ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಲೆ: ಸೆರೆಸಿಕ್ಕ ಚಿರತೆ ಅರಣ್ಯಕ್ಕೆ

Last Updated 9 ಜುಲೈ 2013, 10:50 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಚಿಕಲೆ ಗ್ರಾಮದ ವಾಸುದೇವ ಪವಾರ ಅವರ ಮನೆಯಲ್ಲಿ ಬಂಧಿತ ಚಿರತೆಯನ್ನು ಮೈಸೂರಿನ ವನ್ಯಜೀವಿ ವೈದ್ಯರು, ಅರವಳಿಕೆ ತಜ್ಞರು, ಅರಣ್ಯ ಇಲಾಖೆ ಹಾಗೂ ಪೊಲೀಸರ ನೆರವಿನಿಂದ ಬೋನಿನಲ್ಲಿ ಸೆರೆ ಹಿಡಿದು ಸೋಮವಾರ ಮಧ್ಯಾಹ್ನ ತಾಲ್ಲೂಕಿನ ಹೆಮ್ಮಡಗಾ ಬಳಿಯ ಭೀಮಗಡ ಅರಣ್ಯ ಪ್ರದೇಶ ವ್ಯಾಪ್ತಿಯ ಜನವಸತಿ ಇಲ್ಲದ ವನ್ಯಧಾಮಕ್ಕೆ ಸಾಗಿಸಿ ಅರಣ್ಯಕ್ಕೆ ಬಿಡಲಾಯಿತು.

ಶನಿವಾರ ರಾತ್ರಿ ಮನೆ ಸೇರಿದ್ದ ಚಿರತೆಯನ್ನು ಭಾನುವಾರ ಹಿಡಿದು ಅರಣ್ಯಕ್ಕೆ ಬಿಡಲು ಅರಣ್ಯ ಇಲಾಖೆಯ ಸಿಬ್ಬಂದಿ ತೀವ್ರ ಪ್ರಯತ್ನ ನಡೆಸಿತಾದರೂ ಸತತವಾಗಿ ಬೀಳುತ್ತಿದ್ದ ಮಳೆ ಹಾಗೂ ಕಾರ್ಯಾಚರಣೆಗೆ ಬೇಕಾದ ಬೋನು ಹಾಗೂ ಇತರೆ ಪರಿಕರಗಳ ಲಭ್ಯತೆ ಇರದ ಕಾರಣ ಅಡಚಣೆಯುಂಟಾಗಿತ್ತು. ಸೋಮವಾರ ಮುಂಜಾನೆ ಮೈಸೂರಿನ ವನ್ಯಜೀವಿ ವಿಭಾಗದಿಂದ ಘಟನಾ ಸ್ಥಳಕ್ಕೆ ಬಂದ ವನ್ಯಜೀವಿ ವೈದ್ಯ ಡಾ.ಎಚ್.ಎಸ್. ಪ್ರಯಾಗ ಹಾಗೂ ತಜ್ಞರ ತಂಡ ಚಿರತೆಯನ್ನು ಉಪಾಯವಾಗಿ ಬೋನಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ನಂತರ ಅದನ್ನು ಘಟನಾ ಸ್ಥಳದಿಂದ ರಸ್ತೆ ಮೂಲಕ 60 ಕಿ.ಮೀ ದೂರದ ಹೆಮ್ಮಡಗಾ ಚೆಕ್ ಪೋಸ್ಟ್‌ಗೆ ಕರೆತಂದು ಹೆಮ್ಮಡಗಾ ಅರಣ್ಯ ವ್ಯಾಪ್ತಿಯ ದೇಗಾಂವ-ಬುಕ್ಕೇಲಿ ಮಾರ್ಗದ ಅರಣ್ಯ ಸರ್ವೇ ನಂ.22ರಲ್ಲಿ ಬಿಡುಗಡೆ ಮಾಡುವ ಮೂಲಕ ಅರಣ್ಯ ಇಲಾಖೆಯ ಆಪರೇಶನ್ ಚಿರತೆ ಕಾರ್ಯಾಚರಣೆ ಸಂಪೂರ್ಣಗೊಂಡಿದೆ.

ವರದಿಗಾರರಿಗೆ ನಿಷೇಧ: ಚಿರತೆ ಬೋನಿನಿಂದ ಹೊರಗೆ ಹೋಗುವ ದೃಶ್ಯವನ್ನು ಚಿತ್ರೀಕರಣ ಮಾಡಲು ಭೀಮಗಡ ಅರಣ್ಯಕ್ಕೆ ತೆರಳಲು ಅನುಮತಿ ನೀಡುವಂತೆ ದೃಶ್ಯ ಮಾಧ್ಯಮದವರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ಅವರನ್ನು ಕೇಳಿಕೊಂಡಾಗ ಅವರು ಒಪ್ಪಿಗೆ ನೀಡಿದರೂ ವರದಿಗಾರರ ಬರುವಿಕೆಗೆ ವನ್ಯಜೀವಿ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ಸೋಮವಾರ ಮಧ್ಯಾಹ್ನ ಭೀಮಗಡ ವನ್ಯಧಾಮದ ಚೆಕ್‌ಪೋಸ್ಟ್ ಬಳಿ ನಡೆಯಿತು. ಈ ಸಂದರ್ಭದಲ್ಲಿ ದೃಶ್ಯ ಮಾಧ್ಯಮದ ವರದಿಗಾರರು ಮತ್ತು ವನ್ಯಜೀವಿ ವೈದ್ಯರ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆದಿದೆ. ಬಳಿಕ ಡಿಎಫ್‌ಒ ಅಂಬಾಡಿ ಮಾಧವ ಅವರ ಮಧ್ಯಸ್ಥಿಕೆಯೊಂದಿಗೆ ಕೇವಲ ಒಬ್ಬ ಮಾಧ್ಯದ ಛಾಯಾಗ್ರಾಹಕನನ್ನು ತಮ್ಮಡನೆ ಕರೆದೊಯ್ಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಒಪ್ಪಿದ ಕಾರಣ ಸಮಸ್ಯೆ ಬಗೆಹರಿಯಿತು.

ಚಿರತೆಯನ್ನು ಮರಳಿ ಅರಣ್ಯಕ್ಕೆ ಬಿಡುವ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮಹಾಂತೇಶ್ವರ, ಪಿಎಸ್‌ಐ ರವೀಂದ್ರ ನಾಯ್ಕೋಡಿ, ಎಸಿಎಫ್‌ಗಳಾದ ಪಿ.ಕೆ ಪೈ, ಯು.ಟಿ ನಾಯ್ಕ, ಆರ್‌ಎಫ್‌ಒಗಳಾದ ಎಸ್.ಎಸ್ ನಿಂಗಾಣಿ, ಅಶೋಕ ಗೊಂಡೆ, ಎಸ್.ಎಂ. ಸಂಗೊಳ್ಳಿ, ಗೌರವ ವನ್ಯಜೀವಿ ಪರಿಪಾಲಕ ಸಚಿನ ಪಾಟೀಲ, ಅರವಳಿಕೆ ತಜ್ಞ ಅಕ್ರಂ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಬೆಂಗಾವಲು ವಾಹನ ಪಲ್ಟಿ: ಆರು ಜನರಿಗೆ ಗಾಯ
ಚಿಕಲೆ ಗ್ರಾಮದಿಂದ ಅರಣ್ಯ ಇಲಾಖೆಯ ಬೋನಿನಲ್ಲಿ ಚಿರತೆಯನ್ನು ತೆಗೆದುಕೊಂಡು ಹೊರಟ ಗೂಡ್ಸ್ ವಾಹನದ ಬೆಂಗಾವಲಾಗಿ ಹೊರಟಿದ್ದ ಕಣಕುಂಬಿ ಆರ್‌ಎಫ್‌ಒ ಅವರ ಅರಣ್ಯ ಇಲಾಖೆಯ ಜೀಪ್ ಜಾಂಬೋಟಿ-ಕಾಲಮನಿ ಮಧ್ಯದ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಈ ಘಟನೆಯಲ್ಲಿ ಜೀಪ್‌ನ ಚಾಲಕ ರಮೇಶ ಸೇರಿದಂತೆ ಆರು ಅರಣ್ಯ ಇಲಾಖೆಯ ಸಿಬ್ಬಂದಿ ಗಾಯಗೊಂಡಿದ್ದಾರೆ. ಇವರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರಲ್ಲಿ ಉಪ ಆರ್‌ಎಫ್‌ಒ ಮಹೇಶ ಕಲ್ಲೂರ, ಗಾರ್ಡ್‌ಗಳಾದ ಭಂಗಿ, ಮಠಪತಿ, ನೀಲಗಾರ, ಸಿದ್ದಪ್ಪ ಬಾರ್ಕಿ ಹಾಗೂ ಗಣೇಶ ಸೇರಿದ್ದಾರೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT