ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಂಬರಂ ಅನರ್ಥಶಾಸ್ತ್ರಿ: ಅನಂತ ಟೀಕೆ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಹಣಕಾಸು ಸಚಿವ ಪಿ.ಚಿದಂಬರಂ ಅವರು ಅನರ್ಥಶಾಸ್ತ್ರಿ (ಗೊಂದಲ ಸೃಷ್ಟಿಸುವುದರಲ್ಲಿ ನಿಸ್ಸೀಮ). ದೇಶ ಸರಿಪಡಿಸಲಾರದಷ್ಟು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಇದಕ್ಕೆ ಅವರೇ ಹೊಣೆ' ಎಂದು ಬಿಜೆಪಿ ಮುಖಂಡ ಅನಂತ ಕುಮಾರ್ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಆರ್ಥಿಕ ಕುಸಿತಕ್ಕೆ ಹಿಂದಿನ ಹಣಕಾಸು ಸಚಿವರು ಕಾರಣ ಎಂದು ಇತ್ತೀಚೆಗೆ ಚಿದಂಬರಂ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತಂತೆ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ಸದಸ್ಯರು, `ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ರಕ್ಷಿಸದಿದ್ದರೆ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ' ಎಂದು ಆಗ್ರಹಿಸಿದರು.

` ಈ ಸರ್ಕಾರದ ಭ್ರಷ್ಟತೆ ಹಾಗೂ ಅಸಾಮರ್ಥ್ಯದಿಂದಾಗಿ ಕ್ಷಿಪ್ರ ಆರ್ಥಿಕಾಭಿವೃದ್ಧಿಯ ಕನಸು ನುಚ್ಚು ನೂರಾಗಿದೆ. ಸರ್ಕಾರ ನಡೆಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೊರ ನಡೆಯಿರಿ' ಎಂದು ಅನಂತ ಕುಮಾರ್ ಗುಡುಗಿದರು.

`ಯುಪಿಎ ತನ್ನ ಮೊದಲ ಅವಧಿಯಲ್ಲಿ ನಿರುದ್ಯೋಗ ಪ್ರಗತಿ ಸಾಧಿಸಿತ್ತು. ಆದರೆ ಈಗ ಉದ್ಯೋಗವೂ ಇಲ್ಲ, ಪ್ರಗತಿಯೂ ಇಲ್ಲ. ನಿಜ ಹೇಳಬೇಂಕೆಂದರೆ ಇದು ನಕಾರಾತ್ಮಕ ಪ್ರಗತಿ' ಎಂದೂ ಅವರು ಆರೋಪ ಮಾಡಿದರು.

`ಈಗಿನ ಆರ್ಥಿಕ ಸಂಕಷ್ಟಕ್ಕೆ ಹಿಂದಿನ ಹಣಕಾಸು ಸಚಿವರು ಕಾರಣ ಎಂದು ಚಿದಂಬರಂ ಹೇಳಿಕೆ ನೀಡಿದ್ದರು. ಇದಕ್ಕೆ ಅವರು ಇಡೀ ದೇಶಕ್ಕೆ ಸ್ಪಷ್ಟನೆ ಕೊಡಬೇಕು. ಜನರು ಚಿದಂಬರಂ ಅವರನ್ನು ಅನರ್ಥಶಾಸ್ತ್ರಿ ಎಂದು ಕರೆಯುತ್ತಿದ್ದಾರೆ' ಎಂದು ಅನಂತ ಕುಮಾರ್ ಹೇಳಿದರು.

`2008-09ರಲ್ಲಿ ಹಣಕಾಸು ಸಚಿವರಾಗಿದ್ದಾಗ ಚಿದಂಬರಂ ಅವರು ಆರ್ಥಿಕ ಉತ್ತೇಜಕ ಪ್ಯಾಕೇಜ್ ಘೋಷಿಸಿದ್ದರು. ಅಲ್ಲಿಂದಲೇ ಭಾರತದ ಅರ್ಥ ವ್ಯವಸ್ಥೆ ಕುಸಿಯಲು ಶುರುವಾಯಿತು' ಎಂದರು.

ಚಿದಂಬರಂ ಅವರಿಗಿಂತ ಮೊದಲು ಪ್ರಣವ್ ಮುಖರ್ಜಿ ಹಣಕಾಸು ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT