ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರಿಗೆ ಕಥೆಯ ರುಚಿ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತಾತಾ, ಕಥೆ ತುಂಬಾ ಚೆನ್ನಾಗಿತ್ತು.
`ಎಚ್.ಕೆ.ಆರ್ ತಾತನವರಿಗೆ ನನ್ನ ಪ್ರೀತಿಯ ನಮಸ್ಕಾರಗಳು. ಹೋದವಾರ ದೇರಾಜೆ ಮೂರ್ತಿಯವರು `ಕಪ್ಪು ಕಾಗೆ~ ಕಥೆಯನ್ನು ತುಂಬಾ ಚೆನ್ನಾಗಿ ಹೇಳಿದ್ದು ಇಷ್ಟವಾಯಿತು. ದೇರಾಜೆ ಮೂರ್ತಿಯವರು ಹಾಡಿನ ಜೊತೆ ಕಥೆ ಹೇಳಿದರು~
-ದೀಪ್ತಿ ಭಾರದ್ವಾಜ್, ಮೈಸೂರು.

ಪ್ರೀತಿಯ ಎಚ್.ಕೆ.ಆರ್. ತಾತನಿಗೆ,
`ಶ್ರೀಮತಿ ಗೀತಾ ಮೋಂಟಡ್ಕ ಅವರ ಕಥೆ ನನಗೆ ಬಹಳ ಇಷ್ಟವಾಯಿತು. ಅವರು ಮಿಮಿಕ್ರಿ ಬಹಳ ಚೆನ್ನಾಗಿ ಮಾಡಿದರು. ಕಥೆಯಲ್ಲಿ ಪುಟ್ಟ, ಹಾವು, ಚೇಳು, ಕುಂಬಳಕಾಯಿ, ಮೆಣಸಿನಕಾಯಿ, ಆನೆ, ಕರೆದುಕೊಂಡು ಹೋದ ದೃಶ್ಯ ನನಗೆ ಬಹಳ ಇಷ್ಟವಾಯಿತು. ಮಿಮಿಕ್ರಿಯಲ್ಲಿ ಬೆಳಗಿನ ಹಕ್ಕಿಯ ಕಲರವ, ನೀರು, ಹನಿಹನಿಯಾಗಿ ತೊಟ್ಟಿಕ್ಕುವ ರೀತಿ, ಉಗಿ ಬಂಡಿಯ ಶಬ್ದ ಮುಂತಾದವನ್ನು ಚೆನ್ನಾಗಿ ಮಾಡಿದರು~.
ಇಂತಿ ನಿಮ್ಮ ಪ್ರೀತಿಯ...
-ಇಂಡಿಯಾ ಬಿ. ಹೆನ್ಲಿ

ಚಿನ್ನಾರಿಗಳ ಈ ಪತ್ರಗಳನ್ನು ಓದುವಾಗ ಎಚ್.ಕೆ. ರಾಮನಾಥ್‌ರ ಮುಖದಲ್ಲಿ ಮಂದಹಾಸ. ಅಂದು ಶನಿವಾರ. ಮಕ್ಕಳಿಗೆ ಕಥೆ ಹೇಳಿದ ನಂತರ ತಾವು ಹೇಳಬೇಕಾದ ಪದಕೋಶ ಪಾಠಕ್ಕಾಗಿ ಅವರು ಸಿದ್ಧತೆಯಲ್ಲಿ ತೊಡಗಿದರು. ಸಂಜೆ 4.30 ಆಯಿತೆಂದರೆ ಅನುಷಾ, ದೀಪ್ತಿ, ಚಂದನಾ, ಧನಲಕ್ಷ್ಮಿ, ದೀಪಂಕರ್, ಉಲ್ಲಾಸ್, ಸುದರ್ಶನ್, ರಚನಾ, ಧೃತಿ, ರಕ್ಷಿತಾ, ಎಲ್ಲರೂ ಕಥೆ ಕೇಳಲು ಹಾಜರ್! 

ಮೈಸೂರಿನ ಕುವೆಂಪುನಗರದಲ್ಲಿ ಇರುವ `ಸುರುಚಿ ರಂಗಮನೆ~ಯ ಪ್ರತಿ ಶನಿವಾರದ ದೃಶ್ಯವಿದು. ಮಕ್ಕಳು ಬರೆದ ಇಂಥ ರಾಶಿ ರಾಶಿ ಪತ್ರ ಗೋಡೆಯ ತುಂಬ ತೂಗಾಡುತ್ತಿವೆ. ಕಥೆ ಹೇಳಿ ಮಕ್ಕಳನ್ನು ಮುದಗೊಳಿಸುವ, ಕಲ್ಪನಾ ಲೋಕದಲ್ಲಿ ವಿಹರಿಸುವ, ವಿವೇಕ, ಲೋಕಜ್ಞಾನವನ್ನು ಮೊಳೆಯಿಸುವ `ಕಲಾಸುರುಚಿ~ ಸಂಸ್ಥೆಯ `ಕಥೆ ಕೇಳೋಣ ಬನ್ನಿ~ ಎಂಬ ಅನನ್ಯ ಕಾರ್ಯಕ್ರಮಕ್ಕೆ ಬರುವ ಫೆ.25ರಂದು ಐದು ವರ್ಷಗಳು ತುಂಬಲಿವೆ.

ಈ ಐದು ವರ್ಷಗಳಿಂದ ಪ್ರತಿ ಶನಿವಾರ ಸಂಜೆ ಸುರುಚಿ ರಂಗಮನೆ ಮಕ್ಕಳಿಂದ ಚಿಲಿಪಿಲಿಯೆನ್ನುತ್ತಿರುತ್ತದೆ. ರಂಗಮನೆಯ ಕಟ್ಟೆ ಮೇಲೆ ಕುಳಿತು ಹಿರಿಯರು ಹಾವಭಾವ ಸಹಿತವಾಗಿ ಕಥೆ ಹೇಳುತ್ತಿದ್ದರೆ ಎದುರು ಜಮಖಾನೆ ಹಾಸಿ ಕುಳಿತ ಮಕ್ಕಳು ಮಾತು ಮರೆತು ತದೇಕ ಚಿತ್ತದಿಂದ ಕೇಳುತ್ತಾರೆ. ಒಮ್ಮಮ್ಮೆ ಹಂಗೇಕಾಯ್ತು ಎನ್ನುವ ಕುತೂಹಲ. ಇನ್ನೊಮ್ಮೆ ಛೇ.. ಪಾಪ.. ಆನೆಯಣ್ಣಂಗೆ ಹಂಗಾಗ್ಬಾರ್ದಿತ್ತು ಎನ್ನುವ ಸ್ಪಂದನ. ಓ... ಕಲ್ಪನಾ ಚಾವ್ಲಾ ಆಕಾಶನೌಕೆ ಹತ್ತಿದ್ಲಲ್ಲ.. ನಾವೂ ಹೋದರೆ... ಎನ್ನುವ ಕನಸು.

ಭೀಮ, ರಾಮ, ಕೃಷ್ಣ ಮೊದಲಾದ ಪೌರಾಣಿಕ ಕಥೆಗಳಷ್ಟೇ ಅಲ್ಲದೇ ಐನ್‌ಸ್ಟೈನ್, ಥಾಮಸ್ ಆಲ್ವಾ ಎಡಿಸನ್‌ರಂಥ ವಿಜ್ಞಾನಿಗಳೂ ಕಥೆಗಳಲ್ಲಿ ಬಂದಿದ್ದಾರೆ. ರಾಜ್ಯದ ವಿವಿಧೆಡೆಯಿಂದ 250ಕ್ಕೂ ಹೆಚ್ಚು ಹಿರಿಯರು, ಸಾಹಿತಿಗಳು, ವಿಜ್ಞಾನಿಗಳು, ಪೊಲೀಸ್ ಅಧಿಕಾರಿಗಳು, ಶಿಕ್ಷಕರು, ವೈದ್ಯರು, ರಂಗತಜ್ಞರು ಬಂದು ಮಕ್ಕಳಿಗೆ ಕಥೆ ಹೇಳಿದ್ದಾರೆ.
 
ವೈದೇಹಿ, ಜೆ.ಆರ್.ಲಕ್ಷ್ಮಣರಾವ್, ಎಂ.ಎಸ್.ವಿಶ್ವೇಶ್ವರ, ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ, ಪ್ರೊ.ಎಂ.ಎಸ್.ಕೃಷ್ಣೇಗೌಡ, ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ, ಎಚ್.ಜಿ.ಸೋಮಶೇಖರ್, ಮಂಡ್ಯ ರಮೇಶ್, ಎಚ್.ಎಸ್.ವೆಂಕಟೇಶ್‌ಮೂರ್ತಿ- ಹೀಗೆ ಕಥೆ ಹೇಳಿದವರ ಪಟ್ಟಿ ದೊಡ್ಡದಿದೆ.

`ಕಲಾ ಸುರುಚಿ~ ಸಂಸ್ಥೆಯ ಆಧಾರಸ್ತಂಭ ವಿಜಯಾ ಸಿಂಧುವಳ್ಳಿ. ಅವರ ಪತಿ ರಂಗತಜ್ಞ ದಿ.ಡಾ.ಸಿಂಧುವಳ್ಳಿ ಅನಂತಮೂರ್ತಿ ಅವರ ನೆನಪಿನಲ್ಲಿ ಹುಟ್ಟುಹಾಕಿರುವ ಈ ಸಂಸ್ಥೆಗೆ ಮೂರ್ತರೂಪ ನೀಡಿದ್ದು ವಿಜಯಾ ಅವರ ಅಣ್ಣನ ಅಳಿಯ ಶಶಿಧರ ಡೋಂಗ್ರೆ. ಡಾ.ಎಚ್.ಕೆ.ರಾಮನಾಥ್, ಸುಮನಾ ಡೋಂಗ್ರೆ, ಕೆ.ನಾಗರಾಜ್ ಪ್ರೊ.ಸಿ.ವಿ.ಶ್ರೀಧರಮೂರ್ತಿ, ಡಾ.ಭದ್ರಪ್ಪ, ಶ್ರೀಮತಿ ಹರಿಪ್ರಸಾದ್ ಸೇರಿದಂತೆ ಹತ್ತಿಪ್ಪತ್ತು ಸಾಹಿತ್ಯಾಸಕ್ತರು ಹಾಗೂ ರಂಗತಜ್ಞರು ಈ ಕಾರ್ಯಕ್ಕೆ ಕೈಗೂಡಿಸಿದ್ದಾರೆ.

ಮಕ್ಕಳಿಗಾಗಿ ಕಥಾ ಕಣಜವನ್ನೇ ನಿರ್ಮಿಸಿದ್ದಾರೆ. ಕಥೆಯ ಜೊತೆಗೆ ರಾಮನಾಥ್ ಅವರು ಪ್ರತಿವಾರ ಕನ್ನಡ ಪದಕೋಶವನ್ನು ಕಲಿಸುತ್ತಿದ್ದು ಭಾಷಾ ಶುದ್ಧಿಗೆ ಸಹಾಯ ಮಾಡುತ್ತಿದ್ದಾರೆ. ಶನಿವಾರವಷ್ಟೇ ತೆರೆದುಕೊಳ್ಳುವ ಮಕ್ಕಳ ವಾಚನಾಲಯವೂ ಇಲ್ಲಿ ಜೀವ ತಳೆದಿದೆ.

`ಬರುವ ನಲ್ವತ್ತು ಮಕ್ಕಳಲ್ಲಿ ನಾಲ್ಕು ಮಕ್ಕಳಿಗಾದರೂ ಸಾಹಿತ್ಯಾಭಿರುಚಿ, ಭಾಷಾಭಿಮಾನ, ಜೀವನ ಮೌಲ್ಯಗಳು ಮೂಡಿದರೂ ಸಾಕು, ನಾವು ಮಾಡುವ ಈ ಅಳಿಲು ಸೇವೆಗೆ ಅರ್ಥ ಬಂದಂತೆ~ ಎನ್ನುತ್ತಾರೆ ವಿಜಯಾ ಸಿಂಧುವಳ್ಳಿ.

ಕಥೆ ಹೇಳಲು ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಕಲಾಸುರುಚಿಯೇ ಹುಡುಕುತ್ತದಾದರೂ, ಯಾರೇ ಆದರೂ ಪರಿಣಾಮಕಾರಿಯಾಗಿ ಕಥೆ ಹೇಳಬಲ್ಲವರು ನಮ್ಮಲ್ಲಿಗೆ (ದೂ: 0821-2541795) ಬರಬಹುದು ಎನ್ನುತ್ತಾರೆ ರಾಮನಾಥ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT