ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೋತ್ತರ ಹಿಂಸಾಚಾರ ಮಹಾರಾಷ್ಟ್ರದಲ್ಲಿ ಇಬ್ಬರ ಹತ್ಯೆ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೋತ್ತರ ಹಿಂಸಾಚಾರದಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ.  ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಹಿಂಸಾಚಾರದಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಭ್ಯರ್ಥಿ ಮತ್ತು ಆತನ ಬೆಂಬಲಿಗರು ಕಬ್ಬಿಣದ ಸರಳಿನಿಂದ ದಾಳಿ ನಡೆಸಿದ್ದರಿಂದ ನಾಗಪುರದಲ್ಲಿ ಬಿಜೆಪಿ ಕಾರ್ಯಕರ್ತ ಕೇಶವಾನಂದ ಅತ್ರೆ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.

ಬಿಜೆಪಿ ಪರವಾಗಿ ಪ್ರಚಾರ ಮಾಡದಿರುವಂತೆ ಎಂಎನ್‌ಎಸ್ ಅಭ್ಯರ್ಥಿ ಸಂಜಯ್ ಬರೈ ಅವರು ಅತ್ರೆ ಅವರಿಗೆ ಬೆದರಿಕೆ ಹಾಕಿದ್ದರು. ಅದನ್ನು ಲೆಕ್ಕಿಸದೇ ಪ್ರಚಾರ ಮಾಡಿದ್ದರು. ಕುಪಿತಗೊಂಡ ಸಂಜಯ್ ತಮ್ಮ ಬೆಂಬಲಿಗರೊಂದಿಗೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಮೃತ ಅತ್ರೆ ಕುಟುಂಬ ದೂರು ಸಲ್ಲಿಸಿದೆ ಎಂದು ನಾಗಪುರದ ಇಮಾಮವಾಡಾ ಪೊಲೀಸರು ತಿಳಿಸಿದ್ದಾರೆ.

`ಹತ್ಯೆಗೆ ಸಂಬಂಧಿಸಿದಂತೆ ನಾವು ಈಗಾಗಲೇ ಬರೈ ಮತ್ತು ಅವರ 8 ಜನ ಬೆಂಬಲಿಗರನ್ನು ಬಂಧಿಸಿದ್ದೇವೆ, ತನಿಖೆ ಮುಂದುವರಿದಿದೆ~ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ಮುಂಬೈ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡ ವಸಂತ್‌ಲಾಲ್ ಜೋಥಾ ಅವರ ಮೃತ ದೇಹ ಪತ್ತೆಯಾಗಿದೆ. `ಕಾರ್ಯಕರ್ತನೊಬ್ಬ ಸೋಮವಾರ ಬೆಳಿಗ್ಗೆ ಪಕ್ಷದ ಕಚೇರಿಯ ಬಾಗಿಲು ತೆಗೆದಾಗ ವಸಂತ್‌ಲಾಲ್ ಶವ ಕಾಣಿಸಿದೆ. ಮರಣೋತ್ತರ ಪರೀಕ್ಷೆ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ~ ಎಂದು ಪೊಲೀಸರು ತಿಳಿಸಿದ್ದಾರೆ.

ಎದುರಾಳಿ ಅಭ್ಯರ್ಥಿ ದಿಲೀಪ್ ಮೇಲೆ ಹಲ್ಲೆ ಮಾಡಿದ್ದರಿಂದ ನಾಸಿಕ್‌ನ ಶಿವಸೇನಾದ ಪರಾಜಿತ ಅಭ್ಯರ್ಥಿ ದಾತಿರ್ ಮತ್ತವರ ಇಬ್ಬರು ಬೆಂಬಲಿಗರನ್ನು ನಾಸಿಕ್ ಪೊಲೀಸರು ಬಂಧಿಸಿದ್ದು, ದಿಲೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಪುಣೆಯಲ್ಲಿ ಪರಾಜಿತ ಸ್ವತಂತ್ರ ಅಭ್ಯರ್ಥಿ ಅಬಾ ಸುತಾರ ಮತ್ತವರ ಬೆಂಬಲಿಗರು ಸುಮಾರು 30ಕ್ಕೂ ಹೆಚ್ಚು ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.  ಹಲವೆಡೆ ವಾಹನಗಳನ್ನು ಜಖಂಗೊಳಿಸಿದ ಘಟನೆ ನಡೆದಿವೆ. ಬೃಹತ್ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 10 ಸ್ಥಳೀಯ ಸಂಸ್ಥೆ ಗಳಿಗೆ ಕಳೆದ ಗುರುವಾರ ಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT