ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು- ಗುಟುಕು

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಟೆನಿಸ್: ಫೈನಲ್‌ಗೆ ಪೇಸ್- ಸ್ಟೆಪನೆಕ್
ಟೋಕಿಯೊ (ಪಿಟಿಐ): ಭಾರತದ ಲಿಯಾಂಡರ್ ಪೇಸ್ ಮತ್ತು ಚೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೋಡಿ ಇಲ್ಲಿ ನಡೆಯುತ್ತಿರುವ ಜಪಾನ್ ಒಪನ್ ಟೆನಿಸ್‌ನ ಫೈನಲ್ ತಲುಪಿದ್ದಾರೆ.

ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಪೇಸ್-ಸ್ಟೆಪನೆಕ್ ಜೋಡಿ ಇಟಲಿಯ ಡೇನಿಯಲ್ ಬ್ರಾಸಿಯಾಲಿ ಮತ್ತು ಚೆಕ್ ಗಣರಾಜ್ಯದ ಫ್ರಾಂಟಿಸೆಕ್ ಸೆರಮಕ್ ಅವರನ್ನು 6-3, 6-1ರಿಂದ ಸೋಲಿಸಿದರು.

ಪೇಸ್ ಉತ್ತಮ ಫಾರ್ಮ್‌ನಲ್ಲಿದ್ದು ಈ ಋತುವಿನಲ್ಲಿಯೇ ಇವರು ಮೂರು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರಲ್ಲಿ ಆಸ್ಟ್ರೇಲಿಯ ಓಪನ್ ಮತ್ತು ಮಿಯಾಮಿ ಮಾಸ್ಟರ್ಸ್ ಟೂರ್ನಿಗಳಲ್ಲಿ ಸ್ಟೆಪನಿಕ್ ಜತೆಗೂಡಿಯೇ ಟ್ರೋಫಿ ಎತ್ತಿಕೊಂಡಿದ್ದಾರೆ. ಆದರೆ ಚೆನ್ನೈ ಓಪನ್ ಪ್ರಶಸ್ತಿಯನ್ನು ಜಾಂಕೊ ತಿಪ್ಸಾರೆವಿಕ್ ಜತೆಗೂಡಿ ಗೆದ್ದಿದ್ದಾರೆ.

ಟೆನಿಸ್: ಫೈನಲ್‌ನಲ್ಲಿ ಎಡವಿದ ಸಾನಿಯಾ-ನೂರಿಯಾ
ಬೀಜಿಂಗ್ (ಪಿಟಿಐ): ಸಾನಿಯಾ ಮಿರ್ಜಾ ಹಾಗೂ ಅವರ ಜೊತೆಗಾರ್ತಿ ನೂರಿಯಾ ಲಗೊಸ್ತೆರಾ ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ.

ಹಾಗಾಗಿ ಭಾರತ-ಸ್ಪೇನ್ ಜೋಡಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು. ಶನಿವಾರ ನಡೆದ ಅಂತಿಮ ಹಣಾಹಣಿಯಲ್ಲಿ ಸಾನಿಯಾ-ನೂರಿಯಾ 5-7, 5-7ರಲ್ಲಿ ರಷ್ಯಾದ ಎಕತೆರಿನಾ ಮಕರೋವಾ ಹಾಗೂ ಎಲೆನಾ ವೆಸ್ನಿನಾ ಎದುರು ಪರಾಭವಗೊಂಡರು.

ಒಂದು ಗಂಟೆ 36 ನಿಮಿಷ ನಡೆದ ಈ ಹೋರಾಟದಲ್ಲಿ ಐದನೇ ಶ್ರೇಯಾಂಕದ ಸಾನಿಯಾ-ನೂರಿಯಾ ಭಾರಿ ಪ್ರತಿರೋಧ ತೋರಿದರು. ಆದರೆ ಮಕರೋವಾ ಹಾಗೂ ವೆಸ್ನಿನಾ 13 ಬ್ರೇಕ್ ಪಾಯಿಂಟ್‌ಗಳಲ್ಲಿ ಆರನ್ನು ತಮ್ಮದಾಗಿಸಿಕೊಂಡು ಪ್ರಶಸ್ತಿ ಎತ್ತಿ ಹಿಡಿದರು. ಇವರು ಮೊದಲ ಸೆಟ್‌ನಲ್ಲಿ ಲಭಿಸಿದ 10 ಬ್ರೇಕ್ ಪಾಯಿಂಟ್‌ಗಳಲ್ಲಿ ಆರನ್ನು ತಮ್ಮದಾಗಿಸಿಕೊಂಡಿದ್ದರು.

ವಾಲಿಬಾಲ್: ಭಾರತ ತಂಡದಲ್ಲಿ ರಾಜ್ಯದ ಶರವಣ, ಸೂರಜ್
ಬೆಂಗಳೂರು: ಕರ್ನಾಟಕದ ಎನ್.ಶರವಣ ಹಾಗೂ ಸೂರಜ್ ಜಿ.ನಾಯ್ಕ ಅವರು ತೆಹರಾನ್‌ನಲ್ಲಿ ಅಕ್ಟೋಬರ್ 24ರಂದು ಆರಂಭವಾಗಲಿರುವ ಏಷ್ಯಾ ಯೂತ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡ ಇಂತಿದೆ: ಎನ್.ಶರವಣ, ಸೂರಜ್ ಜಿ.ನಾಯ್ಕ  (ಕರ್ನಾಟಕ), ರಣವೀರ್ (ಪಂಜಾಬ್-ನಾಯಕ), ಮೋಹನ್, ಸಂದೀಪ್ ಕುಮಾರ್ (ಹರಿಯಾಣ), ಶಿವೇಂದ್ರ ವಿಕ್ರಮ್, ಅತುಲ್ ಕುಮಾರ್, ಪ್ರಶಾಂತ್ ಕುಮಾರ್ (ಉ. ಪ್ರದೇಶ), ಕೆ.ಎಸ್.ರಘುಲ್ ರಾಜ್, ಪಿ.ಪ್ರಶಾಂತ್ (ತಮಿಳುನಾಡು), ಎ.ಸಂದೀಪ್ ಹಾಗೂ ಡಿ.ಎನ್.ಕೆ.ವೆಂಕಟೇಶ್ (ಆ.ಪ್ರದೇಶ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT