ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗ್ರಾಮೀಣ ಭಾಗಕ್ಕೂ ಸೇವೆ ತಲುಪಲಿ'

Last Updated 6 ಡಿಸೆಂಬರ್ 2012, 19:22 IST
ಅಕ್ಷರ ಗಾತ್ರ

ಬೆಂಗಳೂರು:  `ಉತ್ತಮ ವೈದ್ಯಕೀಯ ಸೇವೆ ಗ್ರಾಮೀಣ ಪ್ರದೇಶಗಳಿಗೂ ತಲುಪಬೇಕಾದ ಅಗತ್ಯವಿದೆ' ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.

ಶೃಂಗೇರಿ ಶಾರದಾ ಪೀಠ ಮತ್ತು ರೋಟರಿ ಸಂಸ್ಥೆಯು ನಗರದಲ್ಲಿ ಈಚೆಗೆ ಆಯೋಜಿಸಿದ್ದ ಶಾರದಾ ಕಣ್ಣು ಮತ್ತು ದಂತ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಭಾರತದ ಗ್ರಾಮೀಣ ಭಾಗದಲ್ಲಿ ಬಡವರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯವನ್ನು ಕಡೆಗಣಿಸಲಾಗುತ್ತಿದೆ. ಇವರಿಗೆ ಸಮರ್ಪಕವಾದ ಚಿಕಿತ್ಸೆಗಳು ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶಗಳ ದುರ್ಬಲರಿಗೂ ಉತ್ತಮ ವೈದ್ಯಕೀಯ ಸೇವೆ ಸಿಗುವಂತಾಗಬೇಕು' ಎಂದು ಅವರು ಆಶಿಸಿದರು.

`ಬಡಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಶೃಂಗೇರಿ ಶಾರದಾ ಪೀಠ ಮತ್ತು ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ಬಡವರಿಗೆ ಉಚಿತವಾಗಿ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಈ ಸಂಸ್ಥೆಗಳ ಕಾರ್ಯ ಮಾದರಿಯಾದುದು. ದೇಶದಲ್ಲಿ ಪೋಲಿಯೊ ನಿಯಂತ್ರಣದಲ್ಲಿ ರೋಟರಿ ಸಂಸ್ಥೆಯು ಮಾಡಿರುವ ಕೆಲಸ ಮಹತ್ವದ್ದು' ಎಂದರು.

`ಜಗತ್ತಿನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಸಮಾಜ ಸೇವೆಯ ಕಾರ್ಯಕ್ಕೆ ತೊಡಗಿಸಿಕೊಂಡ ರೀತಿ ಆದರ್ಶವಾದುದು. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಕ್ರಿಶ್ಚಿಯನ್ ಮಿಷನರಿಗಳ ಕೊಡುಗೆ ಅಪಾರವಾಗಿದೆ. ಇದೇ ರೀತಿಯ ಸಮಾಜ ಸೇವಾ ಕಾರ್ಯಕ್ಕೆ ಎಲ್ಲ ಧಾರ್ಮಿಕ ಸಂಸ್ಥೆಗಳು ಮುಂದಾಗಬೇಕು' ಎಂದು ಅವರು ನುಡಿದರು.

ರೋಟರಿ 3190 ಜಿಲ್ಲೆಯ ಗವರ್ನರ್ ಆರ್.ಬದ್ರಿ ಪ್ರಸಾದ್ ಮಾತನಾಡಿ, `ಮಧುಮೇಹದ ಕಾರಣದಿಂದ ಹೆಚ್ಚಾಗುತ್ತಿರುವ ಅಂಧತ್ವವನ್ನು ತಡೆಯಲು ಶಾರದಾ ಪೀಠವು ರೋಟರಿ ಸಂಸ್ಥೆಯ ಜತೆಗೂಡಿ ಆಸ್ಪತ್ರೆಯನ್ನು ಉನ್ನತೀಕರಿಸಿದೆ. ' ಎಂದರು.

ಆಸ್ಪತ್ರೆಯ ಸಮನ್ವಯ ಅಧಿಕಾರಿ ವಿ.ಆರ್.ರಮೇಶ್ ಮಾತನಾಡಿ, `ಹತ್ತು ವರ್ಷಗಳ ಹಿಂದೆ ಶಾರದಾ ರೋಟರಿ ಆರೋಗ್ಯ ಕೇಂದ್ರದ ಹೆಸರಲ್ಲಿ ಆರಂಭಗೊಂಡ ಆಸ್ಪತ್ರೆ ಇಲ್ಲಿಯವರೆಗೆ ಸುಮಾರು 14 ಸಾವಿರ ಬಡ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದೆ. 60 ಸಾವಿರ ಬಡ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗಿದೆ' ಎಂದರು.

`ಆಸ್ಪತೆಯು ವಿಜಯಪುರ, ಪಾವಗಡ ಮತ್ತು ನಾಗಮಂಗಲಗಳಲ್ಲಿ ಶಾಖೆಗಳನ್ನು ಹೊಂದಿದೆ. ಕಳೆದ ಹತ್ತು ವರ್ಷಗಳಿಂದ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆಯನ್ನು ಒದಗಿಸುತ್ತಾ ಬರಲಾಗಿದೆ' ಎಂದು ಅವರು ಹೇಳಿದರು.

ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ
`ಶಾರದಾ ಕಣ್ಣು ಮತ್ತು ದಂತ ಚಿಕಿತ್ಸಾ ಕೇಂದ್ರವು ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆಯನ್ನು ನೀಡುವ ಉದ್ದೇಶ ಹೊಂದಿದೆ. ಬಡವರಿಗೆ ಉಚಿತವಾಗಿ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುವುದು' ಎಂದು ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್ ಹೇಳಿದರು.

ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿರುವ ಶಾರದಾ ರೋಟರಿ ಆರೋಗ್ಯ ಕೇಂದ್ರವನ್ನು ನವೀಕರಿಸಿ ಶಾರದಾ ಕಣ್ಣು ಮತ್ತು ದಂತ ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ಉನ್ನತೀಕರಿಸಲಾಗಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಮಹಡಿಯ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ರೋಟರಿ ಸಂಸ್ಥೆಯು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸಿದೆ.
ಚಿಕಿತ್ಸೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಆಸ್ಪತ್ರೆಯ ದೂರವಾಣಿ ಸಂಖ್ಯೆ 2660 2273 / 4120 4784 ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT