ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮತೊರೆದ ಯಜಮಾನರು, ರಸ್ತೆಯಲ್ಲಿ ಬೂಟಿನ ಸದ್ದು

Last Updated 10 ಜನವರಿ 2012, 9:35 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮದಲ್ಲಿ ಬಹುತೇಕ ಮನೆಗಳ ಬಾಗಿಲಿಗೆ ಬೀಗ. ಹೆಚ್ಚಿನ ಮನೆಗಳಲ್ಲಿ ಯಜಮಾನರು ಊರು ಬಿಟ್ಟಿದ್ದಾರೆ. ಆ ಮನೆಗಳ ಇತರ ಸದಸ್ಯರು ಸಂಬಂಧಿಕರ ಮನೆ ಸೇರಿಕೊಂಡಿರುವ ಸಂಶಯ. ಅಲ್ಲಲ್ಲಿ, ವಯೋವೃದ್ಧರು ಉಳಿದಿದ್ದಾರೆ. ಊರಿನಲ್ಲಿ ರಸ್ತೆಗಳಲ್ಲಿ ಕೇಳಿಸುವುದು ಪೊಲೀಸರ ಬೂಟಿನ ಸದ್ದು ಮಾತ್ರ.

ಮದ್ದೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಆಬಲವಾಡಿ ಸುಮಾರು 2 ಸಾವಿರ ಜನಸಂಖ್ಯೆಯ ದೊಡ್ಡ ಗ್ರಾಮ. ಒಂದು ಪ್ರೇಮ ಪ್ರಕರಣ, ನಂತರ ಕುಟುಂಬದ ಗೌರವ ರಕ್ಷಣೆಗಾಗಿ ಸವರ್ಣಿಯ ಯುವತಿಯನ್ನು ಪೋಷಕರೇ ನೇಣುಬಿಗಿದು ಸಾಯಿಸಿದರು ಎಂಬ ಮರ್ಯಾದಾ ಹತ್ಯೆ ಘಟನೆಯಿಂದ ಪುಟ್ಟ ಗ್ರಾಮ ಗಮನಸೆಳೆದಿದೆ.

ಇಡೀ ಘಟನೆಗೆ ಪೊಲೀಸರ ವೈಫಲ್ಯ, ಸಕಾಲದಲ್ಲಿ ಜಾಗೃತಗೊಳ್ಳದ ಸ್ಥಳೀಐ ಠಾಣೆ ಪೊಲೀಸರ ಧೋರಣೆ, ಪ್ರಕರಣದ ಅರಿವು ಇದ್ದೂ ಪೊಲೀಸರ ಗಮನಕ್ಕೆ ತಾರದ ಸ್ಥಳೀಯರು ನಿಲುವು ಕಾರಣ ಎಂಬುದು ಗ್ರಾಮದಲ್ಲಿ ಒಮ್ಮೆ ಸುತ್ತಾಡಿದರೆ ಮೇಲ್ನೋಟಕ್ಕೆ ಕಾಣಿಸುವ ಅಂಶ.

ಘಟನೆ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿ, ವರ್ಗದ ಆಯೋಗದ ಸದಸ್ಯ, ಮಾಜಿ ಸಂಸದ ಎಂ.ಶಿವಣ್ಣ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಠಾಣೆಯ ಅಧಿಕಾರಿ ಮುನಿಯಪ್ಪ ನೀಡಿದ ಹೇಳಿಕೆಯೂ ಪೊಲೀಸರ ವೈಫಲ್ಯವಿದೆ ಎಂಬುದಕ್ಕೆ ಸಾಕ್ಷ್ಯ ಒದಗಿಸಿತು.

`ಘಟನೆ ನಡೆದು ಎರಡು ತಿಂಗಳು ಆಗಿದೆ. ಆದರೆ, ದೂರು ಬಂದಿರಲಿಲ್ಲ. ಯುವತಿ ಶಂಕಾಸ್ಪದವಾಗಿ ಮೃತಪಟ್ಟ ಬಳಿಕ ದೊರೆತ ಮಾಹಿತಿ ಆಧರಿಸಿ ಗ್ರಾಮಕ್ಕೆ ಭೇಟಿ ನೀಡಿದ್ದೆ. ಆದರೆ, ಬರುವ ವೇಳೆಗೆ ಶವ ಸಂಸ್ಕಾರ ಆಗಿತ್ತು. ಅಂತ್ಯಕ್ರಿಯೆ ನಡೆದ ಸ್ಥಳಕ್ಕೂ ನಾನು ಭೇಟಿ ನೀಡಲಿಲ್ಲ. ದಲಿತ ಕುಟುಂಬದ ಮನೆಯ ಬಳಿ ಗಲಾಟೆ ಆಯಿತು ಎಂಬ ಹಿನ್ನೆಲೆಯಲ್ಲಿ ಅಲ್ಲಿ ಪೊಲೀಸರನ್ನು ನಿಯೋಜಿಸಿ ರಕ್ಷಣೆ ನೀಡಿದೆ~ ಎಂಬುದು ಮುನಿಯಪ್ಪ ಅವರ ಹೇಳಿಕೆ.

ಘಟನೆಯ ಕುರಿತಂತೆ ಯಾರೊಬ್ಬರೂ ದೂರು ನೀಡದಿರುವ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿಲ್ಲ. ಅಲ್ಲದೇ, ಯಾರೂ ಸಾಕ್ಷ್ಯಹೇಳಲು ಸಿದ್ಧರಿಲ್ಲ. ಈಗ ಎರಡು ದಿನಗಳ ಹಿಂದಷ್ಟೇ ದೂರು ಬಂದಿದೆ. ಅದನ್ನು ಆಧರಿಸಿ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದರು. ಇಂಥ ಪ್ರಕರಣದಲ್ಲಿ ಸ್ವಯಂ ಪ್ರೇರಿತರಾಗಿ ದೂರು ದಾಖಲು ಮಾಡ ಬಹುದಿತ್ತಲ್ಲ ಎಂಬ ಪ್ರಶ್ನೆಗೆ, `ಮಾಡಬಹುದಿತ್ತು~ ಎಂಬುದು ಅಲ್ಲಿಯೇ ಇದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ಅವರ ಪ್ರತಿಕ್ರಿಯೆ. ಮರ್ಯಾದಾ ಹತ್ಯೆಗೆ ಬಲಿಯಾದಳು ಎನ್ನಲಾದ ಯುವತಿ ಸುವರ್ಣಾ ಮನೆ, ಆಕೆಯನ್ನು ಪ್ರೇಮಿಸಿದ್ದ ದಲಿತ ಕುಟುಂಬದ ಗೋವಿಂದರಾಜ ಅವರ ಮನೆಯೂ ಸೇರಿದಂತೆ ಈಗ ಬಹುತೇಕ ಮನೆಗಳಿಗೆ ಬೀಗ ಬಿದ್ದಿದೆ.

ಗ್ರಾಮದಲ್ಲಿ ಗೋವಿಂದರಾಜನ ಎಂಬವರ ಮನೆ ಬಳಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯೊಬ್ಬರ ಬಳಿ ಶಿವಣ್ಣ ಘಟನೆಯ ವಿವರ ಕೋರಿದಾಗ, `ನನಗೇನೂ ಗೊತ್ತಿಲ್ಲ ಬುದ್ದಿ. ನಮ್ಮವರಿಗೆ ಉಸಾರಿರಲಿಲ್ಲ. ಅಲ್ಲಿಗೆ ಹೋಗಿದ್ದೆ. ಬೇರೆಯೋರ ಇಚಾರ. ನಾವು ಯ್ಯಾಕೆ ಕೇಳುಮಾ~ ಎಂದು ಪ್ರತಿಕ್ರಿಯಿಸಿದರು.

ಶಿಸ್ತು ಕ್ರಮಕ್ಕೆ ಆಗ್ರಹ
ಮಂಡ್ಯ: ಆಬಲವಾಡಿ ಪ್ರಕರಣದ ತನಿಖೆಯಲ್ಲಿ ವಿಫಲರಾದ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಸಮನ್ವಯ ವೇದಿಕೆ ಆಗ್ರಹಿಸಿದೆ.

ಘಟನೆಯ ಮಾಹಿತಿ ಇದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಈ ಘಟನೆ ಜಿಲ್ಲೆಗೆ ಕಳಂಕ ತಂದಿದೆ ಎಂದು ವೇದಿಕೆ ಮುಖಂಡರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

`ಪೊಲೀಸರು ಸ್ವಯಂ ಪ್ರೇರಿತರಾಗಿ ಮೊಕದ್ದಮೆ ದಾಖಲಿಸಿಕೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಕರ್ತವ್ಯ ಲೋಪ ತೋರಿದ ಅಧಿಕಾರಿಗಳನ್ನು ಅಮಾನತು ಪಡಿಸಬೇಕು~ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ಎಂ.ಬಿ. ಶ್ರೀನಿವಾಸ್, ವೆಂಕಟಗಿರಿಯಯ್ಯ, ಹರಳುಕುಪ್ಪೆ ದೇವರಾಜು, ಎಂ.ವಿ.ಕೃಷ್ಣ ಇತರರು ಇದ್ದರು.

ಎರಡೂ ಮನೆಗಳಿಗೆ ಬೀಗ
ಮಂಡ್ಯ: ಮರ್ಯಾದೆ ಹತ್ಯೆ ನಡೆದ ಊರಿನ ಯುವತಿ ಸುವರ್ಣಾಳ ಜೀವ ಈಗ ನಗಣ್ಯ. ಘಟನೆಗೆ ಕಾರಣವಾದ ಪ್ರೇಮ ಪ್ರಕರಣದ ಪಾತ್ರಧಾರಿಗಳಾದ ಯುವತಿ ಮತ್ತು ಯುವಕ ಇಬ್ಬರ ಮನೆಗಳಿಗೂ ಬೀಗ ಬಿದ್ದಿದೆ.

ದಲಿತ ಕುಟುಂಬಕ್ಕೆ ಸೇರಿದ ಯುವಕನ ಮನೆಯ ಬಳಿಗೆ ಭೇಟಿ ನೀಡುವ ಪ್ರಮುಖರು, ಘಟನೆಯಲ್ಲಿ ಜೀವ ಕಳೆದುಕೊಂಡ ಯುವತಿಯ ಮನೆಯತ್ತ ಸುಳಿಯುತ್ತಿಲ್ಲ. ಜಾತಿಯನ್ನು ಮೀರಿ ಹೆಚ್ಚಿನ ಕುಟುಂಬಗಳು ಊರು ಖಾಲಿ ಮಾಡಿದ್ದರೂ, ದಲಿತ ಕುಟುಂಬಗಳನ್ನು ಮತ್ತೆ ಮರಳಿ ಗ್ರಾಮಕ್ಕೆ ತರುವ ಮಾತುಗಳು ಕೇಳಿಬರುತ್ತಿವೆ.

ಸೋಮವಾರ ಗ್ರಾಮಕ್ಕೆ ಪರಿಶಿಷ್ಟ ಜಾತಿ, ವರ್ಗದ ಆಯೋಗದ ಸದಸ್ಯ ಶಿವಣ್ಣ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಇವರದೂ ಸೇರಿದಂತೆ ಅಧಿಕಾರಿಗಳ ಕಾರು, ಕಾಲು ಯುವತಿಯ ಮನೆಯತ್ತ ತೆರಳಲಿಲ್ಲ.

ಬೀಗ ಹಾಕಿದ ಯುವಕನ ಮನೆಗೆ ಭೇಟಿ ನೀಡಿದ ಬಳಿಕ ಯುವತಿಯ ಮನೆಯ ಬಳಿಗೂ ಭೇಟಿ ನೀಡುತ್ತಿರಾ ಎಂಬ ವರದಿಗಾರರ ಪ್ರಶ್ನೆಗೆ, `ಅಲ್ಯಾಕೆ ಸರ್ ಮನೆಗೆ ಬೀಗ ಹಾಕಿದೆ~ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ಹೇಳಿದರು. ಶಿವಣ್ಣ ಅವರೂ  ಹೌದಾ, ಹಾಗಿದ್ದರೆ ಬೇಡ ಬಿಡಿ~ ಎಂದು ಗ್ರಾಮ ಭೇಟಿ ನಡೆಸಿದರು. 

 ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮುನಿಯಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ವಿಚಾರಣೆ ತ್ವರಿತಗೊಳಿಸಬೇಕು. ಎರಡು ಮೂರು ದಿನ ನೋಡುತ್ತೇನೆ. ಬಳಿಕ ವಿಶೇಷ ತಂಡ ರಚನೆಗೂ ಶಿಫಾರಸು ಮಾಡುತ್ತೇನೆ. ತನಿಖೆಯ ವಿಳಂಬ ಕುರಿತಂತೆ ವೈಫಲ್ಯರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಶಿಸ್ತುಕ್ರಮ ಜರುಗಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT