ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣಾಭಿವೃದ್ಧಿ ಯಲ್ಲಿ ಎಂಬಿಎ: ಉತ್ತಮ ಸ್ಪಂದನೆ

ತಿಂಗಳಿಗೊಮ್ಮೆ ಪಟ್ಟಾಂಗ: ಹಿರಿಯರೊಂದಿಗೆ ಸಂವಾದ
Last Updated 24 ಡಿಸೆಂಬರ್ 2013, 7:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ವರ್ಷದ ಕೂಸು ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕ್ರಮೇಣ ತನ್ನ ಶೈಕ್ಷಣಿಕ ಚಟುವಟಿಕೆಯನ್ನು ವಿಸ್ತರಿಸುತ್ತಾ ಸಾಗಿದ್ದು, ಹೊಸ ಬಗೆಯ ವಿಷಯಗಳ ಕಲಿಕೆಗೆ ಅವಕಾಶ ಕಲ್ಪಿಸಿದೆ. ಗ್ರಾಮೀಣ ಹಾಗೂ ಬುಡಕಟ್ಟು ನಿರ್ವಹಣೆ ವಿಷಯ­ದಲ್ಲಿ ಎಂಬಿಎ ಕಲಿಕೆಯು ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡುತ್ತಿದೆ.

   ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ­ಯಲ್ಲಿ ದೇಶದ ಮೊದಲ ಜಾನಪದ ವಿಶ್ವವಿದ್ಯಾಲಯ ಎಂಬ ಹಿರಿಮೆಯೊಂದಿಗೆ ಆರಂಭವಾಗಿದ್ದ ವಿಶ್ವವಿದ್ಯಾ­ಲಯ ಈಗ ಗ್ರಾಮೀಣ ವಿಷಯದಲ್ಲಿ ಎಂಬಿಎ ಕಲಿಕೆ ಆರಂಭಿಸಿ ಮತ್ತೊಂದು ಶ್ರೇಯ ತನ್ನದಾಗಿಸಿಕೊಂಡಿದೆ. ಕಳೆದ ಶೈಕ್ಷಣಿಕ ವರ್ಷದಿಂದ ಆರಂಭಗೊಂಡ ಈ ಕೋರ್ಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ವರ್ಷ ಒಟ್ಟು 11 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಈ ಶೈಕ್ಷಣಿಕ ವರ್ಷದಲ್ಲಿ 21 ವಿದ್ಯಾರ್ಥಿಗಳು ಕಲಿಕೆಯ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

   ಗ್ರಾಮೀಣ ವಿಷಯದಲ್ಲಿ ಎಂಬಿಎ ಕಲಿಕೆಯು ಹೊಸ ಬಗೆಯ ಪ್ರಯತ್ನ. ಎಂಬಿಎ ಎಂದರೆ ಕೇವಲ ವಾಣಿಜ್ಯ ವಿಷಯ ಎಂಬ ಭಾವ ತೊಡೆದುಹಾಕಿ, ಗ್ರಾಮೀಣ ಹಾಗೂ ಬುಡಕಟ್ಟು ಜನರ ಜನಜೀವನ, ಸ್ಥಿತಿಗತಿಯ ನಿರ್ವಹಣೆಯ ಕುರಿತು ಈ ವಿಷಯ ಬೆಳಕು ಚೆಲ್ಲಲಿದೆ.

‘ವಿಶ್ವವಿದ್ಯಾಲಯದ ಪಠ್ಯಕ್ರಮವನ್ನು ರೂಪಿಸುವ ಸಂದರ್ಭ ಜಾನಪದ ವಿಷಯದಲ್ಲಿ ಎಂಬಿಎ ಕೋರ್ಸ್‌ ಆರಂಭಕ್ಕೆ ಪ್ರಸ್ತಾವ ಬಂತು. ಅದನ್ನು ಇನ್ನಷ್ಟು ಚರ್ಚಿಸಿ ಕೋರ್ಸ್‌ ರೂಪಿಸಲಾಯಿತು’ ಎನ್ನುತ್ತಾರೆ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ.

  ‘ಸಂಪೂರ್ಣ ಗ್ರಾಮೀಣಾಭಿವೃದ್ಧಿ ವಿಷಯವನ್ನು ಈ ಕೋರ್ಸ್‌ ಒಳಗೊಂಡಿದ್ದು, ಹೆಚ್ಚು ಜನರು ಆಕರ್ಷಿತ­ರಾಗುತ್ತಿದ್ದಾರೆ. ವಿವಿಧ ವಿಷಯ ತಜ್ಞರು ವಿದ್ಯಾರ್ಥಿ­ಗಳಿಗೆ ಪಾಠ ಹೇಳಿಕೊಡಲಿದ್ದಾರೆ. ಉದ್ಯೋಗದ ದೃಷ್ಟಿಯಿಂದ ಹೆಚ್ಚಾಗಿ ಆಳವಾದ ಅಧ್ಯಯನ ಹಾಗೂ ಸಂಶೋಧನೆಗಳಿಗೆ ಈ ಶಿಕ್ಷಣ ನೆರವಾಗಲಿದೆ. ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತಿ ಸಂದರ್ಭ ಈ ಕೋರ್ಸ್‌ ಪೂರೈಸಿದವರಿಗೆ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅದಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿದೆ. ಅಂತೆಯೇ ಸರ್ಕಾರದ ವಿವಿಧ ಇಲಾಖೆಗಳಲ್ಲೂ ಗ್ರಾಮೀಣಾಭಿವೃದ್ಧಿಯಲ್ಲಿ ಎಂಬಿಎ ಪದವಿ ಪಡೆದವರಿಗೆ ಅವಕಾಶ ನೀಡುವಂತೆ ಕೋರಲಾಗಿದೆ’ ಎಂದು ಅವರು ತಿಳಿಸಿದರು. 

‘ತಿಂಗಳ ಅತಿಥಿ’ ಸಂವಾದ: ಜಾನಪದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮತ್ತೊಂದು ಕಾರ್ಯಕ್ರಮ ವಿ.ವಿ. ಅಂಗಳದಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿದೆ. ತಿಂಗಳಿಗೆ ಒಮ್ಮೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಲಾವಿದರು, ವಿಷಯ ತಜ್ಞರು ಹಾಗೂ ಸಾಹಿತಿಗಳನ್ನು ಆಹ್ವಾನಿಸಲಾಗುತ್ತಿದೆ. ಅತಿಥಿಗಳ ಜೊತೆ ಮುಕ್ತ ಸಂವಾದವೂ ನಡೆಯುತ್ತಿದೆ.

  ಈವರೆಗೆ ಇಂತಹ ಒಟ್ಟು 13 ‘ಪಟ್ಟಾಂಗ’ಗಳು ನಡೆದಿವೆ. ಜಾನಪದ ಸಂಶೋಧಕ ಡಾ. ಪಿ.ಕೆ. ರಾಜ­ಶೇಖರ, ಯಕ್ಷಗಾನ ಭಾಗವತರಾದ ವಿದ್ವಾನ್‌ ಕ.ನ. ದಾಸಾ­ಚಾರ್‌, ಜಾನಪದ ಗಾಯಕ ಅಪ್ಪಗೆರೆ ತಿಮ್ಮ­ರಾಜು, ಬುರ್ರಕಥಾ ಜಯಮ್ಮ, ಹಿಂದೂಸ್ತಾನಿ ಗಾಯಕ ಉಸ್ತಾದ್‌ ಹುಮಾಯುನ್‌ ಹರ್ಲಾಪುರ, ಬೆಳಗಲು ವೀರಣ್ಣ, ಶಿವನಗೌಡ್ರ, ಜೋಗತಿ ಮಂಜಮ್ಮ, ಕಲಾವಿದ ಸೋಮಣ್ಣ ಚಿತ್ರಗಾರ, ಜಾನಪದ ವೈದ್ಯ ಗುರುಶಾಂತಪ್ಪ ಅವರು ಈವರೆಗೆ ಈ ಅತಿಥಿ ಅಂಗಳದಲ್ಲಿ ಕಾಣಿಸಿ­ಕೊಂಡಿದ್ದಾರೆ. ಈ ಕಲಾವಿದರ ಕುರಿತಾದ ಕಿರುಹೊತ್ತಿಗೆ­ಯನ್ನು ತರುವ ಯೋಜನೆಯನ್ನು ವಿವಿ ಹೊಂದಿದೆ.

ವಿಚಾರ ಸಂಕಿರಣ 18, 19ರಂದು
 ಜಾನಪದ ವಿಶ್ವವಿದ್ಯಾಲಯದ ಅಂಗಳವು ಕಲಿಕೆಯ ಜೊತೆಗೆ ವಿಷಯಗಳ ಮಂಥನಕ್ಕೊಂದು ವೇದಿಕೆಯೂ ಆಗುತ್ತಿದೆ. ಜನವರಿ 18 ಹಾಗೂ 19ರಂದು ಅಂತ­ಹದ್ದೊಂದು ವಿಚಾರ ಸಂಕಿರಣವು ವಿಶ್ವವಿದ್ಯಾಲಯದ ಅಂಗಳದಲ್ಲಿ ನಡೆಯಲಿದೆ.

  ದಕ್ಷಿಣ ಭಾರತೀಯ ಭಾಷೆಗಳ ಸಂಘದ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಭಾಷಾ ತಜ್ಞರು, ಜಾನಪದ ತಜ್ಞರು ಪಾಲ್ಗೊಳ್ಳ­ಲಿದ್ದಾರೆ.

‘ಭಾಷೆ ಹಾಗೂ ಜಾನಪದಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಚರ್ಚೆ ನಡೆಸಿ ಅದಕ್ಕೊಂದು ಸೈದ್ಧಾಂತಿಕ ರೂಪ ನೀಡುವ ನಿಟ್ಟಿಯಲ್ಲಿ ಪ್ರಯತ್ನ ನಡೆಯಲಿದೆ’ ಎನ್ನುತ್ತಾರೆ ಕುಲಪತಿಗಳು.

  ಪ್ರತಿ ವಿಶ್ವವಿದ್ಯಾಲಯವು ಒಂದು ವರ್ಷದಲ್ಲಿ ಮೂರು ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಬೇಕಾ­ಗುತ್ತದೆ. ಹೀಗಾಗಿ ಮುಂಬರುವ ಮಾರ್ಚ್‌ನ ಒಳಗೆ ಜಾನಪದ ವಿ.ವಿ.ಯಲ್ಲೂ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT