ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

Last Updated 8 ಸೆಪ್ಟೆಂಬರ್ 2011, 11:00 IST
ಅಕ್ಷರ ಗಾತ್ರ

ಮಡಿಕೇರಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಕೊಡಗು ಜಿಲ್ಲೆಯಾ ದ್ಯಂತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ 231 ಲಕ್ಷದ ಮೊತ್ತದ ಕಾಮಗಾರಿ ಪೂರ್ಣಗೊಂಡಿದ್ದು ಗಮನ ಸೆಳೆದಿದೆ.

ಏಪ್ರಿಲ್‌ನಿಂದ ಸೆಪ್ಟೆಂಬರ್ 7ರ ಅವಧಿಯಲ್ಲಿ ಜಿಲ್ಲೆಯ 65ರಿಂದ 70 ಗ್ರಾಮ ಪಂಚಾಯಿತಿ ಗಳಲ್ಲಿ 367 ಕಾಮಗಾರಿಗಳು ಪೂರ್ಣಗೊಂ ಡಿದ್ದು, ಬೆಂಗಳೂರು, ಮೈಸೂರು, ಬಳ್ಳಾರಿ ಜಿಲ್ಲೆಗಳಿಗಿಂತ ಉತ್ತಮ ಸಾಧನೆ ತೋರಿದೆ. ಕೃಷಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿರುವ ಜಿಲ್ಲೆಯಲ್ಲಿ ಇಷ್ಟೊಂದು ಕಾಮಗಾರಿಗಳು ನಡೆದಿರುವುದು ಗಮನಾರ್ಹವಾಗಿದೆ.

ಕಳೆದ ವರ್ಷ ಏಪ್ರಿಲ್-ಆಗಸ್ಟ್ ಅಂತ್ಯದವರೆಗೆ ಕೇವಲ ರೂ 45.60 ಲಕ್ಷ ಮೊತ್ತದಷ್ಟು ಮಾತ್ರ ಕಾಮಗಾರಿಗಳು ನಡೆದಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 35ರಷ್ಟು ಮಳೆ ಹೆಚ್ಚಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ರೂ 231 ಲಕ್ಷದ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸ ಲಾಗಿದೆ.

ಕೃಷಿ ಕಾರ್ಮಿಕರ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ ಕನಿಷ್ಠ 100 ದಿನ ಉದ್ಯೋಗ ನೀಡುವ ಮೂಲಕ ಅವರ ಜೀವನ ಮಟ್ಟ ಸುಧಾರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡ ಮಹತ್ವಾಕಾಂಕ್ಷೆಯ ಯೋಜನೆಯಾದ  ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಸಮರ್ಪಕವಾಗಿ ಕೊಡಗು ಜಿಲ್ಲೆಯಲ್ಲಿ ಅನು ಷ್ಠಾನಗೊಳ್ಳುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಕೃಷ್ಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಯೋಜನೆಯ ಅನುದಾನದಲ್ಲಿ ಶೇ 80ರಷ್ಟು ಕೇಂದ್ರ ಸರ್ಕಾರ ಭರಿಸಿದರೆ, ಇನ್ನುಳಿದ ಶೇ 20ರಷ್ಟು ಪಾಲನ್ನು ರಾಜ್ಯ ಸರ್ಕಾರ ನೀಡುತ್ತದೆ.

ಕೃಷಿ ಕಾರ್ಮಿಕರ ಸಮಸ್ಯೆ
ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಚಿಕ್ಕ ಜಿಲ್ಲೆಯಾಗಿರುವ ಕೊಡಗಿನಲ್ಲಿ ಯಾವಾಗಲೂ ಕೃಷಿ ಕಾರ್ಮಿಕ ಕೊರತೆ ಇದೆ. ಮುಖ್ಯವಾಗಿ ಕಾಫಿಯಂತಹ ವಾಣಿಜ್ಯ ಬೆಳೆ ಪ್ರಮುಖ ಬೆಳೆಯಾಗಿರುವುದರಿಂದ ಹಾಗೂ ಕಾಫಿ ತೋಟಗಳಲ್ಲಿ ಹೆಚ್ಚಿನ ಕೂಲಿ ಸಿಗುವುದರಿಂದ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ಗಳಲ್ಲಿ ತೊಡಗಿಸಿಕೊಳ್ಳಲು ಕೃಷಿ ಕಾರ್ಮಿಕರು ಹಿಂದೇಟು ಹಾಕುತ್ತಾರೆ.

ಖಾಸಗಿ ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ದಿನಕ್ಕೆ ರೂ 200 ವರೆಗೆ ಕೂಲಿ ಸಿಗುತ್ತದೆ. ಇದಲ್ಲದೇ, ಕಾಫಿ, ತಿಂಡಿ, ಊಟವೂ ಉಚಿತವಾಗಿ ದೊರೆಯುತ್ತದೆ. ಆದರೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಕೇವಲ ರೂ 125 ನೀಡ ಲಾಗುತ್ತದೆ. ಯಾವುದೇ ಊಟ-ಉಪಚಾರ ಇರುವುದಿಲ್ಲ.

ಇಂತಹ ಸ್ಥಿತಿಯಲ್ಲಿ ಅವರ ಮನವೊಲಿಸಿ, ಅಂಗನವಾಡಿ, ಶಾಲಾ ಕಟ್ಟಡ, ರಸ್ತೆ ದುರಸ್ತಿ, ರಸ್ತೆ ಪಕ್ಕ ಸಸಿಗಳನ್ನು ನೆಡುವುದು, ತಡೆಗೋಡೆ ಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದು ಸಣ್ಣ ಸಂಗತಿಯೇನಲ್ಲ ಎಂದು ಅವರು ವಿವರಿಸಿದರು.

55 ಸಾವಿರ ಕುಟುಂಬಗಳಿಗೆ ಉದ್ಯೋಗ
ಜಿಲ್ಲೆಯ ಒಟ್ಟು 5.60 ಲಕ್ಷ ಜನಸಂಖ್ಯೆಯಲ್ಲಿ ಗ್ರಾಮೀಣ ಭಾಗದಲ್ಲಿ ನೆಲೆಸಿರುವವರ ಸಂಖ್ಯೆ 4.60 ಲಕ್ಷ. ಇವರಲ್ಲಿ 55,020 ಕುಟುಂಬಗಳಿಗೆ ಈ ಯೋಜನೆಯಡಿ ಉದ್ಯೋಗ ಕಲ್ಪಿಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ ಮಾಹಿತಿ ನೀಡಿದರು.
 
ಸೋಮವಾರಪೇಟೆಯಲ್ಲಿ ಹೆಚ್ಚು

ಕೊಡಗು ಜಿಲ್ಲೆಯ ಮೂರು ತಾಲ್ಲೂಕುಗಳ ಪೈಕಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ರೂ 153.71 ಲಕ್ಷ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನುಳಿದಂತೆ ವೀರಾಜಪೇಟೆಯಲ್ಲಿ ರೂ 50.96 ಲಕ್ಷ ಹಾಗೂ ಮಡಿಕೇರಿಯಲ್ಲಿ ರೂ 27.13 ಲಕ್ಷ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ.

ಬೆಂಗಳೂರಿನಲ್ಲಿ ಕೇವಲ ರೂ 22 ಲಕ್ಷ ವೆಚ್ಚ
 ಇತರ ಜಿಲ್ಲೆಗಳಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಬಗ್ಗೆ ಗಮನಹರಿಸಿದರೆ (ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ), ಬೆಂಗಳೂರು ಜಿಲ್ಲೆಯಲ್ಲಿ ಕೇವಲ ರೂ 22 ಲಕ್ಷ, ಮೈಸೂರು ಜಿಲ್ಲೆಯಲ್ಲಿ  ರೂ 27 ಲಕ್ಷ, ರಾಮನಗರದಲ್ಲಿ ರೂ 36 ಲಕ್ಷ, ಕೋಲಾರದಲ್ಲಿ ರೂ 40 ಲಕ್ಷ, ಉಡುಪಿಯಲ್ಲಿ 57 ಲಕ್ಷ, ಚಾಮರಾಜನಗರದಲ್ಲಿ ರೂ 103 ಲಕ್ಷ, ಗದಗ ಜಿಲ್ಲೆಯಲ್ಲಿ ರೂ 110 ಲಕ್ಷ, ಬಳ್ಳಾರಿಯಲ್ಲಿ ರೂ 111 ಲಕ್ಷ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ. ಇವೆಲ್ಲ ಜಿಲ್ಲೆಗಳಿಗಿಂತ ಕೊಡಗು ಜಿಲ್ಲೆ ಸಾಕಷ್ಟು ಮುಂದೆ ಇದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ ಹೆಮ್ಮೆಯಿಂದ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT