ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಡಿ ಮಾತು ಬೇಡ: ಭಾರದ್ವಾಜ್

ಸದನದಲ್ಲಿನ ವಾಗ್ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆ
Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದ ವಿಶ್ವವಿದ್ಯಾಲಯಗಳ ಮೇಲೆ ಹಿಡಿತ ಸಾಧಿಸಲು ರಾಜ್ಯ ಸರ್ಕಾರ ಹಾಗೂ ಕೆಲವು ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನ ಮಾಡುತ್ತಿವೆ. ವಿವಿಗಳ ರಾಜಕೀಯಕರಣ ಮಾಡುವ ಪ್ರಯತ್ನ ಸಾಗಿದೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ. ಕಾಂಗ್ರೆಸ್ ಸರ್ಕಾರಕ್ಕೂ ನನ್ನ ಸಹಕಾರ ಬೇಡ ಎಂದಾದರೆ ಹೇಳಲಿ' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ವಾಗ್ದಾಳಿ ನಡೆಸಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 48ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ನನ್ನನ್ನು ರಾಜ್ಯದಿಂದ ಹೊರಗೆ ಕಳುಹಿಸಲು ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನ ಮಾಡುತ್ತಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಶೋಧನಾ ಸಮಿತಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶೋಧನಾ ಸಮಿತಿಯ ಸದಸ್ಯರ ಮೇಲೆ ಸರ್ಕಾರ ಪ್ರಭಾವ ಬೀರಲು ಯತ್ನಿಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದೇ ರೀತಿ ಆಗಿತ್ತು.  ವಿವಿಗಳ ಮೇಲೆ ಹಿಡಿತ ಸಾಧಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿವೆ. ಸಿಂಡಿಕೇಟ್ ಸದಸ್ಯರನ್ನು ವಜಾ ಮಾಡಿದ್ದೇ ಇದಕ್ಕೆ ಉತ್ತಮ ಉದಾಹರಣೆ' ಎಂದು ಅವರು ವಿಶ್ಲೇಷಿಸಿದರು.

ರಾಜಭವನಕ್ಕೆ ಬನ್ನಿ: `ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಮಹೇಶಪ್ಪ ವಿರುದ್ಧ ಅನೇಕ ಆರೋಪಗಳಿದ್ದರೂ ಅವರನ್ನು ಒಂದು ವರ್ಷದ ಅವಧಿಗೆ ಮುಂದುವರಿಸಲಾಗಿದೆ. ರಾಜ್ಯಪಾಲರ ಕಚೇರಿಯಲ್ಲಿ ಏಜೆಂಟರು ಇದ್ದಾರೆ' ಎಂಬ ವಿಧಾನ ಪರಿಷತ್ ಸದಸ್ಯರು ಪರಿಷತ್ತಿನಲ್ಲಿ ಮಾಡಿರುವ ಆರೋಪಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, `ನನ್ನ ಬಗ್ಗೆ ಆಕ್ಷೇಪಗಳಿದ್ದರೆ ನೇರವಾಗಿ ರಾಜಭವನಕ್ಕೆ ಬಂದು ಮಾತನಾಡಿ. ಸದನದಲ್ಲಿ ದಾಳಿ ಮಾಡಬೇಡಿ' ಎಂದು ಖಾರವಾಗಿ ಹೇಳಿದರು.

ಬುಧವಾರ ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು, `ವಿಟಿಯುನಲ್ಲಿ ಫೇಲಾಗಿರುವವರಿಂದ ಹಣ ಪಡೆದು ಮರುಮೌಲ್ಯಮಾಪನ ಮಾಡಿಸಿ ಉತ್ತೀರ್ಣರನ್ನಾಗಿ ಮಾಡಲಾಗುತ್ತಿದೆ. ಮಹೇಶಪ್ಪ ಅವರ ವಿಚಾರದಲ್ಲಿ ಆರೋಪವಿದ್ದರೂ ರಾಜ್ಯಪಾಲರು ಈ ವಿಷಯದಲ್ಲಿ ಮಾತ್ರ ಮೌನವಾಗಿದ್ದಾರೆ. ಇದರಿಂದ ರಾಜಭವನದ ಮೇಲೆ ಸಂಶಯ ಮೂಡಿದೆ' ಎಂದು  ದೂರಿದ್ದರು.

`ಮಹೇಶಪ್ಪ ನೇಮಕದಲ್ಲಿ ಕಾಯ್ದೆ ಉಲ್ಲಂಘನೆಯಾಗಿದೆ' ಎಂದು ಬಿಜೆಪಿಯ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. `ಮಹೇಶಪ್ಪ ಅವರನ್ನು ಮುಂದುವರಿಸಿರುವುದು ಸರಿಯಲ್ಲ' ಎಂದು ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮರಿತಿಬ್ಬೇಗೌಡ, ವೈ.ಎ.ನಾರಾಯಣಸ್ವಾಮಿ, ಪ್ರೊ.ಕೃಷ್ಣ ಭಟ್, ಅರುಣ್ ಶಹಾಪುರ, ಪುಟ್ಟಣ್ಣ, ಅಮರನಾಥ ಪಾಟೀಲ್ ಸೇರಿದಂತೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

`ನಾನು ಯಾವುದೇ ಚರ್ಚೆಗೆ  ಸಿದ್ಧ. ನನ್ನ ಹಿಂಬದಿಯಲ್ಲಿ ನಿಂತು ಮಾತನಾಡುವುದು ಬೇಡ. ಸದನದಲ್ಲಿ ನನ್ನ ಬಗ್ಗೆ ಕೆಟ್ಟ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಎಲ್ಲ ತಪ್ಪುಗಳನ್ನು ಸರ್ಕಾರವೇ ಮಾಡುತ್ತಿದೆ. ಆದರೆ, ನನ್ನ ಮೇಲೆ ಅನಗತ್ಯವಾಗಿ ಆರೋಪ ಮಾಡಲಾಗುತ್ತಿದೆ' ಎಂದು ಭಾರದ್ವಾಜ್ ಬೇಸರ ವ್ಯಕ್ತಪಡಿಸಿದರು.

ನಿನ್ನೆ ಹುಟ್ಟಿದ ಮಗು ಅಲ್ಲ: `ವಿಟಿಯು ಕುಲಪತಿ ನೇಮಕಕ್ಕೆ ಶೋಧನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಅನಗತ್ಯವಾಗಿ ವಿಳಂಬ ಮಾಡಿತ್ತು. ಮುಖ್ಯಮಂತ್ರಿ ಅವರಿಗೆ ಎಚ್ಚರಿಕೆ ನೀಡಿದ ಬಳಿಕ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಬಿ.ಬಲರಾಮ್ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಆದರೆ, ಶೋಧನಾ ಸಮಿತಿಯ ಸಭೆಗೆ ಅವರು ಹಾಜರಾಗಲಿಲ್ಲ. ಅವರು ಬಂದಿದ್ದರೆ ಹೊಸ ಕುಲಪತಿ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು.

ಈ ಹಿನ್ನೆಲೆಯಲ್ಲಿ ಮಹೇಶಪ್ಪ ಅವರನ್ನು ಒಂದು ವರ್ಷ ಮುಂದುವರಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಇಷ್ಟ ಬಂದ ಹಾಗೆ ಕುಲಪತಿಗಳ ನೇಮಕ ಮಾಡಲು ಸಾಧ್ಯವಿಲ್ಲ. ಯುಜಿಸಿ ಮಾರ್ಗಸೂಚಿ ಪ್ರಕಾರವೇ ಕುಲಪತಿಗಳನ್ನು ನೇಮಕ ಮಾಡಲಾಗುತ್ತಿದೆ. ನಾನೇನು ನಿನ್ನೆ ಹುಟ್ಟಿದ ಮಗು ಅಲ್ಲ' ಎಂದು ಅವರು ಮಾರ್ಮಿಕವಾಗಿ ನುಡಿದರು.

`ತಾಂತ್ರಿಕ ವಿವಿಯ ಕುಲಪತಿಗಳಾಗಿದ್ದ ಪ್ರೊ. ಖಿಂಚಾ, ಬಾಲವೀರ ರೆಡ್ಡಿ ಹಾಗೂ ಡಾ.ಮಹೇಶಪ್ಪ ಅವರ ವಿರುದ್ಧ ಆರೋಪಗಳಿದ್ದವು. 2009ರಲ್ಲಿ ಅಧಿಕಾರ ಸ್ವೀಕರಿಸಿದ ಕೂಡಲೇ ಮಹೇಶಪ್ಪ ವಿರುದ್ಧ ತನಿಖೆಗೆ ಏಕಸದಸ್ಯ ಆಯೋಗ ನೇಮಕ ಮಾಡಿದೆ. ಅವರ ಅಂಕಪಟ್ಟಿ ಅಸಲಿ ಎಂದು ಮೈಸೂರು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ' ಎಂದು ಅವರು ನೆನಪಿಸಿಕೊಂಡರು.

ಬೆಂಗಳೂರು ವಿವಿ ಉಳಿಸಿದ್ದೇ ನಾನು:  `ಬೆಂಗಳೂರು ವಿಶ್ವವಿದ್ಯಾಲಯವನ್ನು ಉಳಿಸಿದ್ದೇ ನಾನು. ವಿಶ್ವವಿದ್ಯಾಲಯದಲ್ಲಿ ನಡೆದ ಘಟನಾವಳಿಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಕ್ಯಾಂಪಸ್‌ನಲ್ಲಿ ಶಾಂತಿ ನೆಲೆಸಿದೆ. ಮಾಫಿಯಾಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. ಹಿಂದಿನ ಬಿಜೆಪಿ ಸರ್ಕಾರದ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಿಲ್ಲ' ಎಂದರು. 

`ವಿಶ್ವವಿದ್ಯಾಲಯದ ಸ್ವರೂಪವನ್ನು ನಿರ್ಧರಿಸುವುದು ಯುಜಿಸಿ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ. ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಲು ಬಿಜೆಪಿ ಸರ್ಕಾರ ಯತ್ನಿಸಿತ್ತು. ಈ ಕಾಯ್ದೆ ಮೂಲಕ ಜನಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ ಒದಗಿಸಲು ಯತ್ನಿಸಲಾಗಿತ್ತು. ಇಂತಹ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ. ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಹಟ ಇದ್ದರೆ ಕೇಂದ್ರ ಸರ್ಕಾರ ಅಥವಾ ಯುಜಿಸಿ ಬಳಿಗೆ ಹೋಗಲಿ' ಎಂದು ಅವರು ಸವಾಲು ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT