ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಮಾಹಿತಿಗೆ 55 ಲಕ್ಷಜನರ ಆಸಕ್ತಿ

ಗದ್ದುಗೆಗೆ ಕಾದಾಟ, ಮತಕ್ಕೆ ಹೋರಾಟ
Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಸಭೆ ಚುನಾವಣೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಕರ್ನಾಟಕ ಚುನಾವಣಾ ಆಯೋಗದ ಅಂತರ್ಜಾಲ ತಾಣಕ್ಕೆ  ಭೇಟಿ ನೀಡಿದವರ ಸಂಖ್ಯೆ ಶನಿವಾರ 55 ಲಕ್ಷ ಸಮೀಪಿಸಿದೆ. 

ಆಯೋಗದ ಅಧಿಕೃತ ಜಾಲತಾಣ www.ceokarnataka.kar.nic.in  ಗೆ ಶನಿವಾರ ಮಧ್ಯಾಹ್ನದ ವರೆಗೆ 54,84,387 ಮಂದಿ ಭೇಟಿ ನೀಡಿದ್ದಾರೆ. ಇದರೊಂದಿಗೆ, ಚುನಾವಣೆಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಮಾಹಿತಿ ಪಡೆಯುವುದಕ್ಕೆ ಹೆಚ್ಚಿನ ಮಂದಿ ಆಸಕ್ತಿ ತೋರಿರುವುದು ಕಂಡುಬಂದಿದೆ. ಚುನಾವಣೆ ಘೋಷಣೆಯಾದ ದಿನದಿಂದ ಈವರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಬಳಕೆದಾರರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಆಯೋಗದ ಅಧಿಕಾರಿಗಳು ಸಂತಸಗೊಂಡಿದ್ದಾರೆ.

ವೆಬ್‌ಸೈಟ್ ಸಂಪೂರ್ಣ ಇಂಗ್ಲಿಷ್‌ಮಯ ಆಗಿರುವುದು, ಕನ್ನಡದಲ್ಲಿ ಮಾಹಿತಿ ಬಯಸುವವರಿಗೆ ತೊಡಕಾಗಿದೆ. ಇದನ್ನು ಹೊರತುಪಡಿಸಿದರೆ, ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಒದಗಿಸುವಲ್ಲಿ ಈ ಜಾಲತಾಣ ಯಶಸ್ವಿಯಾಗಿದೆ. ಹೊಸರೂಪದಲ್ಲಿ ತೆರೆದುಕೊಳ್ಳುವ ಪುಟಗಳು, `ಮಾಹಿತಿ ಕಣಜ'ವಾಗಿವೆ ಎಂಬ ಮಾತು ಬಳಕೆದಾರರದಿಂದ ಕೇಳಿಬಂದಿವೆ.

ಅಂತರ್ಜಾಲ ತಾಣದಲ್ಲಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು. ಸಂಬಂಧಿಸಿದ ಮತಗಟ್ಟೆಯ ಮಾಹಿತಿ ಪಡೆಯಬಹುದು. ಮತದಾರರ ಪಟ್ಟಿ ವೀಕ್ಷಿಸಬಹುದು (01.02.2013ರಲ್ಲಿದ್ದಂತೆ). ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವ ಮಾಹಿತಿಯೂ ಲಭ್ಯ.

ಚುನಾವಣೆಗೆ ಸಂಬಂಧಿಸಿದ ಕಾನೂನುಗಳು, ಪುನರ್‌ವಿಂಗಡಣೆ ಕಾಯ್ದೆ, ಕಳೆದ ಚುನಾವಣೆಗಳ ಫಲಿತಾಂಶ ವಿವರ, ವಿದ್ಯುನ್ಮಾನ ಮತಯಂತ್ರ, ಹಿಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಸಲ್ಲಿಸಿದ್ದ ಆಸ್ತಿ ಪ್ರಮಾಣಪತ್ರಗಳು (ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ದಿನದಿಂದ ಪ್ರಸ್ತುತ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿ ವಿವರವನ್ನು ಇದೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಆಯೋಗ ಹೇಳಿದೆ), `ಮತದಾರರ ಮಿತ್ರ' (ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದಕ್ಕೆ ಸಂಬಂಧಿಸಿದಂತೆ ಆಯಾ ಭಾಗದಲ್ಲಿ ನಿಯೋಜಿಸಿರುವ ಸಿಬ್ಬಂದಿ ಮಾಹಿತಿ) ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಪಟ್ಟಿ ಕುರಿತಂತೆ ಮಾಹಿತಿಯನ್ನು ಈ ಜಾಲತಾಣದಲ್ಲಿ ಪಡೆಯಬಹುದು.

ಇದಲ್ಲದೇ, ವಿಧಾನಸಭೆ ಚುನಾವಣೆಯ ವೇಳಾಪಟ್ಟಿ, ಮಾದರಿ ನೀತಿಸಂಹಿತೆ ಹಾಗೂ ಪತ್ರಿಕಾ ಪ್ರಕಟಣೆಗಳ ವಿಭಾಗವೂ ಇಲ್ಲಿದೆ. ಇದರೊಂದಿಗೆ, ಚುನಾವಣಾ ಆಯೋಗದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು, ಚುನಾವಣೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆಗಳಿಗೆ ಉತ್ತರಗಳ ರೂಪದಲ್ಲಿ ಮಾಹಿತಿ ಇದೆ.

ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಪುಗಳ ಪುಟವೂ ಇಲ್ಲಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವಾಗ ಏನು ಮಾಡಬೇಕು? ಏನು ಮಾಡಬಾರದು ಎಂಬ ವಿವರವನ್ನೂ ಸಹ ದಾಖಲಿಸಲಾಗಿದೆ. ವೀಕ್ಷಕರು, ಅಭಿಪ್ರಾಯವನ್ನು ದಾಖಲಿಸುವುದಕ್ಕೂ (ಪೋಸ್ಟ್) ಸಹ ಅವಕಾಶವಿದೆ.

ಸಹಾಯವಾಣಿ `1950' ಸದಾ ಕಾರ್ಯಮಗ್ನ
ಆಯೋಗದ `ಸಹಾಯವಾಣಿ' (1950)ಯಿಂದ ಮಾಹಿತಿ ಪಡೆಯುವುದಕ್ಕೆ ಪರದಾಡಬೇಕಿದೆ. ಸದಾ `ಕಾರ್ಯಮಗ್ನ' ಎಂಬ ಪ್ರತಿಕ್ರಿಯೆ ಬರುತ್ತಿರುವುದು ಇದಕ್ಕೆ ಕಾರಣ.

ಆಯೋಗದ ಆಯುಕ್ತರ ದೂರವಾಣಿ: 080 2224 2042ಗೆ ಕರೆ ಮಾಡಿದರೆ, `ಸಾಹೇಬ್ರು ಸಭೆಯಲ್ಲಿದ್ದಾರೆ. ಯಾವಾಗ ಸಿಗುತ್ತಾರೋ ಗೊತ್ತಿಲ್ಲ' ಎಂಬ ಉತ್ತರ ಅಲ್ಲಿನ ಸಿಬ್ಬಂದಿ ನೀಡುತ್ತಾರೆ. `1950' ಉಚಿತ ಸಹಾಯವಾಣಿ ಸರಿ ಇಲ್ಲವೇ ಎಂದರೆ, ಸ್ವಲ್ಪ ಸಮಸ್ಯೆ ಇದೆ ಎನ್ನುತ್ತಾರೆ. 080 22231220 ದೂರವಾಣಿಗೆ ಕರೆ ಮಾಡುವಂತೆ ತಿಳಿಸುತ್ತಾರೆ. ಈ ಸಂಖ್ಯೆಗೆ ಕರೆ ಮಾಡಿದರೆ, `1950' ಸರಿ ಇದೆ. ಅಲ್ಲಿಗೇ ಕರೆ ಮಾಡಿ ಮಾಹಿತಿ ಪಡೆಯಿರಿ ಎಂದು ಸಿಬ್ಬಂದಿ ಹೇಳುತ್ತಾರೆ.

`1950'ಗೆ ಕರೆ ಮಾಡಿದರೆ, `ಸಾರಿ, ದ ಕಾಲ್ಡ್ ನಂಬರ್ ಈಸ್ ಬಿಸಿ' ಎಂಬ ಮುದ್ರಿತ ಪ್ರತಿಕ್ರಿಯೆ ಕೇಳಿಬರುತ್ತದೆ. ಹೀಗಾಗಿ, `ಸಹಾಯವಾಣಿ' ಯಿಂದ ಅಷ್ಟೇನು ಪ್ರಯೋಜನ ಆಗುತ್ತಿಲ್ಲ. ಆದರೆ, ಅಂತರ್ಜಾಲ ತಾಣದಲ್ಲಿ ಭರಪೂರ ಮಾಹಿತಿಯಿದೆ.

ಹೆಸರು ಸೇರಿಸಲು ಇಂದೇ ಕೊನೆಯ ದಿನ!
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವುದಕ್ಕೆ, ವರ್ಗಾವಣೆ ಹಾಗೂ ತಿದ್ದುಪಡಿಗೆ ಏ. 7 ಕೊನೆಯ ದಿನವಾಗಿದೆ ಎಂದು ಆಯೋಗ ಹೇಳಿದೆ. ವಿಧಾನಸಭೆ ಚುನಾವಣೆ ಮುಗಿದ ನಂತರವೂ, ಈ ಪ್ರಕ್ರಿಯೆ ಮುಂದುವರಿಯಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT