ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕಿನ ಫೀಲ್ಡಿಂಗ್‌ಗೆ ಸರಿಸಾಟಿ ಯಾರೂ ಇಲ್ಲ

Last Updated 7 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಇವರಿಗೆ ಯಾರೂ ಸಮನಾಗಿ ನಿಲ್ಲಲು ಸಾಧ್ಯವಿಲ್ಲ. ಕ್ಷೇತ್ರ ರಕ್ಷಣೆಯಂತೂ ದೊಡ್ಡ ಫ್ಲಸ್ ಪಾಯಿಂಟ್. ನ್ಯೂಜಿಲೆಂಡ್‌ನವರು ಕೂಡ ನಾಚಬೇಕು ಹಾಗೆ ಫೀಲ್ಡಿಂಗ್ ಮಾಡುತ್ತಾರೆ. ಭಾರತದವರು ಇವರಿಂದ ಒಂದಿಷ್ಟು ಕಲಿಯಬೇಕು...!-ಹೀಗೆ ಹಲವು ಅಭಿಪ್ರಾಯಗಳು ಕ್ರಿಕೆಟ್ ಪ್ರೇಮಿಗಳ ನಡುವೆ ಹರಿದಾಡುತ್ತಿವೆ. ಯಾರ ಕುರಿತು ಈ ಮಾತುಗಳೆಂದು ಆಸಕ್ತಿ ಕೆರಳುವ ಮುನ್ನವೇ ಐರ್ಲೆಂಡ್ ಬಗ್ಗೆ ಈ ಚರ್ಚೆ ಎನ್ನುವ ಉತ್ತರವೂ ಎದುರಿಗೆ ಪ್ರತ್ಯಕ್ಷ.

ಕ್ರಿಕೆಟ್ ಪ್ರಿಯರು ಮಾತ್ರವಲ್ಲ, ರಿಮ್ಮು ಗಟ್ಟಲೆ ಬರೆಯುವ ಕ್ರಿಕೆಟ್ ಬರಹಗಾರರು ಹಾಗೂ ನೂರಾರು ತಾಸು ಚರ್ಚೆಯ ವೇದಿಕೆಯಲ್ಲಿ ಕುಳಿತು ಹರಟುವ ಕ್ರಿಕೆಟ್ ಪಂಡಿತರು ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ ಶ್ರೇಷ್ಠ ಕ್ಷೇತ್ರ ರಕ್ಷಣೆಯ ಶ್ರೇಯವನ್ನು ಐರ್ಲೆಂಡ್‌ಗೆ ನೀಡಿದ್ದಾರೆ. ನ್ಯೂಜಿಲೆಂಡ್‌ನವರು ಯಾವುದೇ ಪರಿಸ್ಥಿತಿಯಲ್ಲಿ ಚೆಂಡನ್ನು ತಡೆಯುವ ಸಾಹಸ ಮಾಡುವಂಥ ಕ್ರಿಕೆಟಿಗರೆಂದು ಹೇಳಲಾಗುತ್ತದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳಲ್ಲಿಯೂ ಅಂಥ ಕೆಲವು ಕ್ಷೇತ್ರ ರಕ್ಷಕರಿದ್ದಾರೆ. ಆದರೆ ಐರ್ಲೆಂಡ್‌ಗೆ ಹೋಲಿಕೆ ಸಾಧ್ಯವೇ ಇಲ್ಲ. ಈ ತಂಡದ ಪ್ರತಿಯೊಬ್ಬ ಆಟಗಾರನೂ ‘ಫಿಟ್’ ಆಗಿರುವ ಫೀಲ್ಡರ್!

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್, ಇಂಗ್ಲೆಂಡ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಹಾಗೂ ಭಾರತದ ಕ್ರಿಕೆಟ್ ಪಡೆಯನ್ನು ಮುನ್ನಡೆಸುತ್ತಿರುವ ಮಹೇಂದ್ರ ಸಿಂಗ್ ದೋನಿ ಅವರು ಕೂಡ ಐರ್ಲೆಂಡ್ ತಂಡದವರು ಚುರುಕಾಗಿ ಚೆಂಡನ್ನು ತಡೆಯುವ ರೀತಿಯನ್ನು ಕೊಂಡಾಡಿದ್ದಾರೆ. ಯಾವುದೇ ಬಲಾಢ್ಯ ತಂಡಕ್ಕೆ ಪ್ರಬಲ ಪೈಪೋಟಿ ನೀಡುವಂಥ ಸಾಮರ್ಥ್ಯವನ್ನು ಹತ್ತನೇ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಪ್ರದರ್ಶಿಸಿರುವ ವಿಲಿಯಮ್ ಪೋರ್ಟರ್‌ಫೀಲ್ಡ್ ನೇತೃತ್ವದ ಪಡೆಯ ಕಡೆಗೆ ಎಲ್ಲರೂ ಹೆಮ್ಮೆಯಿಂದ ನೋಡುತ್ತಿದ್ದಾರೆ.ಕರಾರುವಕ್ಕಾಗಿ ಬೌಲಿಂಗ್ ಮಾಡುವ ರೀತಿ ಹಾಗೂ ಎದುರಾಳಿಗಳು ನಿಯಂತ್ರಿಸಲು ಸಾಧ್ಯವಾಗದೇ ಚಡಪಡಿಸುವಂಥ ಬ್ಯಾಟಿಂಗ್ ಮೂಲಕ ಐರ್ಲೆಂಡ್ ಮೆಚ್ಚುಗೆ ಗಳಿಸಿದ್ದೂ ಸಹಜ. ಅದಕ್ಕಿಂತ ಮುಖ್ಯವಾಗಿ ಕ್ಷೇತ್ರ ರಕ್ಷಣೆಯಲ್ಲಿನ ಅದ್ಭುತ ಪ್ರದರ್ಶನವು ಪೋರ್ಟರ್‌ಫೀಲ್ಡ್ ಬಳಗದ ಮೇಲಿನ ಗೌರವ ಹೆಚ್ಚುವಂತೆ ಮಾಡಿದ್ದು ಅಷ್ಟೇ ಸತ್ಯ.

ಬಾಂಗ್ಲಾಕ್ಕೆ ನಿಕಟ ಪೈಪೋಟಿ ನೀಡಿ ಆನಂತರ ಇಂಗ್ಲೆಂಡ್ ವಿರುದ್ಧ ಅಚ್ಚರಿಯ ವಿಜಯ ಸಾಧಿಸಿದ ಐರ್ಲೆಂಡ್‌ಗೆ ಭಾರತದ ವಿರುದ್ಧ ಅನಿರೀಕ್ಷಿತ ಜಯ ಸಿಗಲಿಲ್ಲ. ಐದು ವಿಕೆಟ್‌ಗಳ ಅಂತರದಿಂದ ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಸೋಲನುಭವಿಸಿದರೂ ಅದು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಗೌರವಯುತ ಸ್ಥಾನ ಪಡೆಯುವಲ್ಲಿಯಂತೂ ಯಶಸ್ವಿಯಾಗಿದೆ. ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕರೆ ಐರ್ಲೆಂಡ್ ವಿಶ್ವಶ್ರೇಷ್ಠ ತಂಡವಾಗಿ ಹೊರಹೊಮ್ಮಬಲ್ಲದು ಎನ್ನುವ ಅಭಿಪ್ರಾಯವೂ ಬಲವಾಗಿದೆ.

ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಹದಿನಾಲ್ಕು ತಂಡಗಳಲ್ಲಿ ಹೆಚ್ಚಿನವು ಕ್ಷೇತ್ರ ರಕ್ಷಣೆಯಲ್ಲಿನ ಕೊರತೆಯಿಂದ ಬಳಲುತ್ತಿವೆ. ಅಂಥ ತಂಡಗಳಲ್ಲಿ ಭಾರತವೂ ಒಂದು. ಆದರೆ ಐರ್ಲೆಂಡ್‌ನವರು ಮಾತ್ರ ಈ ವಿಭಾಗದಲ್ಲಿ ಪ್ರತಿಯೊಂದು ತಂಡದ ಕ್ರಿಕೆಟಿಗರಿಗೆ ಮಾದರಿಯಾಗಿ ನಿಂತಿದ್ದಾರೆ. ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಹನ್ನೊಂದು ಆಟಗಾರರಲ್ಲಿ ಕೆಲವರು ಮಾತ್ರ ಚೆನ್ನಾಗಿ ಫೀಲ್ಡಿಂಗ್ ಮಾಡಿದರೆ ಪ್ರಯೋಜನವಿಲ್ಲ. ಎಲ್ಲರೂ ಅಷ್ಟೇ ಚುರುಕಾಗಿ ಎಚ್ಚರಿಕೆಯಿಂದ ಚೆಂಡನ್ನು ತಡೆಯಬೇಕು. ಈ ವಿಷಯದಲ್ಲಿ ನೂರಕ್ಕೆ 99ರಷ್ಟು ಸಮರ್ಥ ಎನಿಸುವ ತಂಡವೆಂದರೆ ಐರ್ಲೆಂಡ್ ಮಾತ್ರ. ಈ ತಂಡದವರು ಚೆಂಡನ್ನು ಕೈಚೆಲ್ಲಿದ್ದು, ತಡೆಯಲು ವಿಫಲವಾಗಿದ್ದು ವಿರಳ. ಭಾರತದವರು ಈ ನಿಟ್ಟಿನಲ್ಲಿ ಮಾಡಿದ ಯಡವಟ್ಟುಗಳು ಸಾಕಷ್ಟು.

ಬಹಳ ಹಿಂದೆ ಹೋಗಿ ನೋಡುವ ಅಗತ್ಯಲ್ಲ; ಭಾನುವಾರದಂದು ನಡೆದ ಪಂದ್ಯದಲ್ಲಿನ ಒಂದು ಘಟನೆಯೇ ಭಾರತದವರು ಎಷ್ಟು ದುಬಾರಿ ಎನಿಸುವ ತಪ್ಪನ್ನು ಕ್ಷೇತ್ರರಕ್ಷಣೆಯಲ್ಲಿ ಮಾಡುತ್ತಾರೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗುತ್ತದೆ. ಐರ್ಲೆಂಡ್ ತಂಡದ ನಾಯಕ ಪೋರ್ಟರ್‌ಫೀಲ್ಡ್ ಅವರು ಇನ್ನೂ ಖಾತೆ ತೆರೆದಿರಲಿಲ್ಲ. ಆಗ ಮೊದಲ ಓವರ್ ದಾಳಿ ನಡೆಸಿದ್ದು ಜಹೀರ್ ಖಾನ್.

ಉತ್ತಮ ಅಂತರದಲ್ಲಿ ಜಹೀರ್ ಎಸೆದ ಚೆಂಡು ಪೋರ್ಟರ್‌ಫೀಲ್ಡ್ ಬ್ಯಾಟ್‌ಗೆ ತಾಗಿ ಎರಡನೇ ಸ್ಲಿಪ್ ಕಡೆಗೆ ಚಿಮ್ಮಿತು. ಅಲ್ಲಿದ್ದ ಕ್ಷೇತ್ರ ರಕ್ಷಕ ಯೂಸುಫ್ ಪಠಾಣ್ ಕೈಗೆ ಬಂದ ಚೆಂಡನ್ನು ಹಿಡಿತಕ್ಕೆ ಪಡೆಯಲಿಲ್ಲ. ಆನಂತರ ಐರ್ಲೆಂಡ್ ನಾಯಕ ಅರ್ಧ ಶತಕದ ಗಡಿದಾಟಿ ಬೆಳೆದ. ಮಂದಗತಿಯಲ್ಲಿ ಒಂದೆರಡು ರನ್‌ಗಳಿಂದ ಇನಿಂಗ್ಸ್ ಕಟ್ಟುವ ಪ್ರಯತ್ನ ನಡೆಸಿದ್ದ ನೀಲ್ ಓಬ್ರಿಯನ್ ಅವರನ್ನು ರನ್‌ಔಟ್ ಬಲೆಗೆ ಬೀಳಿಸಲು ಭಾರತದವರಿಗೆ ಅದೆಷ್ಟೊಂದು ಅವಕಾಶಗಳು ಇದ್ದವು. ಆದರೆ ಚೆಂಡನ್ನು ತಡೆಯುವಲ್ಲಿಯೇ ‘ಮಹಿ’ ಪಡೆಯವರದ್ದು ಆಮೆಗತಿ!

ಕವರ್, ಕವರ್ ಪಾಯಿಂಟ್, ಸ್ಕ್ವೇರ್‌ಲೆಗ್ ಹಾಗೂ ಮಿಡ್‌ವಿಕೆಟ್‌ನಲ್ಲಿ ಚೆಂಡನ್ನು ನಿಯಂತ್ರಿಸುವ ಐರ್ಲೆಂಡ್‌ನವರ ಸಾಮರ್ಥ್ಯಕ್ಕೆ ಹೋಲಿಸಿದರೆ ಭಾರತವು ದುರ್ಬಲವಾಗಿ ಕಾಣಿಸುವುದು ಸಹಜ. ದೋನಿ ಪಡೆಯು ಹಿಂದಿಗಿಂತ ಕ್ಷೇತ್ರ ರಕ್ಷಣೆಯಲ್ಲಿ ಸಾಕಷ್ಟು ಚೇತರಿಕೆ ಸಾಧಿಸಿದೆ. ಆದರೂ ಅದು ಐರ್ಲೆಂಡ್‌ನವರ ಜೊತೆಗೆ ತಕ್ಕಡಿಯ ತೂಕದಲ್ಲಿ ಭಾರ ಎನಿಸುವುದೇ ಇಲ್ಲ. ಐರ್ಲೆಂಡ್ ಪರವಾಗಿ ಹನ್ನೊಂದು ಆಟಗಾರರು ಕ್ಷೇತ್ರಕ್ಕೆ ಇಳಿದಾಗ ಅವರಲ್ಲಿ ಎಲ್ಲರೂ ಫೀಲ್ಡಿಂಗ್‌ನಲ್ಲಿ ಸಮಬಲರು.

ಬ್ಯಾಟ್‌ನಿಂದ ಸಿಡಿದ ಚೆಂಡು ಬೌಂಡರಿ ಕಡೆಗೆ ಹೋಗುತ್ತದೆ ಎಂದರೆ ಒಬ್ಬ ಅದನ್ನು ಬೆನ್ನಟ್ಟಿದರೆ, ಇನ್ನೊಬ್ಬ ಬ್ಯಾಕ್‌ಅಪ್ ನೀಡಲು ಸರಿಯಾದ ಕೋನದಲ್ಲಿ ಓಡುವುದು ಐರ್ಲೆಂಡ್‌ನವರ ವಿಶೇಷ. ವಿಕೆಟ್ ಕೀಪರ್ ನೀಲ್ ಓಬ್ರಿಯನ್‌ಗೆ ಬೆಂಬಲವಾಗಿ ನಿಲ್ಲುವ ಕ್ಷೇತ್ರ ರಕ್ಷಣೆಯ ರೀತಿಯಂತೂ ವಿಶಿಷ್ಟ. ಬೌಲರ್ ಕೊನೆಯಲ್ಲಿ ಚೆಂಡನ್ನು ಎಸೆಯಲು ಒಬ್ಬ ಮುಂದಾದರೆ ಇನ್ನೊಬ್ಬ ಬೌಲರ್ ಹಿಂದೆ ಚೆಂಡು ನುಗ್ಗಿ ಬರುವ ಕೋನದಲ್ಲಿ ಕಾಯ್ದಿರುತ್ತಾನೆ. ಹೀಗೆ ಮಾಡುವ ಮೂಲಕ ಹೆಚ್ಚಿನ ರನ್ ಎದುರಾಳಿಗಳಿಗೆ ಸಿಗದಂತೆ ತಡೆಯುವುದು ಐರ್ಲೆಂಡ್‌ನವರ ಬಲ.

ವಿಕೆಟ್ ಕೀಪರ್ ಹೊರತಾಗಿ ಕ್ಷೇತ್ರದ ವಿವಿಧ ಭಾಗದಲ್ಲಿ ನಿಲ್ಲುವ ಫೀಲ್ಡರ್‌ಗಳಲ್ಲಿ ಪೋರ್ಟರ್‌ಫೀಲ್ಡ್, ಅಲೆಕ್ಸ್ ಕ್ಯೂಸೆಕ್, ಕೆವಿನ್ ಓಬ್ರಿಯನ್, ಜಾರ್ಜ್ ಡಾಕ್ರೆಲ್, ಟ್ರೆಂಟ್ ಜಾನ್‌ಸ್ಟನ್, ಜಾನ್ ಮೂನಿ, ಬಾಯ್ಡೆ ರಂಕಿನ್, ಪಾಲ್ ಸ್ಟಿರ್ಲಿಂಗ್, ಆ್ಯಂಡ್ರ್ಯೂ ವೈಟ್ ಮತ್ತು ಎಡ್ ಜಾಯ್ಸಿ ಅವರು ಪ್ರಭಾವಿ. ಒಳ್ಳೆಯ ರೀತಿಯಲ್ಲಿ ಕ್ಷೇತ್ರ ರಕ್ಷಣೆ ಮಾಡಲು ದೈಹಿಕವಾಗಿ ಸಮರ್ಥವಾಗಿರಬೇಕು. ಅದಕ್ಕಿಂತ ಮುಖ್ಯವಾಗಿ ಯಾವುದೇ ಸಾಹಸ ಮಾಡಿ ಚೆಂಡನ್ನು ತಡೆಯುವ ಗಟ್ಟಿ ಮನಸ್ಸು ಇರಬೇಕು. ಭಯವಿಲ್ಲದೆ ಆಡುವ ಛಲವೂ ಅಗತ್ಯ. ಆದರೆ ಭಾರತದವರು ಅಂಥ ಗಟ್ಟಿತನವನ್ನು ಇನ್ನೂ ಬೆಳೆಸಿಕೊಂಡಿಲ್ಲ. ಗಾಯಗೊಳ್ಳುವ ಭಯ! ಅದಕ್ಕೇ ನಾಜೂಕಾಗಿ ಕ್ಷೇತ್ರ ರಕ್ಷಣೆ ಮಾಡುತ್ತಾರೆ ಎಂದು ತಮ್ಮ ಅಭಿಮಾನಿ ಬಳಗದಿಂದಲೇ ಟೀಕೆ ಎದುರಿಸುತ್ತಿದ್ದಾರೆ. ಈ ರೀತಿಯ ಟೀಕೆ ಸತ್ಯವೇ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT