ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂದದ ಆಭರಣ ಕಾರ್ಪೊರೇಟ್ ಉದ್ಯಾನ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ನಿಮ್ಮಲ್ಲಿ ಅನೇಕರು ಕಾರ್ಪೊರೇಟ್ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸಿರಬಹುದು. ಕಾರ್ಪೊರೇಟ್ ಮಂದಿ ತಮ್ಮ ವ್ಯವಹಾರಗಳಿಗೆ ನೀಡುವಷ್ಟೇ ಪ್ರಾಮುಖ್ಯವನ್ನು ಮೂಲ ಸೌಕರ್ಯದ ಅಭಿವೃದ್ಧಿಗೂ ನೀಡುತ್ತಾರೆ.

ಕಾರ್ಪೊರೇಟ್ ಕಂಪೆನಿಗಳ ಕಚೇರಿ ಕಟ್ಟಡಗಳು, ಅವುಗಳ ವಿನ್ಯಾಸ, ಸುತ್ತಮುತ್ತಲ ವಾತಾವರಣ ಎಲ್ಲವೂ ಆಧುನಿಕ ಸೌಂದರ್ಯ ಶಾಸ್ತ್ರದ ಪ್ರತೀಕವೇ ಆಗಿರುತ್ತವೆ. ನೋಡುಗರನ್ನೂ ಇವು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಇವುಗಳಲ್ಲಿ ಹೆಚ್ಚು ಮಹತ್ವ ಪಡೆದಿರುವುದು ಉದ್ಯಾನ.

ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು,  ಕಟ್ಟಡಗಳ ನಿರ್ಮಾಣಕ್ಕೆ ಅಡಿಪಾಯ ಹಾಕುವ ಮೊದಲೇ ಉದ್ಯಾನದ ನಿರ್ಮಾಣ ಕಾರ್ಯ ಆರಂಭಿಸಿರುತ್ತವೆ ಎಂದರೆ ಉದ್ಯಾನದ ಮಹತ್ವ ಎಷ್ಟು ಎಂದು ತಿಳಿಯಬಹುದು.

ಕಾರ್ಪೊರೇಟ್ ಸಂಸ್ಥೆಗಳ ಕಟ್ಟಡಗಳ ಮುಂದಿನ ಉದ್ಯಾನಗಳು ನೋಡುಗನ ಮನಸೂರೆಗೊಳಿಸುವ ರೀತಿಯಲ್ಲಿ ರೂಪಿತವಾಗಿರುತ್ತವೆ. ಉದ್ಯಾನವೊಂದು ಕಟ್ಟಡದ ಅಲಂಕಾರಿಕ ಆಭರಣ ಇದ್ದಂತೆ. ಸುಂದರವಾದ ಉದ್ಯಾನ ಹೊಂದಿರುವುದು ಸಂಸ್ಥೆಯ ಮಾಲೀಕನ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಉದ್ಯಾನದ ನಿರ್ಮಾಣ ಸುಲಭದ ಮಾತಲ್ಲ. ಅದರ ಹಿಂದಿನ ಶ್ರಮ ಬಹಳ ದೊಡ್ಡದು.  ಉತ್ತಮ ಪೂರ್ವಭಾವಿ ಯೋಜನೆ ಸುಂದರ ಉದ್ಯಾನದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಉದ್ಯಾನ ನಿರ್ಮಾಣಕ್ಕೆ ಮುಂದಡಿ ಇಡುವ ಮೊದಲು ಸ್ಥಳಾವಕಾಶದ ಬಗ್ಗೆ ಗಮನಹರಿಸಬೇಕು. ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಉದ್ಯಾನದ ರೂಪುರೇಷೆಗಳನ್ನು ಸಿದ್ಧಪಡಿಸಬೇಕು.

ಉದ್ಯಾನದ ನಿರ್ಮಾಣ ನಿರ್ದಿಷ್ಟ ಪ್ರದೇಶದ ಹವಾಮಾನ ಗುಣಲಕ್ಷಣಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ವಾತಾವರಣ ಯಾವತ್ತೂ ಬಿಸಿಯಾಗಿರುವ ಪ್ರದೇಶದಲ್ಲಿ ನೆರಳಿನ ಅಗತ್ಯ ಹೆಚ್ಚಿರುತ್ತದೆ. ಅದೇ ತುಂಬಾ ಶೀತ ವಾತಾವರಣದಲ್ಲಿ ನೆರಳಿನ ಅಗತ್ಯವಿಲ್ಲ. ಅಲ್ಲಿ ಬಿಸಿಲಿನ ಅಗತ್ಯವಿರುತ್ತದೆ.

ಮರಗಳು ಅಗತ್ಯವೇ?
ಉದ್ಯಾನಗಳಲ್ಲಿ ಹೆಚ್ಚಾಗಿ ಕಂಡು ಬರುವುದು ಅಲಂಕಾರಿಕ ಸಸ್ಯಗಳು, ಹೂ ಗಿಡಗಳು, ಪೊದರು ಗಿಡಗಳು. ಉದ್ಯಾನಗಳಲ್ಲಿ ಮರಗಳನ್ನು ಬೆಳೆಸುವುದಕ್ಕೆ ಕೆಲವರ ವಿರೋಧವಿದೆ. ಮರ ಶಾಶ್ವತ ಎಂಬ ಅಭಿಪ್ರಾಯ ಇದೆ. ಹೂಕುಂಡ, ಸಣ್ಣ ಗಿಡಗಳಂತೆ ಅದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಮಗೆ ಬೇಕಾದಾಗ ವರ್ಗಾಯಿಸಲಾಗುವುದಿಲ್ಲ ಎಂಬ ವಾದ ಅವರದ್ದು. ಇಲ್ಲಿ ಮತ್ತೆ ನಾವು ಸ್ಥಳಾವಕಾಶವನ್ನು ಗಮನಿಸಬೇಕು. ಕಡಿಮೆ ಸ್ಥಳಾವಕಾಶ ಇರುವ ಜಾಗದಲ್ಲಿ ಮರಗಳನ್ನು ಬೆಳೆಸುವುದು ಕಷ್ಟವಾಗಬಹುದು. ಆದರೆ, ಸಾಕಷ್ಟು ಜಾಗ ಇರುವಲ್ಲಿ ಪೂರ್ವ ಯೋಜಿತವಾಗಿ ಮರಗಳನ್ನು ಬೆಳೆಸಬಹುದು.

ಪ್ರಯೋಜನ ಹಲವು
ಮರಗಳಿಂದಾಗುವ ಪ್ರಯೋಜನಗಳನ್ನು ಯಾರೂ ಮರೆಯಬಾರದು. ಮರಗಳ ಸಮೂಹವು ಅಲ್ಪ ಆವರಣದ ವಾಯುಗುಣವನ್ನು ನಿರ್ವಹಿಸುವುದರ ಜೊತೆಗೆ ಹಲವಾರು ಅನುಕೂಲತೆಗಳನ್ನೂ ಒದಗಿಸುತ್ತದೆ.

ಮರಗಳು ಶಬ್ದದ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸಬಲ್ಲದು. ಕೆಲವು ಮರಗಳು ಉತ್ತಮ, ಇಂಪಾಗಿರುವ ಸ್ವರವನ್ನು ತನ್ನಿಂತಾನೆ ಹೊರಡಿಸುತ್ತವೆ. ಮರಗಳ ಸಾಲುಗಳು ಜೋರಾಗಿ ಬೀಸುತ್ತಿರುವ ಗಾಳಿಯನ್ನು ತಡೆಯಬಲ್ಲವು.

ಯಾವಾಗಲೂ ಹೂ ಮತ್ತು ಹಣ್ಣುಗಳನ್ನು ಬಿಡುವ ಮರಗಳು ಕಣ್ಣಿಗೆ ಮುದ ನೀಡುವುದು ಮಾತ್ರವಲ್ಲದೇ ವರ್ಷ ಪೂರ್ತಿ ಸುವಾಸನೆಯನ್ನೂ ಬೀರುತ್ತವೆ. ಮರಗಳು ಸೌಂದರ್ಯ ಶಾಸ್ತ್ರದ ಪ್ರತೀಕವೂ ಹೌದು. ನಿತ್ಯ ಹಚ್ಚ ಹಸಿರಿನಿಂದ ಕಂಗೊಳಿಸುವ ಮರಗಳು ಆ ಪ್ರದೇಶದಲ್ಲಿ ಪುಟ್ಟ ಅರಣ್ಯದ ವಾತಾವರಣವನ್ನು ಸೃಷ್ಟಿಸುತ್ತವೆ.

ಆರೋಗ್ಯಕ್ಕೂ ಒಳ್ಳೆದು!
ನಗರ ಪ್ರದೇಶಗಳಲ್ಲಿ  ಪರಿಸರದೊಂದಿಗೆ ಬೆರೆಯುವುದರಿಂದ ದೇಹದ ಆರೋಗ್ಯವೂ ವೃದ್ಧಿಯಾಗುತ್ತದೆ. ಜನರ ಮಾನಸಿಕ  ಆರೋಗ್ಯದ ಮೇಲೂ ಮರಗಳು ಧನಾತ್ಮಕ ಪರಿಣಾಮ ಬೀರುತ್ತವೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳೂ ದೊರೆತಿವೆ.

ಹೆಚ್ಚು ಮರಗಳಿದ್ದರೆ ಜೀವಿ ಸಂಕುಲಗಳು ಬೆಳೆಯತ್ತವೆ. ಅದಕ್ಕಿಂತ ಹೆಚ್ಚಾಗಿ ಮರಗಳು ಜನರಲ್ಲಿ ಜಾಗೃತಿಯನ್ನೂ ಮೂಡಿಸುತ್ತವೆ. ಕಾಂಕ್ರೀಟ್ ಕಟ್ಟಡಗಳೇ ತುಂಬಿರುವ ಪ್ರದೇಶದ ಒಂದಷ್ಟು ಜಾಗದಲ್ಲಿ ಬೆಳೆಸಿರುವ ಮರಗಳ ಸಮೂಹ, ಜನರು ಅದನ್ನು ಕಂಡು ಅವುಗಳ ಬಗ್ಗೆ, ಮರಗಳ ಬೆಳೆಸುವಿಕೆ ಬಗ್ಗೆ ಹೆಚ್ಚು ಹೆಚ್ಚು ಮಾತನಾಡುವಂತೆ ಮಾಡುತ್ತವೆ. ಇದರಿಂದ ಪ್ರೇರಿತರಾಗಿ ತಮ್ಮ ತಮ್ಮ ಜಾಗದಲ್ಲಿ ಗಿಡಗಳನ್ನು ನೆಡಲೂ ಆರಂಭಿಸಬಹುದು.

ಉದ್ಯಾನದಲ್ಲಿ ಮರಗಳನ್ನು, ಅಥವಾ ಪೊದರು ಗಿಡಗಳನ್ನು ನೆಡುವುದು ದೊಡ್ಡ ವಿಚಾರವಲ್ಲ. ಆದರೆ, ಈಗ ಗಿಡ ನೆಟ್ಟ ಹಲವು ವರ್ಷಗಳ ನಂತರವಷ್ಟೇ ಅದು ಮರವಾಗುತ್ತದೆ ಎಂಬುದು ಸದಾ ನೆನಪಿನಲ್ಲಿರಬೇಕು. ಗಿಡ ನೆಟ್ಟ ತಕ್ಷಣ ಆ ಪ್ರದೇಶ ಸುಂದರವಾಗಿ ಕಾಣುವುದಿಲ್ಲ. ಅದು ಮರವಾಗಿ ಬೆಳೆದ ನಂತರವಷ್ಟೇ ಸೌಂದರ್ಯತೆ ಅಲ್ಲಿ ಮನೆ ಮಾಡುತ್ತದೆ. ಹೀಗಾಗಿ ಗಿಡ ಅಥವಾ ಮರಗಳ ಆಯ್ಕೆ, ಪ್ರಮುಖ ಪಾತ್ರ ವಹಿಸುತ್ತವೆ.

ಜೀವಿಗಳ ಆವಾಸ ಸ್ಥಾನ..
ಕೆಲ ಪಕ್ಷಿಗಳು, ಸಣ್ಣ ಪುಟ್ಟ ಪ್ರಾಣಿಗಳು ಇನ್ನೂ ನಗರ ಪ್ರದೇಶಗಳಲ್ಲಿವೆ. ಬೆಂಗಳೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ 150ಕ್ಕೂ ಅಧಿಕ ಚಿಟ್ಟೆ ಪ್ರಭೇದಗಳು ಹಾಗೂ 300ಕ್ಕೂ ಅಧಿಕ ಪಕ್ಷಿ ಪ್ರಭೇದಗಳಿವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿರುವ ವಿವಿಧ ಉದ್ಯಾನವನಗಳಲ್ಲಿ ನಾವು ಇವುಗಳನ್ನು ಕಾಣಬಹುದು.

ಉದ್ಯಾನ ನಿರ್ಮಿಸುವಾಗ ಈ ಜೀವಿಗಳು ನೆಲೆಸಲು ನೆರವಾಗುವ ನಿಟ್ಟಿನಲ್ಲಿ ಯೋಚಿಸಬಹುದು.ಪೊದರು ಗಿಡಗಳು, ಕುರುಚಲು ಗಿಡಗಳು ಉದ್ಯಾನದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಸಣ್ಣ ಪುಟ್ಟ ಪಕ್ಷಿಗಳಿಗೆ, ಪ್ರಾಣಿಗಳಿಗೆ ಭದ್ರತೆಯ ಭಾವನೆಯನ್ನು ತರಬಲ್ಲವು. ಗೀಜಗನ ಹಕ್ಕಿ, ಗುಬ್ಬಚ್ಚಿಯಂತಹ ಪಕ್ಷಿಗಳು ಈ ಪೊದರುಗಳನ್ನೇ ತಮ್ಮ ಆವಾಸ ಸ್ಥಾನಗಳನ್ನಾಗಿ ಮಾಡಿಕೊಳ್ಳಬಹುದು.

ನೆಲದಲ್ಲಿ ಹುಲ್ಲು ಹಾಸು, ಗೋಡೆಗಳಿಗೆ ಹಸಿರು ಹೊದಿಸುವುದು, ನಡೆದಾಡುವ ದಾರಿಗೆ ಚಪ್ಪಡಿ ಕಲ್ಲುಗಳನ್ನು ಹಾಸುವುದರಿಂದ ಹಲವು ಪ್ರಯೋಜನಗಳಿವೆ. ಉದ್ಯಾನದಲ್ಲಿ ಪುಟ್ಟ ಕೊಳವನ್ನು ನಿರ್ಮಿಸುವುದರಿಂದ ಹಲವು ಜಲಚರ ಜೀವಿಗಳಿಗೆ ಜೀವಿಸಲು ಅವಕಾಶಕಲ್ಪಿಸಿದಂತಾಗುತ್ತದೆ.

ಉದ್ಯಾನ ವಿನ್ಯಾಸದ ಮಹತ್ವ
ಮೊದಲೇ ಹೇಳಿದಂತೆ ಉದ್ಯಾನ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಸುದೀರ್ಘವಾದ ಮತ್ತು ವ್ಯವಸ್ಥಿತವಾದ ಯೋಜನೆ ಅತ್ಯಗತ್ಯ. ಅದನ್ನು ಮಾಸ್ಟರ್ ಪ್ಲಾನ್ ಅಂತಾನೂ ಕರೆಯಬಹುದು. ಭವಿಷ್ಯದ ಬಗ್ಗೆ ಚಿಂತಿಸಿ ಯೋಜನೆ ರೂಪಿಸಬೇಕಾಗುತ್ತದೆ. ಹಲವು ಹಂತಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಬಹುದು. ಈ ಹಂತಗಳು ಖರ್ಚು ವೆಚ್ಚಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸಬಹುದು.

ಈಗ ರೂಪಿಸುತ್ತಿರುವ ಯೋಜನೆ ಸಂಸ್ಥೆಯ ಭವಿಷ್ಯದ ಸಿಬ್ಬಂದಿಗೂ ಒಪ್ಪಿಗೆಯಾಗುವಂತಿರಬೇಕು. ಅಲ್ಲದೇ ಕಂಪೆನಿಯ ಅಭಿವೃದ್ಧಿ, ವಿಸ್ತರಣೆಯ ಯೋಜನೆಗಳನ್ನೂ ಗಮನದಲ್ಲಿರಿಸಿಕೊಂಡು ಉದ್ಯಾನ ಯೋಜನೆ ರೂಪಿಸಬೇಕು.         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT