ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪ್ಪರದಲ್ಲಿ ಕಾಡು ಪೀರೆ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರುಚಿ  ಹಿಡಿದವರು ಎಷ್ಟು ಕೊಟ್ಟಾದರೂ ತಂದು ಬಳಸುವ ವಿಶಿಷ್ಟ ತರಕಾರಿ ಮಡ ಹಾಗಲ. ಮಳೆಗಾಲದ ಒಂದೆರಡು ತಿಂಗಳುಗಳನ್ನು ಬಿಟ್ಟರೆ ಉಳಿದ ಎಲ್ಲಾ ಸಮಯಗಳಲ್ಲೂ ನಿರಂತರವಾಗಿ ಇದನ್ನು ಕರಾವಳಿ, ಮಲೆನಾಡು, ಚಿಕ್ಕಮಗಳೂರಿನಲ್ಲಿ ಕಾಣಬಹುದು. ಈ ಭಾಗಗಳಲ್ಲಿ ಇದು `ಕಾಡುಪೀರೆ' ಎಂದೇ ಪ್ರಸಿದ್ಧಿ.

ಕಾಡಿನಲ್ಲಿ ಸಹಜವಾಗಿ ಬೆಳೆಯುವ ಕಾಡುಪೀರೆಯನ್ನು ನಾಡಿಗೆ ತಂದು ಬೆಳೆಸುವ ಪ್ರಯತ್ನ ಈ ಹಿಂದೆಯೇ ನಡೆದಿದ್ದರೂ ಅದಕ್ಕೆ ಈಗ ಭಾರೀ ಬೇಡಿಕೆ. ಇಲ್ಲಿ ಸಿಗುವ ಕಾಡುಪೀರೆಗಿಂತ ದೊಡ್ಡ ಗಾತ್ರದ, ರುಚಿಯಲ್ಲಿ ಅಷ್ಟೇ ಸರಿಸಾಟಿಯಾದ ಸಿಕ್ಕಿಂ ಕಾಡುಪೀರೆಯನ್ನು ಚಪ್ಪರದಲ್ಲಿ ಬೆಳೆಸುವಲ್ಲಿ ಕರಾವಳಿಯ ಕೃಷಿಕರೊಬ್ಬರು ಯಶಸ್ವಿಯಾಗಿದ್ದಾರೆ. ಆಕಸ್ಮಿಕವಾಗಿ ಸ್ಥಳೀಯ ತರಕಾರಿ ಅಂಗಡಿಯಲ್ಲಿ ದೊರೆತ ಹಣ್ಣನ್ನು ತಂದು ಬೀಜ ಬಿತ್ತಿ ಚಪ್ಪರಕ್ಕೆ ಹಬ್ಬಿಸಿ ಇದರ ಕೃಷಿ ಮಾಡಿ ಅಧಿಕ ಲಾಭ ಗಳಿಸುತ್ತಿದ್ದಾರೆ ಬಂಟ್ವಾಳ ತಾಲ್ಲೂಕಿನ ಪುಣಚ ಬಳಿಯ ಮಲ್ಯ ಶಂಕರನಾರಾಯಣ ಭಟ್. ಮೂರು ವರ್ಷಗಳಿಂದ ಇದರ ಯಶಸ್ವಿ ಕೃಷಿ ಮಾಡುತ್ತಿದ್ದಾರೆ ಇವರು.

ಮಮೊರ್ಡಿಕಾ ಡಿಯೋಸಿಯೇ ಎಂಬುದು ಇದರ ವೈಜ್ಞಾನಿಕ ಹೆಸರು. ಸಮಶೀತೋಷ್ಣ ಪ್ರದೇಶದಲ್ಲಿ ಸೊಗಸಾಗಿ ಬೆಳೆಯುವ ಇದು ಕಾಡುಪೀರೆಯಲ್ಲಿಯೇ ದೊಡ್ಡ ಗಾತ್ರ. ಸಿಕ್ಕಿಂ ರಾಜ್ಯದಲ್ಲಿ ವರ್ಷವಿಡೀ ಬೆಳೆಯುವ ಬಳ್ಳಿ ತರಕಾರಿ. ನಮ್ಮ ಊರಿನ ಪೀರೆ ಇಲ್ಲವೇ ಮಡ ಹಾಗಲದ ಪ್ರತಿಯೊಂದರ ತೂಕ 40ರಿಂದ 50 ಗ್ರಾಂನಷ್ಟು ಇದ್ದರೆ, ಇದರ ತೂಕ 80ರಿಂದ 85 ಗ್ರಾಂನಷ್ಟು ಇದೆ. ಸಾಮಾನ್ಯವಾಗಿ ಹತ್ತರಿಂದ ಹನ್ನೆರಡು ಕಾಯಿಗಳಿಗೆ ಒಂದು ಕಿಲೋ ತೂಗುತ್ತದೆ.

ಸಿಕ್ಕಿಂ ಕಾಡುಪೀರೆಯನ್ನು ಬೀಜ ಬಿತ್ತಿ ಇಲ್ಲವೇ ಗಡ್ಡೆಗಳನ್ನು ನೆಟ್ಟು ಬೆಳೆಸಿಕೊಳ್ಳಬಹುದು. `ನಾನು ಮೊದಲ ಸಲ ಬೀಜ ಬಿತ್ತಿ ಬಳ್ಳಿ ಮಾಡಿಕೊಂಡೆ. ನಂತರ ಗಡ್ಡೆಗಳ ಮೂಲಕ ಹೆಚ್ಚಿನ ಬಳ್ಳಿಗಳನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಗಂಡು ಹೆಣ್ಣು ಹೂವುಗಳಿರುತ್ತವೆ. ಸಾಮಾನ್ಯವಾಗಿ ದೊಡ್ಡ ದಾಸವಾಳ ಗಾತ್ರದ ಬಿಳಿಯ ಹೂವುಗಳು. ಹೂವುಗಳನ್ನು ಕೈಯಿಂದಲೇ ಪರಾಗ ಸ್ಪರ್ಶ ಮಾಡಬೇಕು. ಇದಕ್ಕೆ ಬೆಳಗ್ಗಿನ ಹೊತ್ತೇ ಪ್ರಶಸ್ತ. ಹೂವನ್ನು ಪರಾಗ ಸ್ಪರ್ಶ ಮಾಡಿದ ಎರಡೇ ವಾರದಲ್ಲಿ ಕಾಯಿ ಕೊಯ್ಲಿಗೆ ಸಿಗುತ್ತದೆ. ಕಾಯಿ ಹಸಿರು ಬಣ್ಣದಲ್ಲಿ ಎಳೆಯದಾಗಿದ್ದಾಗಲೇ ಕೊಯ್ಯಬೇಕು.

ಬಲಿತರೆ ಬೀಜ ಬೆಳೆದು ಇಡಿಯಾಗಿ ಬಳಸಲು ತೊಂದರೆಯಾಗುತ್ತದೆ. ಎಳೆಯದಾದರೆ ಬೀಜ ಸಹಿತ ಸಣ್ಣಗೆ ಹಚ್ಚಬೇಕು. ಚಪ್ಪರದಲ್ಲಿ ಆರರಿಂದ ಏಳು ಬುಡಗಳು ಇದ್ದರೆ ಪ್ರತೀ ವಾರ ಐದಾರು ಕಿಲೋ ಇಳುವರಿ ಪಡೆಯಬಹುದು' ಎನ್ನುತ್ತಾರೆ ಭಟ್.

ಕುಂಬಳ ಮತ್ತು ಸೋರೆಕಾಯಿ ಬಳ್ಳಿಗಳಲ್ಲಿ ಕಂಡು ಬಂದಂತೆ ಪೀರೆಯಲ್ಲಿ ಒಂದೇ ಬಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಹೂವುಗಳು ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಒಂದು ಬಳ್ಳಿಯಲ್ಲಿ ಪೂರ್ಣವಾಗಿ  ಗಂಡು ಹೂವುಗಳು ಹಾಗೂ ಮತ್ತೊಂದರಲ್ಲಿ ಹೆಣ್ಣು ಹೂವುಗಳೇ ಕಾಣಿಸಿಕೊಳ್ಳುತ್ತವೆ. ಇವೆರಡೂ ಬಳ್ಳಿಗಳು ಇದ್ದರೆ ಮಾತ್ರ ಚಪ್ಪರದಲ್ಲಿ ಪರಾಗ ಸ್ಪರ್ಶ ಮಾಡಿ ಪೀರೆ ಪಡೆಯಲು ಸಾಧ್ಯ ಎಂಬುದನ್ನು ಗಮನಿಸಬೇಕು.

ಒಂದು ಸಲ ಚಪ್ಪರದಲ್ಲಿ ಹಬ್ಬಿ ಹರಡಿದ ಬಳ್ಳಿಯ ಬುಡದಲ್ಲಿ ಗಡ್ಡೆಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಅಕ್ಟೋಬರ್ ಮೂರನೆಯ ವಾರದಲ್ಲಿ ಹಳೆಯ ಚಪ್ಪರದ ಬಳ್ಳಿಗಳನ್ನು ನೆಲಮಟ್ಟದಲ್ಲಿ ಕಡಿದು ಗೊಬ್ಬರ ಕೊಟ್ಟುಬಿಟ್ಟರೆ ಮುಂದಿನ ಮೂವತ್ತು ದಿನಗಳಲ್ಲಿ ಚಪ್ಪರದಲ್ಲಿ ಬಳ್ಳಿ ಹರಡಿಕೊಂಡು ಹೂವು ಕಾಣಿಸುತ್ತದೆ. ಮೊದಲಿಗೆ ಹೆಣ್ಣು ಹೂವುಗಳು ಕಾಣಿಸುತ್ತವೆ. ನಂತರ ಹತ್ತು ದಿನಗಳಲ್ಲಿ ಗಂಡು ಹೂವುಗಳು ಕಾಣಿಸುತ್ತವೆ. ಕೆಲವು ಕಡೆಗಳಲ್ಲಿ ಬರಿಯ ಹೆಣ್ಣು ಹೂವುಗಳೇ ಕಂಡು ಬಂದ ಉದಾಹರಣೆಗಳೂ ಇವೆ. ಪೀರೆ ಹೂವು ಕಾಯಿ ಕಚ್ಚಿ ಬೆಳೆಯುವ ಸಮಯದಲ್ಲಿ ರಸ ಹೀರುವ ಕೀಟ ತೊಂದರೆ ಕೊಡುತ್ತದೆ. ಇದಕ್ಕೆ ಬೇವಿನ ಎಣ್ಣೆಯನ್ನು ಸಾಬೂನಿನ ದ್ರಾವಣದಲ್ಲಿ ಮಿಶ್ರ ಮಾಡಿ ಬಳಸಿದರೆ ಪ್ರಯೋಜನವಾಗುತ್ತದೆ.

ಮಂಗಳೂರು ಮಾರುಕಟ್ಟೆಯಲ್ಲಿ ಮಳೆಗಾಲದಿಂದ ಅಕ್ಟೋಬರ್‌ವರೆಗೂ ಕಾಡುಪೀರೆಯನ್ನು ದೂರದ ಜಾರ್ಖಂಡ್ ಇಲ್ಲವೇ ಕಲ್ಕತ್ತಾದಿಂದ ತರಿಸಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯವಾಗಿ  ಬೆಳೆಯುವ ಸಣ್ಣ ಪ್ರಮಾಣದಲ್ಲಿ ಬರುವ ಪೀರೆಯಂತೂ ಗಂಟೆಗಳ ಒಳಗೆ ಮಾರಾಟವಾಗಿ ಹೋಗುತ್ತದೆ. ಮಂಗಳೂರು ಮಾರುಕಟ್ಟೆಯಲ್ಲಿ ಪೀರೆಗೆ ಕಿಲೋ ಒಂದಕ್ಕೆ ಅರವತ್ತರಿಂದ ನೂರರವರೆಗೆ ಸಾಮಾನ್ಯವಾಗಿ ಬೆಲೆ ಇರುತ್ತದೆ. ಇನ್ನು ಅಕಾಲದಲ್ಲಿ ದೊರೆಯುವ ಪೀರೆಗಂತೂ ನೂರ ಇಪ್ಪತ್ತರವರೆಗೆ ಧಾರಣೆ ಇರುವುದೂ ಇದೆ.

ಗೌಡ ಸಾರಸ್ವತರಂತೂ ಎಷ್ಟೇ ಬೆಲೆ ಇದ್ದರೂ ಖರೀದಿಸಿ ಒಯ್ಯುತ್ತಾರೆ. ಹೀಗಿರುವಾಗ ವರ್ಷವಿಡೀ ಇಳುವರಿ ನೀಡಬಲ್ಲ ಉತ್ತಮ ಬೆಲೆಯೂ ದೊರೆಯಬಲ್ಲ ಸಿಕ್ಕಿಂ ಕಾಡುಪೀರೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಪ್ರಗತಿಪರ ಕೃಷಿಕರು  ಪ್ರಯತ್ನಿಸಬಹುದು ಎನ್ನುತ್ತಾರೆ ಶಂಕರನಾರಾಯಣ ಭಟ್. ಸಂಪರ್ಕಕ್ಕೆ- 9448953700.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT