ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರಿಂದ ರಸ್ತೆ ತಡೆ, ಪ್ರತಿಭಟನೆ

Last Updated 27 ಡಿಸೆಂಬರ್ 2012, 7:17 IST
ಅಕ್ಷರ ಗಾತ್ರ

ಕೊಯಿಲ (ಉಪ್ಪಿನಂಗಡಿ): ಉಪ್ಪಿನಂಗಡಿ - ಕಡಬ ರಸ್ತೆಯನ್ನು ಸಂಪರ್ಕಿಸುವ ಗೋಳಿತ್ತಡಿ - ಏಣಿತಡ್ಕ - ಕುದುಲೂರು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ಮರು ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿ ಕೊಯಿಲ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಗೋಳಿತ್ತಡಿ ಎಂಬಲ್ಲಿ ರಸ್ತೆ ತಡೆ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಗೋಳಿತ್ತಡಿ ಎಂಬಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಕೆಎಸ್‌ಆರ್‌ಟಿಸಿ ಬಸ್ಸು ಸೇರಿದಂತೆ ಏಣಿತಡ್ಕ, ಕುದುಳೂರು ಭಾಗದಿಂದ ಬಂದ ವಾಹನಗಳನ್ನು ತಡೆ ಹಿಡಿದು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.

ಹೋರಾಟ ಸಮಿತಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಗೌಡ ಬಾನಡ್ಕ ಮಾತನಾಡಿ, ಜಿಲ್ಲಾ ಪಂಚಾಯಿತಿ ಅಧೀನದ ಈ ರಸ್ತೆ ಸುಮಾರು 20 ವರ್ಷಗಳ ಹಿಂದೆ ಡಾಂಬರೀಕರಣಗೊಂಡಿದ್ದು, ಬಳಿಕ ದುರಸ್ತಿಯಾಗಿಲ್ಲ. ದಿನನಿತ್ಯ ಈ ರಸ್ತೆಯಲ್ಲಿ 500ಕ್ಕೂ ಅಧಿಕ ವಾಹನಗಳು ಓಡಾಟ ನಡೆಸುತ್ತಿವೆ. ಸಾವಿರಾರು ಮಂದಿ ಗ್ರಾಮಸ್ಥರು, ನೂರಾರು ಶಾಲಾ ವಿದ್ಯಾರ್ಥಿಗಳು ಓಡಾಟ ಮಾಡುತ್ತಿದ್ದಾರೆ.

ಇಂತಹ ಬಹು ಉಪಯೋಗಿ ರಸ್ತೆಯಲ್ಲಿ ಹೊಂಡ ತುಂಬಿ ಓಡಾಟಕ್ಕೆ ಯೋಗ್ಯವಾಗಿಲ್ಲ. ದುರಸ್ತಿಗಾಗಿ ಜನಪ್ರತಿನಿಧಿಗಳಿಗೆ ಮಾಡಿರುವ ಮನವಿಗೆ ಯಾರೂ ಸ್ಪಂದಿಸಿಲ್ಲ. ತಕ್ಷಣ ಡಾಂಬರೀಕರಣ ಮಾಡಬೇಕು, ತಪ್ಪಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ತಾರಕಕ್ಕೇರುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟರಾಜು ಆಗಮಿಸಿ `ಈ ರಸ್ತೆಗೆ ತೇಪೆ ಕಾಮಗಾರಿಗಾಗಿ ಜಿಲ್ಲಾ ಪಂಚಾಯಿತಿ ಸದಸ್ಯರು 3 ಲಕ್ಷ ರೂ. ಅನುದಾನ  ಮಂಜೂರುಗೊಳಿಸಿದ್ದಾರೆ. ಈ ಅನುದಾನದಲ್ಲಿ  ನಾಳೆಯಿಂದ ಕೆಲಸ ಪ್ರಾರಂಭಿಸಲಾಗುವುದು. ಅಲ್ಲದೆ ಶಾಸಕರ ನಿಧಿಯಿಂದ ರೂ. 10 ಲಕ್ಷ ಅಂದಾಜು ಪಟ್ಟಿ ಸಲ್ಲಿಸಿ ಅನುಮೋದನೆಗೆ ಕಾಯಲಾಗುತ್ತಿದೆ. ಈ ಅನುದಾನ ದೊರೆತರೆ ಕಾಮಗಾರಿಯನ್ನು ಮುಂದುವರಿಸಲಾಗುವುದು' ಎಂದು ಭರವಸೆ ನೀಡಿದರು.

ಈ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ವಾಹನ ಸಂಚಾರಕ್ಕೆ ರಸ್ತೆ ತೆರವುಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯ ನೀರಜ್ ಕುಮಾರ್, ಮಾಜಿ ಸದಸ್ಯರಾದ ಸುನೀತ್‌ರಾಜ್ ಶೆಟ್ಟಿ, ಆದಂ, ಸ್ಥಳೀಯ ಪ್ರಮುಖರಾದ ಶ್ರಿನಿವಾಸ ಪಡ್ಡಿಲಾಯ, ಫಾರೂಕ್ ಅಮೈ, ಮನೋಹರ ಸಬಳೂರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT