ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ ತಾಲ್ಲೂಕು ಕಚೇರಿ ಮುಂಭಾಗ ರೈತರ ಧರಣಿ

Last Updated 27 ಸೆಪ್ಟೆಂಬರ್ 2011, 9:05 IST
ಅಕ್ಷರ ಗಾತ್ರ

ಚಳ್ಳಕೆರೆ: ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಆಗದ ಕಾರಣ ಜನರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡದೇ ಆತಂಕದಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಜನ-ಜಾನುವಾರುಗಳ ಸಮೇತ ಗುಳೇ ಹೋಗುವ ಪರಿಸ್ಥಿತಿ ಇರುವುದರಿಂದ ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂಬುದಾಗಿ  ಘೋಷಿಸಬೇಕು ಎಂದು ಜಿಲ್ಲಾ ರೈತ ಸಂಘದ ಮುಖಂಡ ಕೆ.ಪಿ. ಭೂತಯ್ಯ ಒತ್ತಾಯಿಸಿದರು.

ಶಾಶ್ವತ ಬರಪೀಡಿತ ಜಿಲ್ಲೆಗೆ ಒತ್ತಾಯಿಸಿ ಸೋಮವಾರ ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ತಾಲ್ಲೂಕಿನಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಿದ್ದ ವಾಣಿಜ್ಯ ಬೆಳೆಯಾದ ಶೇಂಗಾ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಾಗದೇ ರೈತರು ಕಂಗಾಲಾಗಿದ್ದಾರೆ. ಕಳೆದ 10ವರ್ಷಗಳಿಂದಲೂ ಮಳೆ ಕಡಿಮೆಯಾಗಿರುವುದರಿಂದ ಬೆಳೆ ನಷ್ಟ ಅನುಭವಿಸುವಂತಾಗಿದೆ. ಅದ್ದರಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಲ್ಲೆಗೆ ವಿಶೇಷ ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿದರು.

ಮಳೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಈಗಾಗಲೇ ಬೆಳೆಯನ್ನು ನಂಬಿಕೊಂಡು ಮಾಡಿರುವ ಕೃಷಿ, ಬ್ಯಾಂಕ್ ಸಾಲಮನ್ನಾ ಮಾಡಬೇಕು ಹಾಗೂ ಜಾನುವಾರುಗಳಿಗೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮೇವು ಒದಗಿಸಬೇಕು ಎಂದರು.

ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ರೈತರು ಪಂಪ್‌ಸೆಟ್ ಆಶ್ರಯದಲ್ಲಿ ಬೆಳೆದ ಮೆಕ್ಕೆಜೋಳ ಮಾರಾಟ ಮಾಡಲು ಚಿತ್ರದುರ್ಗದ ಮಾರುಕಟ್ಟೆಗೆ ಹೋಗಬೇಕು. ಇದರಿಂದಾಗಿ ಈ ಭಾಗದ ರೈತರಿಗೆ ಸಾರಿಗೆ ವೆಚ್ಚ ಸೇರಿದಂತೆ ಅನಾನೂಕೂಲತೆ ಆಗುತ್ತಿದೆ. ಹಾಗಾಗಿ, ಚಳ್ಳಕೆರೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಹೇಳಿದರು.

ತಾಲ್ಲೂಕಿನಲ್ಲಿ ಬರಗಾಲ ಆವರಿಸಿರುವುದರಿಂದ ಬೆಸ್ಕಾಂ ಕಚೇರಿಯಿಂದ ರೈತರ ಪಂಪ್‌ಸೆಟ್‌ಗಳಿಗೆ ಆಕ್ರಮ ಸಕ್ರಮಕ್ಕೆ ರೂ 12 ಸಾವಿರ ನಿಗದಿ ಪಡಿಸಿದ್ದು, ಸರ್ಕಾರ ಇದನ್ನು ವಿಶೇಷ ಪ್ಯಾಕೇಜ್‌ನಲ್ಲಿ ಸೇರಿಸಿ ಸರ್ಕಾರವೇ ಈ ಹಣವನ್ನು ಭರಿಸುವ ಮೂಲಕ ರೈತರಿಗೆ ಸಹಕರಿಸಬೇಕು ಎಂದು ಕೋರಿದರು.

ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದ ನಂತರ ತಹಶೀಲ್ದಾರ್ ಅಲ್ಕೂರ ಭೋವಿ ಅವರಿಗೆ ಮನವಿ  ಸಲ್ಲಿಸಿದರು. ವಿ. ಶ್ರೀನಿವಾಸರೆಡ್ಡಿ, ಬಜ್ಜಪ್ಪ, ಜೆ.ಸಿ. ಓಬನಾಯಕ, ಎಸ್.ಕೆ. ರಾಮಣ್ಣ, ಭರಮಸಾಗರದ ಪಾಲಯ್ಯ, ಈರಣ್ಣ, ಓಬಣ್ಣ, ಪಾಲಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT