ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಗೆದ್ದಾಗ ಮಹಿಳೆ; ಅತ್ಯಾಚಾರ ಎಸಗಿದಾಗ ಪುರುಷ

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ/ಐಎಎನ್‌ಎಸ್): ಆಕೆ ಚಿನ್ನ ಗೆದ್ದಾಗ `ಮಹಿಳೆ~. ಆದರೆ ಅತ್ಯಾಚಾರ ಎಸಗಿದಾಗ `ಪುರುಷ~. ಇದೊಂದು ಅಚ್ಚರಿ, ವಿಚಿತ್ರ ಹಾಗೂ ನಿಗೂಢ. ಆದರೆ ಇಂಥ ಒಂದು ಆರೋಪಕ್ಕೆ ಗುರಿಯಾಗಿ ಜೈಲು ಸೇರಿರುವ ಆ `ವ್ಯಕ್ತಿ~ ಭಾರತದ ಹೆಸರಾಂತ ಅಥ್ಲೀಟ್ ಪಿಂಕಿ ಪ್ರಾಮಾಣಿಕ್.

`ಪಿಂಕಿ ಪುರುಷನಾಗಿದ್ದು ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ~ ಎಂದು ಮಹಿಳೆಯೊಬ್ಬರು ನೀಡಿರುವ ದೂರಿನ ಮೇಲೆ ಪಶ್ಚಿಮ ಬಂಗಾಳ ಪೊಲೀಸರು ಪಿಂಕಿ ಅವರನ್ನು ಬಂಧಿಸಿದ್ದಾರೆ. ಅಚ್ಚರಿ ಎಂಬಂತೆ ವೈದ್ಯಕೀಯ ಪರೀಕ್ಷೆಯಲ್ಲಿ ಕೂಡ ಆಕೆ `ಪುರುಷ~ ಎಂಬುದು ದೃಢಪಟ್ಟಿದೆ. ಆದರೂ ಪೊಲೀಸರು ಹೆಚ್ಚಿನ ಪರೀಕ್ಷೆಗೆ ಮುಂದಾಗಿದ್ದಾರೆ. ಪ್ರಾಮಾಣಿಕ್ ಏಷ್ಯನ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆ ಕೂಡ.

`ದೂರಿನ ಅನ್ವಯ ನಾವು ಪಿಂಕಿ ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಿದ್ದೇವೆ. ಆತ ಪುರುಷನಾಗಿದ್ದು ಕೆಲ ತಿಂಗಳಿನಿಂದ ತಮ್ಮಂದಿಗೆ ಜೀವನ ನಡೆಸುತ್ತಿರುವುದಾಗಿ ಆ ಮಹಿಳೆ ದೂರು ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಈ ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಬಳಿಕ ತಿರಸ್ಕರಿಸಿರುವುದು ತಿಳಿದುಬಂದಿದೆ~ ಎಂದು ನಾರ್ತ್ 24-ಪರಗಣ ಜಿಲ್ಲೆಯ ಬಾಗುಯಿಯಾಟಿ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

`ಇದೊಂದು ಪಿತೂರಿ~

ಕೋಲ್ಕತ್ತ (ಐಎಎನ್‌ಎಸ್): `ನನ್ನ ಮೇಲೆ ಮಾಡಲಾಗಿರುವ ಈ ಆರೋಪದ ಹಿಂದೆ ಏನೋ ಪಿತೂರಿ ಇದೆ~ ಎಂದು ಅಥ್ಲೀಟ್ ಪಿಂಕಿ ಪ್ರಾಮಾಣಿಕ್ ಪ್ರತಿಕ್ರಿಯಿಸಿದ್ದಾರೆ.
`ನಾನು ಈ ಹಿಂದೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದಾಗ ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಆದರೆ ಈಗ ಈ ರೀತಿ ವರ್ತಿಸುತ್ತಿರುವ ಉದ್ದೇಶ ನನಗೆ ಅರ್ಥವಾಗುತ್ತಿಲ್ಲ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ `ಗುರುವಾರ ಪಿಂಕಿಯ ಲಿಂಗ ಪತ್ತೆ ಪರೀಕ್ಷೆ ನಡೆಸಿದ್ದು ಅವರು ಪುರುಷ ಎಂಬುದು ಸಾಬೀತಾಗಿದೆ~ ಎಂದು ಉಮಾ ನರ್ಸಿಂಗ್ ಹೋಮ್‌ನ ಸುಬ್ರತಾ ಮುಖರ್ಜಿ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಬಾರಿ ಪರೀಕ್ಷೆ ನಡೆಸಲು ಮುಂದಾದಾಗ ಅದಕ್ಕೆ ಪಿಂಕಿ ಒಪ್ಪಲಿಲ್ಲ ಎನ್ನಲಾಗಿದೆ.
ಈ ಹಿಂದೆ ಇಂಥದೇ ಪ್ರಕರಣ ಹೊರಬಂದಿತ್ತು. `ತಮಿಳುನಾಡಿನ ಅಥ್ಲೀಟ್ ಶಾಂತಿ ಸೌಂದರಾಜನ್ ಮಹಿಳೆಯಲ್ಲ ಪುರುಷ~ ಎಂಬ ಆರೋಪಕ್ಕೆ ಒಳಗಾಗಿದ್ದರು. ಲಿಂಗ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಅವರಿಂದ ಪದಕ ಹಿಂಪಡೆಯಲಾಗಿತ್ತು. ಶಾಂತಿ 2006ರ ಏಷ್ಯನ್ ಕ್ರೀಡಾಕೂಟದ 800 ಮೀ.ನಲ್ಲಿ ಬೆಳ್ಳಿ ಗೆದ್ದಿದ್ದರು. ಅವರು 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದ್ದ್ದಿದಾರೆ.

26 ವರ್ಷ ವಯಸ್ಸಿನ ಪಿಂಕಿ ದೋಹಾದ ಕತಾರ್‌ನಲ್ಲಿ ನಡೆದ 2006ರ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ವಿಭಾಗದ 4ಷ400 ಮೀಟರ್ ರಿಲೇಯಲ್ಲಿ ಚಿನ್ನ ಗೆದ್ದಿದ್ದರು. ಈ ಓಟಗಾರ್ತಿ ಅದೇ ವರ್ಷ ಮೆಲ್ಬರ್ನ್ ಕಾಮನ್‌ವೆಲ್ತ್ ಕೂಟದಲ್ಲಿ  ಬೆಳ್ಳಿ ಪದಕ ಜಯಿಸಿದ್ದರು.

`ಹೆಚ್ಚಿನ ಪರೀಕ್ಷೆಗಾಗಿ ನಾವು ಮತ್ತೊಮ್ಮೆ ಪಿಂಕಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಿದ್ದೇವೆ. ವರದಿ ಬಂದ ಮೇಲೆ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು~ ಎಂದು ಪೊಲೀಸರು ಹೇಳಿದ್ದಾರೆ.

`ಪಿಂಕಿ ಮಹಿಳೆಯಲ್ಲ ಪುರುಷ ಎಂಬ ಆರೋಪ ಸಾಬೀತಾದರೆ ಅವರು ಗೆದ್ದಿರುವ ಪದಕಗಳನ್ನು ಹಿಂಪಡೆಯಲಾಗುವುದು~ ಎಂದು ಭಾರತ ಅಥ್ಲೆಟಿಕ್ ಫೆಡರೇಷನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರು ನೀಡಿರುವ ಮಹಿಳೆ ತನ್ನ ಹಿಂದಿನ ಪತಿಗೆ ವಿಚ್ಛೇದನ ನೀಡಿ ಪಿಂಕಿಯೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಆ ಮಹಿಳೆಗೆ ಮಗು ಕೂಡ ಇದೆ.

ಪಿಂಕಿ ಹಿನ್ನೆಲೆ:
ಪುರುಲಿಯ ಜಿಲ್ಲೆಯ ಪಿಂಕಿ 2002ರಲ್ಲಿ ರಾಜ್ಯ ಜೂನಿಯರ್ ವಿಭಾಗದ ಕ್ರೀಡಾಕೂಟದಲ್ಲಿ ದಾಖಲೆ ನಿರ್ಮಿಸುವ ಮೂಲಕ ಬೆಳಕಿಗೆ ಬಂದಿದ್ದರು. 2003ರ ವಿಶ್ವ ಯುವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಮೂಲಕ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಚಾಂಪಿಯನ್‌ಷಿಪ್‌ನ 800 ಮೀ.ಓಟದಲ್ಲಿ ಸೆಮಿಫೈನಲ್ ತಲುಪಿದ್ದರು.

2006ರಲ್ಲಿ ಬೆಂಗಳೂರಿನಲ್ಲಿ ನಡೆದ ಏಷ್ಯನ್ ಗ್ರ್ಯಾನ್ ಪ್ರಿ ಕೂಟದಲ್ಲಿ ಅವರು 800 ಮೀ.ನಲ್ಲಿ ಚಿನ್ನ ಜಯಿಸಿದ್ದರು. ಅದೇ ವರ್ಷ ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯಾ ಫೆಡರೇಷನ್ (ಎಸ್‌ಎಎಫ್) ಕೂಟದಲ್ಲಿ ಮೂರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಆದರೆ 2010ರಲ್ಲಿ ನಡೆದ ಕಾರು ಅಪಘಾತವೊಂದರಲ್ಲಿ ಗಾಯಗೊಂಡ ಬಳಿಕ ಅವರು ಸ್ಪರ್ಧೆಗಿಳಿಯಲಿಲ್ಲ. ಮುಖ ಹಾಗೂ ಗಾಯಕ್ಕೆ ತೀವ್ರ ಪೆಟ್ಟಾಗಿತ್ತು. ಅವರೀಗ ನೈರುತ್ಯ ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದಾರೆ.

ಪ್ರಾಮಾಣಿಕ್ ಸ್ಪರ್ಧೆ ಆರಂಭಿಸಿದಾಗ `ಭಾರತಕ್ಕೆ ಮತ್ತೊಬ್ಬ ಪಿ.ಟಿ.ಉಷಾ ದೊರೆತರು~ ಎಂದೇ ಬಣ್ಣಿಸಲಾಗಿತ್ತು. ಆದರೆ 2004ರಲ್ಲಿ ರಿವಾಲ್ವರ್ ಹೊಂದಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ನಕ್ಸಲರೊಂದಿಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ಅವರ ಪಾಲಿಗೆ ಕೊಂಚ ಹಿನ್ನಡೆಯಾಗಿ ಪರಿಣಮಿಸಿತ್ತು. ಆದರೆ ಆಕೆ `ಪುರುಷ~ ಎಂಬ ಅನುಮಾನ ಬಂದಿರಲಿಲ್ಲ.

ವಿಷಯ ಗೊತ್ತಿತ್ತು: `ಮೆಲ್ಬರ್ನ್ ಕಾಮನ್ ವೆಲ್ತ್ ಕ್ರೀಡಾಕೂಟದ ಬಳಿಕ ಪಿಂಕಿ ಅವರ ದೇಹದಲ್ಲಿ ಪುರುಷ ಹಾರ್ಮೋನ್ ಹೆಚ್ಚು ಇರುವುದು ಪತ್ತೆಯಾಗಿತ್ತು~ ಎಂದು ಪಶ್ಚಿಮ ಬಂಗಾಳ ಅಥ್ಲೆಟಿಕ್ ಸಂಸ್ಥೆಯ ಅಧಿಕಾರಿ ದೇವಶಿಶ್ ಬ್ಯಾನರ್ಜಿ ತಿಳಿಸಿದ್ದಾರೆ.

`ಸಾಮಾನ್ಯರಿಗಿಂತ ಹೆಚ್ಚಿನ ಪುರುಷ ಹಾರ್ಮೋನ್ ಹೊಂದಿದ್ದು ಪತ್ತೆಯಾಗಿತ್ತು. ಆದರೂ ಅವರು ಏಷ್ಯನ್ ಕೂಟದಲ್ಲಿ ಸ್ಪರ್ಧಿಸಿದ್ದರು. ಆ ಬಳಿಕ ಅವರು ಅಂತರರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡಿಲ್ಲ. ಆದರೆ ತಿದ್ದುಪಡಿ ಆಗಿರುವ ನಿಯಮಗಳ ಪ್ರಕಾರ ಸಾಮಾನ್ಯರಿಗಿಂತ ಹೆಚ್ಚಿನ ಪುರುಷ ಹಾರ್ಮೋನ್ ಹೊಂದಿದ್ದರೆ ಅಂತಹ ಮಹಿಳಾ ಅಥ್ಲೀಟ್‌ಅನ್ನು ಸ್ಪರ್ಧೆಯಿಂದ ಹೊರಹಾಕುವಂತಿಲ್ಲ~ ಎಂದು ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT