ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತನ ಚಿಲುಮೆ:ಹೇಗಿದ್ರು ಹೇಗಾದ್ರು ಗೊತ್ತಾ...!

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಟೆಲಿವಿಷನ್ ಕಲಾವಿದೆ ಆಗಿದ್ದ ಹುಡುಗಿ, ನೂರಾರು ನೃತ್ಯ ಪ್ರದರ್ಶನ ನೀಡಿದ್ದವಳು... ಆದರೆ ಕಾಲಾನಂತರ ದಪ್ಪಗಾದಳು! ಆಗ ಅನುಭವಿಸಿದ ಮುಜುಗರದ ಕ್ಷಣಗಳಿಗೆ ಲೆಕ್ಕವಿಲ್ಲ. ಮತ್ತೆ ಗಟ್ಟಿ ಮನಸ್ಸು ಮಾಡಿ ಸಣ್ಣಗಾಗಿಬಿಟ್ಟಳು. ಅದೂ ಅಲ್ಪಸ್ವಲ್ಪ ಅಲ್ಲ, ನೋಡಿದವರೆಲ್ಲರೂ ಕಣ್ಣರಳಿಸಿ ನೋಡುವಂತೆ. ಈಗ ಎಲ್ಲರೂ ಹೇಳುತ್ತಾರೆ `ಹೇಗಿದ್ಲು ಹೇಗಾದ್ಲು ಗೊತ್ತಾ...!~ ಎಂದು.

ಹೌದು, ವಿಜಯಶ್ರೀ ಎಲ್.ಎಸ್ ಅವರು ಹೀಗೆ ಆಗಿದ್ದು ಸತ್ಯ. ಅದಕ್ಕೆ ಇಲ್ಲಿರುವ ಚಿತ್ರಗಳೇ ಸಾಕ್ಷಿ. ಗುಂಡು ಗುಂಡಾಗಿದ್ದವರು ಈಗ ಬಳ್ಳಿಯಂತೆ ಬಳುಕುವ ಬೆಡಗಿಯಾಗಿದ್ದಾರೆ. ಎರಡು ಮಕ್ಕಳ ತಾಯಿ ಇವರೆಂದು ಪ್ರಮಾಣ ಮಾಡಿ ಹೇಳಿದರೂ ನಂಬಲಾರದಷ್ಟು ಅಂದವಾಗಿ ಮೈಮಾಟವನ್ನು ರೂಪಿಸಿಕೊಂಡು ಕಂಗೊಳಿಸುತ್ತಿದ್ದಾರೆ.

ವಿಜಯಶ್ರೀ ತೆಳ್ಳಗಾಗುವುದರ ಜೊತೆಗೆ ಹೊಸದೊಂದು ಉದ್ಯೋಗಾವಕಾಶವನ್ನೂ ಗಿಟ್ಟಿಸಿಕೊಂಡಿದ್ದಾರೆ. ಮೈಭಾರ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಏರೋಬಿಕ್ಸ್ ಮಾಡುತ್ತ ಮಾಡುತ್ತಲೇ ಈಗ ಏರೋಬಿಕ್ಸ್ ಕೋಚ್ ಆಗಿಬಿಟ್ಟಿದ್ದಾರೆ. ದಪ್ಪಗಾಗಿದ್ದವರು ಸಣ್ಣಗಾಗಲು ಮಾರ್ಗದರ್ಶನ ನೀಡುವುದು ಸದ್ಯದ ಅವರ ಕಾಯಕ!

ವ್ಯಾಯಾಮ ಮಾರ್ಗದಿಂದ ದೇಹ ಸ್ವರೂಪದಲ್ಲಿ ಬದಲಾವಣೆ ಕಂಡುಕೊಂಡಿರುವ ವಿಜಯಶ್ರೀ ಅವರು ಅನುಸರಿಸಿದ ಫಿಟ್ನೆಸ್ ಸೂತ್ರಗಳ ವಿವರ ಇಲ್ಲಿದೆ: ಸಣ್ಣಗೆ-ದಪ್ಪಗೆ-ಸಣ್ಣಗೆ- ಇದು ನನ್ನ ಬದುಕಿನಲ್ಲಾದ ಬದಲಾವಣೆ. ಮೊದಲು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆಗ ವ್ಯಾಯಾಮ ಇಲ್ಲದಿದ್ದರೂ ತೆಳ್ಳಗಿದ್ದೆ. ಆದರೆ ಮೊದಲ ಮಗುವಾದ ನಂತರ ಅದೆಷ್ಟೊಂದು ವೇಗವಾಗಿ ಕೊಬ್ಬು ತುಂಬಿಕೊಂಡಿತೋ ಗೊತ್ತಿಲ್ಲ. ತೆಳ್ಳಗಾಗುವ ಯೋಚನೆಯೇ ಮನಸ್ಸಿನಲ್ಲಿ ಮೂಡಿರಲಿಲ್ಲ.

ಎರಡನೇ ಮಗುವೂ ಆಯಿತು. ಆದರೆ ಅಷ್ಟೊತ್ತಿಗಾಗಲೇ ಸಾಕಷ್ಟು ಕಡೆಗಳಲ್ಲಿ ಮುಜುಗರ ಅನುಭವಿಸಿದ್ದೆ. ನನ್ನ ಕೆಲವು ಗೆಳತಿಯರಂತೆ ನಾನಿಲ್ಲವೆಂದು ಅನೇಕ ಬಾರಿ ಯೋಚಿಸಿದೆ. ಕೊರಗಿ ಪ್ರಯೋಜನವಿಲ್ಲ; ಏನಾದರೂ ಮಾಡಲೇಬೇಕೆಂದು ಪಣತೊಟ್ಟೆ. ಆಗ ಒಂದಿಷ್ಟು ಚಪಲ ಚಿತ್ತದ ನಾಲಿಗೆಗೆ ಶ್ರಮ ಕೊಟ್ಟೆ. ಸದಾ ಹೊರಗಿನ ತಿಂಡಿ ತಿನ್ನಬೇಕೆನ್ನುವ ಮನಸ್ಸಿಗೂ ಮೂಗುದಾರ ಹಾಕಿದ್ದಾಯಿತು. ಆದರೆ ಅದು ಕಷ್ಟವೆನ್ನುವ ಮಟ್ಟದ ಡಯಟಿಂಗ್ ಆಗಿರಲಿಲ್ಲ. ಏಕೆಂದರೆ ಮನೆಯಲ್ಲಿ ಮಾಡುವ ತಿಂಡಿ-ಊಟಕ್ಕೆ ಕತ್ತರಿ ಹಾಕಲಿಲ್ಲ.

ಡಯಟಿಂಗ್ ಎಂದರೆ ಕೆಲವರು ಉಪವಾಸ ಎನ್ನುವ ಭಾವನೆ ಹೊಂದಿದ್ದಾರೆ. ಹಾಗೆ ಹೊಟ್ಟೆಯನ್ನು ಕೊರಗಿಸಿ ತೂಕ ಇಳಿಸುವ ಪ್ರಯತ್ನ ಪ್ರಮಾದವಾಗಬಹುದು. ಆದ್ದರಿಂದ ಪೋಷಕಾಂಶ ಇರುವಂಥ ಆಹಾರ ತೆಗೆದುಕೊಳ್ಳುತ್ತಲೇ ವಾಕಿಂಗ್ ಹಾಗೂ ರನ್ನಿಂಗ್ ಕಡೆಗೆ ಗಮನ ಕೊಡಬೇಕು. ಜೊತೆಗೆ ಒಂದಿಷ್ಟು ಲಘು ವ್ಯಾಯಾಮ ಮಾಡುವುದೇ ಸರಿಯಾದ ಮಾರ್ಗ. ಏರೋಬಿಕ್ಸ್ ಕೂಡ ಅನುಕೂಲ. ನಾನು ಆಯ್ಕೆ ಮಾಡಿಕೊಂಡಿದ್ದು ಏರೋಬಿಕ್ಸ್.
 
ಅದರಿಂದ ಪ್ರಯೋಜನವೂ ಆಯಿತು.ಆದರೆ ಕೇವಲ ಏರೋಬಿಕ್ಸ್‌ನಿಂದ ತೂಕ ಕಡಿಮೆ ಆಗುತ್ತದೆ ಎನ್ನುವ ಭಾವನೆಯೂ ಬೇಡ. ಅದರ ಜೊತೆಗೆ ನಡಿಗೆ ಹಾಗೂ ಓಟದಂಥ ಸರಳ ವ್ಯಾಯಾಮ ಸಹ ಬೇಕು. ಒಮ್ಮೆ ದೇಹವು ಸಹಜ ಸ್ವರೂಪಕ್ಕೆ ತಿರುಗಿದೆ ಎನಿಸಿದಾಗ ನಿರಂತರವಾಗಿ ನಿಯಮಿತ ವ್ಯಾಯಾಮ ಮಾಡಬೇಕು.

ಆದರೆ ವಾರಕ್ಕೆ ಒಂದು ದಿನವಾದರೂ ಬಿಡುವು ನೀಡಲೇಬೇಕು. ಇನ್ನೊಂದು ಮುಖ್ಯ ಅಂಶವೆಂದರೆ ದೇಹ ದಂಡಿಸುವ ಹಟಕ್ಕೆ ಬೀಳಬಾರದು. ಹಾಗೆ ಮಾಡುವುದರಿಂದ ಕೆಲವೊಮ್ಮೆ ವ್ಯತಿರಿಕ್ತವಾದ ಪರಿಣಾಮ ಆಗುತ್ತದೆ.

ನನ್ನ ಒಂದು ಮಹತ್ವದ ಸಲಹೆ ಎಂದರೆ ಹೋಟೆಲ್‌ಗಳಲ್ಲಿ ತಿಂಡಿ-ಊಟವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಮನೆಯಲ್ಲಿಯೇ ಕಡಿಮೆ ಕೊಬ್ಬು ಇರುವಂಥ ಪದಾರ್ಥಗಳನ್ನು ಮಾಡಿಕೊಂಡು ತಿನ್ನುವುದು ಸೂಕ್ತ. ಆಗ ದೇಹ ತೂಕ ಹೆಚ್ಚದು. ಇದು ನಾನು ಅನುಭವದಿಂದ ಅರಿತ ಅಂಶ.

ಮುಜುಗರ, ಮುಜುಗರ...
ಆ ದಿನಗಳು ಅಸಹನೀಯವಾಗಿದ್ದವು. ಮುಂದೆ ಹಾಗೂ ಹಿಂದೆ ಎಲ್ಲರೂ ಹೇಳುತ್ತಿದ್ದುದು ಒಂದೇ `ಏನು ಹೀಗೆ ಎಮ್ಮೆ ಹಾಗೆ ಊದಿಕೊಂಡಿದ್ದಾಳೆ~ ಎಂದು. ಕೋಲು ಮುಖ ಇದ್ದದ್ದು ಗೋಲು ಮುಖ ಆಗಿತ್ತು. ಡಬಲ್ ಚಿನ್ ಬೆಳೆದಿತ್ತು. ಅಗಲವಾಗಿ ಹೋಗಿದ್ದೆ.

ಆಗ ಮನೆ ಮಂದಿ ಮಾತ್ರವಲ್ಲ ಸ್ನೇಹಿತೆಯರು ಕೂಡ ವ್ಯಂಗ್ಯ ಮಾಡುತ್ತಿದ್ದರು. ಆದ್ದರಿಂದ ಬೇಸರ ಆಗಿತ್ತು. ಕೆಲವು ಕಾಲ ಇದೇ ನನ್ನ ವಾಸ್ತವ ಎಂದು ಒಪ್ಪಿಕೊಂಡಿದ್ದೆ. ಇಂಥ ಮನಃಸ್ಥಿತಿ ಸ್ವಲ್ಪ ದೀರ್ಘವಾಗಿದ್ದರಿಂದ ಇನ್ನಷ್ಟು ದಪ್ಪಗಾದೆ. ಆಗ ಇನ್ನಷ್ಟು ಮುಜುಗರ.

ಭ್ರಮೆ ಬೇಡ ಪ್ರಯತ್ನ ಮಾಡಿ
ಯಾವುದೇ ಭ್ರಮೆಯಲ್ಲಿ ಸಿಲುಕಬೇಡಿ. ವ್ಯಾಯಾಮ ಹಾಗೂ ನಿಯಮಿತ ಆಹಾರ ಕ್ರಮದಿಂದ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡಿ. ಸಣ್ಣಗಾಗಿಸುವ ಸುಲಭ ತಂತ್ರಗಳು, ಪಾನೀಯಗಳು, ಫುಡ್ ಸಪ್ಲಿಮೆಂಟ್‌ಗಳು ಜಾಹೀರಾತು ಮಾಧ್ಯಮಗಳಲ್ಲಿ ಸಾಕಷ್ಟು ಮೂಡಿ ಬರುತ್ತವೆ. ಆದರೆ ಸರಿಯಾದ ಅರಿವಿಲ್ಲದೇ ಪ್ರಯೋಗಕ್ಕೆ ಹೋಗಬೇಡಿ. ಅಡ್ಡಪರಿಣಾಮಗಳ ಬಗ್ಗೆ ಎಚ್ಚರ ಇರಲಿ. ಸಾಧ್ಯವಾದಷ್ಟೂ ಪ್ರಕೃತಿ ಸಹಜವಾದ ಮಾರ್ಗದಲ್ಲಿ ದೇಹ ಸಣ್ಣಗಾಗಿಸುವ ಪ್ರಯತ್ನ ಮಾಡಿ.

ಬಾಡಿ ಫಿಟ್ಟಿಂಗ್ ಡ್ರೆಸ್ ಪ್ರೇರಣೆ
ನನ್ನ ಸಮ ವಯಸ್ಸಿನ ಗೆಳತಿಯರು ನನ್ನೆದುರು ಬಾಡಿ ಫಿಟ್ಟಿಂಗ್ ಡ್ರೆಸ್ ತೊಟ್ಟುಕೊಂಡು ಸ್ಟೈಲ್ ಮಾಡುತ್ತಿದ್ದರು. ಅನೇಕ ಪಾರ್ಟಿ ಹಾಗೂ ಸಮಾರಂಭಗಳಲ್ಲಿ ಅವರನ್ನು ಕಂಡು, ಅವರಂತೆ ನಾನಿಲ್ಲ ಎಂದು ಕೊರಗುತ್ತಿದ್ದೆ. ಹೀಗೆ ಕೊರಗಿದರೆ ಪ್ರಯೋಜನವಿಲ್ಲ; ಏನಾದರೂ ಮಾಡಲೇಬೇಕು ಎಂದು ಯೋಚಿಸಿದೆ.
 
ನಾನೂ ಮತ್ತೆ ಬಾಡಿ ಫಿಟ್ಟಿಂಗ್ ಡ್ರೆಸ್ ಧರಿಸುವಂತೆ ಆಗಬೇಕೆಂದುಕೊಂಡೆ. ಎರಡನೇ ಮಗುವಾದ ನಂತರ ಛಲ ಬಿಡದೇ ಪ್ರಯತ್ನ ಮಾಡಿದೆ. ಫಿಟ್ ಆದೆ! ಯಾರೂ ಈಗ ವ್ಯಂಗ್ಯ ಮಾಡುವುದಿಲ್ಲ. `ಹ್ಯಾಂಗೆ ನೀನು ಹಿಂಗೆ ಆದೆ~ ಎಂದು ಈಗ ಅದೇ ಗೆಳತಿಯರು ಅಚ್ಚರಿಯಿಂದ ಕೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT