಯಾಟ್ ಬೀಸಿದರು. ಆರಂಭದಲ್ಲಿ ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿದ್ದರೂ, ಗೌತಮ್ ಹಾಗೂ ಬಿನ್ನಿ `ಗರ್ಜನೆ'ಗೆ ತಡೆಯೊಡ್ಡಲು ಮಹಾರಾಷ್ಟ್ರದ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.

ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ `ಬಿ' ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಗೌತಮ್ ಬ್ಯಾಟಿಂಗ್ ವೈಭವ ಮತ್ತೊಮ್ಮೆ ಅನಾವರಣಗೊಂಡಿತು. ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನಿಸಿರುವ ಈ ಪಿಚ್‌ನಲ್ಲಿ ರನ್ ಹೊಳೆ ಹರಿದಾಡುತ್ತದೆ ಎನ್ನುವುದು ನಿರೀಕ್ಷಿತವಾಗಿತ್ತು. ಆದರೆ, ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಮಹಾರಾಷ್ಟ್ರ ಆರಂಭದಲ್ಲಿ ಪೆಟ್ಟು ನೀಡಿತು. ಆದರೂ, ನಾಯಕ ಸ್ಟುವರ್ಟ್ ಬಿನ್ನಿ ಹಾಗೂ ವಿಕೆಟ್ ಕೀಪರ್ ಗೌತಮ್ ಐದನೆಯ ವಿಕೆಟ್ ಜೊತೆಯಾಟದಲ್ಲಿ 215 ರನ್ ಕಲೆ ಹಾಕಿದರು. ಈ ಪರಿಣಾಮ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 89 ಓವರ್‌ಗಳಲ್ಲಿ 4 ವಿಕೆಟ್‌ಗೆ 306 ರನ್ ಗಳಿಸಿದೆ.

ಗೌತಮ್ ಮೂರನೆಯ ಶತಕ: ಸಿಕ್ಕ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ತೋರಿಸಿಕೊಟ್ಟ ಗೌತಮ್ (ಬ್ಯಾಟಿಂಗ್ 132, 261 ಎಸೆತ, 13 ಬೌಂಡರಿ, 1 ಸಿಕ್ಸರ್) ಈ ರಣಜಿಯಲ್ಲಿ ಮೂರನೇ ಶತಕ ದಾಖಲಿಸಿದರು. ಬೆಂಗಳೂರಿನ ಈ ಆಟಗಾರ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಶತಕ (ಔಟಾಗದೆ 130) ಹಾಗೂ ಮೈಸೂರಿನಲ್ಲಿ ನಡೆದ ವಿದರ್ಭ ವಿರುದ್ಧ ದ್ವಿಶತಕ (257) ಗಳಿಸಿದ್ದರು. ಮೂರು ಅರ್ಧಶತಕ ಸಹ ಕೆಲ ಹಾಕಿದ್ದಾರೆ.

11ನೇ ಓವರ್‌ನಲ್ಲಿ ಗೌತಮ್ ಬ್ಯಾಟಿಂಗ್‌ಗೆ ಬಂದಾಗ ಕರ್ನಾಟಕದ ಸ್ಥಿತಿ ಮುಳ್ಳಿನ ಮೇಲೆ ನಡೆದಂತಿತ್ತು. ಆರಂಭಿಕ ಜೋಡಿ ಕೆ.ಎಲ್. ರಾಹುಲ್ (4) ಹಾಗೂ ರಾಬಿನ್ ಉತ್ತಪ್ಪ (13) ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಬಿನ್ನಿ ಪಡೆಗೆ ಪೆಟ್ಟು ಕೊಟ್ಟ ಖುಷಿ ಮಹಾರಾಷ್ಟ್ರದ ಬೌಲರ್‌ಗಳ ಮೊಗದಲ್ಲಿ ನಲಿದಾಡುತ್ತಿತ್ತು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಗೌತಮ್ ಹಾಗೂ ಬಿನ್ನಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಗೌತಮ್ ಹಾಗೂ ಬಿನ್ನಿ ಬ್ಯಾಟ್‌ನಿಂದ ಬೌಂಡರಿ ಗೆರೆ ದಾಟುತ್ತಿದ್ದ ಕೆಂಪು ಚೆರ‌್ರಿ ಚೆಂಡನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಈ ಸಲದ ರಣಜಿ ಋತುವಿನ ಹಿಂದಿನ ಪಂದ್ಯಗಳಲ್ಲಿ ಗೌತಮ್ ಬ್ಯಾಟಿನಿಂದ ರನ್ ಹೊಳೆಯೇ ಹರಿದಿದೆ. ಅವರು ಎಂಟು ಪಂದ್ಯಗಳಲ್ಲಿ 12 ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿ ಒಟ್ಟು 790 (ಮಹಾರಾಷ್ಟ್ರ ವಿರುದ್ಧದ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ) ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕದ ಪರ ಈ ಋತುವಿನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 99 ರನ್ ಗಳಿಸಿದ್ದ ವೇಳೆ ಅವರು ಥರ್ಡ್‌ಮ್ಯಾನ್ ಬಳಿ ಒಂಟಿ ರನ್ ಕದಿಯುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂಬತ್ತನೇ ಶತಕ ದಾಖಲಿಸಿದರು. ನಂತರ  ಪ್ರೆಸ್‌ಬಾಕ್ಸ್‌ನತ್ತ ಬ್ಯಾಟ್ ಎತ್ತಿ ಸಂಭ್ರಮಿಸಿದರು.

ಬಿನ್ನಿ ಚೊಚ್ಚಲ ಶತಕ: ಎರಡು ಸಲ ನೂರರ ಸನಿಹ ಬಂದು ಶತಕ ತಪ್ಪಿಸಿಕೊಂಡಿದ್ದ ಸ್ಟುವರ್ಟ್ ಬಿನ್ನಿ ಈ ಸಲದ ರಣಜಿಯಲ್ಲಿ ಚೊಚ್ಚಲ ಶತಕ ಗಳಿಸಿದರು. 232 ನಿಮಿಷಗಳ ಕಾಲ ಕ್ರೀಸ್‌ಗೆ ಅಂಟಿಕೊಂಡ ನಿಂತ ಬಿನ್ನಿ 142 ಎಸೆತಗಳಲ್ಲಿ (ಬ್ಯಾಟಿಂಗ್ 115) ಗಳಿಸಿದರು. ಇದರಲ್ಲಿ 15 ಬೌಂಡರಿಗಳು ಸೇರಿವೆ.

ಕೈ ಸುಟ್ಟುಕೊಂಡ ಮಹಾರಾಷ್ಟ್ರ: ತೋಡಿದ `ಖೆಡ್ಡಾ'ಕ್ಕೆ ತಾವೇ ಬೀಳುವುದು ಅಂದರೆ, ಬಹುಶಃ ಇದೇ ಇರಬಹುದೇನೋ? ತವರು ನೆಲದಲ್ಲಿ ಕರ್ನಾಟಕವನ್ನು ಬೇಗನೆ ಕಟ್ಟಿ ಹಾಕಬೇಕು ಎನ್ನುವ ಲೆಕ್ಕಾಚಾರ ಹೊಂದಿದ್ದ ಮಹಾರಾಷ್ಟ್ರ ಕೊನೆಗೂ ತಾನೇ ತೋಡಿದ ಹಳ್ಳಕ್ಕೆ ಬಿತ್ತು. ಒಟ್ಟು ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಇದಕ್ಕೆ ಸಾಕ್ಷಿ. ಅದರಲ್ಲೂ ಶತಕ ಸಿಡಿಸಿದ ಗೌತಮ್ ಅವರ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ ದೊಡ್ಡ ಬೆಲೆಯನ್ನೇ ಕಟ್ಟಿತು.

ಮೊದಲ 11 ಓವರ್‌ಗಳಲ್ಲಿ ಎರಡು ವಿಕೆಟ್ ಪಡೆದು ಆರಂಭಿಕ ಮುನ್ನಡೆ ಸಾಧಿಸಿದ್ದ ಮಹಾರಾಷ್ಟ್ರ, 18 ರನ್ ಆಗಿದ್ದಾಗ ರಾಹುಲ್ ಮತ್ತು ರಾಬಿನ್ ಅವರನ್ನು ಔಟ್ ಮಾಡಿತು. ನಂತರ 33 ಹಾಗೂ 35ನೇ ಓವರ್‌ನಲ್ಲಿ ಕ್ರಮವಾಗಿ ಕಪೂರ್ ಮತ್ತು ಗಣೇಶ್ ಸತೀಶ್ (6)  ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಕ್ಷೇತ್ರರಕ್ಷಣೆಯಲ್ಲಿ ಮಾಡಿದ ತಪ್ಪಿಗೆ ಮಹಾರಾಷ್ಟ್ರ ದಿನಪೂರ್ತಿ ಪರದಾಡಿತು.

ಸ್ಕೋರ್ ವಿವರ : 
ಕರ್ನಾಟಕ 89 ಓವರ್‌ಗಳಲ್ಲಿ 4 ವಿಕೆಟ್‌ಗೆ 306
ಕೆ.ಎಲ್. ರಾಹುಲ್ ಸಿ ರೋಹಿತ್ ಮಟವಾನಿ ಬಿ ಸಚಿನ್ ಚೌಧರಿ  04
ರಾಬಿನ್ ಉತ್ತಪ್ಪ ಸಿ ರೋಹಿತ್ ಮಟವಾನಿ ಬಿ ಶ್ರೀಕಾಂತ್ ಮುಂಡೆ  13
ಕುನಾಲ್ ಕಪೂರ್ ಸಿ ಸಂಗ್ರಾಮ್ ಬಿ ಸತ್ಯಜಿತ್ ಬಚಾವ್  30
ಸಿ.ಎಂ. ಗೌತಮ್ ಬ್ಯಾಟಿಂಗ್  132
ಗಣೇಶ್ ಸತೀಶ್ ರನ್‌ಔಟ್ (ಪ್ರಯಾಗ್ ಭಾಟಿ-ರೋಹಿತ್ ಮಟವಾನಿ)  06
ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್  115
ಇತರೆ: (ಲೆಗ್ ಬೈ-1, ನೋ ಬಾಲ್-5)  06
ವಿಕೆಟ್ ಪತನ: 1-18 (ರಾಬಿನ್; 9.6), 2-18 (ರಾಹುಲ್; 10.2), 3-81 (ಕುನಾಲ್; 32.3),
4-91 (ಸತೀಶ್; 34.6).
ಬೌಲಿಂಗ್: ಸಮದ್ ಫಲ್ಹಾ 18-4-44-0, ಶ್ರೀಕಾಂತ್ ಮುಂಡೆ 24-4-67-1, ಸಚಿನ್ ಚೌಧರಿ 16-4-63-1, ರಾಹುಲ್ ತ್ರಿಪಾಠಿ 13-1-48-0, ಸತ್ಯಜಿತ್ ಬಚಾವೆ 15-3-65-1, ಅಂಕಿತ್ ಬಾವ್ನೆ 1-0-6-0, ಪ್ರಯಾಗ್ ಭಾಟಿ 2-0-12-0.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT