ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆಯ ಮರುವ್ಯಾಖ್ಯಾನ ಅಗತ್ಯ

Last Updated 20 ಸೆಪ್ಟೆಂಬರ್ 2013, 10:30 IST
ಅಕ್ಷರ ಗಾತ್ರ

ಮೈಸೂರು: ತಳಸಮುದಾಯದಿಂದ ಬಂದ ನಾಯಕರ ದೌರ್ಬಲ್ಯಗಳನ್ನು ಎತ್ತಿತೋರಿಸುತ್ತಾ ಅವರನ್ನು ಖಳನಾಯಕರನ್ನಾಗಿ ಬಿಂಬಿಸುವ ಹುನ್ನಾರ ಶತಮಾನಗಳಿಂದಲೂ ನಡೆದಿದೆ. ಹೀಗಾಗಿ, ಚರಿತ್ರೆಯನ್ನು ಮರು ವ್ಯಾಖ್ಯಾನಿಸಿ ಎಳೆಯ ಮನಸುಗಳಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಸಾಹಿತಿ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಶಾಹು ಮಹಾರಾಜರ 139ನೇ ಹಾಗೂ ಡಿ. ದೇವರಾಜ ಅರಸು ಅವರ 98ನೇ ಜನ್ಮದಿನಾಚರಣೆಯ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಶೋಷಿತ ಸಮುದಾಯಗಳ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

ಜನಪರವಾಗಿ ದುಡಿದವರನ್ನು ದುಷ್ಟರಂತೆ ಚಿತ್ರಿಸಲಾಗಿದೆ. ವರ್ಣ ವ್ಯವಸ್ಥೆಯ ವಿರುದ್ಧ 12ನೇ ಶತಮಾನದಲ್ಲಿ ನಡೆದ ವಚನ ಚಳವಳಿಗೆ ಶಕ್ತಿಯಾಗಿದ್ದವರು ಬಿಜ್ಜಳ ದೊರೆ. ‘ಕಳಚೂರಿ’ ಜನಾಂಗದ ವ್ಯಕ್ತಿ ದೊರೆಯಾಗಿದ್ದ ಕಾರಣಕ್ಕೆ ಅವರನ್ನು ಚಳವಳಿಯಿಂದ ಮರೆ ಮಾಚಲಾಗಿದೆ. ಬಸವಣ್ಣ ಮತ್ತು ಬಿಜ್ಜಳರನ್ನು ಪ್ರತಿಸ್ಪರ್ಧಿಗಳಂತೆ ದಾಖಲಿಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ದಲಿತರಿಗೆ ಮೀಸಲಾತಿ ನೀಡಿದ ಶಾಹು ಮಹಾರಾಜರು ಕನ್ನಡದ ಕವಿಗಳ ಕಣ್ಣಲ್ಲಿ ಹುಚ್ಚ­ನಾಗಿ ಕಾಣಿಸುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ­ನವರಷ್ಟೇ ನಾಲ್ವಡಿ ಕೃಷ್ಣರಾಜ ಒಡೆಯರು ಶ್ರಮಿಸಿದ್ದಾರೆ. ಅರಮನೆಯ ಒಡವೆಗಳನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಅಣೆಕಟ್ಟೆಯ ನಿರ್ಮಾಣಕ್ಕ ಅಗತ್ಯವಾದ ಹಣವನ್ನು ಒದಗಿಸಿದ್ದರು. ಆದರೆ, ವಿಶ್ವೇಶ್ವರಯ್ಯನವರಿಗೆ ಸಿಕ್ಕ ಮಾನ್ಯತೆ ನಾಲ್ವಡಿ ಅವರಿಗೆ ದೊರಕಲಿಲ್ಲ. ಡಿ. ದೇವರಾಜ ಅರಸು ವಿಚಾರದಲ್ಲೂ ಇದನ್ನೇ ಮಾಡಲಾಗಿದೆ. ಭ್ರಷ್ಟ ಮುಖ್ಯಮಂತ್ರಿ ಎಂದು ಎಲ್ಲ ಮಾಧ್ಯಮಗಳು ಪುಂಖಾನುಪುಂಖವಾಗಿ ಬರೆದವು. ಭೂಮಿತಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಅರಸು ಅವರು ನೀಡಿದ ಭೂಮಿಯನ್ನು ಬಡವರಿಂದ ಕಿತ್ತುಕೊಳ್ಳಲಾಗುತ್ತಿದೆ. ಅರಸು ಅವರು, ಪ್ರಜಾಪ್ರಭುತ್ವದಲ್ಲಿ ಅನಿವಾರ್ಯವಾಗಿ ಮಾಡಬೇಕಾದ ಅಧಿಕಾರ ರಾಜಕಾರಣ ಮಾಡಿದರೆ ಹೊರತು ಸ್ವಿಸ್‌ ಬ್ಯಾಂಕ್‌ನಲ್ಲಿ ಹಣ ಇಡಲು ರಾಜ್ಯ ಕೊಳ್ಳೆ ಹೊಡೆಯಲಿಲ್ಲ ಎಂದರು.

ದಲಿತರನ್ನು ಭೌದ್ಧಿಕ ಗುಲಾಮಗಿರಿಗೆ ತಳ್ಳಲಾಗಿದೆ. ಮೌಢ್ಯಗಳನ್ನು ಬಿತ್ತಿ ಅದನ್ನೇ ಸಂಸ್ಕೃತಿ ಎಂದು ಬಿಂಬಿಸಲಾಗುತ್ತಿದೆ. ಸಮಾನ ಶಿಕ್ಷಣ ಜಾರಿಯಾದ ಈ ಕಾಲದಲ್ಲೂ ಶಿಕ್ಷಣದಿಂದ ದಲಿತರನ್ನು ವಂಚಿಸಲಾಗುತ್ತಿದೆ. ದಲಿತ ರಾಜಕಾರಣಿ­ಗಳು ಪಕ್ಷಗಳಿಗೆ ದಾಳಗಳಾಗಿ ಬಳಕೆಯಾಗುವ ತನಕ ಶೋಷಿತ ಸಮುದಾಯ­ಗಳು ಅಭಿವೃದ್ಧಿಯಾಗುವುದಿಲ್ಲ. ದಲಿತ ರಾಜಕಾರಣಿ­­ಗಳಲ್ಲಿ ತಾತ್ವಿಕ ಬದ್ಧತೆ ಇಲ್ಲದಿರುವು­ದ­­ರಿಂದ ಜಾತಿ ರಾಜಕಾರಣ ಹೆಚ್ಚಾಗುತ್ತಿದೆ. ದೇಶದಲ್ಲಿ ಗಂಡಾಂತರ ಸನ್ನಿವೇಶ ನಿರ್ಮಾಣ­ವಾಗಿದ್ದು, ಕೋಮುವಾದಿ ಶಕ್ತಿ ವಿಜೃಂಬಿಸುತ್ತಿದೆ. ಕೋಮುವಾದಿಗಳು ಬಿಂಬಿಸುತ್ತಿರುವ ದೇಶದ ನಾಯಕ ಕೇವಲ ಬೆದರು ಗೊಂಬೆ ಎಂಬ ಅರಿವನ್ನು ಮೂಡಿಸಬೇಕು ಎಂದರು.

ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಮಾತನಾಡಿ, ಶೋಷಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ರಾಜಕೀಯ ಜ್ಞಾನ ಮೂಡಿಸಿಕೊಳ್ಳಬೇಕು.  ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಶಿಕ್ಷಣ ಕೂಡ ಗಗನಕುಸುಮ­ವಾಗುತ್ತಿದೆ.  ದುಡಿಯುವ ವರ್ಗವನ್ನು ರಕ್ಷಣೆ ಮಾಡುವ ಆರ್ಥಿಕ ನೀತಿ ಬೇಕು ಎಂದರು.

ಗರ್ಭಕೋಶದ ಸಮಸ್ಯೆಯಿಂದ ಮಧ್ಯವಯಸ್ಸಿನ ಮಹಿಳೆಯರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇವರ ಮರಣಕ್ಕೆ ಯಾರನ್ನೂ ಹೊಣೆ ಮಾಡಲು ಸಾಧ್ಯವಿಲ್ಲ. ಇವು ವ್ಯವಸ್ಥೆಯ ಪ್ರಾಯೋಜಿತ ಹತ್ಯೆಗಳು. ಹೀಗಾಗಿ, ರಾಜ್ಯ ಸರ್ಕಾರ ವಿಶೇಷ ಆರೋಗ್ಯ ಕಾರ್ಡ್‌ ನೀಡಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

ರಾಜ್ಯ ಸಂಚಾಲಕ ರುದ್ರಪ್ಪ ಹನಗವಾಡಿ, ಬಸವರಾಜ ದೇವನೂರ, ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿಹಳ್ಳಿ, ಮಾಜಿ ಮೇಯರ್‌ ಪುರುಷೋತ್ತಮ್‌, ಪ್ರಕಾಶ್‌ ಬ್ಯಾಡರಹಳ್ಳಿ, ಸುಂದರ್‌ ಮಾಸ್ತರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT