ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮವಿಕಾಸದ ನಾನಾಜಿ ದೇಶಮುಖ್

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸದಲ್ಲಿ ತೊಡಗಿಸಿಕೊಂಡ ಸಂಸದ ನಾನಾಜಿ ದೇಶಮುಖ್. ಚಂಡಿಕಾ­ರಾವ್‌ ಅಮೃತ್‌ರಾವ್‌ ದೇಶಮುಖ್‌ ಇವರ ನಿಜವಾದ ಹೆಸರು. ಮಹಾರಾಷ್ಟ್ರದ ಕಡೋಲಿ­ಯಲ್ಲಿ 1916ರಲ್ಲಿ ಜನಿಸಿದ ನಾನಾಜಿ ಅವರು ಶಿಕ್ಷಣದ ನಂತರ ಸಮಾಜ ಸೇವೆಯಲ್ಲಿ ತೊಡಗಿಸಿ­ಕೊಂಡರು.

ಲೋಕಮಾನ್ಯ ತಿಲಕರ ವಿಚಾರ­ಗಳಿಂದ ಪ್ರಭಾವಿತ­­ರಾದ ನಾನಾಜಿ, ಆರೆಸ್ಸೆಸ್‌ ವೈಚಾರಿಕತೆಯತ್ತ ಆಕರ್ಷಿತ­ರಾದರು. ಜನಸಂಘದ ಆರಂಭದ ಕಾಲದಿಂದಲೂ ಅದರ ಜೊತೆಗಿದ್ದ ಇವರು ಆ ಪಕ್ಷದ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿದ್ದವರು. ಸಂಶೋಧನೆ­ಯಲ್ಲಿ ಆಸಕ್ತಿ ಇದ್ದ ಇವರು ದೆಹಲಿಯಲ್ಲಿ ದೀನದಯಾಳು ಸಂಶೋಧನ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಮದುವೆ­ಯಾಗದೆ ಉಳಿದ ನಾನಾಜಿ, ‘ರಾಷ್ಟ್ರಧರ್ಮ್’, ‘ಪಾಂಚಜನ್ಯ’ ಮತ್ತು ‘ಸ್ವದೇಶಿ’ ಪತ್ರಿಕೆಗಳು ಆರಂಭವಾದಾಗ ವಾಜಪೇಯಿ ಅದರ ಸಂಪಾದಕರಾದರು ಮತ್ತು ನಾನಾಜಿ ಮಾರ್ಗ­ದರ್ಶಕ­ರಾದರು.

1967ರಲ್ಲಿ ಉತ್ತರಪ್ರದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ರಚನೆಗೆ ಕಾರಣರಾದರು. ಚೌಧರಿ ಚರಣ ಸಿಂಗ್‌ ಮತ್ತು ಡಾ.ಲೋಹಿಯಾ ಅವರು ನಾನಾಜಿ ಅವರಿಗೆ ನಿಕಟವರ್ತಿಯಾಗಿದ್ದರು. ಅವರು ಒಮ್ಮೆ ಡಾ.ಲೋಹಿಯಾ ಅವರನ್ನು ಜನಸಂಘದ ಕಾರ್ಯ­ಕರ್ತರ ಸಮ್ಮೇಳನಕ್ಕೆ ಆಹ್ವಾನಿಸಿ­ದರು. ಅಲ್ಲಿ ಡಾ.ಲೋಹಿಯಾ ಮತ್ತು ಜನಸಂಘದ ಹಿರಿಯ ನಾಯಕ ದೀನದಯಾಳು ಉಪಾಧ್ಯಾಯ ಅವರನ್ನು ಭೇಟಿಮಾಡಿ­ಸಿದರು. ಇದರಿಂದ ಕಾಂಗ್ರೆಸ್ಸೇತರ ರಾಜಕೀಯ ಶಕ್ತಿಗಳ ಹೊಂದಾಣಿಕೆಗೆ ಮುನ್ನುಡಿ ಬರೆದಂತೆ ಆಯಿತು.

ವಿನೋಬಾ ಅವರ ಭೂದಾನ ಚಳವಳಿ ಮತ್ತು ಜೆಪಿಯವರು ಕರೆಕೊಟ್ಟ ಸಂಪೂರ್ಣ ಕ್ರಾಂತಿ ಹೋರಾಟ­ಗಳಲ್ಲಿ ಸಂಪೂರ್ಣವಾಗಿ ನಾನಾಜಿ ತಮ್ಮನ್ನು ತೊಡಗಿಸಿ­ಕೊಂಡರು.

ಇವರು ತುರ್ತು ಪರಿಸ್ಥಿತಿ ನಂತರದ  1977ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಬಲರಾಂಪುರಂ­ದಿಂದ ಆಯ್ಕೆಯಾದರು. ಜನತಾ ಪಕ್ಷ ರಚನೆ­ಯಲ್ಲಿ ಮಹತ್ವದ ಪಾತ್ರ ವಹಿಸಿದ ನಾನಾಜಿ ಅವರನ್ನು  ಸಂಪುಟ ಸೇರುವಂತೆ ಪ್ರಧಾನಿ ಮೊರಾರ್ಜಿ ದೇಸಾಯಿ ಆಹ್ವಾನಿಸಿದಾಗ ನಾನಾಜಿ ನಯವಾಗಿ ಅದನ್ನು ನಿರಾಕರಿಸಿದರು.

ಹಳ್ಳಿಗಳ ವಿಕಾಸದಲ್ಲಿ ನಂಬಿಕೆ ಇದ್ದ ಅವರು ಉತ್ತರ­ಪ್ರದೇಶದ ಚಿತ್ರಕೂಟದಲ್ಲಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯ ಸ್ಥಾಪಿಸಿ ಅದರ ಮೊದಲ ಕುಲಪತಿಯಾದರು. ಇದು ದೇಶದ ಮೊದಲ ಗ್ರಾಮೀಣ ವಿ.ವಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಕ್ಷೇತ್ರ­ಗಳಲ್ಲಿ ಕೊಡುಗೆ ನೀಡಿದ್ದು ಇವರ ವೈಶಿಷ್ಟ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT