ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯ ಮಂತ್ರ: ಮುಂದಾಳತ್ವಕ್ಕೆ ತಂತ್ರ

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಕರ್ನಾಟಕದ ಬಿಜೆಪಿ `ಶಾಸಕರ ರಾಜೀನಾಮೆ ಪ್ರಹಸನ'ವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದಂತಿಲ್ಲ. ವಿಧಾನಸಭೆ ಚುನಾವಣೆಗಳು ಹತ್ತಿರದಲ್ಲಿದೆ ಎನ್ನುವ ಕಾರಣಕ್ಕೊ ಇಲ್ಲವೆ ಶೆಟ್ಟರ್ ಸರ್ಕಾರ ಬಿಕ್ಕಟ್ಟಿಗೆ ಸಿಕ್ಕಿದಾಗಲೇ ಪಕ್ಷದ ಅಧ್ಯಕ್ಷರ ಆಯ್ಕೆ ಗೊಂದಲವಾಗಿದ್ದರಿಂದಲೋ ಏನೋ ಹಿರಿಯ ನಾಯಕರು ಅತ್ತ ಕಡೆ ಗಮನ ಕೊಡಲಿಲ್ಲ. ಚುನಾವಣೆ ದೂರವಿಲ್ಲ. ಮೇ ಅಂತ್ಯದೊಳಗೆ ಹೊಸ ಸರ್ಕಾರ ಬರಬೇಕು. ದೆಹಲಿ, ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ತಾನ ಮತ್ತಿತರ ರಾಜ್ಯಗಳ ಚುನಾವಣೆಯೂ ಹೆಚ್ಚುಕಡಿಮೆ ಕರ್ನಾಟಕದ ಜತೆಯಲ್ಲೇ ನಡೆಯಲಿದೆ.

ದೆಹಲಿ, ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಉಳಿದ ರಾಜ್ಯಗಳು ಬಿಜೆಪಿ ಹಿಡಿತದಲ್ಲಿವೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲೇ ಚುನಾವಣೆಗೆ ಹೋಗಲು ಬಿಜೆಪಿ ಸಂಸದೀಯ ಮಂಡಳಿ ತೀರ್ಮಾನಿಸಿದೆ. ಈ ನಿರ್ಧಾರದ ಹಿಂದೆ ಪ್ರಬಲವಾದ ಕಾರಣವಿದೆ. ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೀರಶೈವ ಸಮಾಜದ ಪ್ರಬಲ ನಾಯಕ. ಅವರ ಹಿಂದೆ ದೊಡ್ಡ ಸಮುದಾಯ ಹೋಗಬಾರದು ಎನ್ನುವ ಉದ್ದೇಶದಿಂದ ಶೆಟ್ಟರ್ ಅವರನ್ನು ಬಿಂಬಿಸಲು ಸಂಸದೀಯ ಮಂಡಳಿ ನಿರ್ಣಯಿಸಿದೆ.

ಸಂಸದೀಯ ಮಂಡಳಿಯಲ್ಲಿ ಶೆಟ್ಟರ್ ಹೆಸರು ಬಿಟ್ಟು ಮತ್ತೊಂದು ಹೆಸರು ಪ್ರಸ್ತಾಪವಾಗಲಿಲ್ಲ. ಅಲ್ಲದೆ, ಮುಖ್ಯಮಂತ್ರಿಗಳನ್ನೇ ಚುನಾವಣೆಯಲ್ಲಿ ಬಿಂಬಿಸುವ ಸಂಪ್ರದಾಯವನ್ನು ಬಿಜೆಪಿ ಪಾಲಿಸಿಕೊಂಡು ಬಂದಿದೆ. ಗುಜರಾತಿನಲ್ಲಿ `ಹ್ಯಾಟ್ರಿಕ್ ಹೀರೊ' ನರೇಂದ್ರ ಮೋದಿ ಅವರನ್ನು ಬಿಂಬಿಸಿತು. ಹಿಮಾಚಲ ಪ್ರದೇಶದಲ್ಲಿ ಹಿಂದಿನ ಮುಖ್ಯಮಂತ್ರಿ ಪ್ರೇಂಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿತು. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್, ಮತ್ತು ಛತ್ತೀಸಗಡದಲ್ಲಿ ರಮಣ್‌ಸಿಂಗ್ ಅವರೇ ಚುನಾವಣೆ ನೇತೃತ್ವ ವಹಿಸುವುದು ನಿಶ್ಚಿತ.

ನರೇಂದ್ರ ಮೋದಿ ಅವರಂತೆ ಚೌಹಾಣ್ ಹಾಗೂ ರಮಣ್‌ಸಿಂಗ್ ಪಕ್ಷವನ್ನು ಗೆಲ್ಲಿಸುವ ತಾಕತ್ತು ಇರುವವರು. ಅಭಿವೃದ್ಧಿಯ ವಿಷಯದಲ್ಲೂ ಇಬ್ಬರೂ ಗುಜರಾತಿಗಿಂತ ಹಿಂದೆ ಬಿದ್ದಿಲ್ಲ. ಡಿಸೆಂಬರ್‌ನಲ್ಲಿ ಅಟಲ್‌ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದ ಹಿಂದಿನ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರೇ ಚೌಹಾಣ್ ಅವರನ್ನು ಹಾಡಿ ಹೊಗಳಿದ್ದಾರೆ. `ಯಶಸ್ವಿ ಮುಖ್ಯಮಂತ್ರಿ' ಎಂದು ಬೆನ್ನು ತಟ್ಟಿದ್ದಾರೆ.

`ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಗುಜರಾತಿಗಿಂತ ಹೆಚ್ಚು ಅಭಿವೃದ್ಧಿ ಕೆಲಸಗಳಾಗಿವೆ' ಎಂದು ಸ್ವತಃ ಶಿವರಾಜ್‌ಸಿಂಗ್ ಚೌಹಾಣ್ ಅವರೇ ಹೇಳಿಕೊಂಡಿದ್ದಾರೆ. `ಮೋದಿ ಅಧಿಕಾರ ಹಿಡಿಯುವ ಮೊದಲೇ ಗುಜರಾತ್ ಪ್ರಗತಿ ಆಗಿತ್ತು. ನಾನು ಮತ್ತು ರಮಣ್‌ಸಿಂಗ್ ಸೊನ್ನೆಯಿಂದ ಶುರುಮಾಡಿದ್ದೇವೆ' ಎಂದಿದ್ದಾರೆ ಚೌಹಾಣ್. ಈ ಮಾತು ಉತ್ಪ್ರೇಕ್ಷೆಯೇನಲ್ಲ. ಗುಜರಾತಿನ ಇತಿಹಾಸ ಬಲ್ಲವರಿಗೆ ಸತ್ಯವೇನೆಂದು ಗೊತ್ತಿದೆ. ಮೋದಿ ಮಾಡಿರುವುದೆಷ್ಟು ಹೇಳುತ್ತಿರುವುದೆಷ್ಟು....ಎಂಬ ವಾಸ್ತವದ ಅರಿವಿದೆ.

ಮೋದಿ ಅವರನ್ನು ಹದ್ದುಬಸ್ತಿನಲ್ಲಿಡಲು ಬಿಜೆಪಿ, ಸಂಘ- ಪರಿವಾರ ಪ್ರಯತ್ನ ಮಾಡುತ್ತಿದೆ. ಅವರಿಗೆ `ಕೌಂಟರ್' ಆಗಿ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ರಮಣ್‌ಸಿಂಗ್ ಅವರನ್ನು ಬೆಳೆಸುವ ಕಸರತ್ತು ನಡೆಸುತ್ತಿದೆ. ಶಿವರಾಜ್‌ಸಿಂಗ್ ಅವರಿಗೆ ಬಿಜೆಪಿ ಮುಖಂಡರು ಚುನಾವಣೆ ಗೆಲ್ಲಲು ಅಗತ್ಯವಾಗಿರುವ ವಾತಾವರಣ ನಿರ್ಮಿಸಿಕೊಡುತ್ತಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷರನ್ನು ಕಳೆದ ತಿಂಗಳು ಬದಲಾವಣೆ ಮಾಡಲಾಗಿದೆ. ಪ್ರಭಾತ್ ಝಾ ಅವರನ್ನು ತೆಗೆದು ನರೇಂದ್ರಸಿಂಗ್ ತೋಮರ್ ಅವರನ್ನು ನೇಮಿಸಲಾಗಿದೆ. ತೋಮರ್ ಚೌಹಾಣ್ ಅವರಿಗೆ ನಿಕಟರಾದವರು. ವಿಧಾನಸಭೆ ಚುನಾವಣೆಯಲ್ಲಿ ಅದರಲ್ಲೂ ಟಿಕೆಟ್ ಹಂಚಿಕೆಯಂಥ ಮಹತ್ವದ ವಿಷಯಗಳಲ್ಲಿ ಮುಖ್ಯಮಂತ್ರಿಗೆ ಸಮಸ್ಯೆ ಆಗಬಾರದೆನ್ನುವ ಉದ್ದೇಶದಿಂದ ಝಾ ಅವರನ್ನು ಬದಲಾಯಿಸಲಾಗಿದೆ.

`ಹಿಂದಿನ ಅಧ್ಯಕ್ಷರು ತಮ್ಮನ್ನು ಮುಖ್ಯಮಂತ್ರಿಗೆ ಪರ್ಯಾಯವೆಂದು ಬಿಂಬಿಸಿಕೊಳ್ಳುತ್ತಿದ್ದರು. ಸರ್ಕಾರದ ತೀರ್ಮಾನಗಳಿಗೆ ಅಪಸ್ವರ ತೆಗೆಯುತ್ತಿದ್ದರು. ಬಹಿರಂಗ ಹೇಳಿಕೆಗಳನ್ನು ನೀಡಿ ಮುಖ್ಯಮಂತ್ರಿಯನ್ನು ಮುಜುಗರಕ್ಕೆ ಸಿಕ್ಕಿಸುತ್ತಿದ್ದರು. ಚೌಹಾಣ್ ಮತ್ತು ಝಾ ನಡುವಿನ ಸಂಬಂಧ ಹಳಸಿತ್ತು. ಇದರಿಂದ ಅವರನ್ನು ಬದಲಾಯಿಸಲಾಗಿದೆ. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಅವರಿಗೆ ಪರ್ಯಾಯವಿಲ್ಲ. ಅವರ ನಾಯಕತ್ವದಲ್ಲೇ ಚುನಾವಣೆ ನಡೆಯಲಿದೆ' ಎನ್ನುವುದು ಬಿಜೆಪಿ ಮುಖಂಡರ ವಾದ.

`ಮಧ್ಯಪ್ರದೇಶ ಹಾಗೂ ಛತ್ತೀಸಗಡ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುತ್ತಿವೆ' ಎಂದು ಬಿಜೆಪಿ ಮುಖಂಡರು ಪ್ರತಿಪಾದಿಸಿದ ತಕ್ಷಣ ಅಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. `ಕಲ್ಲಿದ್ದಲು ಗಣಿಗಳ ಅಕ್ರಮ ಹಂಚಿಕೆ' ಆರೋಪ ಛತ್ತೀಸಗಡ ಸರ್ಕಾರದ ಮೇಲಿದೆ. ಗಡ್ಕರಿ ಅವರಿಗೆ ಆತ್ಮೀಯರಾದ ರಾಜ್ಯಸಭೆ ಸದಸ್ಯ ಅಜಯ್ ಸಂಚೇತಿ ಅವರಿಗೆ ಕಲ್ಲಿದ್ದಲು ಗಣಿಗಳನ್ನು ಮಂಜೂರು ಮಾಡಿದ ಆರೋಪಕ್ಕೆ ಸರ್ಕಾರ ಒಳಗಾಗಿದೆ. ಇದರಿಂದ ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಮಹಾಲೇಖಪಾಲರ ವರದಿ ರಮಣ್‌ಸಿಂಗ್ ಮುಖಕ್ಕೆ ಇಕ್ಕಿದೆ. ಸಂಸತ್ತಿನಲ್ಲೂ ಈ ವಿಷಯ ಪ್ರತಿಧ್ವನಿಸಿದೆ.

ಇಷ್ಟಾದರೂ, ಛತ್ತೀಸಗಡ ಮುಖ್ಯಮಂತ್ರಿ ರಮಣ್‌ಸಿಂಗ್ ವಿಷಯದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಗೊಂದಲವಿಲ್ಲ. `ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜೀವನ ಸ್ಥಿತಿ ಸುಧಾರಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಹಣಕಾಸು ವಿಷಯದಲ್ಲಿ ಶಿಸ್ತು ತರಲು ಶ್ರಮಿಸಿದೆ. ನಕ್ಸಲೀಯರ ಹಾವಳಿ ಹತ್ತಿಕ್ಕಿದೆ' ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ರಮಣ್‌ಸಿಂಗ್ ಅವರಿಗೆ ಇದು ಮೂರನೇ ಚುನಾವಣೆ. ಈ ಪರೀಕ್ಷೆ ಗೆದ್ದರೆ `ಹ್ಯಾಟ್ರಿಕ್ ಹೀರೊ' ಆಗುತ್ತಾರೆ. ಹಾಗಾದರೆ ಪಕ್ಷದೊಳಗೆ ಮೋದಿ ಅವರ ಪ್ರಾಬಲ್ಯ ಕಡಿಮೆ ಆಗಲಿದೆ.

ಮಾಜಿ ಮುಖ್ಯಮಂತ್ರಿ ವಸುಂಧರಾರಾಜೆ ಅವರನ್ನೇ ರಾಜಸ್ತಾನದಲ್ಲಿ ಬಿಜೆಪಿ ಅವಲಂಬಿಸುವ ಅನಿವಾರ್ಯ ಸ್ಥಿತಿಯಲ್ಲಿದೆ. ರಾಜ್ಯ ಬಿಜೆಪಿಯಲ್ಲಿ ಅವರಿಗೆ ಪರ್ಯಾಯವೇ ಇದ್ದಂತಿಲ್ಲ. ಹಾಗೆ ನೋಡಿದರೆ ವಸುಂಧರಾರಾಜೆ ಹೈಕಮಾಂಡ್‌ಗೆ ಬಿಸಿ ತುಪ್ಪ. ಹಿಂದೊಮ್ಮೆ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೇ ಸೆಡ್ಡು ಹೊಡೆದಿದ್ದರು.  2008ರಲ್ಲಿ ಚುನಾವಣೆ ಸೋತ ಬಳಿಕ ವಿರೋಧ ಪಕ್ಷದ ನಾಯಕಿಯಾದ ವಸುಂಧರಾ ಮರು ವರ್ಷ ಲೋಕಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಆ ಸ್ಥಾನವನ್ನು ಬಿಟ್ಟರು. ಎರಡು ವರ್ಷದ ಹಿಂದೆ ಪುನಃ ವಿರೋಧ ಪಕ್ಷದ ನಾಯಕಿ ಆಗಿದ್ದಾರೆ.

ರಾಜಸ್ತಾನದಲ್ಲಿ ಕಾಂಗ್ರೆಸ್ ಈಗಾಗಲೇ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಚಾರ ಸಭೆಗಳನ್ನು ನಡೆಸುತ್ತಿದೆ. ಆದರೆ, ಬಿಜೆಪಿ  ಕಿತ್ತಾಟದಲ್ಲೇ ಮುಳುಗಿದೆ. ಮುಂದಿನ ಚುನಾವಣೆಯಲ್ಲಿ ತಮ್ಮನ್ನೇ `ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಅಧಿಕೃತವಾಗಿ ಪ್ರಕಟಿಸಬೇಕೆಂದು ವಸುಂಧರಾರಾಜೆ ಹಟ ಹಿಡಿದಿದ್ದಾರೆ.

`ರಾಜಸ್ತಾನ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅರುಣ್ ಚತುರ್ವೇದಿ ಅವರನ್ನು ಬದಲಾವಣೆ ಮಾಡಿ ನನ್ನನ್ನೇ ನೇಮಿಸಬೇಕು. ಇದಾಗದಿದ್ದರೆ ನಾನು ಹೇಳಿದವರನ್ನು ನೇಮಕ ಮಾಡಬೇಕು' ಎಂದು ಹೈಕಮಾಂಡ್ ಜತೆ ಜಗಳ ತೆಗೆದಿದ್ದಾರೆ. ಹಿರಿಯ ನಾಯಕ ಗುಲಾಬ್‌ಚಂದ್ ಕಟಾರಿಯಾ ಅವರಿಗೆ ರಥಯಾತ್ರೆಗೆ ನೀಡಿದ್ದ ಅನುಮತಿಯನ್ನು ಹೈಕಮಾಂಡ್ ವಸುಂಧರಾರಾಜೆ ಅವರ ಒತ್ತಡದಿಂದ ಹಿಂತೆಗೆದುಕೊಂಡಿದೆ. ಅವರು ರಥಯಾತ್ರೆ ನಡೆಸಿದರೆ ಪಕ್ಷ ತೊರೆಯುವುದಾಗಿ ಮಾಜಿ ಮುಖ್ಯಮಂತ್ರಿ ಬೆದರಿಕೆ ಹಾಕಿದ್ದು ಈಗ ಇತಿಹಾಸ. 60ಕ್ಕೂ ಬಿಜೆಪಿ ಶಾಸಕರ ಬೆಂಬಲ ಹೊಂದಿರುವ ವಸುಂಧರಾರಾಜೆ ಅವರನ್ನು ಬಿಜೆಪಿ ಒಪ್ಪಿಕೊಳ್ಳದೆ ಬೇರೆ ದಾರಿ ಇಲ್ಲ.

ದೆಹಲಿ ವಿಧಾನಸಭೆ ಚುನಾವಣೆ ಯಾರು ನಾಯಕತ್ವ ವಹಿಸಬೇಕು ಎನ್ನುವ ಗೊಂದಲದಲ್ಲಿ ಬಿಜೆಪಿ ಇದ್ದಂತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಂದ್ರ ಗುಪ್ತ ಅಥವಾ ವಿರೋಧ ಪಕ್ಷದ ನಾಯಕ ಗೋಯಲ್ ಅವರಲ್ಲಿ ಯಾರು ಸೂಕ್ತ. ಇವರಿಬ್ಬರನ್ನು ಹೊರತುಪಡಿಸಿ ಮೂರನೆಯವರನ್ನು ಹುಡುಕಬೇಕೇ ಎಂಬ ಚರ್ಚೆ ಬಿಜೆಪಿ ನಾಯಕರಲ್ಲಿ ಅನೌಪಚಾರಿಕವಾಗಿ ನಡೆಯುತ್ತಿದೆ. ಕಳೆದ ಮೂರು ಚುನಾವಣೆಗಳಿಂದ `ದೆಹಲಿ ಗದ್ದುಗೆ' ಕಾಂಗ್ರೆಸ್ ಪಾಲಾಗುತ್ತಿದೆ. ಮೂರು ಚುನಾವಣೆ ಸತತವಾಗಿ ಗೆದ್ದಿರುವ ಶೀಲಾ ದೀಕ್ಷಿತ್ ಇನ್ನೊಂದು ಚುನಾವಣೆ ಗೆಲ್ಲುವರೆ ಎಂಬ ಕುತೂಹಲ ಹುಟ್ಟಿದೆ. ಅವರಿಗೆ ಸರಿಸಮನಾದ ನಾಯಕರನ್ನು ಬಿಜೆಪಿ ಹುಡುಕಬೇಕಿದೆ. ಅದು ಸ್ವಲ್ಪ ಕಷ್ಟದ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT