ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲಿಸುವ ಚಿತ್ರಶಾಲೆ

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು – ಕಾರವಾರ ರೈಲು ಸಂಚಾರ ಪ್ರಯಾಣಿಕರ ಪಾಲಿಗೆ ಅದ್ಭುತ ಅನುಭವಗಳ ಬುತ್ತಿ. ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ, ಶುಕ್ರವಾರ) ರೈಲು ಬೆಂಗಳೂರಿನಿಂದ ಕಾರವಾರಕ್ಕೆ ಸಂಚರಿಸುತ್ತದೆ.

ಮಾಮೂಲು ಅನುಭವದಂತೆ ಕಾಣುವ ಈ ರೈಲು ಪಯಣ, ಸಕಲೇಶಪುರದ ಸಮೀಪದಲ್ಲಿ ಹಸಿರು ಕಸಿ ಮಾಡಿಕೊಂಡು ತನ್ನ ಸ್ವರೂಪವನ್ನೇ ಬದಲಿಸಿಕೊಂಡುಬಿಡುತ್ತದೆ. ಆವರೆಗೆ ಮಾತುಕತೆಯಲ್ಲಿ, ತೂಕಡಿಕೆಯಲ್ಲಿ ತೊಡಗಿದ್ದ ಪ್ರಯಾಣಿಕರು ಸಕಲೇಶಪುರದಿಂದ ಮುಂದಕ್ಕೆ ಕಿಟಕಿಗಳಿಗೆ, ಬಾಗಿಲುಗಳಿಗೆ ಅಂಟಿಕೊಂಡು ಬಿಡುತ್ತಾರೆ.

ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣಗಳ ನಡುವಣ 52 ಕಿ.ಮೀ.ಗಳ ಹಸಿರ ಹಾದಿ ನೋಡುಗರನ್ನು ಪರವಶಗೊಳಿಸುವಂತಹದು. ನೋಡುಗರ ರಸಾಸ್ವಾದನೆಗೆ ಅನುವಾಗಲೆಂದೋ ಅಥವಾ ರೈಲು ಕೂಡ ಹಸಿರ ವೀಕ್ಷಣೆಯಲ್ಲಿ ಮೈಮರೆಯುತ್ತದೆಯೋ ಅದರ ವೇಗ ಕೂಡ ಕಡಿಮೆಯಾಗುತ್ತದೆ.

ಕೆಲವೆಡೆಯಂತೂ ಪ್ರಯಾಣಿಕರು ಇಳಿದು ತಮಗೆ ಬೇಕಾದ ಫೋಟೊ ಕ್ಲಿಕ್ಕಿಸಿಕೊಂಡು ಮತ್ತೆ ಹತ್ತಬಹುದಾದಷ್ಟು ಉಗಿಬಂಡಿಯ ವೇಗ ಮಂದವಾಗಿರುತ್ತದೆ. ಈ ಕಡುಚೆಲುವಿನ ಹಾದಿಯಲ್ಲಿ 109 ಸೇತುವೆಗಳು ಹಾಗೂ 58 ಸುರಂಗಗಳನ್ನು ರೈಲು ಕ್ರಮಿಸುತ್ತದೆ. ಸುರಂಗದ ಕತ್ತಲೆಯನ್ನು ಹೊಡೆದೋಡಿಸುವಂತೆ ರೈಲಿನೊಳಗಣ ಉತ್ಸಾಹಿಗಳು ಕೇಕೆ, ಸಿಳ್ಳೆ ಹಾಕುತ್ತಾರೆ. ಕತ್ತಲೆ–ಬೆಳಕಿನ ಕಣ್ಣಾಮುಚ್ಚಾಲೆ ಮನಸ್ಸುಗಳ ಜೊತೆಗೆ ಕ್ಯಾಮೆರಾಗಳಲ್ಲೂ ಸೆರೆಯಾಗುತ್ತದೆ.

ವಿಶಾಲ ಹಸಿರ ಭಿತ್ತಿಯಲ್ಲಿ ಬೆಳ್ಳಿಗೆರೆಗಳಂತೆ ಮೂಡಿರುವ ಜಲಧಾರೆಗಳದು ಬೇರೆಯದೇ ಸೊಗಸು. ದಾರಿಯುದ್ದಕ್ಕೆ ಇಪ್ಪತ್ತೈದಕ್ಕೂ ಹೆಚ್ಚು ಕಿರು ಜಲಪಾತಗಳು ಗೋಚರಿಸುತ್ತವೆ. ಈಗ ಮಳೆಗಾಲ ಚಾಲ್ತಿಯಲ್ಲಿದೆ. ಎಂದೂ ಹಳತಾಗದಂತೆ ಕಾಣಿಸುವ ಈ ಚೆಲುವಿನ ಹಾದಿ ಮೈತೊಳೆದುಕೊಂಡು ಮತ್ತಷ್ಟು ಚೆಲುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT