ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ತರಬೇತಿಯಲ್ಲಿ ಅವ್ಯವಸ್ಥೆ: ಪರದಾಟ

Last Updated 23 ಏಪ್ರಿಲ್ 2013, 8:17 IST
ಅಕ್ಷರ ಗಾತ್ರ

ಗುಬ್ಬಿ:ಚುನಾವಣಾ ತರಬೇತಿ ಪಡೆಯಲು ಆಗಮಿಸಿದ ಮುಖ್ಯ ತರಬೇತುದಾರರು, ಪಿಆರ್‌ಒ, ಎಪಿಆರ್‌ಒಗಳು ಕುಡಿಯುವ ನೀರಿಗಾಗಿ ಪರದಾಡಿದ್ದು ಸೋಮವಾರ ಕಂಡುಬಂತು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಚುನಾವಣಾ ತರಬೇತಿ ಬೆಳಿಗ್ಗೆ 10ಕ್ಕೆ ಆರಂಭವಾಗಬೇಕಾಗಿದ್ದು, ಒಂದೂವರೆ ತಾಸು ತಡವಾಗಿ ಆರಂಭವಾಯಿತು.

ತರಬೇತಿ ಆರಂಭ 10ಕ್ಕೆ ಎಂದ ಆದೇಶದಲ್ಲಿ ತಿಳಿಸಿದ್ದು, ಅದರಂತೆ ನೌಕರರು ಆಗಮಿಸಿದರೂ; ಕುಡಿಯುವ ನೀರು, ಹಾಜರಾತಿ, ಮೈಕ್, ಆಸನ ವ್ಯವಸ್ಥೆ ಇಲ್ಲದಿದ್ದರಿಂದ ನೌಕರರಿಗೆ ತರಬೇತಿ ಇದೆಯೋ ಇಲ್ಲವೋ ಎನ್ನುವ ಗೊಂದಲದ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು. 11.30ಕ್ಕೆ ತರಬೇತಿ ತಡವಾಗಿ ಆರಂಭವಾದರೂ ಬಿಸಿಲಿನ ಧಗೆ ಹೆಚ್ಚಿದ್ದರಿಂದ ಕುಡಿಯುವ ನೀರಿಗಾಗಿ ನೌಕರರು ಪರದಾಡಿದರು.

ತಾಲ್ಲೂಕು ಆಡಳಿತದಲ್ಲಿರುವ ಯಾವುದೇ ಅಧಿಕಾರಿಗೆ ಕುಡಿಯುವ ನೀರು ಎಲ್ಲಿ ಎಂದು ಕೇಳಿದರೆ ನನ್ನ ಜವಾಬ್ದಾರಿಯಲ್ಲ ಎಂದು ಜಾರಿಕೊಳ್ಳುತ್ತಿದ್ದರು. ಅಂತೂ ಕುಡಿಯುವ ನೀರಿಲ್ಲದ್ದರಿಂದ ನೌಕರರು ಅಧಿಕಾರಿಗಳನ್ನು ಶಪಿಸಿದರು.

ಅಂತೂ ಇಂತೂ ತರಬೇತಿ ನಡೆಯಿತು...
ಚುನಾವಣೆ ಯಶಸ್ವಿಯಾಗಿ ನಡೆಯಲು ಚುನಾವಣೆ ಪೂರ್ವಭಾವಿಯಾಗಿ ನೀಡುವ ತರಬೇತಿಯಲ್ಲಿ ಅಡಗಿರುತ್ತದೆ. ಆದರೆ ತರಬೇತಿ ನೀಡಲು ಬೇಕಾದ ಪ್ರಾಯೋಗಿಕ ಮತಯಂತ್ರಗಳೇ ಇರಲಿಲ್ಲ.  11 ಗಂಟೆಗೆ ತುಮಕೂರಿನಿಂದ ಮತಯಂತ್ರ ತಂದರು. ಆ ನಂತರ 10 ಕೊಠಡಿಗಳಲ್ಲಿ 10 ಜನ ಮಾಸ್ಟರ್ ಟ್ರೈನಿಗಳು ತರಬೇತಿ ನೀಡಿದರು. ಪ್ರತಿ ಕೊಠಡಿಯಲ್ಲಿ 25 ಪಿಆರ್‌ಒ, 25 ಎಪಿಆರ್‌ಒಗಳು ಸೇರಿದಂತೆ 50 ಮಂದಿ ತರಬೇತಿ ಪಡೆದರು.

ಮೊದಲನೇ ಬಾರಿ ಚುನಾವಣಾ ಕಾರ್ಯದಲ್ಲಿ ನಿರತರಾದವರು ವ್ಯವಸ್ಥಿತ ರೀತಿಯಲ್ಲಿ ತರಬೇತಿ ನೀಡಬಹುದಿತ್ತು ಎಂದು ಹೇಳುತ್ತಿದ್ದರೆ; ಚುನಾವಣಾ ತರಬೇತಿ ಆಯೋಜಿಸಿದವರಿಗೆ ಮೊದಲು ತರಬೇತಿ ನೀಡಬೇಕಿದೆ ಎಂದು ನೌಕರರು ಪಿಸುಗುಟ್ಟುತ್ತಿದ್ದರು.

ಸ್ಥಳ ಬದಲಾವಣೆ: ಮತದಾನ ಮತ್ತು ಮತಯಂತ್ರದ ಕಿರುಚಿತ್ರ ತೋರಿಸಲೆಂದು ಕಾಲೇಜು ಆವರಣದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಶಾಮಿಯಾನ, ಚೇರ್‌ಗಳನ್ನು ಹಾಕಿದ್ದರು. ಕಿರುಚಿತ್ರ ತೋರಿಸಲು ಕತ್ತಲಿನ ಅವಶ್ಯಕತೆಯಿದ್ದುದರಿಂದ ಸ್ಥಳ ಬದಲಿಸಿ ಶಿವರಾತ್ರಿ ಕಲ್ಯಾಣ ಮಂಟಪವನ್ನು ಆಶ್ರಯಿಸಿದರು. ಈ ವ್ಯವಸ್ಥೆಯನ್ನು ಮೊದಲೇ ಮಾಡಬಹುದಿತ್ತು ಎನ್ನುವ ಮಾತು ಕೇಳಿಬಂದಿತು.

ಅಂಚೆ ಮತ ಖರೀದಿಯಲ್ಲಿ ಬೆಂಬಲಿಗರು: ಚುನಾವಣಾ ಕೆಲಸದಲ್ಲಿ ನಿರತರಾಗುವ ನೌಕರರಿಗೆ ತರಬೇತಿ ನಡೆಯುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಚುನಾವಣಾ ತರಬೇತಿಯ ಮೊದಲ ದಿನವೇ ಈ ವ್ಯವಸ್ಥೆಯನ್ನು ಚುನಾವಣಾ ಆಯೋಗ ಕಲ್ಪಿಸಿರುವುದಕ್ಕೆ ಕೆಲವರು ಸಂತೋಷಪಟ್ಟರೆ, ಇತರರು ಬೇಸರ ಪಟ್ಟುಕೊಂಡರು.

ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ನೌಕರರು ಬೇರೆ ಕ್ಷೇತ್ರದಲ್ಲಿ ಚುನಾವಣಾ ಕಾರ್ಯದಲ್ಲಿ ನಿರತರಾಗುವುದರಿಂದ ಅಂಚೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವರು ಮತದಾನ ಮಾಡಿದರೆ, ಇತರರು ಮತಪತ್ರವನ್ನು ಮನೆಗೆ ಒಯ್ದರು. ಈ ನಡುವೆ ವಿವಿಧ ಪಕ್ಷಗಳ ಅಭ್ಯರ್ಥಿಗಳ ಹಿಂಬಾಲಕರು ಪರಿಚಯದ ಶಿಕ್ಷಕರ ಸಹಾಯ ಪಡೆದು ಮತ ಇರುವ ಶಿಕ್ಷಕನ ಮತ ಬೇಟೆಯಾಡಲು ಪ್ರಯತ್ನಿಸುತ್ತಿದ್ದರು. ಕೆಲವರು ಕೈ ಸನ್ನೆ ಬಾಯ್‌ಸನ್ನೆಯಿಂದ ಹಣಕ್ಕೆ ಮತ ಮಾರಿಕೊಳ್ಳುತ್ತಿದ್ದ ದೃಶ್ಯವೂ ಕಂಡು ಬಂತು.

ಸುದ್ದಿ ತಿಳಿದ ರಿಟರ್ನಿಂಗ್ ಆಫೀಸರ್ ಮತದಾನ ಕೇಂದ್ರಕ್ಕೆ ತಡವಾಗಿ ಆಗಮಿಸಿ ವಿಡಿಯೋ ಚಿತ್ರೀಕರಣ ಮಾಡಿಸಿದರಲ್ಲದೇ; ಸಂಬಂಧಿಸದ ವ್ಯಕ್ತಿಗಳನ್ನು ಹೊರಹೋಗಲು ತಾಕೀತು ಮಾಡಿದರು. ಆದರೆ ಮತದಾನ ಕೇಂದ್ರದ ಆವರಣಕ್ಕೆ ಹಲ ಪಕ್ಷಗಳ ಕಾರ್ಯಕರ್ತರು ಆಗಮಿಸಿ ನಮಗೆ ಮತ ನೀಡಿ ಎಂದು ಬೇಡುತ್ತಿದ್ದರೆ ಕೆಲ ಶಿಕ್ಷಕರು ಪರೋಕ್ಷವಾಗಿ ಅವರಿಗೆ ಕೈ ಜೋಡಿಸಿದರು. ಮತಪತ್ರ ಕೊಂಡೊಯ್ದ ವ್ಯಕ್ತಿ ಯಾರು? ಎಲ್ಲಿಯವರು? ಅವರ ಮನೆ ಎಲ್ಲಿ? ಎನ್ನುವ ವಿವರವನ್ನು ಪರಿಚಯಸ್ತ ಶಿಕ್ಷಕರಿಂದ ಪಡೆದು ಭೇಟಿ ಮಾಡಲು ಖಚಿತಮಾಡಿಕೊಂಡರು. ಇದನ್ನರಿತ ಕೆಲವರು 500, 1000, 2000 ರೂಪಾಯಿಗೆ ಮತ ಮಾರಿಕೊಳ್ಳುತ್ತಿದ್ದಾರೆ ಎಂದು ಶಿಕ್ಷಕರು ಮಾತಾಡಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT