ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಣಕ್ಯ ಪ್ರಣವ್ ಪಿಎಂ, ಸಿಎಂ, ಎಫ್‌ಎಂ ಏನೇನೆಲ್ಲಾ...

Last Updated 17 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಕೋರುವ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಸಚಿವ ಪ್ರಣವ್ ಮುಖರ್ಜಿ ಅವರನ್ನು `ಯುಪಿಎ ಸರ್ಕಾರದ ಚಾಣಕ್ಯ~ ಎಂದು ಬಣ್ಣಿಸುವ ಜತೆಗೆ,  ಸರಿಯಾದ ಸಮಯಕ್ಕೆ ಸೂಕ್ತ ಪದಗಳು ಬಾಯಿಗೆ ಬಾರದೆ `ನಮ್ಮ ಪಿಎಂ..... ನಮ್ಮ ಸಿಎಂ.... ನಮ್ಮ ಪ್ರಣವ್ ದಾ..... ನಮ್ಮ ಎಫ್‌ಎಂ~ ಎಂದೆಲ್ಲಾ ಹೇಳಿದ ಘಟನೆ ಲೋಕಸಭೆಯಲ್ಲಿ ನಡೆಯಿತು.

ಮುನಿಯಪ್ಪ ಅವರು ಹೀಗೆ ಹೇಳಿದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಎಲ್ಲರಿಂದಲೂ ನಗೆಯ ಅಲೆ ಎದ್ದಿತು.

ರೈಲ್ವೆ ಇಲಾಖೆ ಪ್ರಸ್ತುತ ಕೈಗೊಂಡಿರುವ ಯೋಜನೆಗಳಿಗೆ ಹೆಚ್ಚಿನ ಅನುದಾನ  ಒದಗಿಸುವ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಮುನಿಯಪ್ಪ ಅವರಿಂದ ಈ ಹಾಸ್ಯ ಸನ್ನಿವೇಶ ಸೃಷ್ಟಿಯಾಯಿತು.

`ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳು ಯೋಜನೆಗಳ ಶೇ 50ರಷ್ಟು ವೆಚ್ಚವನ್ನು ಭರಿಸಲು ಮುಂದೆ ಬಂದಿವೆ. ಆದರೆ ಕೇಂದ್ರದ ಪಾಲಿನ ಹಣದ ಕೊರತೆ ಇದೆ. ಇದನ್ನು ನೀಗಲು ಯುಪಿಎ ಸರ್ಕಾರದ ಚಾಣಕ್ಯರಾದ ನಮ್ಮ ಪ್ರಣವ್‌ದಾ ಇಲ್ಲೇ ಇದ್ದಾರೆ~ ಎಂದರು.

ಮುಖರ್ಜಿ ಅವರ `ಗುಣಗಾನ~ ಮಾಡಿದ ಮುನಿಯಪ್ಪ, ಹಣಕಾಸು ಸಚಿವರು ಹೆಚ್ಚಿನ ನಿಧಿ ನೆರವು ನೀಡುತ್ತಾರೆಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಆದರೆ ಪ್ರಣವ್‌ರನ್ನು ಹೀಗೆ  `ಗುಣಗಾನ~ ಮಾಡುವಾಗ, ಮಧ್ಯದಲ್ಲಿ, ಸರಿಯಾದ ಪದಗಳು ತಕ್ಷಣವೇ ಬಾಯಿಗೆ ಬಾರದೆ `ನಮ್ಮ ಪಿಎಂ.... ನಮ್ಮ ಸಿಎಂ.... ನಮ್ಮ ಪ್ರಣವ್ ದಾ..... ನಮ್ಮ ಎಫ್‌ಎಂ (ಫೈನಾನ್ಸ್ ಮಿನಿಸ್ಟರ್)” ಎಂದೆಲ್ಲಾ ಹೇಳಿದರು.

ಮುಖರ್ಜಿ ಅವರನ್ನು ಪಿಎಂ ಕರೆದಿದ್ದಕ್ಕಾಗಿ ಸದಸ್ಯರು ಮುನಿಯಪ್ಪ ಅವರ ಕಾಲೆಳೆದಾಗ `ಭವಿಷ್ಯದಲ್ಲಿ ಆಗಬಹುದು~ ಎಂಬ ಅರ್ಥದಲ್ಲಿ `ಹಿ ಮೇ ಬಿ, ಹಿ ಮೇ ಬಿ~ ಎಂದು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮುಖದ ತುಂಬಾ ನಗೆ ತುಳುಕಿಸಿದರೆ, ಮುಖರ್ಜಿ ಪಿಎಂ ಕುರ್ಚಿಯ ಆಸೆ ಇಲ್ಲವೆಂಬುದನ್ನು ಸೂಚಿಸುವವರಂತೆ, ಸದಸ್ಯರತ್ತ ಕೈತೋರಿ ಮೇಲೆ ಕೆಳಗೆ ಕೈ ಆಡಿಸಿದರು.

ಆಗ ಪ್ರಶ್ನೆ ಕೇಳಿದ್ದ ಬಿಜೆಪಿಯ ಅರ್ಜುನ್ ಮೇಘವಾಲ್ ಎದ್ದುನಿಂತು, ಯುಪಿಎ ಸರ್ಕಾರದ ಚಾಣಕ್ಯ ಯಾರು ಅಂತ ತಾನು ಕೇಳಲಿಲ್ಲ ಎಂದು ಸಚಿವರಿಗೆ ಚುಚ್ಚಿದರು.

`ಪ್ರಣವ್ ಅವರು ಚಾಣಕ್ಯ ಎಂಬುದನ್ನು ನಾವು ಅಭಿನಂದಿಸುತ್ತೇವೆ. ಆದರೆ ರೈಲ್ವೆ ಯೋಜನೆಗಳು ಹಾಗೂ ನಿಧಿ ಅಗತ್ಯದ ಬಗ್ಗೆ ಚಾಣಕ್ಯರಾದ ಅವರಿಗೆ ಮಾಹಿತಿಯನ್ನೇ ನೀಡದಿದ್ದರೆ, ಅವರಾದರೂ ಹೇಗೆ ಹಣ ಮಂಜೂರು ಮಾಡುತ್ತಾರೆ?~ ಎಂದೂ ಕೇಳಿದರು.

ಹೀಗೆ ಮುಂದುವರಿದ ಚರ್ಚೆಯುದ್ದಕ್ಕೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಮತ್ತು ಸಚಿವ ಪ್ರಣವ್ ಪರಸ್ಪರ ನಗೆ ವಿನಿಮಯ ಮಾಡಿಕೊಂಡು ಹಗುರಾಗಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT