ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರಲ್ಲಿ ಮೂಡಿದ ಭೀತಿ

ವಿದ್ಯುನ್ಮಾನ ಮತಯಂತ್ರದಿಂದ ತೊಂದರೆ !
Last Updated 26 ಏಪ್ರಿಲ್ 2013, 10:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚುನಾವಣೆ ಆಯೋಗವು ವಿಧಾನಸಭೆಗೆ ವಿದ್ಮುನ್ಮಾನ ಮತಯಂತ್ರಗಳನ್ನು ಬಳಸುತ್ತಿರುವ ಬಗ್ಗೆ ರಾಜಕೀಯ ಪರಿಣಿತರು ಶ್ಲಾಘಿಸುತ್ತಾರೆ. ಕಾಗದದ ಉಳಿತಾಯವಾಗುವುದರ ಜತೆ ಮತದಾನ ಪ್ರಕ್ರಿಯೆಯು ಸುಲಭ ಎನ್ನುತ್ತಾರೆ. ಆದರೆ ವಿದ್ಯುನ್ಮಾನ ಮತಯಂತ್ರದ ಬಳಕೆಯೆಂದರೆ, ಗ್ರಾಮೀಣ ಪ್ರದೇಶದ ಜನರು ಕೊಂಚ ಆತಂಕ ವ್ಯಕ್ತಪಡಿಸುತ್ತಾರೆ.

ಮತಗಳನ್ನು ಚಲಾಯಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮಗಳಲ್ಲಿ ದ್ವೇಷ ಮತ್ತು ವೈಮನಸ್ಸಿಗೆ ಕಾರಣವಾಗುತ್ತದೆ ಎಂದು ಅವರು ಭೀತಿ ವ್ಯಕ್ತಪಡಿಸುತ್ತಾರೆ.

ಇದಕ್ಕೆ ಗ್ರಾಮಸ್ಥರು ನೀಡುವ ಏಕೈಕ ಕಾರಣ: `ಯಾರ‌್ಯಾರ ಪರ ಮತ ಹಾಕಿದ್ದೇವೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಯಾವ ಪಕ್ಷಕ್ಕೆ ಯಾವ ಗ್ರಾಮದ ಜನರು ಹೆಚ್ಚು ಮತ ಚಲಾಯಿಸಿದ್ದಾರೆ ಎಂಬುದು ಚುನಾವಣೆ ಅಭ್ಯರ್ಥಿಗಳಿಗೆ ಗೊತ್ತಾಗಿ, ಅವರು ಆಯಾ ಗ್ರಾಮದ ಬಗ್ಗೆ ತಮ್ಮದೇ ಆದ ಧೋರಣೆ ಹೊಂದುತ್ತಾರೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯ ಪರ ಹೆಚ್ಚಿನ ಮತಗಳಿದ್ದರೆ ತೊಂದರೆಯಿಲ್ಲ, ಆದರೆ ಗೆದ್ದ ಅಭ್ಯರ್ಥಿ ಪರ ಕಡಿಮೆ ಮತಗಳು ಬಿದ್ದಿದ್ದರೆ, ಆ ಗ್ರಾಮವು ಐದು ವರ್ಷಗಳ ಕಾಲ ಅಭ್ಯರ್ಥಿಯ ಕೆಂಗಣ್ಣಿಗೆ ಗುರಿಯಾಯಿತೆಂದೇ ಅರ್ಥ' ಎನ್ನುವುದು ಗ್ರಾಮಸ್ಥರ ಮಾತು.

`ಮತದಾನದ ದಿನ ನಮ್ಮ ಅಭ್ಯರ್ಥಿಗಳ ಪರ ನಾವು ಮತ ಚಲಾಯಿಸಿಬಿಡುತ್ತೇವೆ. ಆದರೆ ಮತ ಎಣಿಕೆ ದಿನಾಂಕದಂದು ಬೂತ್ ಮಟ್ಟದಲ್ಲಿ ಮತ ಎಣಿಕೆ ಮಾಡುವಾಗ, ಆಯಾ ಗ್ರಾಮದ ಮತದಾರರು ಎಷ್ಟು ಮತ ಹಾಕಿದರು ಎಂಬುದು ಸ್ಪಷ್ಟವಾಗುತ್ತದೆ. ಅಭ್ಯರ್ಥಿ ಮತ್ತು ಅವರ ಏಜೆಂಟರು ಆಯಾ ಗ್ರಾಮದಲ್ಲಿನ ಮತಗಳ ಲೆಕ್ಕ ಇಟ್ಟುಕೊಳ್ಳುತ್ತಾರೆ. ಇತ್ತ ಗ್ರಾಮದಲ್ಲಿ ತಮ್ಮ ಪಕ್ಷಕ್ಕೆ ಹೆಚ್ಚು ಅಥವಾ ಕಡಿಮೆ ಮತ ಬಿದ್ದಿರುವ ಕುರಿತು ಗಲಾಟೆಯೇ ನಡೆದು ಹೋಗುತ್ತದೆ' ಎಂದು ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲು ಗ್ರಾ.ಪಂ.ಅಧ್ಯಕ್ಷ ಮುನಿವೆಂಕಟಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

`ಮೊದಲೆಲ್ಲ ಮತಪತ್ರಗಳನ್ನು ವಿತರಿಸಲಾಗುತಿತ್ತು. ಮತ ಎಣಿಕೆ ದಿನದಂದು ಎಲ್ಲ ಮತಗಳನ್ನು ಒಂದೆಡೆ ಸುರಿದು, ಎಣಿಕೆ ಮಾಡಲಾಗುತಿತ್ತು. ಮತಪತ್ರಗಳು ಯಾವ್ಯಾವ ಗ್ರಾಮದವು ಎಂಬುದು ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಬೂತ್ ಮಟ್ಟದಲ್ಲಿ ಅಥವಾ ಮತಗಟ್ಟೆ ಅನುಸಾರವಾಗಿ ಮತ ಎಣಿಕೆ ನಡೆಸುವುದರಿಂದ ಆಯಾ ಗ್ರಾಮದ ಮತದಾನ ಪ್ರಮಾಣ, ಮತದಾರರ ಒಲವು, ಯಾವ ಪಕ್ಷಕ್ಕೆ ಹೆಚ್ಚು ಮತ್ತು ಕಡಿಮೆ ಮತ ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ಅಭ್ಯರ್ಥಿಯು ಎಲ್ಲವನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದರೆ, ತೊಂದರೆಯಿಲ್ಲ. ಆದರೆ ಪೂರ್ವಾಗ್ರಹ ಪೀಡಿತರಾದರೆ, ದ್ವೇಷ ಮುಂದುವರಿಯುತ್ತದೆ' ಎಂದು ಅವರು ತಿಳಿಸಿದರು.

`ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಒಂದು ರೀತಿಯ ರಾಜಕೀಯಗಳು ನಡೆದರೆ, ಗ್ರಾಮೀಣ ಪ್ರದೇಶದಲ್ಲಿ ರಾಜಕೀಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆ. ಮತದಾನ ಮಾಡುವ ಮುನ್ನ ಗ್ರಾಮದ ಮುಖಂಡರು ಅಥವಾ ಪಕ್ಷದ ಮುಖಂಡರು ನಮ್ಮಿಂದ ಪ್ರಮಾಣ ಮಾಡಿಕೊಂಡಿರುತ್ತಾರೆ.

ಗ್ರಾಮದ ಜನಸಂಖ್ಯೆ ಅನುಸಾರವಾಗಿ ಗ್ರಾಮದಲ್ಲಿ ಇಷ್ಟು ಮತಗಳು ತಮ್ಮ ಪಕ್ಷಕ್ಕೆ ಬರುತ್ತವೆ ಎಂದು ಲೆಕ್ಕ ಹಾಕಿಕೊಂಡಿರುತ್ತಾರೆ. ಆದರೆ ಮತ ಎಣಿಕೆ ದಿನದಂದು ವಿದ್ಯುನ್ಮಾನ ಮತಯಂತ್ರಗಳಲ್ಲಿ ಮತ ಎಣಿಸಿದಾಗ, ಆಯಾ ಗ್ರಾಮಸ್ಥರು ಯಾರ‌್ಯಾರ ಪರ ಎಂಬುದು ಗೋಚರವಾಗುತ್ತದೆ. ಅದು ಗ್ರಾಮದಲ್ಲಿ ಹೊಸ ರೀತಿಯ ಬೆಳವಣಿಗೆಗೆ ಕಾರಣವಾಗುತ್ತದೆ' ಎಂದು ಅವರು ತಿಳಿಸಿದರು. `ವಿದ್ಯುನ್ಮಾನ ಮತಯಂತ್ರದ ಇದೊಂದು ಸಮಸ್ಯೆ ಬಿಟ್ಟರೆ, ಬೇರೇನೂ ತೊಂದರೆಯಿಲ್ಲ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT