ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸ್ವಯಂಪ್ರೇರಿತವಾಗಿ ಸರಿಪಡಿಸಬೇಕು ಎಂಬ ವಿಭಾಗೀಯ ಪೀಠದ ಆದೇಶವನ್ನು ಪಾಲಿಸಿಲ್ಲ ಎಂದು ದೂರಿ ಮುಖ್ಯ ಚುನಾವಣಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ.

ನಿವೃತ್ತ ಕಮಾಂಡರ್‌ ಪಿ.ಜಿ. ಭಟ್‌, ಲೋಕಸತ್ತಾ ಪಕ್ಷದ ಅಶ್ವಿನ್ ಮಹೇಶ್‌ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಲ್‌. ಮಂಜುನಾಥ್‌ ನೇತೃತ್ವದ ವಿಭಾಗೀಯ ಪೀಠ, ಮುಖ್ಯ ಚುನಾವಣಾಧಿಕಾರಿಗೆ ನೋಟಿಸ್‌ ಜಾರಿಗೆ ಗುರುವಾರ ಆದೇಶಿಸಿದೆ.

ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಿಂದ 10 ಲಕ್ಷ ಮತದಾರರ ಹೆಸರು ಬಿಟ್ಟುಹೋಗಿದೆ. ಮತದಾರರ ಪಟ್ಟಿ ಪರಿಷ್ಕರಿಸುವ ಸಂದರ್ಭ ಆಯೋಗದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಬೇಕು. ಆದರೆ ಅವರು ಈ ಕೆಲಸ ಮಾಡಿಲ್ಲ ಎಂದು ಭಟ್‌ ಅವರು ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ‘ಅರ್ಜಿದಾರರ ಆರೋಪಗಳನ್ನು ಪರಿಶೀಲಿಸಬೇಕು. ಮತದಾರರ ಪಟ್ಟಿಯಿಂದ ಕೆಲವರ ಹೆಸರು ಕೈಬಿಟ್ಟಿರುವುದು ಸರಿಯೇ ಎಂಬ ಬಗ್ಗೆ ಪರಿಶೀಲಿಸಬೇಕು’ ಎಂದು ಆದೇಶಿಸಿತ್ತು. ಆದರೆ ಈ ಆದೇಶವನ್ನು ಸರಿಯಾಗಿ ಪಾಲಿಸಿಲ್ಲ ಎಂದು ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಆರೋಪಿಸಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

ಸಭೆಗೆ ಸೂಚನೆ: ಅರ್ಕಾವತಿ ಜಲಾನಯನ ಪ್ರದೇಶದಲ್ಲಿ ಆಗಿರುವ ಒತ್ತುವರಿ ತೆರವುಗೊಳಿಸುವ ಕುರಿತು ಚರ್ಚಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ. ಒತ್ತುವರಿ ತೆರವು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎನ್‌. ವೇಣುಗೋಪಾಲ ಗೌಡ ನಡೆಸಿದರು. ಅಲ್ಲಿ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಘಟಕಗಳ ಬಗ್ಗೆ ವಿವರ ನೀಡುವಂತೆ ನ್ಯಾಯಮೂರ್ತಿಯವರು ಸರ್ಕಾರಕ್ಕೆ ಸೂಚಿಸಿದರು.

ಬಿಬಿಎಂಪಿ ತಮಟೆಗೆ ಹೈಕೋರ್ಟ್‌ ತರಾಟೆ
ಬೆಂಗಳೂರು:
ವಿಪ್ರೋ ಲಿಮಿಟೆಡ್‌ ಕಂಪೆನಿಯು ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ, ಕಂಪೆನಿಯ ಕಚೇರಿ ಎದುರು ತಮಟೆ ಬಾರಿಸಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಹೈಕೋರ್ಟ್‌ ಗುರುವಾರ ತರಾಟೆಗೆ ತೆಗೆದುಕೊಂಡಿತು.

‘ಇದು ನಾಗರಿಕ ಸಮಾಜ. ಅನಾಗರಿಕತೆ ಇದ್ದ ಕಾಲವಲ್ಲ ಇದು. ಆದರೆ ನೀವು ಪ್ರತಿಷ್ಠಿತ ಸಂಸ್ಥೆಯೊಂದರ ಎದುರು ತಮಟೆ ಬಾರಿಸುತ್ತೀರಿ. ಅವರು ಯಾವುದಕ್ಕೆ ಎಷ್ಟು ತೆರಿಗೆ ಎಂಬ ಮಾಹಿತಿ ಕೋರುತ್ತಿದ್ದಾರೆ. ಅದನ್ನು ನೀಡಿದ್ದರೆ ಕಂಪೆನಿಯವರು ನಿಮ್ಮ ಕಚೇರಿಗೇ ಬಂದು ತೆರಿಗೆ ಹಣ ಪಾವತಿಸುತ್ತಿದ್ದರು’ ಎಂದು ಬಿಬಿಎಂಪಿ ಕ್ರಮ ಪ್ರಶ್ನಿಸಿ ವಿಪ್ರೋ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಜಿ. ರಮೇಶ್‌, ಪಾಲಿಕೆಯನ್ನು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡರು.

‘ಕಚೇರಿಯ ಎದುರು ತಮಟೆ ಬಾರಿಸಲು ನಿಮಗೆ ಗೊತ್ತು. ಆದರೆ ನ್ಯಾಯಾಲಯದಲ್ಲಿ ಸೂಕ್ತ ಆಕ್ಷೇಪಣೆ ಸಲ್ಲಿಸಲು ನಿಮಗೆ ಆಗುವುದಿಲ್ಲ. ಅದಕ್ಕೆ ಹೆಚ್ಚಿನ ಕಾಲಾವಕಾಶ ಕೋರುತ್ತೀರಿ. 21ನೇ ಶತಮಾನದಲ್ಲಿ ನೀವಿದ್ದೀರಿ. ಇಂಥ ವಿಚಾರಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಿಲ್ಲವೇ?’ ಎಂದು ನ್ಯಾ. ರಮೇಶ್ ಪಾಲಿಕೆಯನ್ನು ಪ್ರಶ್ನಿಸಿದರು.

ವಿಪ್ರೋ ಕಂಪೆನಿಯು ₨ 16.47 ಕೋಟಿ ಆಸ್ತಿ ತೆರಿಗೆ ಪಾವತಿಸಬೇಕು. ಈ ಕುರಿತು ಹಲವು ಬಾರಿ ನೋಟಿಸ್‌ ಜಾರಿಗೊಳಿಸಿದ್ದರೂ, ಕಂಪೆನಿಯು ತೆರಿಗೆ ಪಾವತಿಸುತ್ತಿಲ್ಲ ಎಂಬುದು ಬಿಬಿಎಂಪಿ ವಾದ. ಕಂಪೆನಿಯ ಕಚೇರಿ ಎದುರು ತಮಟೆ ಬಾರಿಸುವುದಕ್ಕೆ ಕೋರ್ಟ್‌ ಈ ಹಿಂದೆ ತಡೆಯಾಜ್ಞೆ ನೀಡಿತ್ತು. ಅದನ್ನು ಇದೇ 10ರವರೆಗೆ ವಿಸ್ತರಿಸಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT