ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ವೆಚ್ಚ; ವೀಕ್ಷಕರಿಂದ ನಿಗಾ

Last Updated 13 ಏಪ್ರಿಲ್ 2013, 4:41 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು,  ಚುನಾವಣಾ ವೆಚ್ಚ ಪರಿಶೀಲನೆಗೆ ಚುನಾವಣಾ ಆಯೋಗವು ಜಿಲ್ಲೆಗೆ ಐವರು ವೀಕ್ಷಕರನ್ನು ನೇಮಕ ಮಾಡಿದೆ. ನೀತಿ ಸಂಹಿತೆ ಪಾಲನೆಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.

ಜಿಲ್ಲೆಯಲ್ಲಿ ಏ. 10ರಂದು 1, 12ರಂದು 5 ಸೇರಿದಂತೆ ಒಟ್ಟು 6 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಡಿಸಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶುಕ್ರವಾರ ಹರಿಹರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ.ಪಿ. ಹರೀಶ್, ದಾವಣಗೆರೆ ದಕ್ಷಿಣದಿಂದ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಭಾನ್‌ಖಾನ್ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಉಮಾಶಂಕರ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಎಚ್. ಮುಜೀಬ್ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನಾಮಪತ್ರ  ಸಲ್ಲಿಕೆ ಸ್ಥಳ:  ಜಗಳೂರು  ವಿಧಾನಸಭಾ  ಕ್ಷೇತ್ರಕ್ಕೆ  ಜಗಳೂರು  ತಾಲ್ಲೂಕು ಕಚೇರಿ, ಹರಪನಹಳ್ಳಿಗೆ  ಅಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ, ಹರಿಹರಕ್ಕೆ ಅಲ್ಲಿನ ತಾಲ್ಲೂಕು ಕಚೇರಿ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಪಾಲಿಕೆ ಉಪ ಆಯುಕ್ತರ ಕಚೇರಿ, ದಕ್ಷಿಣ ಕ್ಷೇತ್ರಕ್ಕೆ ಪಾಲಿಕೆ ಆಯುಕ್ತರ ಕಚೇರಿ, ಮಾಯಕೊಂಡಕ್ಕೆ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿ, ಚನ್ನಗಿರಿ ಹಾಗೂ ಹೊನ್ನಾಳಿಗೆ ಆಯಾ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಬಹುದು. ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅವರು ಹೇಳಿದರು.

ಚುನಾವಣಾ ವೆಚ್ಚ ವೀಕ್ಷಣೆಯ ಅಧಿಕಾರಿಗಳು: ಜಗಳೂರು ಹಾಗೂ ದಾವಣಗೆರೆ ಉತ್ತರ ಕ್ಷೇತ್ರಕ್ಕೆ ರಾಜನ್ ದತ್ (ಮೊಬೈಲ್: 94835 06372), ಹರಿಹರ ಹಾಗೂ ದಾವಣಗೆರೆ ದಕ್ಷಿಣಕ್ಕೆ ರಾಜೀವ ರಂಜನ್ (ಮೊಬೈಲ್: 9483506380), ಹೊನ್ನಾಳಿಗೆ ಎ.ಕೆ. ಧೀರ್ (ಮೊಬೈಲ್: 94835 06378), ಹರಪನಹಳ್ಳಿಗೆ ಪ್ರವೀಣ್ ಚಂದ್ರ (ಮೊಬೈಲ್: 94835 06373), ಚನ್ನಗಿರಿಗೆ ಜಗ್ರೀತ್ ಸೈನ್ ನೇಗಿ (ಮೊಬೈಲ್: 94835 06371) ವೀಕ್ಷಕರಾಗಿದ್ದಾರೆ.

ಚುನಾವಣಾ ವೆಚ್ಚ, ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿ ಯಾವುದೇ ದೂರುಗಳಿಗೆ ಉಚಿತ ಕರೆಯ ದೂರವಾಣಿ ಸಂಖ್ಯೆ 1800-425- 2029ಕ್ಕೆ ಕರೆ ಮಾಡಿ ಅಥವಾ dudc_dvg@yahoo.co.in ಗೆ ಇ-ಮೇಲ್ ಮೂಲಕ ಮಾಹಿತಿ ನೀಡಬಹುದು. ಅಕ್ರಮ ಹಣ ಸಾಗಣೆ, ಮದ್ಯ ಸರಬರಾಜು, ಆಮಿಷವೊಡ್ಡುವುದನ್ನು ತಡೆಗಟ್ಟಲು ಜಿಲ್ಲೆಯ 24 ಪೊಲೀಸ್ ಠಾಣೆಗಳ  ವ್ಯಾಪ್ತಿಯಲ್ಲಿ 24 ಕ್ಷಿಪ್ರ ಕಾರ್ಯಾಚರಣೆ ದಳ ರಚಿಸಲಾಗಿದೆ. ಚುನಾವಣಾ ಪ್ರಚಾರ ಸಮಾರಂಭಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದರು.

ದೃಶ್ಯ, ಶ್ರವಣ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತು ಹಾಗೂ ಲೇಖನ ಅದರಲ್ಲೂ `ಕಾಸಿಗಾಗಿ ಸುದ್ದಿ' ಮೇಲೂ ನಿಗಾ ಇಡಲು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ ರಚಿಸಲಾಗಿದೆ.

ಯಾವುದೇ ರಾಜಕೀಯ ಪಕ್ಷ/ ಅಭ್ಯರ್ಥಿ ಚುನಾವಣಾ ಸಂಬಂಧಿಸಿದ ಜಾಹೀರಾತು ಪ್ರಕಟಿಸುವ ಮೂರು ದಿನ ಮೊದಲು (ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ) ಈ ಸಮಿತಿಗೆ ಜಾಹೀರಾತಿನ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅನುಮತಿ ಪಡೆದ ಬಳಿಕ ಜಾಹೀರಾತು ಪ್ರಕಟಿಸಬೇಕು. ಈ ನಿಯಮ ಉಲ್ಲಂಘಿಸಿದಲ್ಲಿ 6 ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಡಿಸಿ ಹೇಳಿದರು.

ಪತ್ರಿಕೆಗಳು ಹಾಗೂ ಕರಪತ್ರ ಮುದ್ರಣಕಾರರು ಜಾಹೀರಾತು/ ಕರಪತ್ರ ಪ್ರಕಟಿಸಿದ ಮೂರು ದಿನಗಳ ಒಳಗೆ ಅದರ ನಾಲ್ಕು ಪ್ರತಿಯನ್ನು ನಮೂನೆ -ಬಿ ಅರ್ಜಿ ಜತೆ ಈ ಸಮಿತಿಗೆ ಸಲ್ಲಿಸಬೇಕು ಎಂದು ತಿಳಿಸಿದರು. ವಿಧಾನಸಭಾ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ ರೂ. 16 ಲಕ್ಷ ವೆಚ್ಚ ಮಿತಿ ಇರುತ್ತದೆ. ಅದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಖಾತೆ ತೆರೆದು ಅದರ ಮೂಲಕವೇ ವ್ಯವಹರಿಸಬೇಕು. ರೂ. 20 ಸಾವಿರಕ್ಕಿಂತ ಅಧಿಕ ಮೊತ್ತದ ಹಣವನ್ನು ಕ್ರಾಸ್ಡ್ ಚೆಕ್ ಮೂಲಕವೇ ವ್ಯವಹರಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಹಾಗೂ ಚುನಾವಣಾ ವೆಚ್ಚ ವೀಕ್ಷಣಾ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT