ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೇಟ್ ಜಾಬ್ಸ್!

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸಂಗ್ರಹಿಸಿಟ್ಟ ಖಾಲಿ ಕೋಕ್ ಬಾಟಲಿಗಳನ್ನು ಹುಡುಗ ಅಂಗಡಿಗೆ ಕೊಟ್ಟು ಪುಡಿಗಾಸಿಗೆ ಕೈಯೊಡ್ಡುತ್ತಿದ್ದ. ಗೆಳೆಯನ ಮನೆಯ ನೆಲದ ಮೇಲೆ ನಿದ್ದೆ. ಅಮೆರಿಕದ ಪೋರ್ಟ್‌ಲೆಂಡ್‌ನ ರೀಡ್ ಕಾಲೇಜಿನಲ್ಲಿ ಒಂದೇ ಸೆಮಿಸ್ಟರ್ ಓದಿಗೆ ಸುಸ್ತಾದ ಹುಡುಗನಿಗೆ `ಡ್ರಾಪ್‌ಔಟ್~ ಎಂಬ ಹಣೆಪಟ್ಟಿ ಬೇರೆ.

ಹಾಗಿದ್ದೂ ತನ್ನಿಷ್ಟದ ಕ್ಯಾಲಿಗ್ರಫಿ ತರಗತಿಗೆ ಹೋಗಿ ಹಿಂದಿನ ಬೆಂಚಿನಲ್ಲೆಲ್ಲೋ ಗುಬ್ಬಚ್ಚಿಯಂತೆ ಕೂತು ಪಾಠ ಕೇಳುತ್ತಿದ್ದ. ಸ್ಥಳೀಯ ಹರೇಕೃಷ್ಣ ದೇವಸ್ಥಾನದಲ್ಲಿ ಉಚಿತವಾಗಿ ಹಂಚುತ್ತಿದ್ದ ಊಟ ಪಡೆಯಲು ಸರತಿ ಸಾಲಲ್ಲಿ ನಿಲ್ಲುತ್ತಿದ್ದವರಲ್ಲಿ ಅವನಂತೂ ಕಾಯಂ.

ಹೀಗೆ ನೆಲದ ಮೇಲೆ ಅಂಗಾತ ಮಲಗಿದ್ದ ಹುಡುಗನ ಕೈಬೀಸಿಗೆ ನಿಲುಕಿದ್ದು ನಕ್ಷತ್ರಗಳು. ಕಂಪ್ಯೂಟರ್ ಜಗತ್ತಿನ ಆಕಾಶದಲ್ಲಿ ಖುದ್ದು ತಾರೆಯೇ ಆದ ಹುಡುಗ, ಇದೀಗ ದೊಡ್ಡ ಕಂಪೆನಿಯ ಸಿಇಒ ಗದ್ದುಗೆಯಿಂದೆದ್ದು ಅಧ್ಯಕ್ಷ ಗಾದಿ ಹಿಡಿದಿದ್ದಾನೆ.

ಇನ್ನು ಏಕವಚನ ಪ್ರಯೋಗ ಸಲ್ಲದು; ಗಾದಿ ಹಿಡಿದಿದ್ದಾರೆ ಎನ್ನುವುದೇ ಸೂಕ್ತ. ಕೆಲವೇ ಮಾತಿನಲ್ಲಿ ಸ್ಟೀವನ್ ಪಾಲ್ ಜಾಬ್ಸ್ ಬದುಕನ್ನು ಹೀಗೆ ಕಟ್ಟಿಕೊಡಬಹುದೇನೋ? ಆದರೆ, ಇದು ಅವರ ಭಾವಜಗತ್ತನ್ನು ಮಾತ್ರ ಹೇಳೀತೇ ಹೊರತು ತಾಂತ್ರಿಕ ವಿಕ್ರಮದ ಕಥಾನಕಗಳನ್ನಲ್ಲ.

ತನ್ನ ಹೆಸರನ್ನೇ ತುಸು ಮೊಟಕಾಗಿಸಿಕೊಂಡು ಸ್ಟೀವ್ ಜಾಬ್ಸ್ ಎಂದೇ ವಿಶ್ವವಿಖ್ಯಾತರಾದ ವ್ಯಕ್ತಿಯ ಬದುಕಿನ ಪುಟಗಳು ಬೆರಗು ಹುಟ್ಟಿಸುವಂತಿವೆ. ಕಚ್ಚಿದ ಸೇಬಿನ ಮಾರ್ಕಿನ ಲ್ಯಾಪ್‌ಟಾಪ್‌ಗಳತ್ತ ಹದಿಹರೆಯದ ಆಸೆಗಣ್ಣು ನೆಟ್ಟಿರುವ ಈ ಹೊತ್ತಿನಲ್ಲಿ `ಆ್ಯಪಲ್~ ಎಂದರೆ `ಸೇಬು~ ಎಂದಷ್ಟೇ ಅರ್ಥವಲ್ಲ.
 
`ಕಂಪ್ಯೂಟರ್ ಲೋಕದ ಸೇಬು~ ಎಂದು ತಮಾಷೆಗೆ ಹೇಳಿದರೂ ಅದು ಗಂಭೀರವಾಗುವ ಸಾಧ್ಯತೆ ಇದೆ. ಆ್ಯಪಲ್ ಎಂಬ ಕಂಪ್ಯೂಟರ್ ಕಂಪೆನಿಯನ್ನು ಅಷ್ಟು ಉತ್ತುಂಗಕ್ಕೇರಿಸಿದ ಖ್ಯಾತಿಯಲ್ಲಿ ಹಿರಿಪಾಲು ಸ್ಟೀವ್ ಜಾಬ್ಸ್‌ಗೆ ಸಲ್ಲುತ್ತದೆ.
 
ಗೆಳೆಯರೊಡಗೂಡಿ ತಾನೇ ಕಟ್ಟಿದ ಕಂಪೆನಿಯಿಂದ ಹೊರಗಟ್ಟಿಸಿಕೊಂಡು, ಮತ್ತೆ ಏನೇನೋ ಸಾಧನೆಗಳನ್ನು ಮಾಡಿ, ಅದೇ ಕಂಪೆನಿಯ ಸಿಇಒ ಗಾದಿಗೆ ಮರಳಿ ತನ್ನ ಬೊಕ್ಕತಲೆಯನ್ನು ನವಿರಾಗಿ ನೀವಿಕೊಂಡ ಸ್ಟೀವ್ ಜಾಬ್ಸ್ ನಿಜಕ್ಕೂ ವಿಚಿತ್ರ ವ್ಯಕ್ತಿತ್ವದ ತಂತ್ರಜ್ಞಾನ ಪರಿಣತ.

ಜಾಬ್ಸ್ ಹುಟ್ಟಿದ್ದು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ; ಫೆಬ್ರುವರಿ 24, 1955ರಂದು. ತಂದೆ ಅಬ್ದುಲ್ಲಾಫತಾ ಜಂಡಾಲಿ `ಹಾಮ್ಸ~ನಲ್ಲಿ ಕಲಿತು ಮುಂದೆ ರಾಜಕೀಯ ವಿಜ್ಞಾನದ ಪ್ರೊಫೆಸರ್ ಆದರು. ತಾಯಿ ಜೋನೆ ಸಿಮ್ಸನ್ ಕಲಿತದ್ದೂ ಅಮೆರಿಕದಲ್ಲೇ. ಅವರು `ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್~ ಆಗಿ ಬದುಕು ಕಟ್ಟಿಕೊಂಡರು.

ಜನ್ಮ ನೀಡಿದ ತಂದೆ-ತಾಯಿ ಸ್ಟೀವ್ ಜಾಬ್ಸ್‌ಗೆ ಮುಖ್ಯವಾಗಲಿಲ್ಲ. ಯಾಕೆಂದರೆ, ಅವರು ಬೆಳೆದದ್ದು ಕ್ಯಾಲಿಫೋರ್ನಿಯಾದ ಮೌಂಟೆನ್ ವ್ಯೆನಲ್ಲಿ; ಪಾಲ್ ಹಾಗೂ ಕ್ಲಾರಾ ಜಾಬ್ಸ್ ಎಂಬ ದಂಪತಿಯ ನೆರಳಲ್ಲಿ. ಈ ದಂಪತಿ ಸ್ಟೀವ್ ಅವರನ್ನು ದತ್ತು ಪಡೆದಿದ್ದರು.
ಕ್ಯುಪರ್ಟಿನೋದ ಜೂನಿಯರ್ ಹೈಸ್ಕೂಲ್ ಹಾಗೂ ಹೋಮ್‌ಸ್ಟೆಡ್ ಹೈಸ್ಕೂಲ್‌ನಲ್ಲಿ ಕಲಿತ ಸ್ಟೀವ್ ಜಾಬ್ಸ್‌ಗೆ ಮೊದಲಿನಿಂದಲೂ ತಂತ್ರಜ್ಞಾನದ ಬಗ್ಗೆ ಒಲವು. ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೋದಲ್ಲಿ ಹ್ಯುಲೆಟ್-ಪ್ಯಾಕಾರ್ಡ್ (ಎಚ್‌ಪಿ) ಕಂಪೆನಿಯು ಯಾವುದೇ ಉಪನ್ಯಾಸ ಆಯೋಜಿಸಿದರೂ ಅಲ್ಲಿಗೆ ಸ್ಟೀವ್ ಸ್ವಪ್ರೇರಣೆಯಿಂದ ಹೋಗುತ್ತಿದ್ದರು.
 
ಬೇಸಿಗೆ ರಜೆಯಲ್ಲಿ ಕೆಲಸ ಕೊಡುವ ಪದ್ಧತಿ ಅಲ್ಲಿನ ಕಂಪೆನಿಗಳಲ್ಲಿ ಇದೆ. ಅಂಥದ್ದೇ ಕೆಲಸವನ್ನು `ಎಚ್‌ಪಿ~ ಕೊಟ್ಟಿತು. ಗೆಳೆಯ ಸ್ಟೀವ್ ವೊಜ್ನಿಯಾಕ್ ಜೊತೆ ಅಲ್ಲಿ ಸ್ಟೀವ್ ತನ್ನ ತಂತ್ರಜ್ಞಾನದ ಕನಸುಗಳನ್ನು ನೇವರಿಸತೊಡಗಿದರು. 1972ರಲ್ಲಿ ಹೈಸ್ಕೂಲ್ ಓದು ಮುಗಿಸಿದ ಮೇಲೆ ರೀಡ್ ಕಾಲೇಜು ಸೇರಿಕೊಂಡರು. ಒಂದು ಸೆಮಿಸ್ಟರ್ ನಂತರ ಅಲ್ಲಿಂದ ಡ್ರಾಪ್‌ಔಟ್ ಆದದ್ದು ಬದುಕಿನ ಮೊದಲ ತಿರುವು.

`ನಾನು ಡ್ರಾಪ್‌ಔಟ್ ಆಗದಿದ್ದರೆ ಮ್ಯಾಕ್‌ನಲ್ಲಿ (ಆ್ಯಪಲ್‌ನ ಕಂಪ್ಯೂಟರ್ ಉತ್ಪನ್ನ) ಬಹು ಸ್ವರೂಪದ ಅಚ್ಚುಕಟ್ಟಾದ ಅಕ್ಷರಗಳೇ (ಫಾಂಟ್ಸ್) ಈಗ ಇರುತ್ತಿರಲಿಲ್ಲ~ ಎಂಬ ಸ್ಟೀವ್ ಜಾಬ್ಸ್ ಮಾತೇ ಇದಕ್ಕೆ ಪುಷ್ಟಿ.

1974ರಲ್ಲಿ ಜಾಬ್ಸ್ ಕ್ಯಾಲಿಫೋರ್ನಿಯಾಗೆ ಮರಳಿದರು. ಅಲ್ಲಿದ್ದ ಹೋಮ್‌ಬ್ರೂ ಕಂಪ್ಯೂಟರ್ ಕ್ಲಬ್‌ನಲ್ಲಿ ಗೆಳೆಯರ ಸತ್ವಯುತ ಪಟ್ಟಾಂಗ ಮುಂದುವರಿಯಿತು.

ವೊಜ್ನಿಯಾಕ್ ಅಲ್ಲೂ ಜೊತೆಗಿದ್ದರು. ಜನಪ್ರಿಯ ವಿಡಿಯೋ ಗೇಮ್‌ಗಳನ್ನು ರೂಪಿಸುತ್ತಿದ್ದ ಅಟಾರಿ ಎಂಬ ಕಂಪೆನಿಗೆ ಜಾಬ್ಸ್ ಕೆಲಸಕ್ಕೆ ಸೇರಿದರು. ಭಾರತಕ್ಕೆ ಪ್ರವಾಸ ಹೋಗಲು ಅಗತ್ಯವಿದ್ದ ಹಣ ಸಂಗ್ರಹಿಸುವ ಏಕೈಕ ಉದ್ದೇಶದಿಂದ ಅವರು ಆ ಕೆಲಸಕ್ಕೆ ಸೇರಿದ್ದು.

ರೀಡ್ ಕಾಲೇಜಿನ ಗೆಳೆಯ ಡೇನಿಯಲ್ ಕೊಟ್ಕೆ ಎಂಬಾತನನ್ನೂ ಜೊತೆಮಾಡಿಕೊಂಡು ಭಾರತದ ಪ್ರವಾಸ ಮಾಡಿದ ಜಾಬ್ಸ್, ಕೈಂಚಿ ಆಶ್ರಮದ ನೀಮ್ ಕರೋಲಿ ಬಾಬಾ ದರ್ಶನ ಮಾಡಿದರು. ಕಾಲೇಜು ಡ್ರಾಪ್‌ಔಟ್ ಹುಡುಗ ತಲೆ ಬೋಳಿಸಿಕೊಂಡು, ಭಾರತದ ವಸ್ತ್ರ ಧರಿಸಿ ನಿಂತದ್ದು ಖುದ್ದು ಡೇನಿಯಲ್ ಕೊಟ್ಕೆಗೂ ಆಶ್ಚರ್ಯ ಉಂಟುಮಾಡಿತ್ತು.
 
ಅಧ್ಯಾತ್ಮದ ಅನ್ವೇಷಣೆಯಲ್ಲಿ ತಾವು ಭಾರತಕ್ಕೆ ಬಂದಿದ್ದಾಗಿ ಜಾಬ್ಸ್ ಕೆಲವೆಡೆ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಕೆಲವು ಪ್ರಯೋಗಗಳಿಗೂ ಒಡ್ಡಿಕೊಂಡ ಅವರ ವ್ಯಕ್ತಿತ್ವ ನಿಜಕ್ಕೂ ವಿಚಿತ್ರವಾಗಿತ್ತು ಎಂದು ಅವರ ಆಪ್ತೇಷ್ಟರೇ ಹೇಳಿದ್ದಾರೆ. `ನನ್ನ ಪ್ರತಿಸಂಸ್ಕೃತಿ ಮೂಲವನ್ನು ಹಂಚಿಕೊಳ್ಳಲಾರದವರು ನನ್ನ ಚಿಂತನೆಯನ್ನೂ ಅರ್ಥ ಮಾಡಿಕೊಳ್ಳಲಾರರು~ ಎಂದು ಆಗ ಜಾಬ್ಸ್ ನುಡಿದಿದ್ದರು.

ಭಾರತದಿಂದ ಅಮೆರಿಕಕ್ಕೆ ಮರಳಿ ಮತ್ತೆ ಅಟಾರಿ ಕಂಪೆನಿಯಲ್ಲಿ ವಿಡಿಯೋಗೇಮ್‌ಗೆ ಅಗತ್ಯವಿರುವ ಸರ್ಕಿಟ್ ಮಾಡುವ ಉಸಾಬರಿಗೆ ಸ್ಟೀವ್ ಜಾಬ್ಸ್ ಇದಿರಾದರು. ಒಂದು ಸರ್ಕಿಟ್‌ಗೆ ಅಗತ್ಯವಿದ್ದ ಪ್ರತಿ ಚಿಪ್‌ಗೆ 100 ಡಾಲರ್‌ನಂತೆ ಹಣ ಕೊಡುವುದಾಗಿ ಕಂಪೆನಿ ಆಫರ್ ಮುಂದಿಟ್ಟಿತ್ತು. ಆ ಸರ್ಕಿಟ್ ತಯಾರಿಸಲು ಜಾಬ್ಸ್‌ಗೆ ಅಷ್ಟಾಗಿ ಜ್ಞಾನ ಇರಲಿಲ್ಲ. ಗೆಳೆಯ ವೊಜ್ನಿಯಾಕ್ ಜೊತೆ ಆ ಕುರಿತು ಮಾತನಾಡಿದರು.

ಸರ್ಕಿಟ್‌ಗೆ ಅಗತ್ಯವಿದ್ದ ಚಿಪ್‌ಗಳ ಸಂಖ್ಯೆಯನ್ನು ಎಷ್ಟು ಸಾಧ್ಯವೋ ಅಷ್ಟು ತಗ್ಗಿಸಿದರೆ ಬರುವ ಹಣದಲ್ಲಿ ಒಂದಿಷ್ಟು ಪಾಲು ಕೊಡುವುದಾಗಿ `ಉಪ-ಆಫರ್~ ನೀಡಿದರು. ಸರ್ಕಿಟ್‌ಗೆ ಅಗತ್ಯವಿದ್ದ ಚಿಪ್‌ಗಳಲ್ಲಿ 50ನ್ನು ಕಡಿಮೆ ಮಾಡಿಕೊಟ್ಟ ವೊಜ್ನಿಯಾಕ್ ಗೆಳೆಯನ ಕೆಲಸವನ್ನು ಸುಲಲಿತಗೊಳಿಸಿದರು. ಆದರೆ, ಒಟ್ಟು 5000 ಡಾಲರ್ ಕೊಡುವುದಾಗಿ ಹೇಳಿದ್ದ ಕಂಪೆನಿ ಕೊಟ್ಟಿದ್ದು ಬರೀ 700 ಡಾಲರ್ ಎಂದ ಸ್ಟೀವ್, ಅದರಲ್ಲಿ ಅರ್ಧವನ್ನು ವೊಜ್ನಿಯಾಕ್‌ಗೆ ಕೊಟ್ಟರು.

ತಂತ್ರಜ್ಞಾನ ಚಿಂತನೆಯಲ್ಲಿ ಚುರುಕಾಗಿದ್ದ ಸಮಾನಮನಸ್ಕ ಗೆಳೆಯರು 1976ರಲ್ಲಿ `ಆ್ಯಪಲ್~ ಕಂಪೆನಿಯನ್ನು ಕಟ್ಟಿದರು. ಸ್ಟೀವ್ ಜಾಬ್ಸ್, ಸ್ಟೀವ್ ವೊಜ್ನಿಯಾಕ್ ಹಾಗೂ ರೊನಾಲ್ಡ್ ವೇಯ್ನ ಮೊದಲಿಗೆ ಒಟ್ಟಾದರು. ಆಮೇಲೆ ಇಂಟೆಲ್‌ನ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುತ್ತಿದ್ದ ಮ್ಯಾನೇಜರ್ ಸ್ಥಾನದಿಂದ ಅರೆ ನಿವೃತ್ತರಾದ ಮೈಕ್ ಮಾರ್ಕುಲಾ ಜೂನಿಯರ್ ಗೆಳೆಯರ ಯೋಜನೆಗೆ ಆರ್ಥಿಕ ನೆರವು ನೀಡಲು ಮುಂದೆ ಬಂದರು.
 
ಕಂಪೆನಿಯ ಹುಟ್ಟಿನಲ್ಲಿ ಪಾಲುದಾರರಾಗಿದ್ದ ವೊಜ್ನಿಯಾಕ್ `ಎಲೆಕ್ಟ್ರಾನಿಕ್ ಹ್ಯಾಕರ್~ ಕೂಡ ಆಗಿದ್ದರು. ವಯಸ್ಸಿನಲ್ಲಿ ಸ್ಟೀವ್ ಜಾಬ್ಸ್‌ಗಿಂತ ಐದು ವರ್ಷ ಹಿರಿಯರಾದ ವೊಜ್ನಿಯಾಕ್‌ಗೆ ತಾಂತ್ರಿಕ ಅನುಭವ ಚೆನ್ನಾಗೇ ಇತ್ತು. ಕಂಪ್ಯೂಟರ್ ಅಭಿವೃದ್ಧಿಪಡಿಸಿ ಮಾರುವ ಸಲಹೆಯನ್ನು ಅವರ ಕಿವಿಗೆ ಹಾಕಿದ್ದು ಜಾಬ್ಸ್.

ಕಂಪೆನಿ ಬೆಳೆಸುವ ಜಾಬ್ಸ್ ಕನಸು ಬಲುಬೇಗ ನನಸಾಯಿತು. `ನ್ಯಾಷನಲ್ ಸೆಮಿಕಂಡಕ್ಟರ್~ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮೈಕ್ ಸ್ಕಾಟ್ ಎಂಬ ಪರಿಣತನನ್ನು ಕಂಪೆನಿಯ ಸಿಇಒ ಮಾಡಿ ಜಾಬ್ಸ್ ಬೀಗಿದರು.

ಪೆಪ್ಸಿ ಕೋಲಾದಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಸ್ಕಲ್ಲಿ ಎಂಬುವರನ್ನು, `ಜೀವನವಿಡೀ ಸಕ್ಕರೆನೀರು ಮಾರಿಕೊಂಡು ಯಾಕೆ ಬದುಕುವೆ, ಜಗತ್ತನ್ನು ಬದಲಿಸೋಣ ಬಾ~ ಎಂದು ಆಮಿಷವೊಡ್ಡಿ ಕರೆತಂದದ್ದೂ ಇದೇ ಜಾಬ್ಸ್.

ಜನವರಿ 24, 1984ರಲ್ಲಿ ಆ್ಯಪಲ್ ಕಂಪೆನಿ ಷೇರುದಾರರ ವಾರ್ಷಿಕ ಸಭೆಯಲ್ಲಿ ಗದ್ಗದಿತರಾಗಿ, `ಮ್ಯಾಕಿಂತೋಷ್~ ಕಂಪ್ಯೂಟರನ್ನು ಜಾಬ್ಸ್ ಮಾರುಕಟ್ಟೆಗೆ ಪರಿಚಯಿಸಿದರು. `ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್~ ಇದ್ದ ಸಣ್ಣ ಕಂಪ್ಯೂಟರ್ `ಮ್ಯಾಕಿಂತೋಷ್~ ಜಾಬ್ಸ್ ಮೊದಲ ಕಂಪ್ಯೂಟರ್ ಕೂಸು. ಮುಂದೆ `ಮ್ಯಾಕ್~ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಮೊದಲು ಮುಂದೆ ಬಂದವರು ಜೆಫ್ ರಸ್ಕಿನ್. ಆದರೆ, ಆ ಹೊಣೆಗಾರಿಕೆ ತಂತಾನೇ ಜಾಬ್ಸ್ ಹೆಗಲಿಗೆ ಬಿತ್ತೆನ್ನಿ.

ಆ್ಯಪಲ್‌ನ ಸಿಇಒ ಆಗಿ ವರ್ಷಕ್ಕೆ ಕೇವಲ ಒಂದು ಡಾಲರ್ ಸಂಬಳ ಪಡೆದರೂ ಆ್ಯಪಲ್‌ನ ಷೇರುಗಳಲ್ಲಿ 542 ಕೋಟಿಯ ಒಡೆಯ. ಅಮೆರಿಕದ ಅತಿ ಶ್ರೀಮಂತರಲ್ಲಿ 43ನೆಯವರು. 230 ಪೇಟೆಂಟ್‌ಗಳು ಬುಟ್ಟಿಯಲ್ಲಿ. ಸ್ಪೀಕರ್ಸ್‌, ಕೀಬೋರ್ಡ್‌ಗಳು, ಪವರ್ ಅಡಾಪ್ಟರ್‌ಗಳು, ಲ್ಯಾನ್‌ಯಾರ್ಡ್‌ಗಳು ಹೀಗೆ ತರಹೇವಾರಿ ಅನ್ವೇಷಣೆಗಳಿಗೆ ಪೇಟೆಂಟ್‌ಗಳು ಸಿಕ್ಕಿವೆ.

ಲಾರೆನ್ ಪೊವೆಲ್ ಅವರನ್ನು 1991ರಲ್ಲಿ ಮದುವೆಯಾದ ಜಾಬ್ಸ್‌ಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳು. 1978ರಲ್ಲೇ ಕ್ರಿಸನ್ ಬೆನನ್ ಎಂಬ ಪೇಂಟರ್ ಜೊತೆ ಸಂಬಂಧ ಬೆಳೆಸಿ ಮಗಳೊಬ್ಬಳು ಹುಟ್ಟಿದ್ದಳು.

ಉದ್ದನೆ ಕೋಟು, ಬೆಳ್ಳಿ ಬಣ್ಣದ ಮರ್ಸಿಡೀಸ್ ಕಾರನ್ನು ಇಷ್ಟಪಡುವ ಜಾಬ್ಸ್‌ಗೆ 1984ರಲ್ಲೇ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್‌ರಿಂದ `ನ್ಯಾಷನಲ್ ಮೆಡಲ್ ಆಫ್ ಟೆಕ್ನಾಲಜಿ~ ಗೌರವ ಸಿಕ್ಕಿತ್ತು. `ಫಾರ್ಚುನ್~ ನಿಯತಕಾಲಿಕೆಯು 2009ರಲ್ಲಿ `ದಶಕದ ಸಿಇಒ~ ಎಂದು ಅವರನ್ನು ಕರೆಯಿತು. 2010ರಲ್ಲಿ `ಫೈನಾನ್ಶಿಯಲ್ ಟೈಮ್ಸ~ ಜಾಬ್ಸ್‌ಗೆ `ವರ್ಷದ ವ್ಯಕ್ತಿ~ ಪಟ್ಟ ನೀಡಿತು. 

`ಎಷ್ಟೋ ಜನ ವಿನ್ಯಾಸವೆಂದರೆ ನೋಡಲು ಚೆನ್ನಾಗಿರುವುದು ಎಂದೇ ಭಾವಿಸಿದ್ದಾರೆ. ಅದು ತಪ್ಪು. ನನ್ನ ಪ್ರಕಾರ ಬಳಕೆಗೆ ಸೂಕ್ತವಾದ, ಹೆಚ್ಚು ಕಾರ್ಯತತ್ಪರತೆ ಇರುವ ವಿನ್ಯಾಸವೇ ಶ್ರೇಷ್ಠವಾದದ್ದು~ ಎಂಬುದು ಜಾಬ್ಸ್ ನುಡಿಮುತ್ತು. ಅವರಿತ್ತ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಆ ಮುತ್ತುಗಳ ಪ್ರತಿರೂಪದಂತೆ ಕಾಣುತ್ತಿವೆ. 

 ಜಂಗಮ ಜೀವ
`ಆ್ಯಪಲ್~ನ ಸಿಇಒ ಹುದ್ದೆಯಿಂದ ಹೊರಬರುವ ಮುನ್ನ ಇಂತಿಂಥವರು ಇಂತಿಂಥ ಹುದ್ದೆಯಲ್ಲಿ ಇರಬೇಕು ಎಂದು ಷರಾ ಬರೆದಿಟ್ಟಿರುವ ಸ್ವೀವ್ ಜಾಬ್ಸ್ ಲಿಫ್ಟ್‌ಗೆ ಎದುರಾಗದೆ ಇರಲಿ ಎಂದು ಇಷ್ಟದೇವರನ್ನು ಬೇಡಿಕೊಳ್ಳುವ ನೌಕರರೇ ಹೆಚ್ಚು. ಅವರನ್ನು ಕಂಡರೆ ಸಹೋದ್ಯೋಗಿಗಳಿಗೆ ಅಷ್ಟು ಭಯ, ಗೌರವ.

ಆ್ಯಪಲ್‌ನ ಪ್ರೇರಕ ನಿರ್ದೇಶಕ ಎಂಬ ಅಗ್ಗಳಿಕೆಯ ಜೊತೆಗೇ `ಕ್ಷಣ ಚಿತ್ತ ಕ್ಷಣ ಪಿತ್ಥ~ ಎಂಬ ಸ್ವಭಾವದ ಮನುಷ್ಯ ಎಂಬ ಟೀಕೆ ಜಾಬ್ಸ್‌ಗೆ ಅಂಟಿಕೊಂಡಿತು. ಕೆಲವು ನೌಕರರಂತೂ `ಈ ಮನುಷ್ಯನ ಜೊತೆಗೆ ಕೆಲಸ ಮಾಡುವುದು ಸಾಧ್ಯವೇ ಇಲ್ಲ~ ಎಂದೆಲ್ಲಾ ಮಾತನಾಡಿದರು. ಸಕ್ಕರೆ ನೀರು ಮಾರಬೇಡ ಎಂದು ಕಿವಿಮಾತು ಹೇಳಿ ತಾವೇ ಕರೆತಂದಿದ್ದ ಸ್ಕಲ್ಲಿಗೂ ಜಾಬ್ಸ್ ಬೇಡವಾದರು.

1985ರ ಮೇ ಕೊನೆಯಲ್ಲಿ ಆಂತರಿಕ ಅಧಿಕಾರದ ಹೋರಾಟ ಶುರುವಾಗಿ ಜಾಬ್ಸ್ `ಮ್ಯಾಕಿಂತೋಷ್~ ವಿಭಾಗದ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.

ಕಂಪೆನಿಯ ಗೇಟಿನಿಂದ ಹೊರನಡೆದರೂ ಜಾಬ್ಸ್ `ಜಾಬ್‌ಲೆಸ್~ ಆಗಲೇಇಲ್ಲ. `ನೆಕ್ಸ್ಟ್ ಕಂಪ್ಯೂಟರ್~ ಎಂಬ ಇನ್ನೊಂದು ಕಂಪೆನಿ ಕಟ್ಟಿದರು. `ಪರ್ಸನಲ್ ಕಂಪ್ಯೂಟರ್~ಗೆ ಇದ್ದ ಮಿತಿಗಳನ್ನು ತೆಗೆದಂಥ ಹೊಸ ಜಮಾನದ ಕಂಪ್ಯೂಟರ್ ಸಿದ್ಧಪಡಿಸಿದರು. ಅಗಾಧ ಕೆಲಸಗಳನ್ನು ನಿರ್ವಹಿಸಬಹುದಾದ `ವರ್ಕ್‌ಸ್ಟೇಷನ್~ ಸ್ವರೂಪದ ಈ ಕಂಪ್ಯೂಟರ್‌ಗಳನ್ನು ಕ್ಷೇತ್ರ ಅಷ್ಟಾಗಿ ಒಪ್ಪಿಕೊಳ್ಳಲಿಲ್ಲ.

1993ರವರೆಗೆ ಕೇವಲ 50 ಸಾವಿರ ಕಂಪ್ಯೂಟರ್‌ಗಳಷ್ಟೇ ಮಾರಾಟಗೊಂಡಿದ್ದವು. ಆದರೆ, ಜಾಬ್ಸ್ ಮೆದುಳು ಇನ್ನಷ್ಟು ವಿಷಯಗಳನ್ನು ತುಂಬಿಕೊಂಡಿತ್ತು. ಮುಂದೆ `ನೆಕ್ಸ್ಟ್‌ಸ್ಟೆಪ್/ಇಂಟೆಲ್~ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಕಂಪೆನಿಯಾಗಿ ಅಷ್ಟೆ ಉಳಿದದ್ದು.

1986ರಲ್ಲಿ ಜಾಬ್ಸ್ ಗ್ರಾಫಿಕ್ಸ್ ಗ್ರೂಪ್ ಕಂಪೆನಿಯನ್ನು ಕೊಂಡರು. ಮುಂದೆ ಅದೇ ಪಿಕ್ಸರ್ ಎಂದು ಹೆಸರಾಯಿತು. ಲ್ಯೂಕಸ್ ಫಿಲ್ಮ್ಸ್ ಕಂಪ್ಯೂಟರ್ ಗ್ರಾಫಿಕ್ಸ್ ವಿಭಾಗದ ಒಡೆತನದ್ದಾಗಿದ್ದ ಈ ಕಂಪೆನಿಗೆ ಅವರು ಕೊಟ್ಟ ಬೆಲೆ ಒಂದು ಕೋಟಿ ಡಾಲರ್.

ಈ ಕಂಪೆನಿಯಲ್ಲಿ ಗ್ರಾಫಿಕ್‌ಗೆ ಸಂಬಂಧಿಸಿದಂತೆ ಹೊಸತನ್ನು ಹೊಸೆಯತೊಡಗಿದ ಜಾಬ್ಸ್, `ಟಾಯ್ ಸ್ಟೋರಿ~ ಎಂಬ ಚಿತ್ರವನ್ನೂ ಪಾಲುದಾರರಾಗಿ ನಿರ್ಮಿಸಿದರು. 1995ರಲ್ಲಿ ತೆರೆಕಂಡ ಈ ಚಿತ್ರಕ್ಕೆ ಉತ್ತಮ ವಿಮರ್ಶೆ ಬಂತು. ಪಿಕ್ಸಾರ್ ಕಂಪೆನಿಯ ಸೃಜನಶೀಲ ವಿಭಾಗದ ಮುಖ್ಯಸ್ಥ ಜಾನ್ ಲ್ಯಾಸೆಟರ್ ನೇತೃತ್ವದಲ್ಲಿ `ಎ ಬಗ್ಸ್ ಲೈಫ್~ (1998), `ಟಾಯ್ ಸ್ಟೋರಿ-2~ (1999), `ಮಾನ್‌ಸ್ಟರ್ಸ್‌~ (2001), `ಫೈಂಡಿಂಗ್ ನೆಮೊ~ (2003), `ದಿ ಇನ್‌ಕ್ರೆಡಿಬಲ್ಸ್~ (2004), `ಕಾರ್ಸ್‌~ (2006), `ವಾಲ್- ಎ~ (2008), `ಅಪ್~ (2009), `ಟಾಯ್ ಸ್ಟೋರಿ-3~ (2010) ಮೊದಲಾದ ಚಿತ್ರಗಳು ಮೂಡಿಬಂದವು. `ದಿ ಇನ್‌ಕ್ರೆಡಿಬಲ್ಸ್~, `ವಾಲ್- ಎ~, `ಅಪ್~ ಹಾಗೂ `ಟಾಯ್ ಸ್ಟೋರಿ- 3~ ಈ ಎಲ್ಲಾ ಚಿತ್ರಗಳಿಗೂ ಶ್ರೇಷ್ಠ ಅನಿಮೇಷನ್ ಚಿತ್ರಗಳೆಂಬ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಅಭಿವೃದ್ಧಿಯ ನಡುವೆಯೇ ಪಿಕ್ಸಾರ್ ಹಾಗೂ ಡಿಸ್ನಿ ಕಂಪೆನಿಗಳು ವಿಲೀನಗೊಂಡವು. ಅದಕ್ಕೂ ಜಾಬ್ಸ್ ಕಾಳಜಿಯೇ ಕಾರಣ.

1996ರಲ್ಲಿ ಆ್ಯಪಲ್ ಸುಮಾರು 43 ಕೋಟಿ ಡಾಲರ್ ಹಣಕ್ಕೆ `ನೆಕ್ಸ್ಟ್~ ಕಂಪೆನಿಯನ್ನು ಕೊಂಡುಕೊಳ್ಳುವುದಾಗಿ ಘೋಷಿಸಿತು. ಇದರ ಪರಿಣಾಮವೇ ತಾನು ಗೆಳೆಯರ ಜೊತೆ ಕಟ್ಟಿದ ಕಂಪೆನಿಗೆ ಜಾಬ್ಸ್ ಮರುಪ್ರವೇಶ. ಆಗ `ಡಿ ಫ್ಯಾಕ್ಟೋ ಚೀಫ್~ ಆಗಿ ಬಂದ ಜಾಬ್ಸ್ 2000ದಲ್ಲಿ `ಶಾಶ್ವತ ಸಿಇಒ~ ಆದರು. ಆದರೆ, ಮೊನ್ನೆ ಆಗಸ್ಟ್ 24ರಂದು ಆ ಸ್ಥಾನದಿಂದ ಕೆಳಗಿಳಿದು, `ಯಾವುದೂ ಶಾಶ್ವತವಲ್ಲ~ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT