ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಪ್ರದರ್ಶನ: ಏಕರೂಪದ ‘ಫೈಲ್‌ ಫಾರ್ಮ್ಯಾಟ್‌’?

Last Updated 1 ಜನವರಿ 2014, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ವರ್ಷದ ಚಿತ್ರೋತ್ಸವದ ವೇಳೆಗೆ ಸಿನಿಮಾ ಪ್ರದರ್ಶನಕ್ಕೆ ಏಕರೂಪದ ನಿರ್ದಿಷ್ಟ ಫೈಲ್‌ ಫಾರ್ಮ್ಯಾಟ್‌ ಅಳವಡಿಸಿಕೊಳ್ಳಲು ಚಿತ್ರೋತ್ಸವದ ಸಂಘಟಕರು ಚಿಂತನೆ ನಡೆಸಿದ್ದಾರೆ.

ಸೆಲ್ಯುಲಾಯ್ಡ್‌ನಿಂದ ಡಿಜಿಟಲ್‌ಗೆ ಬದಲಾಗಿರುವ ಚಿತ್ರರಂಗ ಆಧುನಿಕ ತಂತ್ರಜ್ಞಾನಕ್ಕೆ ಒಳಪಟ್ಟಿದ್ದರೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಬೆಂಗಳೂರು ಸಿನಿಮೋ­ತ್ಸವ­ದಲ್ಲಿ ಪ್ರದರ್ಶಿತವಾಗುತ್ತಿರುವ 160 ಸಿನಿಮಾ­ಗಳಲ್ಲಿ ಸುಮಾರು 40 ಸಿನಿಮಾಗಳು ಲಭ್ಯವಿರುವ ತಂತ್ರಾಂಶದಲ್ಲಿ ತೆರೆದುಕೊಳ್ಳದ ಕಾರಣ ಸರಿಯಾದ ಸಮಯಕ್ಕೆ ಪ್ರದರ್ಶಿಸಲು ಸಾಧ್ಯವಾಗದೆ ಸಮಸ್ಯೆ ಎದುರಿಸಬೇಕಾಯಿತು. ಇದು ಆಧುನಿಕ ಡಿಜಿಟಲ್‌ ತಂತ್ರಜ್ಞಾನ ಸೃಷ್ಟಿಸಿರುವ ಸಮಸ್ಯೆ.

ಇದಕ್ಕೆ ಪರಿಹಾರವಾಗಿ ಮುಂದಿನ ಸಿನಿಮೋತ್ಸವ­ಗಳಲ್ಲಿ ಒಂದೇ ಫೈಲ್‌ ಫಾರ್ಮ್ಯಾಟ್‌ ಬಳಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಜಿಓಎಂ, ಎವಿಎಸ್‌, ಕೆ.ಎಂ. ಪ್ಲೇಯರ್ ಮತ್ತಿತರ ಫೈಲ್‌ ಫಾರ್ಮ್ಯಾಟ್‌ಗಳು ನಿರ್ದಿಷ್ಟ ತಂತ್ರಾಂಶಗಳಲ್ಲಿ ಮಾತ್ರ ತೆರೆದುಕೊಳ್ಳುತ್ತವೆ. ಸಿನಿಮೋತ್ಸವಕ್ಕೆ ಕಳುಹಿಸ­ಲಾದ ಕೆಲವು ಸಿನಿಮಾಗಳು ಅದಕ್ಕೆ ಹೊಂದಿಕೆ­ಯಾ­ಗುವ ತಂತ್ರಾಂಶಗಳಿಲ್ಲದ ಕಾರಣ ತೆರೆದುಕೊಳ್ಳಲಿಲ್ಲ.

‘ಬ್ಲೂ ರೇ ಡಿವಿಡಿಗಳು, ಡಿಸಿಪಿಗಳು (ಡಿಜಿಟಲ್‌ ಸಿನಿಮಾ ಪ್ಯಾಕೇಜ್‌) ಮುಂತಾದವು ಫಿಲಂ ರೋಲ್‌ಗಳ ಜಾಗವನ್ನು ಆವರಿಸಿಕೊಂಡಿವೆ. ಫಿಲಂ ರೋಲ್‌ಗಳಲ್ಲಿ ಎದುರಾಗುತ್ತಿದ್ದ ಅನೇಕ ಸಮಸ್ಯೆಗಳಿಗೆ ಡಿಜಿಟಲ್‌ ಪರಿಹಾರ ನೀಡಿದೆ. 25 ರಿಂದ 50 ಕೆ.ಜಿ. ತೂಕದ ಪ್ರಿಂಟ್‌ಗಳನ್ನು ಬೇರೆ ಬೇರೆ ದೇಶಗಳಿಂದ ವಿಮಾನದಲ್ಲಿ ತರಿಸಿಕೊಳ್ಳುವುದು ಮತ್ತು ಅವುಗಳ ನಿರ್ವಹಣೆ ಅಧಿಕ ಶ್ರಮ ಹಾಗೂ ವೆಚ್ಚವನ್ನು ಬೇಡುತ್ತಿದ್ದವು. ಆದರೆ ಪ್ರದರ್ಶನದ ವೇಳೆ ಈ ಸಮಸ್ಯೆ
ಎದುರಾಗುತ್ತಿರಲಿಲ್ಲ. ಡಿಜಿಟಲ್‌ ತಂತ್ರಜ್ಞಾನದ ವೇಗದ ಬೆಳವಣಿಗೆಯಲ್ಲಿ ದಿನಕ್ಕೊಂದು ಹೊಸ ಆವಿಷ್ಕಾರಗಳು ನಡೆಯುತ್ತಿರುತ್ತವೆ.

ಹೀಗಾಗಿ ಇಂದು ಇರುವ ತಂತ್ರಾಂಶ ನಾಳೆಗೆ ಹಳತಾಗಿರುತ್ತದೆ. ಲಭ್ಯವಿರುವ ತಂತ್ರಾಂಶಗಳಲ್ಲಿ ಕೆಲವು ಸಿನಿಮಾಗಳನ್ನು ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ಹೊಸ ತಂತ್ರಾಂಶಗಳ ಈ ಸಮಸ್ಯೆ ಎದುರಿಸಲು ಏಕರೂಪದ ನಿರ್ದಿಷ್ಟ ಫೈಲ್‌ ಫಾರ್ಮ್ಯಾಟ್‌ಅನ್ನು ಆಯ್ದುಕೊಳ್ಳಲು ಉದ್ದೇಶಿಸಿದ್ದು, ಆ ಫೈಲ್‌ ಫಾರ್ಮ್ಯಾಟ್‌ನಲ್ಲಿಯೇ ಸಿನಿಮಾಗಳನ್ನು ಕಳುಹಿಸಬೇಕು. ಬೇರೆ ಫಾರ್ಮ್ಯಾಟ್‌ನಲ್ಲಿ ಬರುವ ಸಿನಿಮಾ­ವನ್ನು ತಿರಸ್ಕರಿಸಲಾಗುವುದು ಎಂಬ ಕಟ್ಟು­ನಿಟ್ಟಿನ ನಿಯಮವನ್ನು ಮುಂದಿನ ವರ್ಷ ಜಾರಿಗೆ ತರಲಾಗುವುದು’ ಎನ್ನುತ್ತಾರೆ ಬೆಂಗಳೂರು ಸಿನಿಮೋತ್ಸವದ ಕಲಾತ್ಮಕ ನಿರ್ದೇಶಕ ಎಚ್‌.ಎನ್‌. ನರಹರಿ ರಾವ್‌.

‘ಸಾಮಾನ್ಯವಾಗಿ ಬಳಕೆಯಲ್ಲಿರುವ ಕೆಲವೊಂದು ಫಾರ್ಮ್ಯಾಟ್‌ಗಳು ಎಲ್ಲಾ ಪ್ಲೇಯರ್‌ಗಳಲ್ಲಿಯೂ ತೆರೆದುಕೊಳ್ಳುತ್ತವೆ. ಸಿನಿಮೋತ್ಸವಗಳಿಗೆ ಚಿತ್ರಗಳನ್ನು ಕಳಹಿಸುವವರು ತಮಗೆ ಲಭ್ಯವಾದ ಫೈಲ್‌ ಫಾರ್ಮ್ಯಾಟ್‌ನಲ್ಲಿ ಕಳುಹಿಸಿರುತ್ತಾರೆ. ನಮ್ಮಲ್ಲಿ ಅದಕ್ಕೆ ಪೂರಕ ತಂತ್ರಾಂಶ ಲಭ್ಯ ಇಲ್ಲದೆ ಅನೇಕ ಬಾರಿ ಪರದಾಡಬೇಕಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ನಿರ್ವಹಣೆ ಮಾಡಲೆಂದೇ ಸಿನಿಮೋತ್ಸವದಲ್ಲಿ ಎರಡು ಸಾಫ್ಟ್‌ವೇರ್‌ ಕಂಪೆನಿಗಳ ಸಹಾಯ ಪಡೆದು­ಕೊಳ್ಳಲಾಗಿದೆ. ಆದರೂ ನಿಗದಿತ ಸಮಯಕ್ಕೆ ಈ ಸಮಸ್ಯೆಗಳನ್ನು ನಿರ್ವಹಿಸುವುದು ಸುಲಭವಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT