ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಎಲೆಸಾಲು

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಚಳಿಗಾಲದ ಎಲೆ ಸಾಲು~ ಎಸ್.ಕುಮಾರ್ ಅವರ ಮೊದಲ ಕವನ ಸಂಕಲನ. ಅವರ ಕವಿತೆಗಳ ಕೆಲವು ತುಣುಕುಗಳನ್ನು ನೋಡಿ:

ಕಾಫಿ ಡೇ ಎದುರು
ಚಹಾ ಮಾರುವ
ಹುಡುಗನಿಗೆ ಕಂಡಿದ್ದು
ಶಾಪಿಂಗ್ ಮಾಲ್
ಹುಡುಗಿಯರ ಸೊಂಟ,
ತನ್ನೂರ ಹುಡುಗಿಯರ
ಕೊಡಪಾನದ ನೆನಪು...
***
ಕ್ಷಮಿಸುವ ಭಗವಂತನ
ಕೈಯೂ ರಕ್ತವಾಗಿದೆ
ಅವನಿಗೂ ಕಾಡುತ್ತಿರಬಹುದು ಪಾಪಪ್ರಜ್ಞೆ
***
ಕೈ ಸುಡುತ್ತಿರುವ ಚಹಾ, ಬಾಯಿ ತುಂಬ 
ಹೊಗೆ
ಜತೆಗೆ ನೀನಿದ್ದಿದ್ದರೆ ಒಂದಿಷ್ಟು ತುಂಟತನದ
ನಗೆ
ಕನಸುಗಳೇ ತುಂಬಿವೆ; ಕಣ್ಣ ಹನಿ ಕರಗಿಲ್ಲ
ಮಳೆ ಬರುತ್ತಲೇ ಇದೆ, ಇನ್ನೂ ನಿಂತಿಲ್ಲ
***
ಮಳೆ ನಿಂತ ಮೇಲೆ ಎಲೆ ಅಲುಗಿದರೆ
ನೀನು ಕೆನ್ನೆ ಮೇಲಿಟ್ಟ ಹನಿಗಳ ಸಾಲು
ಜೋಪಾನ ಎನ್ನುವಷ್ಟು ಹೊತ್ತಿಗೆ ಹಾರಿ
ಹೋಗಿವೆ
ಎಲೆಗಳು ಮತ್ತೆ ಹಸಿಯಾಗಲು ಸಿದ್ಧವಾಗಿವೆ.
***
ಅವಳು,
ಚಪ್ಪಲಿ ಗೂಡಿಗೆ ಬೀಸಿ
ಮಕ್ಕಳಿಗೆ ತಂದ ತಿಂಡಿ
ತುಂಬಿದ ಬ್ಯಾಗ್, ವ್ಯಾನಿಟಿ
ಟೇಬಲ್ಲಿಗೆಸೆದು
ಸೆರಗು ಸೊಂಟಕ್ಕೆ ಸಿಕ್ಕಿಸಿ
ಉಸ್ಸಪ್ಪ ಎಂದು ಸೋಫಕ್ಕೊರಗಿದಳು;
ಮುಡಿಯಲ್ಲಿ ಬಾಡಿದ
ಮಲ್ಲೆ ಹೂವನು ತೆಗೆದು ಎಸೆದಳು.
***
ಅವಳ
ಕೆಂಗುಲಾಬಿ ಬಾಯಿ
ಅವನ ಜೀವದ ಮೇಲೆ
ಚಿತ್ರ ಬರೆಯಿತು.
***

ಮಾಲ್ ಎದುರು ಧುತ್ತನೆ ನೆನಪಾಗುವ ಊರು, ಪಾಪಭೀತಿಯ ದೇವರು, ಮಳೆಯ ಪಸೆ, ಪ್ರೇಮದ ನಶೆ, ದೈನಿಕದ ತುಣುಕೊಂದರ ತಲ್ಲಣ- ಹೀಗೆ ವಿವಿಧ ಭಾವಗಳನ್ನು ಕಟ್ಟಿಕೊಡುವ ಮೇಲಿನ ತುಣುಕುಗಳು ತಮ್ಮಷ್ಟಕ್ಕೆ ತಾವೇ ಆಕರ್ಷಕವಾಗಿವೆ. ಚೊಚ್ಚಿಲ ಸಂಕಲನದ ಪುಳಕದಲ್ಲಿರುವ ಕುಮಾರ್ ಭರವಸೆಯ ಕವಿ ಎನ್ನುವುದಕ್ಕೂ ಈ ತುಣುಕುಗಳು ಸಾಕ್ಷಿ ನುಡಿಯುವಂತಿವೆ.

ಚಳಿಗಾಲದ ಎಲೆ ಸಾಲಿನ ಕವಿ ಆರಿಸಿಕೊಂಡಿರುವ ಕಾವ್ಯದ ದಾರಿ ಸರಳವಾಗಿದೆ. ಪ್ರೇಮದ ಅಭಿವ್ಯಕ್ತಿಗೆ, ಕಾವ್ಯದ ಕುರಿತ ಆಕರ್ಷಣೆಗೆ, ತವಕತಲ್ಲಣಗಳ ಒಳಗುದಿಯ ದಾಖಲಾತಿಗೆ ಕಾವ್ಯವನ್ನು ಕವಿ ನೆಚ್ಚಿಕೊಂಡಂತಿದೆ. ಈ ಮೊದಲ ಪಯಣದ ಹೆಜ್ಜೆಗಳಲ್ಲಿ ಆತ್ಮವಿಶ್ವಾಸವೂ ಇದೆ.

ಬಿಗಿಶಿಲ್ಪ, ಬಿಡಿಬಿಡಿ ಸಾಲುಗಳಲ್ಲಿ ಇಣುಕುವ ಕಾವ್ಯಸೌಂದರ್ಯವನ್ನು ಇಡೀ ರಚನೆಯ ಶಿಲ್ಪಕ್ಕೆ ವಿಸ್ತರಿಸುವ ಮಾಂತ್ರಿಕ ಶಕ್ತಿಯನ್ನು ಕುಮಾರ್ ತಮ್ಮ ಪಯಣದ ನಾಳೆಗಳಲ್ಲಿ ದಕ್ಕಿಸಿಕೊಳ್ಳಬೇಕಾಗಿದೆ. ಮಾತಿಗೆ ಮೈಸೋತು ನಿಂತಲ್ಲೇ ನಿಲ್ಲದೆ ಪಯಣಕ್ಕೊಂದು ಹದ ಕಲ್ಪಿಸಿಕೊಳ್ಳಬೇಕಿದೆ.

ಚಳಿಯ ಮಾತಾಯಿತು. ಮಳೆ, ಬಿಸಿಲೂ ಜೊತೆಗೂಡಿದರೆ ಕಾವ್ಯಚಕ್ರ ಇನ್ನಷ್ಟು ಕಳೆಗಟ್ಟೀತು.

ಚಳಿಗಾಲದ ಎಲೆಸಾಲು
ಲೇ: ಕುಮಾರ್ ಎಸ್.
ಪು: 96; ಬೆ: ರೂ. 60
ಪ್ರ: ಅಹರ್ನಿಶಿ ಪ್ರಕಾಶನ, ಜ್ಯೋತಿರಾವ್ ಬೀದಿ, 4ನೇ ತಿರುವು, ವಿದ್ಯಾನಗರ, ಶಿವಮೊಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT